ಅಂತರಾಷ್ಟ್ರೀಯ

ಈಜಿಪ್ಟ್‌ ದೇಶ ಆಳಿದ ಏಕೈಕ ರಾಣಿ ಹಟ್‌ಷೇಪ್‌ಸುಟ್‌ ಮರಳುಗಾಡಿನ ಕಲಾಝರಿ

Pinterest LinkedIn Tumblr

svee_0

ಈಜಿಪ್ಟ್‌ ದೇಶವನ್ನು ಆಳಿದ ಏಕೈಕ ರಾಣಿ ಎನ್ನುವ ಅಗ್ಗಳಿಕೆ ಹಟ್‌ಷೇಪ್‌ಸುಟ್‌ ರಾಣಿಯದು. ಆಕೆ ತನ್ನ ಆಡಳಿತ ವೈಖರಿ, ಅಂತರರಾಷ್ಟ್ರೀಯ ನೀತಿಗಳ ಕಾರಣದಿಂದ ಮಾತ್ರವಲ್ಲದೆ ಕಲಾಪೋಷಕಿಯಾಗಿ ಕೂಡ ಚರಿತ್ರೆಯಲ್ಲಿ ಸ್ಥಿರಸ್ಥಾಯಿಯಾಗಿದ್ದಾಳೆ. ಈಜಿಪ್ಟ್‌ನ ಫೆರೋಗಳ ಪೈಕಿ ಇಮ್ಮಡಿ ರಾಮ್‌ಸೆಸ್‌ನನ್ನು ಬಿಟ್ಟರೆ ಅತಿ ಹೆಚ್ಚು ದೇವಾಲಯಗಳು ಮತ್ತು ಶಿಲ್ಪಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಹಟ್‌ಷೇಪ್‌ಸುಟ್ ರಾಣಿಯದು. ಆಕೆಯ ಕಾಲದ ಈಜಿಪ್ಟ್‌ ಸುಭಿಕ್ಷವಾಗಿತ್ತು ಹಾಗೂ ಕಲೆಯ ನೆಲೆಯಾಗಿ ತನ್ನ ವೈಭವದ ದಿನಗಳನ್ನು ಕಂಡಿತು.

ಕಿಂಗ್ಸ್ ವ್ಯಾಲಿ ಮತ್ತು ಕ್ವೀನ್ಸ್ ವ್ಯಾಲಿ ಇರುವ ಬೆಟ್ಟಗಳ ಹಿಂಭಾಗದಲ್ಲಿರುವ ಭವ್ಯವಾದ ‘ಹಟ್‌ಷೇಪ್‌ಸುಟ್ ದೇವಾಲಯ’ ರಾಣಿಯ ವೈಭವದ ದಿನಗಳ ಕಥೆಯನ್ನು ಹೇಳುವಂತೆ ಕಂಗೊಳಿಸುತ್ತಿದೆ. ಲಕ್ಸರ್ ನಗರದ ಪಶ್ಚಿಮಕ್ಕೆ ಅನತಿ ದೂರದಲ್ಲಿರುವ ಈ ದೇವಾಲಯ ಪ್ರಾಚೀನ ಸ್ತಂಭಶ್ರೇಣಿಯಂತೆ ಬೆಳಗುತ್ತಿದೆ. ಇಲ್ಲಿ ನಿಸರ್ಗವನ್ನೂ ಅದರ ಬೆಟ್ಟಗುಡ್ಡಗಳನ್ನೂ ಪ್ರಕೃತಿ ಸೌಂದರ್ಯಕ್ಕಿಂತ ಹೆಚ್ಚು ಸುಂದರವನ್ನಾಗಿಸುವ ಬಯಕೆಯಿಂದ ಕಲಾವಿದರು, ಎತ್ತರವಾಗಿ ನಿಂತ ಗಟ್ಟಿ ಶಿಲೆಯ ಮುಖಕ್ಕೇ ಇರುವಂತೆ ಸ್ತಂಭಗಳನ್ನು ರಚಿಸಿದ್ದಾರೆ.

ಇಲ್ಲಿನ ಗೋಡೆಗಳ ಮೇಲಿರುವ ವಿಶಾಲವಾದ ಉಬ್ಬು ಚಿತ್ರಗಳು ಇತಿಹಾಸದಲ್ಲೇ ಮೊಟ್ಟಮೊದಲು ‘ಮಹಾನ್ ಮಹಿಳೆ’ಯಾಗಿ ಪ್ರಸಿದ್ಧಳಾದ ರಾಣಿಯ ಕಥೆಯನ್ನು ತಿಳಿಸುತ್ತವೆ. ಕೇವಲ 23 ವರ್ಷಗಳ ಹಟ್‌ಷೇಪ್‌ಸುಟ್ ಆಳ್ವಿಕೆಯಲ್ಲಿ ಅತ್ಯದ್ಭುತವಾದ ನಿರ್ಮಾಣಗಳು ರೂಪುಗೊಂಡವು. ಅದರಲ್ಲಿ ಅತಿ ಪ್ರಮುಖವಾದದ್ದು ದಾರ್-ಎಲ್-ಬಾಯಿರಿಯಲ್ಲಿ ಇರುವ ಅಮುನ್ ರಾ ದೇವರಿಗಾಗಿ ನಿರ್ಮಿಸಿರುವ  ಮೂರಂತಸ್ತಿನ ದೇವಾಲಯ. ಅದನ್ನು ಆಕೆ ಒಂದು ದೊಡ್ಡ ಬೆಟ್ಟವನ್ನೇ ಕಡಿಸಿ ನಿರ್ಮಿಸಿದಳು.

ಅಮುನ್ ರಾನ ಈ ಬೃಹತ್ ದೇವಾಲಯದ ಬಲಗಡೆ ದೇವರಾದ ಅನೂಬಿಸ್‌ಗಾಗಿ ಮತ್ತು ಎಡಗಡೆ ದೇವಿ ಹಾಥೋರ್‌ಗಾಗಿ ದೇವಾಲಯಗಳನ್ನು ಕಟ್ಟಿಸಿದಳು. ಥೀಬ್ಸ್‌ನ ಕಾರ್ನಾಕ್ ದೇವಾಲಯದಲ್ಲಿ ಎರಡು ಬೃಹತ್ ಗಾತ್ರದ ದೈವಸ್ತಂಭಗಳನ್ನು (ಒಬಿಲಿಕ್ಸ್) ನಿಲ್ಲಿಸಿದಳು. ಅವುಗಳ ಪೈಕಿ ಒಂದು ಈಗಲೂ ಇದೆ, ಮತ್ತೊಂದು ಮುರಿದು ಬಿದ್ದಿದೆ.

ನಿಂತಿರುವ ದೈವಸ್ತಂಭದ ಎತ್ತರ 97 ಅಡಿ, ತೂಕ 320 ಟನ್. ರೋಮ್‌ನಲ್ಲಿರುವ 101 ಅಡಿ ಎತ್ತರದ ದೈವಸ್ತಂಭವನ್ನು ಬಿಟ್ಟರೆ, ಇದು ಪ್ರಪಂಚದಲ್ಲೇ ಎತ್ತರವಾದುದು. ಇದಕ್ಕೂ ಎತ್ತರದ ದೈವಸ್ತಂಭವನ್ನು ನಿರ್ಮಿಸಲು ಆಕೆ ಪ್ರಯತ್ನಿಸಿದ್ದಳು. ಆಸ್ವಾನ್‌ನ ಗ್ರಾನೈಟ್ ಗಣಿಯಲ್ಲಿ ಈ ಕೆಲಸ ನಡೆದಿದ್ದಾಗ ಆ ಕಂಬದಲ್ಲಿ ಬಿರುಕು ಕಾಣಿಸಿತು. ಹಾಗಾಗಿ ಅದನ್ನು ಅಲ್ಲಿಯೇ ಬಿಟ್ಟರು. ಇಂದು ನಮಗೆ ಫೆರೋಗಳು ದೈವಸ್ತಂಭವನ್ನು ಹೇಗೆ ನಿರ್ಮಿಸುತ್ತಿದ್ದರು ಎಂಬುದರ ಕುರುಹಾಗಿ ಆಸ್ವಾನ್‌ನ ಗಣಿಯಲ್ಲಿರುವ ಬಿರುಕು ಬಿಟ್ಟ ಆ ದೈವಸ್ತಂಭ ಕಾಣಸಿಗುತ್ತದೆ.

ಅಪರೂಪದ ರಾಣಿ
ಹಟ್‌ಷೇಪ್‌ಸುಟ್ ರಾಣಿಗೆ ಈಜಿಪ್ಟ್‌ನ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ರಾಜನ ಸ್ಥಾನವನ್ನು ಪಡೆಯುವುದು, ರಾಜನಂತೆ ರಾಜ್ಯಭಾರ ಮಾಡುವುದು ಅಪರೂಪ. ಇಂಥ ಅಪರೂಪದ ದಾಖಲೆ ನಿರ್ಮಿಸಿದವಳು ಈ ಹಟ್‌ಷೇಪ್‌ಸುಟ್.
ಈಜಿಪ್ಟ್‌ನ ಹೊಸ ರಾಜವಂಶ (ಕಿ.ಪೂ 1539 – 1069)ದಲ್ಲಿ ಹುಟ್ಟಿದ ಪ್ರಸಿದ್ಧ ಫೆರೋ ಮೊದಲನೇ ಟುತ್‌ಮೋಸ್.

ಅವನು ರಾಜ್ಯವಾಳಲು ಪ್ರಾರಂಭಿಸಿದಾಗ ಥೀಬ್ಸ್ (ಲಕ್ಸರ್) ರಾಜಧಾನಿಯಾಗಿತ್ತು. ಆತನ ಪಟ್ಟಮಹಿಷಿ ಅಹಮೋಸ್. ಅವರ ಮೊದಲ ಮಗಳೇ ಹಟ್‌ಷೇಪ್‌ಸುಟ್. ರಾಜ ಟುತ್‌ಮೋಸ್‌ನಿಗೆ ಮಗಳು ಹಟ್‌ಷೇಪ್‌ಸುಟ್ ಕಂಡರೆ ಬಹಳ ಅಕ್ಕರೆ. ಅವಳಿಗೆ ಬಾಲ್ಯದಿಂದಲೇ ರಾಜ್ಯಭಾರದ ಕೌಶಲವನ್ನು ಕಲಿಸಿದ. ಕ್ರಿ.ಪೂ. 1393ರಲ್ಲಿ ಮೊದಲನೇ ಟುತ್‌ಮೋಸ್‌ನ ಮರಣದ ನಂತರ ಹಟ್‌ಷೇಪ್‌ಸುಟ್ ತನ್ನ ಮಲ ಸಹೋದರ ಇಮ್ಮಡಿ ಟುತ್‌ಮೋಸ್‌ನನ್ನು ಮದುವೆಯಾದಳು.

ಗಂಡನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ ಹಟ್‌ಷೇಪ್‌ಸುಟ್ ತಾನು ಹಿರಿಯ ರಾಣಿ ಎಂಬಂತೆ ನಡೆದುಕೊಂಡಳು ಮತ್ತು ಅವಳೇ ಇಡೀ ರಾಜ್ಯಭಾರವನ್ನು ನಡೆಸಿದಳು.  ಈಜಿಪ್ಟಿನ ಪ್ರತಿಯೊಬ್ಬ ರಾಜನೂ ಆಮನ್ ಪರಮದೇವತೆಯ ಪುತ್ರನಾಗಿರಬೇಕೆಂದು ಪವಿತ್ರ ಸಂಪ್ರದಾಯ ವಿಧಿಸಿದ್ದುದರಿಂದ ತಾನು ಗಂಡಸು ಮತ್ತು ದೈವೀಕಳೆಂದು ಹಟ್‌ಷೇಪ್‌ಸುಟ್ ವ್ಯವಸ್ಥೆ ಮಾಡಿದಳು. ಅವಳಿಗಾಗಿ ಒಂದು ಜೀವನ ಚರಿತ್ರೆಯನ್ನೇ ಕಲ್ಪಿಸಲಾಯಿತು.

ಈ ಮಹಾನ್ ರಾಣಿಯು ಸ್ಮಾರಕಗಳ ಮೇಲೆ ತನ್ನನ್ನು ಸ್ತನಗಳಿಲ್ಲದೆ ಗಡ್ಡ ಇರುವ ಯೋಧನಂತೆ ಚಿತ್ರದಲ್ಲಿ ಬಿಂಬಿಸಿಕೊಂಡಳು. ಶಿಲಾಲೇಖಗಳು ಆಕೆಯನ್ನು ಕುರಿತು ಸ್ತ್ರೀಲಿಂಗದ ಸರ್ವನಾಮಪದಗಳಿಂದ ಪ್ರಸ್ತಾಪಿಸಿದರೂ, ಆಕೆಯನ್ನು ಸೂರ್ಯಪುತ್ರ ಹಾಗೂ ಎರಡು ನಾಡುಗಳ ಪ್ರಭು ಎಂದು ಸಂಬೋಧಿಸಿದರು. ರಾಣಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪುರುಷವೇಷದಲ್ಲಿದ್ದು ಒಂದು ಗಡ್ಡವನ್ನೂ ಧರಿಸಿಕೊಂಡಿರುತ್ತಿದ್ದಳು.

ಅವಳು ತನ್ನ ಆಳ್ವಿಕೆಗೆ ಹಿನ್ನೆಲೆಯಾಗಿ ಸೊಗಸಾದ ಧಾರ್ಮಿಕ ಕಥೆಯನ್ನು ಸೃಷ್ಟಿಸಿ ದೇವಾಲಯದ ಗೋಡೆಯ ಮೇಲೆಲ್ಲಾ ಬರೆಸಿದಳು. ಎತ್ತರವಾದ ತನ್ನ ಮೂರ್ತಿಗಳನ್ನು ಎಲ್ಲಾ ಕಡೆ ನಿಲ್ಲಿಸಿದಳು.   ಆ ಮೂರ್ತಿಗೆ ಗಂಡಿಗಿರುವಂತೆ ಗಡ್ಡವನ್ನು ಕೆತ್ತಿಸಿದ್ದಳು. ಯಾವ ಗಂಡು ಫೆರೋಗೂ ಕಡಿಮೆ ಇರದಂತೆ ಬೆಟ್ಟವನ್ನೇ ಕೊರೆದು ಮೂರು ಅಂತಸ್ತುಗಳಲ್ಲಿ (ನಮ್ಮ ರಾಷ್ಟ್ರಕೂಟ ದೊರೆ ಕೃಷ್ಣ ಎಲ್ಲೋರಾ ದೇವಾಲಯವನ್ನು ಕಡೆಸಿದಂತೆ) ದೊಡ್ಡ ದೇವಾಲಯವನ್ನು ಕಡೆದು ನಿಲ್ಲಿಸಿದಳು.

ಜನಾನುರಾಗಿ, ಕಲಾಭಿಮಾನಿ
ಅನಗತ್ಯವಾದ ದಬ್ಬಾಳಿಕೆ ಇಲ್ಲದೆ, ಆಂತರಿಕ ಶಿಸ್ತನ್ನೂ, ಯಾವುದೇ ನಷ್ಟವಿಲ್ಲದೆ ವಿದೇಶಗಳೊಡನೆ ಶಾಂತಿಯನ್ನೂ ಆಕೆ ಕಾಪಾಡಿದಳು. ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಪುಂಟ್ ಎಂಬಲ್ಲಿಗೆ ಆಕೆ ದಂಡಯಾತ್ರೆಯನ್ನು ನಡೆಸಿ ತನ್ನ ವರ್ತಕರಿಗೆ ಹೊಸ ಮಾರುಕಟ್ಟೆಗಳನ್ನು ಒದಗಿಸಿದಳು. ಕಾರ್ನಾಕ್ ದೇವಾಲಯವನ್ನು ಸುಂದರವನ್ನಾಗಿಸಲು ಎರಡು ಚೂಪು ತುದಿಯ ಠೀವಿಯ ನಿಲುಗಂಬಗಳನ್ನು ನಿರ್ಮಿಸಿದಳು.

ಕೆಲವು ಹಳೆಯ ದೇವಾಲಯಗಳಿಗೆ ಹಿಕ್ಸಾಸ್ ದೊರೆಗಳು ಉಂಟುಮಾಡಿದ್ದ ನಷ್ಟಗಳನ್ನು ಸರಿಪಡಿಸಿದಳು. ಅಂತಿಮವಾಗಿ ಅವಳು ನೈಲ್ ನದಿಯ ಪಶ್ಚಿಮಕ್ಕೆ ದೊರೆಗಳ ಗೋರಿಗಳ ಕಣಿವೆ ಎಂದು ಮುಂದೆ ಹೆಸರಿಸಲ್ಪಟ್ಟ ಪರ್ವತ ಪ್ರದೇಶದಲ್ಲಿ ತನಗಾಗಿ ಒಂದು ರಹಸ್ಯವಾದ ಮತ್ತು ಅಲಂಕಾರಮಯ ಗೋರಿಯನ್ನು ಕಟ್ಟಿಸಿಕೊಂಡಳು. ಅವಳ ನಂತರ ಬಂದವರೂ ಆಕೆಯನ್ನೇ ಅನುಸರಿಸಿದರು. ಈಜಿಪ್ಟ್‌ನ ನಗರಗಳಲ್ಲಿ ‘ವೆಸ್ಟ್ ಎಂಡ್’ ಎನ್ನುವುದು ಮೃತ ಶ್ರೀಮಂತರ ಆವಾಸವಾಯಿತು. ‘ಪಶ್ಚಿಮಕ್ಕೆ ಹೋಗುವುದು’ ಎಂದರೆ ಸಾಯುವುದು ಎಂದಾಯಿತು.

ಇಪ್ಪತ್ತೆರಡು ವರ್ಷಗಳ ಕಾಲ ಶಾಂತಿಯಿಂದ ರಾಜ್ಯಭಾರ ಮಾಡಿದ ಹಟ್‌ಷೇಪ್‌ಸುಟ್‌ಳ ಅಂತ್ಯದ ಬಗೆಗಿನ ವಿವರಗಳಾಗಲೀ ಅವಳ ಮಮ್ಮೀಕೃತವಾದ ದೇಹವಾಗಲೀ ಬಹಳ ಕಾಲದವರೆಗೆ ಸಿಕ್ಕಿರಲಿಲ್ಲ. ಕೆಲವು ವರ್ಷಗಳ ಹಿಂದೆ ಆಕೆಯ ಮಮ್ಮಿಯನ್ನು ಕಂಡುಹಿಡಿದು, ಆಕೆ ತನ್ನ ಐವತ್ತನೇ ವಯಸ್ಸಿನಲ್ಲಿ ಕಾಯಿಲೆಗಳ ಬಾಧೆಗೊಳಗಾಗಿ ಮೃತಪಟ್ಟಿರುವುದನ್ನು ಕಂಡುಕೊಳ್ಳಲಾಯಿತು.

ಹಟ್‌ಷೇಪ್‌ಸುಟ್ ನಂತರ ಮುಮ್ಮಡಿ ಥಟ್‌ಮೋಸ್‌ ಸಿಂಹಾಸನವನ್ನೇರಿದ. ಆತ ತನ್ನ ಮಲತಾಯಿ ಹಟ್‌ಷೇಪ್‌ಸುಟ್‌ ಮೇಲಿನ ಕೋಪವನ್ನು ಆಕೆ ನಿರ್ಮಿಸಿದ್ದ ದೇವಾಲಯಗಳನ್ನು ನಾಶಪಡಿಸುವ ಮೂಲಕ ಪ್ರಕಟಪಡಿಸಿದ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಹಟ್‌ಷೇಪ್‌ಸುಟ್ ದೇವಾಲಯವನ್ನು (ನಮ್ಮ ಹಂಪೆಯ ಪಳೆಯುಳಿಕೆ ರೀತಿಯಲ್ಲಿದ್ದ ದೇಗುಲ) ಅನ್ವೇಷಿಸಲಾಯಿತು.

1961ರಿಂದ ಪೊಲಿಶ್‌ ಮತ್ತು ಈಜಿಪ್ಟ್‌ ದೇಶಗಳ ಪುರಾತತ್ವ ಶಾಸ್ತ್ರಜ್ಞರು ಸೇರಿಕೊಂಡು ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಿದರು. ಈಗಲೂ ಮುಕ್ಕಾಗದೆ ಉಳಿದಿರುವ ದೇವಾಲಯದೊಳಗಿನ ಚಿತ್ರಕಲೆಗಳು ಆಗಿನವರ ನಂಬಿಕೆ, ಸಾಮಾಜಿಕ ಸ್ಥಿತಿಗತಿ ಹಾಗೂ ಅಭಿರುಚಿಗಳನ್ನು ಪ್ರತಿನಿಧಿಸುತ್ತವೆ.

‘ಯಾವುದೇ ಪುರಾತನ ಅಥವಾ ಆಧುನಿಕ ಜನಾಂಗ, ಸ್ತ್ರೀಯರಿಗೆ, ನೈಲ್ ಕಣಿವೆಯ ನಿವಾಸಿಗಳು ಕೊಟ್ಟಿರುವಷ್ಟು ಉನ್ನತವಾದ ಸ್ಥಾನವನ್ನು ನೀಡಿಲ್ಲ’ ಎಂದು ಇತಿಹಾಸ ತಜ್ಞ ಮ್ಯಾಕ್ಸ್ ಮುಲ್ಲರ್ ಬರೆಯುತ್ತಾರೆ. ಪ್ರಾಚೀನ ಈಜಿಪ್ಟ್‌ನಲ್ಲಿ ಸ್ತ್ರೀಯ ಸ್ಥಾನಮಾನ ಈಗ ಅನೇಕ ದೇಶಗಳಲ್ಲಿರುವುದಕ್ಕಿಂತ ಹೆಚ್ಚು ಪ್ರಗತಿಪರವಾಗಿತ್ತು. ಇದಕ್ಕೆ ಸಾಕ್ಷಿಪ್ರಜ್ಞೆಯಂತಿದ್ದಾಳೆ ಹಟ್‌ಷೇಪ್‌ಸುಟ್ ರಾಣಿ.

ಕ್ಲಿಯೋಪಾತ್ರಳ ಮೀರಿಸಿದ ಹೆಣ್ಣು
ಈಜಿಪ್ಟ್‌ನ ರಾಣಿ ಎಂದೊಡನೆ ಎಲ್ಲರ ಮನಸ್ಸಿಗೆ ಬರುವ ಹೆಸರು ಕ್ಲಿಯೋಪಾತ್ರ. ಆದರೆ ನಿಜವಾದ ಈಜಿಪ್ಟ್‌ನ ರಾಣಿ ಹಟ್‌ಷೇಪ್‌ಸುಟ್. ಕ್ಲಿಯೋಪಾತ್ರ (ಕ್ರಿ.ಪೂ.69–30) ಗ್ರೀಕ್‌ ಮೂಲದ ಟಾಲೆಮಿ ವಂಶಸ್ಥಳು. ಆಕೆ ಅಖಂಡ ಈಜಿಪ್ಟ್‌ನ ರಾಣಿಯಾಗಿ ಆಳ್ವಿಕೆ ಮಾಡುವ ಮಹಾತ್ವಾಕಾಂಕ್ಷೆಯಿಂದ ತನ್ನ ತಮ್ಮನನ್ನೇ ಮದುವೆಯಾದಳು; ಜ್ಯೂಲಿಯಸ್‌ ಸೀಸರನ ಹೆಂಡತಿಯಾಗಿ ನಂತರ ಮಾರ್ಕ್‌ ಆಂಟೋನಿಯನ್ನೂ ಕೈಹಿಡಿದಳು.

ಕೆಲವು ಇತಿಹಾಸಕಾರರ ಪ್ರಕಾರ ಆಕೆಗಿದ್ದುದು ಈಜಿಪ್ಟ್‌ನ ಮೇಲೆ ಪ್ರೇಮವಲ್ಲ, ಕೇವಲ ಅಧಿಕಾರದ ವ್ಯಾಮೋಹವಷ್ಟೆ. ಆದರೆ ಹಟ್‌ಷೇಪ್‌ಸುಟ್ ರಾಣಿ ನಿಜಕ್ಕೂ ಈಜಿಪ್ಟ್‌ ಮೂಲದವಳು. ಆಕೆಗೆ ತನ್ನ ದೇಶದ ಬಗ್ಗೆ ಅಪಾರವಾದ ಪ್ರೀತಿಯಿತ್ತು. ತನ್ನ ರಾಜ್ಯಕ್ಕಾಗಿ ಆಕೆ ಶತ್ರುಗಳನ್ನೆಲ್ಲಾ ಸದೆಬಡಿದು ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದಳು.

ಹೊರ ದೇಶಗಳೊಂದಿಗೆ ವ್ಯಾಪಾರ ವೃದ್ಧಿಸಲು ಕ್ರಮ ಕೈಗೊಂಡಳು. ಆಕೆ ತನ್ನ ಮುಂದಿನ ಹಲವಾರು ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳುವಂತಹ ವಾಸ್ತುಶಿಲ್ಪಗಳ ಕಾಣಿಕೆಯನ್ನು ನೀಡಿ ಹೋಗಿದ್ದಾಳೆ. ಹಟ್‌ಷೇಪ್‌ಸುಟ್ ರಾಣಿಯ (ಕ್ರಿ.ಪೂ.1479–1457) ಆಳ್ವಿಕೆಯಲ್ಲಿ ಈಜಿಪ್ಟ್‌ ಸುಭಿಕ್ಷವಾಗಿತ್ತು.

Write A Comment