ಮನೋರಂಜನೆ

ನಟಿಯರ ಗ್ಲಾಮರ್ ಮತ್ತು ನಸೀಬು

Pinterest LinkedIn Tumblr

ನಟಿಸಿದ ಮೊದಲ ಚಿತ್ರದಲ್ಲೇ ಮಿಂಚು ಮೂಡಿಸಿ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಏಕಕಾಲಕ್ಕೆ ಮೆಚ್ಚಿಸಿದ್ದ ಅನೇಕ ನಟಿಯರು ಇಂದು ಬಾಲಿವುಡ್‌ ಅಂಗಳದಲ್ಲಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನ ಹೆಚ್ಚು ಪ್ರಚಾರ ಪಡೆದುಕೊಂಡ ಕೆಲವು ನಟಿಯರ ಕೈಯಲ್ಲಿ ಇಂದು ಸಾಕಷ್ಟು ಅವಕಾಶಗಳು ಇದ್ದರೆ, ಮತ್ತೆ ಕೆಲವರು ಖಾಲಿ ಕುಳಿತಿದ್ದಾರೆ.

ಸೋನಾಲಿ ರಾವತ್‌
psmec29SonaliRaut

ಹಿಮೇಶ್‌ ರೇಷಮಿಯಾ ಅಭಿನಯದ ‘ದಿ ಎಕ್ಸ್‌ಫೋಸ್‌’ ಚಿತ್ರಕ್ಕೆಂದು ಸೋನಾಲಿ ರಾವತ್‌ ಮೊದಲಬಾರಿಗೆ ಬಣ್ಣಹಚ್ಚಿದ್ದರು. ಆನಂತರದಲ್ಲಿ ಈಕೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ನಟಿಸಿದ ಮೊದಲ ಚಿತ್ರದ ಹೆಸರು ಹಾಗೂ ತಾನು ಜನರಿಗೆ ಮರೆತುಹೋಗಬಹುದು ಎಂಬ ಭಯದಲ್ಲಿದ್ದ ಸೋನಾಲಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಏನೇ ಆದರೂ ಜನರ ಮನಸ್ಸಿನಿಂದ ತಾನು ದೂರಾಗಬಾರದು ಎಂಬ ತುಡಿತ ಹೊಂದಿದ್ದ ಸೋನಾಲಿ, ಬಿಗ್‌ಬಾಸ್‌ ಸೀಸನ್‌ 8ರಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೇ ಜನರ ನೆನಪಿನಂಗಳದಲ್ಲಿ ವಿಹರಿಸುತ್ತಿದ್ದಾರೆ. ಒಟ್ಟಾರೆಯಾಗಿ, ಮೊದಲ ಚಿತ್ರದಲ್ಲಿ ಎಷ್ಟೇ ಗ್ಲಾಮರ್‌ ಆಗಿ ಕಾಣಿಸಿಕೊಂಡರೂ ಪ್ರೇಕ್ಷಕಪ್ರಭುವಿನ ಮನಸ್ಸು ಕದಿಯಲು ವಿಫಲರಾದ ಸೋನಾಲಿಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಭಾಗ್ಯ ಇನ್ನೂ ಲಭಿಸಿಲ್ಲ.

ಕೃತಿ ಸನನ್‌
ಎತ್ತರದ ನಿಲುವು, ತಾಜಾ ಚೆಲುವು, ಅದ್ಭುತ ಅಭಿನಯ ಲಾಲಿತ್ಯ ಹಾಗೂ ತನ್ನದೇ ವಿಶಿಷ್ಟ ಸ್ಟೈಲ್‌ನಿಂದ ಗುರ್ತಿಸಿಕೊಂಡವರು ನಟಿ ಕೃತಿ ಸನನ್‌. 24 ವರ್ಷದ ಈ ದೆಹಲಿ ಬೆಡಗಿ ಈಗಾಗಲೇ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ತೆಲುಗು ಚಿತ್ರರಂಗದ ಪ್ರಿನ್ಸ್‌ ಮಹೇಶ್‌ಬಾಬು ಜೊತೆಗಿನ ‘ನೆನೊಕ್ಕಡೇನೆ’ ಚಿತ್ರದಲ್ಲಿ ನಟಿಸಿದ್ದರ ಕೃತಿ ತದನಂತರ, ‘ಹೀರೊಪಂಥಿ’ ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಜಿಗಿದವರು. ಈಗ ಇವರಿಗೆ ಅದೃಷ್ಟದ ದಿಡ್ಡಿ ಬಾಗಿಲು ತೆರೆದಿದೆ ಎಂಬುದಕ್ಕೆ ಈಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವುದೇ ಸಾಕ್ಷಿ. ಕೃತಿ ಅಭಿನಯಿಸಿರುವ ಮೂರು ದೊಡ್ಡ ಚಿತ್ರಗಳು ಈಗ ಬಿಡುಗಡೆಗೆ ಕಾದು ನಿಂತಿವೆ. ಇದರಲ್ಲಿ ಅಕ್ಷಯ್‌ಕುಮಾರ್‌ ಜೊತೆಗೆ ನಟಿಸಿರುವ ಸಿನಿಮಾ ಕೂಡ ಸೇರಿದೆ ಎಂಬುದು ವಿಶೇಷ.

ಸುರ್ವಿನ್‌ ಚಾವ್ಲಾ
‘ಹೇಟ್‌ ಸ್ಟೋರಿ 2’ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಪಡೆದ ನಟಿ ಸುರ್ವಿನ್‌ ಚಾವ್ಲಾ ಅದಕ್ಕೂ ಮುನ್ನ ಕಿರುತೆರೆಯಲ್ಲಿ ಸಕ್ರಿಯರಾಗಿದ್ದವರು. ಕನ್ನಡದಲ್ಲಿ ತೆರೆಕಂಡಿದ್ದ ‘ಪರಮೇಶಿ ಪಾನ್‌ವಾಲಾ’ ಈಕೆ ನಟಿಸಿದ ಮೊದಲ ಸಿನಿಮಾ. ಆನಂತರದಲ್ಲಿ, ಸುರ್ವಿನ್‌ ತೆಲುಗು, ಪಂಜಾಬಿ ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. ‘ಹೇಟ್‌ಸ್ಟೋರಿ’ ಚಿತ್ರದ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ಸುರ್ವಿನ್‌ ಬೇಡಿಕೆಯ ಗ್ರಾಫ್‌ ನಿಧಾನವಾಗಿಯಾದರೂ ಏರುತ್ತಿದೆ.

ಹುಮೈಮಾ ಮಲಿಕ್‌
ಈಕೆ ಪಾಕಿಸ್ತಾನಿ ನಟಿ. ಇಮ್ರಾನ್‌ ಹಶ್ಮಿ ಜೊತೆಗೆ ‘ನಟ್ವರ್‌ಲಾಲ್‌’ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಈಕೆ ‘ಬೋಲ್‌’ ಎಂಬ ಉರ್ದು ಚಿತ್ರದಲ್ಲಿನ ನಟನೆಗಾಗಿ ಸಾಕಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಕಣ್ತುಂಬ ಕನಸು ಪೋಣಿಸಿಕೊಂಡು ಗಡಿದಾಟಿ ಬಂದ ಚೆಲುವೆಯ ಕೈಯಲ್ಲಿ ಈಗ ಅಂತಹ ಅವಕಾಶಗಳೇನೂ ಇಲ್ಲ. ಕಳೆದವರ್ಷ ತೆರೆಕಂಡಿದ್ದ ‘ನಟ್ವರ್‌ಲಾಲ್‌’ನಲ್ಲಿ ಅಭಿನಯಿಸಿದ್ದ ನಟಿಯ ಕೈಯಲ್ಲಿ ಈಗ ಒಂದು ಸಿನಿಮಾ ಮಾತ್ರ ಇದೆ. ವಿಧು ವಿನೋದ್‌ ಚೋಪ್ರಾ ನಿರ್ಮಾಣದ ಮೂರು ಚಿತ್ರಗಳಿಗೆ ಈಕೆ ಸಹಿ ಮಾಡಿದ್ದಾರೆ ಎಂಬ ಸುದ್ದಿಯೂ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಡೈಸಿ ಷಾ
ಬಾಲಿವುಡ್‌ನ ಕಟ್ಟಾಳು ಸಲ್ಮಾನ್‌ ಖಾನ್‌ ಕಣ್ಣಿಗೆ ಬೀಳುವವರೆಗೂ ಡೈಸಿ ಷಾ ಅವರು ಕೋರಿಯೊಗ್ರಾಫರ್‌ ಗಣೇಶ್‌ ಆಚಾರ್ಯ ಅವರ ಬಳಿ ಕಳೆದ 10 ವರ್ಷಗಳಿಂದ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಲ್ಮಾನ್‌ ಕೃಪೆಗೆ ಪಾತ್ರರಾದ ನಂತರ ಡೈಸಿ ಅದೃಷ್ಟ ಖುಲಾಯಿಸಿತು. ‘ಜೈ ಹೋ’ ಚಿತ್ರದಲ್ಲಿ ಸಲ್ಮಾನ್‌ ಜೊತೆಗೆ ಕಾಣಿಸಿಕೊಳ್ಳುವ ಅವಕಾಶವೂ ಸಿಕ್ಕಿತು. ಆನಂತರದಲ್ಲಿ ಖಾಲಿ ಕುಳಿತಿದ್ದ ಡೈಸಿ ಷಾ ಈಗ ಕನ್ನಡದ ‘ಆಕ್ರಮಣ’ ಚಿತ್ರ ಬಿಟ್ಟರೆ ಮತ್ಯಾವ ಹೊಸ ಸಿನಿಮಾದಲ್ಲೂ ನಟಿಸುತ್ತಿಲ್ಲ.

ರಾಕುಲ್‌ ಪ್ರೀತ್‌ ಸಿಂಗ್‌
ಕನ್ನಡದಲ್ಲಿ ತೆರೆಕಂಡಿದ್ದ ‘ಗಿಲ್ಲಿ’ ಚಿತ್ರದ ಮೂಲಕ ಸಿನಿರಂಗದಲ್ಲಿ ಖಾತೆ ತೆರೆದ ರಾಕುಲ್‌ ಪ್ರೀತ್‌ ಸಿಂಗ್‌ ದೆಹಲಿ ಬೆಡಗಿ. ಈಕೆ ಈಗ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 2014ರಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ರಾಕುಲ್‌, ದಿವ್ಯಾ ಕೋಸ್ಲಾ ಕುಮಾರ್‌ ಅವರ ‘ಯಾರಿಯಾನ್‌’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಖಾತೆ ತೆರೆದರು. ಈ ಚಿತ್ರದಲ್ಲಿ ರಾಕುಲ್‌ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದರು. ‘ಯಾರಿಯಾನ್‌’ನಲ್ಲಿನ ಈಕೆಯ ನಟನೆ ಮತ್ತು ಚೆಲುವು ಎರಡೂ ಪ್ರೇಕ್ಷಕರನ್ನು ಮೋಡಿ ಮಾಡಿದ್ದವು.

ಬಾಲಿವುಡ್‌ನ ಮೊದಲ ಚಿತ್ರದಲ್ಲಿನ ನಟನೆ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಮಾತುಗಳು ಸಿಕ್ಕರೂ ಸಹ ಈಕೆಗೆ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಲಿಲ್ಲ. ಆಗ ರಾಕುಲ್‌ ಮತ್ತೇ ದಕ್ಷಿಣದತ್ತ ಮುಖಮಾಡಿದರು. ತೆಲುಗಿನ ಮಾಸ್‌ ಮಹಾರಾಜ ರವಿತೇಜ ಅಭಿನಯದ ‘ಕಿಕ್‌ 2’ ಚಿತ್ರದಲ್ಲಿ ಅಭಿನಯಿಸುತ್ತಿರುವ ರಾಕುಲ್‌ ಈಗ ರಮೇಶ್‌ ಸಿಪ್ಪಿ ನಿರ್ದೇಶನದ ‘ಶಿಮ್ಲಾ ಮಿರ್ಚಿ’ ಹಿಂದಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

Write A Comment