ಇವರಿಬ್ಬರಿಗೂ ಕಳೆದ ವರ್ಷವೇ ಪ್ಯಾರಿಸ್ ನಲ್ಲಿ ಪ್ರೇಮಾಂಕುರವಾಗಿತ್ತು, ಅದು ಊರೆಲ್ಲಾ ಸುದ್ದಿಯಾಗಿತ್ತು. ಆದರೂ ಇವರಿಬ್ಬರೂ ಹೆಚ್ಚಾಗಿ ಜೊತೆ ಜೊತೆಯಾಗಿ ಕಾಣಿಸಿ ಕೊಳ್ಳುತ್ತಿರಲಿಲ್ಲ.
ಹಾಗಾಗಿ, ಬಾಲಿವುಡ್ ಅಂಗಣದಲ್ಲಿ ಇವರಿಬ್ಬರ ಬಗ್ಗೆ ಏನೇನೋ ಸುದ್ದಿ ಹರಿದಾಡುತ್ತಿದ್ದವು. ಈ ಸುದ್ದಿಗೆ ಇದೇ ಭಾನುವಾರ (ಜ 25) ಮಂಗಳವಾದ್ಯದ ಮೂಲಕ ಈ ಲವ್ ಬರ್ಡ್ಸ್ ಗಳು ತಾರ್ಕಿಕ ಅಂತ್ಯ ಹೇಳಲಿದ್ದಾರೆ.
ಬಾಲಿವುಡ್ ಚಿತ್ರೋದ್ಯಮದ ದೊಡ್ಡ ಹೆಸರಾದ ದಿ. ಮನ್ಸೂರ್ ಆಲಿಖಾನ್ ಪಟೌಡಿ ಮತ್ತು ಶರ್ಮಿಳಾ ಠಾಗೋರ್ ಪುತ್ರಿ ಸೋಹಾ ಆಲಿ ಖಾನ್ ತಾನು ಪ್ರೀತಿಸಿದ ಗೆಳೆಯನನ್ನು ಕುಟುಂಬದ ಒಪ್ಪಿಗೆಯೊಂದಿಗೆ ಭಾನುವಾರ ಮದುವೆಯಾಗಲಿದ್ದಾರೆ.
ಮುಂಬೈನ ಪಟೌಡಿ ಹೌಸ್ ನಲ್ಲಿ ಸೋಹಾ ಆಲಿ ಖಾನ್ ಅವರು ತನ್ನ ಬಾಯ್ ಫ್ರೆಂಡ್ ಕಮ್ ನಟ ಕುನಾಲ್ ಖೇಮು ಅವರನ್ನು ವರಿಸಲಿದ್ದಾರೆ. ಇದೊಂದು ಸರಳ ಮದುವೆ ಸಮಾರಂಭವಾಗಲಿದ್ದು, ಎರಡು ಕುಟುಂಬದ ಸದಸ್ಯರ ಹೊರತಾಗಿ ಬಾಲಿವುಡ್ ಜಗತ್ತಿನ ಕೆಲವರಿಗೆ ಮಾತ್ರ ಆಹ್ವಾನ ಹೋಗಿದೆಯಂತೆ.
ಅದ್ದೂರಿ ಮದುವೆ ಇಬ್ಬರಿಗೂ ಬೇಡವಾಗಿರುವುದರಿಂದ ಸಿಂಪಲ್ ಆಗಿ ತಾಳಿಕಟ್ಟಲು ನಿರ್ಧರಿಸಿದ್ದಾರೆ. ಸೋಹಾ ಅತ್ತಿಗೆ ಕರೀನಾ ಕಪೂರ್ ಕೂಡಾ ಈ ಮದುವೆಯನ್ನು ಎದುರು ನೋಡುತ್ತಿದ್ದಾರಂತೆ.
ಶಾಪಿಂಗ್, ಹನಿಮೂನ್ ಎಲ್ಲಿಗೆ ಹೋಗಬೇಕು ಎನ್ನುವುದರ ಬಗ್ಗೆ ಕರೀನಾ ಕಪೂರ್ ತುಂಬಾ ಸಲಹೆ ನೀಡುತ್ತಿದ್ದಾರೆ ಎಂದು ಸೋಹಾ ನಾಚಿಕೊಂಡು ತನ್ನ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮದುವೆಯ ಬಗ್ಗೆ ಸೋಹಾ ಒಂದಿಷ್ಟು ಹೇಳಿದ್ದು..
ಸರಳ ಸಮಾರಂಭ
ಇದೊಂದು ಸರಳ ಸಮಾರಂಭವಾಗಲಿದ್ದು, ಇಬ್ಬರೂ ಮದುವೆ ನೊಂದಾಣಿ ಮಾಡಿಸಿಕೊಳ್ಳುತ್ತಿದ್ದೇವೆ. ಆರತಕ್ಷತೆ ಎಲ್ಲಿ, ಹೇಗೆ, ಯಾವಾಗ ಎನ್ನುವುದನ್ನು ಎರಡು ಕುಟುಂಬದವರು ಕೂತು ನಿರ್ಧರಿಸಲಿದ್ದಾರೆ ಎಂದು ಸೋಹಾ ಹೇಳಿದ್ದಾರೆ.
ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ
ಈ ಸಮಯದಲ್ಲಿ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕುನಾಲ್ ಜೊತೆ ನಿನ್ನ ಸಂಸಾರ ಚೆನ್ನಾಗಿರಬೇಕು ಎನ್ನುವುದು ತಾಯಿಯ ಆಸೆ. ಹನಿಮೂನ್ ಬಗ್ಗೆ ಇನ್ನೂ ಇಬ್ಬರು ನಿರ್ಧರಿಸಬೇಕಷ್ಟೇ. ಘಾಯಲ್ 2 ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಆರಂಭವಾಗಲಿದೆ. ಹಾಗಾಗಿ ಅದರ ನಂತರ ಈ ಬಗ್ಗೆ ನಿರ್ಧರಿಸಲಿದ್ದೇವೆ – ಸೋಹಾ ಆಲಿ ಖಾನ್,
ಇದು ಖಾಂದಾನಿನ ಮೂರನೇ ಲವ್ ಎಪಿಸೋಡ್
ಇದು ಪಟೌಡಿ ಖಾಂದಾನಿನ ಮೂರನೇ ಲವ್ ಮ್ಯಾರೇಜ್. ಪಟೌಡಿ – ಶರ್ಮಿಳಾ ಠಾಗೋರ್, ಸೈಫ್ ಆಲಿ ಖಾನ್ – ಕರೀನಾ ಕಪೂರ್ ನಂತರ ಈಗ ಸೋಹಾ ಆಲಿ ಖಾನ್ – ಕುನಾಲ್ ಖೇಮು.
ವಧುವರರಲ್ಲಿ ಯಾರು ದೊಡ್ಡವರು
ಸೋಹಾ ಆಲಿ ಖಾನ್, ಕುನಾಲ್ ಗಿಂತ ಐದು ವರ್ಷ ದೊಡ್ಡವಳು. 36 ವರ್ಷದ ಸೋಹಾ, 31 ವರ್ಷದ ಕುನಾಲ್ 2009 ರಲ್ಲಿ 99 ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ಪಟೌಡಿ ಮನೆತನದ ಉಡುಗೆ ತೊಡುವುದಿಲ್ಲವಂತೆ
ಅಣ್ಣನ ಮದುವೆಯಲ್ಲಿ ಕರೀನಾ ಧರಿಸಿದ್ದ ಉಡುಗೆಯನ್ನು ನಾನು ಧರಿಸುವುದಿಲ್ಲ. ಏಕೆಂದರೆ ಅದು ಅಪ್ಪ ಅಮ್ಮ ಸೊಸೆಗೆ ನೀಡಿದ್ದ ಗಿಫ್ಟ್ . ಇದೊಂದು ಸರಳ ಮದುವೆ ಕಾರ್ಯಕ್ರವಾದರೂ, ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸಮಾರಂಭವಾಗಲಿದೆ ಎನ್ನುವುದು ಸೋಹಾ ಆಲಿ ಖಾನ್ ಪ್ರತಿಕ್ರಿಯೆ.