ಮನೋರಂಜನೆ

ವಿಹಾರದ ಜೊತೆಗೆ ವಿವೇಕವೂ ಹಿತಾಸಕ್ತಿಯೂ

Pinterest LinkedIn Tumblr

svec18respo_0

ಗಿಜಿಗುಡುವ ಬೆಂಗಳೂರಿನಿಂದ ಐವತ್ತು ಕಿಲೋ ಮೀಟರ್ ದೂರದಲ್ಲಿರುವ ಆ ಹಳ್ಳಿಯ ಹೊಲದಲ್ಲಿ ಫಿಲಿಪ್ ಕಳೆ ಕತ್ತರಿಸುವುದು ಹೇಗೆಂಬುದನ್ನು ಕಲಿಯುತ್ತಿದ್ದ. ಆತನಿಗೆ ಮುನಿಯಮ್ಮ ಮಾರ್ಗದರ್ಶನ ಮಾಡುತ್ತಿದ್ದಳು! ಅಂತೂ ಇಂತೂ ಒಂದೂವರೆ ತಾಸಿನ ಬಳಿಕ ಆತ ತುಸು ಕೆಲಸ ಕಲಿಯುವಂತಾಯಿತು. ಸುಸ್ತಾಗಿ, ಬೆವರು ಒರೆಸಿಕೊಳ್ಳುತ್ತ ಮನೆಗೆ ಬಂದ ಫಿಲಿಪ್‌ಗೆ ರಾಗಿ ರೊಟ್ಟಿ, ಸೊಪ್ಪಿನ ಪಲ್ಯ ಇಷ್ಟವೆನಿಸಿತು.

ಆತನಿಗೆ ಈ ಪ್ರವಾಸದ ದಾರಿ ತೋರಿಸಿದ್ದ ಯುವತಿ ಮಾರ್ಟಿನಾ ಅದಾಗಲೇ ಎರಡು ತಿಂಗಳು ಇಲ್ಲಿಯೇ ಇದ್ದು ಹೋಗಿದ್ದಳು. ಆಕೆಯೇ ಫಿಲಿಪ್‌ನನ್ನು ಈ ಹಳ್ಳಿಗೆ ಕಳಿಸಿದ್ದಳು! ಎರಡು ವಾರಗಳ ಕಾಲ ಇಲ್ಲಿದ್ದು ರಫೆಲ್ ತೆರಳಿದ ಬಳಿಕ ಬಂದಿದ್ದು ಜರ್ಮನಿಯ ಅನಾ. ನೆಲಮಂಗಲ ಸಮೀಪದ ಮರಸರಹಳ್ಳಿಯ ಜನರಿಗೆ ಫಾರಿನ್ ಜನ ಅಂದರೆ ಕೌತುಕವೇನಿಲ್ಲ. ಅವರು ಬರುವುದು, ಹೊಲದಲ್ಲಿ ಕೆಲಸ ಮಾಡುವುದು, ಇಲ್ಲಿನದೇ ಊಟ-ಉಪಾಹಾರ ಸೇವಿಸುವುದು ಅವರಿಗೆ ಸಹಜ.

ಹಾಗೆಂದು ಇವರೆಲ್ಲ ಕೆಲಸ ಹುಡುಕಿಕೊಂಡು ಬಂದವರಲ್ಲ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಉದ್ಯೋಗ ಮಾಡುತ್ತಿರುವವರು, ಯಾವಾವುದೋ ಅಧ್ಯಯನ ಮಾಡುತ್ತ ಭಾರತಕ್ಕೆ ಬಂದಿಳಿದವರು. ಹಾಗೆ ಬಂದವರು ಹಳ್ಳಿಗಳಲ್ಲಿ ಉಳಿದುಕೊಂಡು, ಅಲ್ಲಿನ ಸಂಸ್ಕೃತಿ ಪರಿಚಯಿಸಿಕೊಳ್ಳುತ್ತ ಅಲ್ಲಿನವರೇ ಆಗುವುದು ಅವರ ಉದ್ದೇಶ. ಅದೆಲ್ಲಕ್ಕೂ ಮಿಗಿಲಾಗಿ, ಪ್ರವಾಸದ ನೆಪದಲ್ಲಿ ಸ್ಥಳೀಯ ಪರಿಸರಕ್ಕೆ ಧಕ್ಕೆ ತಂದೊಡ್ಡದೇ ಅಲ್ಲಿನ ಬೆಳವಣಿಗೆಗೆ ಕೈಲಾದಷ್ಟು ನೆರವಾಗುವುದು– ಇದು ವಿವೇಕ ವಿಹಾರದ (ರೆಸ್ಪಾನ್ಸಿಬಲ್ ಟೂರಿಸಂ) ಮೂಲ ಆಶಯ.

ಪ್ರವಾಸ ಅಂದೊಡನೆಯೇ ಒಂದಷ್ಟು ದೃಶ್ಯಗಳು ನಮ್ಮ ಕಣ್ಮುಂದೆ ಮೂಡುತ್ತವೆ. ಕಾರಿನಲ್ಲಿ ಲಗೇಜು ಹಾಕಿಕೊಂಡು, ಪ್ರೇಕ್ಷಣೀಯ ಸ್ಥಳಕ್ಕೆ ಹೋಗುವುದು, ಅಲ್ಲಿ ಲಾಡ್ಜ್‌ನಲ್ಲಿ ರೂಮ್ ಮಾಡುವುದು, ಸುತ್ತಮುತ್ತ ಏನೇನಿದೆಯೋ ನೋಡಿಕೊಂಡು ತಿಂದುಂಡುಕೊಂಡು, ಇರುವಷ್ಟು ದಿನ ಎಂಜಾಯ್ ಮಾಡಿ ವಾಪಸಾಗುವುದು. ಇಂಥ ‘ಟೂರಿಸಂ’ ಉತ್ತೇಜಿಸುವ ಹಲವು ಪ್ಯಾಕೇಜ್‌ಗಳನ್ನು ಪ್ರವಾಸೋದ್ಯಮ ಏಜೆನ್ಸಿಗಳು ರಾಶಿಗಟ್ಟಲೇ ತಂದು ಸುರಿಯುತ್ತಿವೆ.

ಕೆಲಸದ ಒತ್ತಡದಲ್ಲೂ ಅತ್ಯವಸರದ ಬದುಕಿನಲ್ಲೂ ಒದ್ದಾಡುತ್ತಿರುವವರಿಗೆ ಇಂಥ ಪ್ರವಾಸಗಳು ಟಾನಿಕ್ ಇದ್ದಂತೆ. ಆದರೆ ಈ ತೆರನಾದ ಪ್ರವಾಸೋದ್ಯವು ಸ್ಥಳೀಯ ಸಂಸ್ಕೃತಿ, ಆಹಾರ ವೈವಿಧ್ಯಗಳನ್ನೆಲ್ಲ ತೆರೆಮರೆಗೆ ಸರಿಸಿ, ಏಕರೂಪತೆ ತಂದಿಟ್ಟಿರುವ ಉದಾಹರಣೆಗಳೂ ಇವೆ. ಇನ್ನು ‘ಎಂಜಾಯ್’ ಮಾಡುವ ಭರದಲ್ಲಿ ಪರಿಸರಕ್ಕೆ ಆಗುವ ಹಾನಿಯನ್ನು ಗಮನಿಸುವಷ್ಟು ವ್ಯವಧಾನ ಯಾರಿಗಿದೆ?

ಪರ್ಯಾಯ ಪ್ರವಾಸವೆಂದರೆ…
ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರ ಕಲುಷಿತಗೊಳಿಸುವುದು ಹಾಗೂ ಅಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ಹೆಚ್ಚುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಇದಕ್ಕೆ ಪರ್ಯಾಯವಾಗಿ ರೂಪುಗೊಂಡ ಪ್ರವಾಸೋದ್ಯಮ ಕ್ರಮೇಣ ಜನಪ್ರಿಯವಾಗುತ್ತಿದೆ. ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ರೂಪುಗೊಂಡ ಈ ಬಗೆಯ ಪ್ರವಾಸೋದ್ಯಮಕ್ಕೆ ಸುಸ್ಥಿರ ಪ್ರವಾಸ (ಸಸ್ಟೇನೆಬಲ್ ಟೂರಿಸಂ) ಅಥವಾ ವಿವೇಕ ವಿಹಾರ (ರೆಸ್ಪಾನ್ಸಿಬಲ್ ಟೂರಿಸಂ) ಎಂದೇ ಹೆಸರಿಡಲಾಗಿದೆ.

ಪರಿಸರಾಸಕ್ತ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಜಾಲವೊಂದನ್ನು ಇದಕ್ಕಾಗಿ ಮಾಡಿಕೊಂಡಿದ್ದು, ನಿಧಾನವಾಗಿ ಅದರ ರೆಂಬೆಗಳು ಎಲ್ಲೆಡೆ ಚಾಚತೊಡಗಿವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅನೌಪಚಾರಿಕವಾಗಿ ಶುರುವಾದ ‘ವಿವೇಕ ವಿಹಾರ’, ಆಗ ಆಂದೋಲನದ ರೂಪದಲ್ಲಿತ್ತು. ೧೯೯೬ರಲ್ಲಿ ಅದಕ್ಕೊಂದು ಶಿಸ್ತುಬದ್ಧ ಚೌಕಟ್ಟು ರೂಪಿಸಲಾಯಿತು. ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಅಧ್ವಾನಗಳನ್ನು ಮನಗಂಡು, ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಪರಿಸರ ಸಂಘಟನೆಗಳು ಯತ್ನಿಸಿದವು.

ಅದರ ಪರಿಣಾಮವಾಗಿ ೨೦೦೨ರಲ್ಲಿ ಕೇಪ್ ಟೌನ್‌ನಲ್ಲಿ ನಡೆದ ಸಮಾವೇಶದಲ್ಲಿ ‘ವಿವೇಕ ವಿಹಾರ’ಕ್ಕೊಂದು ಸ್ಪಷ್ಟ ರೂಪು ಕೊಡಲಾಯಿತು. ಪ್ರವಾಸೋದ್ಯಮದಿಂದ ಆರ್ಥಿಕತೆ, ಸಾಮಾಜಿಕ ಬದುಕು ಹಾಗೂ ಪರಿಸರದ ಮೇಲಾಗುವ ಋಣಾತ್ಮಕ ಪರಿಣಾಮ ತಡೆಯಲು ಏನೇನು ಮಾಡಬಹುದು ಎಂಬ ಅಂಶಗಳನ್ನು ಪಟ್ಟಿ ಮಾಡಲಾಯಿತು.

ಯಾವುದೇ ದೇಶಕ್ಕೂ ಹೆಚ್ಚೆಚ್ಚು ಆದಾಯ ತಂದು ಕೊಡುವ ಚಟುವಟಿಕೆಗಳಲ್ಲ್ಲಿ ಪ್ರವಾಸೋದ್ಯಮಕ್ಕೆ ಪ್ರಮುಖ ಸ್ಥಾನ. ಹೀಗಾಗಿ ಸ್ಥಳೀಯ ಪ್ರದೇಶ ಹಾಗೂ ಪರಿಸರಕ್ಕೆ ಧಕ್ಕೆ ತಂದೊಡ್ಡದಂತೆ ಪ್ರವಾಸೋದ್ಯಮವನ್ನು ಬಳಸಿಕೊಳ್ಳುವ ಆಶಯ ‘ವಿವೇಕ ವಿಹಾರ’ದಲ್ಲಿದೆ. ಅತ್ತ ಪ್ರವಾಸಿಗರಿಗೂ, ಇತ್ತ ಸ್ಥಳೀಯರಿಗೂ ಏಕಕಾಲಕ್ಕೆ ಪ್ರಯೋಜನ ಸಿಗಬೇಕು ಎಂಬ ಪ್ರಮುಖ ಸೂತ್ರ ಅದರದು.

ಪ್ರಶಸ್ತಿಯೂ ಇದೆ!
‘ಅಭಿವೃದ್ಧಿ ಹೊಂದಿದ ದೇಶ’ ಎಂಬ ಹಣೆಪಟ್ಟಿ ಧರಿಸಿರುವ ಕೆಲವು ರಾಷ್ಟ್ರಗಳು ಈಗಾಗಲೇ ಪ್ರವಾಸೋದ್ಯಮದ ವ್ಯತಿರಿಕ್ತ ಪರಿಣಾಮಕ್ಕೆ ಸಿಲುಕಿ, ಅದರ ಅಪಾಯ ಗ್ರಹಿಸಿವೆ. ಹೀಗಾಗಿ ‘ವಿವೇಕ ವಿಹಾರ’ದ ವ್ಯಾಪ್ತಿ ಇನ್ನಷ್ಟು ಹೆಚ್ಚಿಸಬೇಕೆಂಬ ಪ್ರಯತ್ನ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಪ್ರವಾಸಿ ಏಜೆನ್ಸಿಗಳು, ಪರಿಸರಾಸಕ್ತ ಸಂಘಟನೆಗಳು, ಸಮುದಾಯ ಪಾಲುದಾರಿಕೆ ಸಂಸ್ಥೆಗಳು ಹಾಗೂ ಹೋಟೆಲ್‌ಗಳು ಒಂದಾಗಿ ಅನೌಪಚಾರಿಕ ಮಾದರಿಯಲ್ಲಿ ‘ರೆಸ್ಪಾನ್ಸಿಬಲ್ ಟೂರಿಸಂ ನೆಟ್‌ವರ್ಕ್’ ರಚಿಸಿಕೊಂಡಿವೆ.

ಈ ಜಾಲ ನಡೆಸುತ್ತಿರುವ ಆಂದೋಲನದ ಫಲವಾಗಿ ‘ವಿವೇಕ ವಿಹಾರ’ದ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ವರ್ಜಿನ್ ಹಾಲಿಡೇಸ್, ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ ಹಾಗೂ ಜಿಯಾಗ್ರಫಿಕಲ್ ಮ್ಯಾಗಝಿನ್– ಈ ಪ್ರಶಸ್ತಿ ಪ್ರಾಯೋಜಕತ್ವ ವಹಿಸಿಕೊಂಡಿವೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಚಾಲ್ತಿಯಲ್ಲಿರುವ ಪ್ರವಾಸೋದ್ಯಮದ ವ್ಯಾಖ್ಯೆಯನ್ನೇ ಬದಲಿಸುವ ‘ವಿವೇಕ ವಿಹಾರ’ದಲ್ಲಿ ಬರೀ ಮನಂಜನೆಗಷ್ಟೇ ಜಾಗವಿಲ್ಲ. ಅಲ್ಲೊಂದು ಸಾಮಾಜಿಕ ಜವಾಬ್ದಾರಿಯೂ ಇದೆ. ಪ್ರವಾಸ ಅಂದರೆ ತಿಂದುಂಡು, ಸಂತೋಷದಿಂದ ಬರುವುದಷ್ಟೇ ಹೊರತೂ ಅಲ್ಲಿನ ಪರಿಣಾಮಗಳನ್ನು ತೆಗೆದುಕೊಂಡು ನಮಗೇನು ಎಂಬ ಧೋರಣೆ ಸಲ್ಲದು. ಪ್ರವಾಸಿ ತಾಣಗಳಿಂದ ತುಂಬಿ ಹೋಗಿರುವ ಭಾರತದಲ್ಲಿ ‘ವಿವೇಕ ವಿಹಾರ’ ಇನ್ನೂ ಕಾಲೂರಬೇಕಿದೆ.

ಈ ವಿಷಯದಲ್ಲಿ ಪ್ರಕೃತಿಯಿಂದ ಸಂಪದ್ಭರಿತವಾಗಿರುವ ಕೇರಳ ಒಂದು ಹೆಜ್ಜೆಯಿಟ್ಟಿದೆ. ಅಲ್ಲಿನ ಸರ್ಕಾರ, ಕೆಲವು ತಾಣಗಳಲ್ಲಿ ಈ ಪರಿಕಲ್ಪನೆಯನ್ನು ಕಳೆದ ತಿಂಗಳಷ್ಟೇ ಪರಿಚಯಿಸಿದೆ. ಆ ಹಿನ್ನೆಲೆಯಲ್ಲಿ ಗಮನಿಸಿದರೆ ಕರ್ನಾಟಕ ಇನ್ನೂ ಹಿಂದಿದೆ. ಹಾಗೆಂದು ಬೇಸರಿಸಬೇಕಿಲ್ಲ! ಬೆಂಗಳೂರಿನ ‘ಗ್ರೀನ್ ಪಾಥ್‌ ಪರಿಸರ ಪ್ರತಿಷ್ಠಾನ’ ಕಳೆದ ನಾಲ್ಕು ವರ್ಷಗಳಿಂದ ‘ವಿವೇಕ ವಿಹಾರ’ ಯೋಜನೆಯನ್ನು ಜಾರಿಗೆ ತಂದಿದ್ದು, ಅದರ ಪ್ರತಿಫಲವನ್ನು ಹಳ್ಳಿಗರಿಗೆ ನೀಡುತ್ತಿರುವ ಕುತೂಹಲದ ಸಂಗತಿಯೂ ಇದೆ.

ಪ್ರವಾಸೋದ್ಯಮದಿಂದ ಏನೆಲ್ಲ ಆದಾಯ ಸಿಗುತ್ತದೆ ಎಂದು ಸರ್ಕಾರಗಳೂ, ಪ್ರವಾಸಿ ಏಜೆನ್ಸಿಗಳೂ ಹೇಳಿಕೊಳ್ಳುತ್ತಲೇ ಇರುತ್ತವೆ. ಆದರೆ ವಾಸ್ತವ ಸ್ಥಿತಿ ಏನೆಂಬುದನ್ನು ಪರಿಸರವಾದಿ ಶಿವಾನಂದ ಕಳವೆ ಬಣ್ಣಿಸುವುದು ಹೀಗೆ: ‘ಜೋಗ ಜಲಪಾತಕ್ಕೆ ಹೋಗುವ ಹಾದಿಯಲ್ಲಿ ಏನೇನಾಗುತ್ತಿದೆ ಅಂತ ನಾನೊಮ್ಮೆ ಅಧ್ಯಯನ ನಡೆಸಿದ್ದೆ. ಅಲ್ಲಿ ಬರೀ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನ ರಾರಾಜಿಸುತ್ತಿದ್ದವೇ ಹೊರತೂ ಸ್ಥಳೀಯ ರುಚಿ, ತಿನಿಸುಗಳ ವಹಿವಾಟು ಕೊರತೆ ಎದ್ದು ಕಾಣುತ್ತಿತ್ತು. ಇಂಥ ಪ್ರವಾಸಗಳಿಂದ ಸ್ಥಳೀಯರಿಗೂ ಅಲ್ಲಿನ ಪರಿಸರಕ್ಕೂ ಏನೇನೂ ಪ್ರಯೋಜನವಿಲ್ಲ’.

ವಿವೇಕ ವಿಹಾರದಲ್ಲಿ ಪ್ರವಾಸವೂ ಮನರಂಜನೆಯೂ ಒಟ್ಟಿಗಿದೆ. ಅದರಿಂದ ಸ್ಥಳೀಯ ಸಂಸ್ಕೃತಿ, ವೈವಿಧ್ಯಕ್ಕೆ ಪ್ರಯೋಜನವೂ ಇದೆ. ‘ಅದನ್ನು ಬಿಟ್ಟು ಗುಲ್ಬರ್ಗದಲ್ಲೂ, ಮಡಿಕೇರಿಯಲ್ಲೂ ಅದೇ ಚೈನೀಸ್ ನ್ಯೂಡಲ್ಸ್ ತಿಂದರೆ ಜೋಳದ ರೊಟ್ಟಿ- ಬದನೆ ಪಲ್ಯ ಹಾಗೂ ರಾಗಿ ಮುದ್ದೆ- ಸೊಪ್ಪಿನ ಸಾರಿಗೆ ಇರುವ ವ್ಯತ್ಯಾಸ ಹೇಗೆ ಗೊತ್ತಾದೀತು’ ಎಂದು ಪ್ರಶ್ನಿಸುತ್ತಾರೆ, ಗ್ರೀನ್ ಪಾಥ್ ಪರಿಸರ ಪ್ರತಿಷ್ಠಾನದ ಮುಖ್ಯಸ್ಥ ಎಚ್.ಆರ್. ಜಯರಾಮ್.

‘ನನ್ನ ಪ್ರವಾಸದ ಉದ್ದೇಶ ಕೂಡ ಅದೇ ಆಗಿತ್ತು’ ಎಂದು ಹೇಳಿದ ಜರ್ಮನಿಯ ಯುವಕ ಕಸ್ಟರ್‌. ಕ್ರಿಸ್‌ಮಸ್ ರಜಾ ಕಳೆಯಲೆಂದು ಭಾರತಕ್ಕೆ ಬಂದಿರುವ ಆತನಿಗೆ ಇಲ್ಲಿನ ಊಟ, ವಾತಾವರಣ ತುಂಬ ಹಿಡಿಸಿದಂತಿತ್ತು. ಮರಸರಹಳ್ಳಿಯ ‘ಸುಕೃಷಿ’ ಸಾವಯವ ತೋಟದಲ್ಲಿ ಎರಡು ವಾರ ಇದ್ದ ಕಸ್ಟರ್, ‘ಐ ಲವ್ ಮಂಡಕ್ಕಿ, ಅವ್ಲಕಿ ಅಂಡ್ ರಾಗಿ ಮುದೀಸ್’ ಎನ್ನುತ್ತ ಮೂರು ರಾಗಿ ಮುದ್ದೆಗಳನ್ನು ಲಕ್ಷಣವಾಗಿ ಗುಳುಂ ಮಾಡಿದ. ‘ನೆಕ್ಸ್ಟ್ ವೀಕ್ ಐ ಆಮ್ ರಿಟರ್ನಿಂಗ್. ರಿಯಲಿ ಮಿಸ್ ದೀಸ್ ಟೇಸ್ಟೀ ಡಿಶಸ್’ ಎನ್ನುತ್ತ ತಟ್ಟೆ ತೊಳೆಯಲು ನಲ್ಲಿಯತ್ತ ನಡೆದ.

ಈಗಿನ ಪ್ರವಾಸೋದ್ಯಮದಿಂದ ಏನಾಗುತ್ತಿದೆ?
*ಪ್ರವಾಸೋದ್ಯಮಕ್ಕೆಂದು ಬಳಸುವ ಸಾರಿಗೆ ವ್ಯವಸ್ಥೆಯು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ.

*ಪ್ರೇಕ್ಷಣೀಯ ತಾಣಗಳಿಗೆ ದಾಂಗುಡಿಯಿಡುವ ಪ್ರವಾಸಿಗರು ಅಲ್ಲಿನ ಸ್ವಚ್ಛತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅಪರೂಪ.
*ಪ್ರಖ್ಯಾತ ಸ್ಥಳಗಳಿಗೆ ಹೋದರೆ, ಅಲ್ಲಿನ ಸ್ಥಳೀಯ ತಿಂಡಿ-ತಿನಿಸುಗಳು ಕಾಣುವುದೇ ಇಲ್ಲ. ಎಲ್ಲೆಡೆ ಸಿಗುವ ಊಟೋಪಚಾರ ಅಲ್ಲೂ ಲಭ್ಯ.
*ಆ ತಾಣಗಳಿಗೆ ಪ್ರವಾಸಿಗರು ಹೋದರೆ, ನಾಲ್ಕಾರು ಅಂಗಡಿಗಳಿಗೆ ಮಾತ್ರ ವ್ಯಾಪಾರವಾಗಬಹುದು. ಇದನ್ನು ಬಿಟ್ಟರೆ ಸುತ್ತಲಿನ ಪ್ರದೇಶಕ್ಕಾಗಲೀ ಅಲ್ಲಿನ ಹಳ್ಳಿಗರಿಗಾಗಲೀ ಪ್ರಯೋಜನವಿಲ್ಲ.
*ಪ್ರವಾಸಿ ಸ್ಥಳಗಳ ನಿರ್ವಹಣೆಯನ್ನು ಸರ್ಕಾರವೇ ಮಾಡುವುದರಿಂದ, ಅದರಿಂದ ಬರುವ ಆದಾಯದ ಪಾಲು ಆ ಗ್ರಾಮದ ಅಭವೃದ್ಧಿಗೆ ಬಳಕೆಯಾಗಬಹುದು ಎಂಬ ನಂಬಿಕೆಯೂ ಇಲ್ಲ. ಈ ಹಣ ಬಹುತೇಕ ಸಲ ಪ್ರವಾಸಿ ತಾಣಕ್ಕೆ ಮೂಲಸೌಲಭ್ಯ ಕಲ್ಪಿಸುವುದಕ್ಕಷ್ಟೇ ಸೀಮಿತವಾಗುತ್ತದೆ.
*ಸರ್ಕಾರಗಳು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಕೋಟಿಗಟ್ಟಲೆ ಹಣ ಸುರಿಯುತ್ತವೆ. ಆದರೆ, ಅದರಲ್ಲಿ ಸ್ಥಳೀಯರನ್ನು ಒಳಗೊಳ್ಳುವಂತೆ ಮಾಡುವುದಾಗಲೀ, ಆ ಹಳ್ಳಿಗೆ ಸೌಲಭ್ಯ ಕೊಡುವುದಕ್ಕಾಗಲೀ ಹೆಚ್ಚು ಗಮನ ಹರಿಸುವುದಿಲ್ಲ.

ಮರಸರಹಳ್ಳಿಗೆ ಬೆಳಕು ಬಂತು!
‘ವಿವೇಕ ವಿಹಾರ’ದ ಮೊದಲ ಹೆಜ್ಜೆಯ ಗುರುತು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮರಸರಹಳ್ಳಿಯಲ್ಲಿ ಕಾಣಿಸಿಕೊಂಡಿದೆ. ಹೊಣೆಯರಿತ ಪ್ರವಾಸಿಗರು ಅಲ್ಲಿಗೆ ಬಂದು ಹೋಗಿದ್ದರಿಂದ, ಆ ಹಳ್ಳಿಗರು ಬೆಳಕು ಕಾಣುವಂತಾಗಿದೆ.

‘ಸಣ್ಣದಾಗಿ ಮಳೆ ಬಂದ್ರೂ ನಮ್ಮೂರಿನಾಗೆ ಕರೆಂಟ್ ಹೋಗಿ ಬಿಡ್ತಿತ್ತು. ಎಷ್ಟೋ ಸಲ ರಾತ್ರಿಯಿಡೀ ಕರೆಂಟ್ ಬರ್ತಿಲ್ಲಿಲ್ಲ. ಈಗ ನಮಗ ಕತ್ತಲ ಅನ್ನಾದ ಗೊತ್ತಿಲ್ಲ’ ಎಂದು ಖುಷಿಯಿಂದ ಹೇಳುತ್ತಾರೆ, ಹೇಮಲತಾ. ಅವರ ಮನೆಗೆ ಸೌರದೀಪದ ಬೆಳಕು ಸಿಕ್ಕಿದೆ. ಸುಸ್ಥಿರ ಪ್ರವಾಸೋದ್ಯಮ ಉತ್ತೇಜಿಸುವ ಫ್ರಾನ್ಸ್‌ನ ‘ಆರ್‌ಬಿಎಂ’ ಸಂಸ್ಥೆಯ ಸಹಯೋಗದೊಂದಿಗೆ ಭಾರತದ ‘ಫೋರ್ಸ್ ವಿಟಲ್’ ಎಂಬ ಸ್ವಯಂಸೇವಾ ಸಂಸ್ಥೆಯು ‘ವಿವೇಕ ವಿಹಾರ’ವನ್ನು ಉತ್ತೇಜಿಸುತ್ತಿದೆ.

ಈ ಪ್ರಯತ್ನಕ್ಕೆ ಕರ್ನಾಟಕದಲ್ಲಿ ಬೆಂಗಳೂರಿನ ‘ಗ್ರೀನ್‌ಪಾಥ್ ಪರಿಸರ ಪ್ರತಿಷ್ಠಾನ’ ನೆಲೆ ಒದಗಿಸಿದೆ. ಬೇರೆ ಬೇರೆ ರಾಜ್ಯ, ದೇಶಗಳಿಂದ ಪ್ರವಾಸಿಗರು ಬೆಂಗಳೂರಿಗೆ ಬಂದಾಗ, ಅವರ ಆಸಕ್ತಿ ಮೇರೆಗೆ ಮರಸರಹಳ್ಳಿಯ ‘ಸುಕೃಷಿ ಸಾವಯವ ತೋಟ’ಕ್ಕೆ ಅವರನ್ನು ಕಳಿಸಲಾಗುತ್ತದೆ.

ಕೆಲ ಕಾಲ ಅಲ್ಲಿದ್ದು ಅವರು ವಾಪಸಾಗುವ ಮುನ್ನ, ‘ಆರ್‌ಬಿಎಂ’ಗೆ ನಿಗದಿತ ಶುಲ್ಕ ಪಾವತಿಸುತ್ತಾರೆ (ಅದು ಬೆಂಗಳೂರಿನ ಲಾಡ್ಜ್‌ಗಳಿಗಿಂತ ಖಂಡಿತವಾಗ್ಯೂ ಕಡಿಮೆಯೇ ಆಗಿರುತ್ತದೆ). ಈ ಮೊತ್ತದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಆಗುವ ಅತ್ಯಲ್ಪ ಖರ್ಚನ್ನು ತೋಟಗಳ ಮಾಲೀಕರಿಗೆ ಆರ್‌ಬಿಎಂ ಮರುಪಾವತಿಸುತ್ತದೆ.

ಪ್ರವಾಸಿಗರಿಂದ ಸಂಗ್ರಹವಾಗುವ ಒಟ್ಟು ಮೊತ್ತದ ಮೂರನೇ ಒಂದು ಭಾಗದಷ್ಟು ಹಣವನ್ನು ಹಳ್ಳಿಗಳ ಪ್ರಗತಿಗೆ ಕೊಡುತ್ತದೆ. ‘ಹೀಗೆ ಆರ್‌ಬಿಎಂ ಕೊಟ್ಟಿರುವ ಹಣದಿಂದ ಕಳೆದ ವರ್ಷ ಮರಸರಹಳ್ಳಿಯ ಪ್ರಾಥಮಿಕ ಶಾಲೆಗೆ ಮಳೆನೀರು ಕೊಯ್ಲು ಹಾಗೂ ಈ ವರ್ಷ ಹಳ್ಳಿಯ ಎಲ್ಲ ಮೂವತ್ತೆಂಟು ಮನೆಗಳಿಗೆ ಸೌರದೀಪ ಘಟಕ ಅಳವಡಿಸಲಾಗಿದೆ’ ಎನ್ನುತ್ತಾರೆ, ಪ್ರತಿಷ್ಠಾನದ ಮುಖ್ಯಸ್ಥರೂ ಆಗಿರುವ ಸಾವಯವ ಕೃಷಿಕ ಹಾಗೂ ವಕೀಲ ಎಚ್.ಆರ್.ಜಯರಾಮ್.

‘ಇಲ್ಲಿರುವ ಎಲ್ಲ ಮನೆಗಳಲ್ಲಿ ಈಗ ವಿದ್ಯುತ್ ಕೊರತೆಯೇ ಇಲ್ಲ. ಪರಿಸರಕ್ಕೆ ಪೂರಕವಾದ ಚಟುವಟಿಕೆ ಹಮ್ಮಿಕೊಳ್ಳುವ ದಿಕ್ಕಿನಲ್ಲಿ ನಮ್ಮದೊಂದು ಸಣ್ಣ ಹೆಜ್ಜೆ. ಮುಂದಿನ ವರ್ಷ ಪ್ರತಿ ಮನೆಗೂ ಜೈವಿಕ ಅನಿಲ ಕಿರುಘಟಕ ವಿತರಿಸುವ ಯೋಜನೆಯಿದೆ’ ಎನ್ನುತ್ತಾರೆ ಆರ್‌ಬಿಎಂ ಪ್ರತಿನಿಧಿ ಸಿಸಿಲಿ ಥಾಮಸ್.

Write A Comment