ಮನೋರಂಜನೆ

ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಬೆಂಗಳೂರಿಗೆ ಇಳಕಲ್‌ ಈರಣ್ಣನ ವಿನೂತನ ಸಾಹಸ

Pinterest LinkedIn Tumblr

pvec29p8bike

ಬಾಗಲಕೋಟೆ: ವಿಶಿಷ್ಟ ರೀತಿಯಲ್ಲಿ ದ್ವಿಚಕ್ರ ವಾಹನ ಓಡಿಸುವ ಸಾಹಸದ ಮೂಲಕ ‘ಲಿಮ್ಕಾ’ ದಾಖಲೆ ಮಾಡಿರುವ ಜಿಲ್ಲೆಯ ಇಳಕಲ್ಲಿನ ಈರಣ್ಣ ಕುಂದರಗಿ­ಮಠ, ಇದೀಗ ಹ್ಯಾಂಡಲ್‌ ಇಲ್ಲದ ಬೈಕನ್ನೇರಿ ಬೆಂಗಳೂರಿನತ್ತ ಪಯಣ ಆರಂಭಿಸಿ­ದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತ ಭವನ­ದಿಂದ ಬೆಂಗಳೂರು ವಿಧಾನಸೌಧದ ವರೆಗಿನ  510 ಕಿ.ಮೀ. ದೂರ ಕ್ರಮಿಸುವ ಈರಣ್ಣ ಅವರ ಹೊಸ ಸಾಹಸಕ್ಕೆ ಬುಧವಾರ ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್.ಪಾಟೀಲ ಚಾಲನೆ ನೀಡಿದರು.

ಬಾಗಲಕೋಟೆ, ಇಳಕಲ್‌, ಹೊಸಪೇಟೆ, ಚಿತ್ರ­ದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪ­ಲಿದ್ದಾರೆ. ಇಡೀ ದೇಹ ಅದರಲ್ಲೂ ಮುಖ್ಯ­ವಾಗಿ ಸೊಂಟದ ಮೂಲಕ ಬೈಕಿನ ನಿಯಂತ್ರಣ ಕಾಯ್ದುಕೊಂಡು ಬೈಕ್‌ ಓಡಿಸುತ್ತಿದ್ದಾರೆ. ಬೈಕ್‌ ಮೇಲೆಯೇ ಕುಳಿತು ನೀರು, ಕಾಫಿ, ತಿಂಡಿ, ಊಟ, ನೃತ್ಯ ಮಾಡಲಿರುವುದು ವಿಶೇಷವಾಗಿದೆ. ನಿಗದಿತ ದೂರವನ್ನು ಅಂದಾಜು 15 ಗಂಟೆಯೊಳಗೆ ತಲುಪು­ವು­ದಾಗಿ ಅವರು ತಿಳಿಸಿದ್ದಾರೆ.

ಲಿಮ್ಕಾ ದಾಖಲೆಗಾಗಿ ಹ್ಯಾಂಡಲ್ ಇಲ್ಲದ ಬೈಕಿನ ಬಂಪರ್ ಹಾಗೂ ಪೆಟ್ರೋಲ್ ಟ್ಯಾಂಕ್ ಹತ್ತಿರದ ಕಬ್ಬಿಣದ ಒಂದು ಪಟ್ಟಿಗೆ ಎಕ್ಸಲರೇಟರ್ ಅಳವಡಿಸಿ ಕೊಂಡಿರುವುದಾಗಿ ಹಾಗೂ ಕ್ಲಚ್‌ ಇಲ್ಲದೇ ಗಿಯರ್‌ ಬದಲಾಯಿ­ಸುತ್ತೇನೆ. ಸಂಚಾರ ದಟ್ಟಣೆ ಇ ರುವ ಪ್ರದೇಶದಲ್ಲಿ 30ರಿಂದ 40 ಕಿ.ಮೀ. ಹಾಗೂ ಸಂಚಾರ ದಟ್ಟಣೆ ಇಲ್ಲದ ಪ್ರದೇಶ­ದಲ್ಲಿ 70 ರಿಂದ 80 ಕಿ.ಮೀ. ವೇಗದಲ್ಲಿ ಬೈಕ್‌ ಓಡಿಸುತ್ತೇನೆ’ ಎಂದು ಈರಣ್ಣ ತಿಳಿಸಿದರು.

ಎರಡು ಪ್ರತ್ಯೇಕ ಬೈಕುಗಳಲ್ಲಿ ನಾಲ್ಕು ಜನ ಸ್ನೇಹಿ­ತರು ಇವರ ಜತೆ ಸಾಗು­ತ್ತಿದ್ದು, ಅಗತ್ಯ ಸಹಕಾರ ನೀಡುತ್ತಿದ್ದಾರೆ. ಹತ್ತು ವರ್ಷಗಳಿಂದ ವಿಭಿನ್ನವಾಗಿ ವಾಹನಗಳನ್ನು ಓಡಿಸುವ ಸಾಹಸ­ದಲ್ಲಿ ತೊಡಗಿರುವ ಅವರು ಹೊಸ­ದನ್ನು ದಾಖಲೆ ಮಾಡುವ ಉತ್ಸಾಹದ­ಲ್ಲಿದ್ದಾರೆ.

2008ರಲ್ಲಿ ಬಾಗಲಕೋಟೆಯಿಂದ ಬೆಂಗ­ಳೂರುವರೆಗೆ ಕೇವಲ 11 ಗಂಟೆ­ಯಲ್ಲಿ ಎರಡೂ ಕೈಬಿಟ್ಟು ಬೈಕ್‌ ಓಡಿಸಿ ರಾಜ್ಯದ ಗಮನ ಸೆಳೆದಿ­ದ್ದರು. 2009ರಲ್ಲಿ ಬೆಂಗಳೂ­ರಿನಿಂದ ದೆಹಲಿ ವರೆಗೆ 2500 ಕಿ.ಮೀ. ದೂರವನ್ನು ಕೈಬಿಟ್ಟುಕೊಂಡು ಐದು ದಿನಗಳ ಕಾಲ ಬೈಕ್‌ ಓಡಿಸಿ ರಾಷ್ಟ್ರದ ಗಮನ ಸೆಳೆದಿದ್ದರು. 2014ರಲ್ಲಿ ಇವರು ಎರಡೂ ಕೈ, ಕಾಲುಗಳನ್ನು ಕತ್ತರಿಯಾಕಾರವಾಗಿ ಹಗ್ಗದಿಂದ ಕಟ್ಟಿಸಿಕೊಂಡು ಕಾರನ್ನು ಬಾಗಲಕೋಟೆಯಿಂದ ವಿಜಯಪುರ, ಪುಣೆ,  ಬೆಳಗಾವಿ, ತುಮಕೂರು ಮಾರ್ಗವಾಗಿ ಬೆಂಗಳೂರು ವರೆಗೆ ಒಟ್ಟು 1341 ಕಿ.ಮೀ. ಓಡಿಸಿ ‘ಲಿಮ್ಕಾ’ ದಾಖಲೆ ಮಾಡಿದ್ದಾರೆ.

Write A Comment