ಮನೋರಂಜನೆ

ತನ್ನ ಮಗ ವಿನಯ್‌, ‘ಅಪ್ಪಾಜಿ’ಯಂತೆ ಎಂದ ರಾಘವೇಂದ್ರ ರಾಜಕುಮಾರ್

Pinterest LinkedIn Tumblr

vinay

* ತಂದೆಯಾಗಿ ರಾಘಣ್ಣ ಏನು ಇಷ್ಟಪಡುತ್ತಾರೆ?

ವಿನಯ್: ಅವರು ಈಸಿ ಗೋಯಿಂಗ್ ವ್ಯಕ್ತಿ ಮತ್ತು ನೀವು ಏನು ಮಾಡಬೇಕೆಂದು ಯಾವತ್ತೂ ಹೇಳಲ್ಲ. ನನಗೆ ಸಂತೋಷ ಕೊಡುವ ವಿಷಯ ಏನೇ ಆಗಿದ್ದರೂ ಅವರು ನನ್ನನ್ನು ಪ್ರೋತ್ಸಾಹಿಸುತ್ತಾರೆ. ಅವರು ನನಗೆ ಈವರೆಗೆ ಏನೇನೂ ಒತ್ತಡ ಹೇರಿಲ್ಲ ಅಥವಾ ನನ್ನ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಹೊರಿಸಿಲ್ಲ. ನಾನು ಚಿಕ್ಕವನಾಗಿದ್ದಾಗ ಅವರು ತುಂಬಾ ಚಿಲ್ಡ್ ಔಟ್ ಆಗಿದ್ದರು. ನನ್ನ ಅಮ್ಮ ಮಾತ್ರ ಶಿಸ್ತಿನ ಸಿಪಾಯಿ. ಅಪ್ಪ ಯಾವತ್ತೂ ನನಗೆ ದಂಡಿಸಿಲ್ಲ. ಆದರೆ ಒಂದು ವಿಷಯ ನನಗೆ ನೆನಪಿದೆ. ಒಂದು ಬಾರಿ ಅವರು ಕೋಪಗೊಂಡು ನನಗೆ ಹೊಡೆದಿದ್ದರು. ಆದರೆ ಬಳಿಕ ಬೇಸರಗೊಂಡಿದ್ದರು ಮತ್ತು ಕ್ಷಮೆ ಕೇಳಿದ್ದರು. ಆನಂತರ ಅವರು ಎಂದಿಗೂ ನನ್ನ ಮೇಲೆ ಕೈ ಮಾಡಲಿಲ್ಲ.

* ಮಗುವಾಗಿದ್ದಾಗ ವಿನಯ್‌ನಲ್ಲಿ ಇಷ್ಟವಾದ ಗುಣಗಳು ಯಾವುವು?

ರಾಘವೇಂದ್ರ: ನಮ್ಮದು ದೊಡ್ಡ ಕುಟುಂಬ. ವಿನಯ್ ಅವನದೇ ವಯಸ್ಸಿನ ಅನೇಕ ಮಕ್ಕಳೊಂದಿಗೆ ಬೆಳೆದವನು. ಅವನು ಬೇರೆ ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದ ಆದರೆ ಎಂದಿಗೂ ಅದರ ಬಗ್ಗೆ ದೂರುತ್ತಿರಲಿಲ್ಲ. ಅವನಲ್ಲಿ ತಕ್ಷಣಕ್ಕೆ ಕ್ಷಮಿಸುವ ಗುಣಗಳಿವೆ. ಇತರರನ್ನು ರಕ್ಷಿಸುವ ಗುಣವಿದೆ. ಇತರರನ್ನು ಸಮಸ್ಯೆಗೆ ಸಿಲುಕಿಸುವುದು ಅವನಿಗಿಷ್ಟವಿಲ್ಲ. ಅವನು ಒಳ್ಳೆಯ ನಡತೆಯುಳ್ಳ ಮಗುವಾಗಿದ್ದ. ಇವನನ್ನು ನೋಡಿದ ಜನರು ನಮಗೂ ಇಂಥ ಮಗುವಿರಬೇಕು ಎಂದು ನನ್ನಲ್ಲಿ ಹೇಳುತ್ತಿದ್ದರು.

* ವಿನಯ್ ಕುಟುಂಬದಲ್ಲಿ ಯಾರ ಹಾಗೆ?

ರಾಘವೇಂದ್ರ: ವಿನಯ್‌ನ ಒಳ್ಳೆಯ ಗುಣ ನಡೆತೆಯ ಕ್ರೆಡಿಟ್ ನನ್ನ ತಂದೆಗೇ ಸಲ್ಲುತ್ತದೆ. ವಿನಯ್ ಚಿಕ್ಕವನಿದ್ದಾಗ ನನ್ನ ತಂದೆ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಅವರು ಮೊಮ್ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಹೊಸ ವಿಷಯಗಳಿಗೆ ತೆರೆದುಕೊಳ್ಳುವುದಕ್ಕೆ ವಿನಯ ಸಮಯ ತೆಗೆದುಕೊಳ್ಳುತ್ತಾನೆ. ಯಾವಾಗಲು ಶಾಂತಚಿತ್ತನಾಗಿದ್ದು ವಿಷಯಗಳು ತನ್ನ ದಾರಿಗೆ ಬರಲು ಕಾಯುತ್ತಾನೆ. ನನ್ನ ತಂದೆಯದೇ ನಡವಳಿಕೆಯೂ ಅದೇ ಅಗಿತ್ತು. ಜನರಿಗೆ ನಿಮ್ಮ ಮೌನ ಅರ್ಥವಾಗದಿದ್ದರೆ ಅವರಿಗೆ ನಿಮ್ಮ ಮಾತುಗಳು ಅರ್ಥವಾಗಲು ಸಾಧ್ಯವೇ ಇಲ್ಲ ಎಂದು ನನ್ನ ತಂದೆ ಹೇಳುತ್ತಿದ್ದರು. ನನ್ನ ತಂದೆ ಗುಣಗಳು ಅವನಲ್ಲಿ ಸಾಕಷ್ಟು ಇವೆ. ನೀವು ಅವನನ್ನು ಭೇಟಿಯಾದರೆ ಅವನು ರಾಜ್ ಕುಟುಂಬಕ್ಕೆ ಸೇರಿದವನು ಎಂದು ಗುರುತಿಸೋದು ಕಷ್ಟವಾಗುತ್ತದೆ. ವಿನಯ್ ಶಾಲೆ ಹೋಗುತ್ತಿದ್ದಾಗ ಕೂಡ ಯಾರಿಗೂ ಇವನು ರಾಜ್‌ಕುಮಾರ್ ಮೊಮ್ಮಗ ಎಂದು ಗೊತ್ತೇ ಇರಲಿಲ್ಲ. ನನ್ನ ತಂದೆ ಅಪಹರಣವಾದಾಗಲೇ ಎಲ್ಲರಿಗೂ ಗೊತ್ತಾಗಿರುವುದು.

* ನಿಮ್ಮ ತಾತನ ಬಗ್ಗೆ ಏನಾದರೂ ನೆನಪಿಸಿಕೊಳ್ಳಬಹುದೇ?

ವಿನಯ್: ಒಡಹುಟ್ಟಿದವರು ಚಿತ್ರದಲ್ಲಿ ನಾನು ಅವರ ಮಗನಾಗಿ ನಟಿಸಿದ್ದೆ. ಆಗ ನನಗೆ ಎಂಟು ವರ್ಷ. ಆಗ ನನಗೆ ಅದು ಚಿತ್ರೀಕರಣವೇ ಅಥವಾ ನಿಜ ಜೀವನವೇ ಎಂದು ಗೊತ್ತಾಗುತ್ತಿರಲಿಲ್ಲ. ಅದರಲ್ಲೊಂದು ದೃಶ್ಯ ಇದೆ. ನಟಿ (ಮಾಧವಿ) ನನ್ನ ತಾತನಿಗೆ ಬೈಯುತ್ತಾರೆ. ಆಗ ನನ್ನ ತಾತ ಸುಮ್ಮನೆ ನಡೆದು ಹೋಗುತ್ತಾರೆ. ಅದೊಂದು ಗಂಭೀರ ದೃಶ್ಯ. ಈ ನಟಿ ಕಿರುಚುತ್ತಾ ಇದ್ದರೆ ನನ್ನ ತಾತ ನಡೆದು ಹೋಗುತ್ತಿರುವುದು ನೋಡಿದಾಗ ನನಗೆ ಫನ್ನಿ ಅನಿಸಿತ್ತು. ಹೀಗಾಗಿ ನಾನು ತುಂಬಾ ನಕ್ಕಿದ್ದೆ.

ರಾಘವೇಂದ್ರ: ಇದೇ ಚಿತ್ರದ ಬಗ್ಗೆ ನನಗೂ ನೆನಪಿದೆ. ಮನೆಯಲ್ಲಿ ತಾತ ಎಂದು ಕರೆಸಿಕೊಳ್ಳುವವನಿಗೆ ಶೂಟಿಂಗ್‌ನಲ್ಲಿ ಅಪ್ಪ ಎಂದು ಕರೆಸಿಕೊಳ್ಳಲು ಮುಜುಗರವಾಗುತ್ತದೆಂದು ನನ್ನ ತಂದೆ ಅಮ್ಮನಲ್ಲಿ ಹೇಳುತ್ತಿದ್ದರು. ನಾನು ಅಪ್ಪ ಎಂದು ಕರೆಸಿಕೊಳ್ಳಲು ಅಷ್ಟು ಯುವಕನಂತೆ ಕಾಣಿಸಿಕೊಳ್ಳುತ್ತಿಲ್ಲ. ಇದು ನನಗೆ ವಿಚಿತ್ರ ಎಂದೆನಿಸುತ್ತದೆ ಎನ್ನುತ್ತಿದ್ದರು. ಅಷ್ಟು ವಿನಯವಂತರಾಗಿದ್ದರು ಅವರು.

* ಹಿರಿಯ ಕಲಾವಿದ ಮತ್ತು ತಂದೆಯಾಗಿ ನೀವು ಮಗ ವಿನಯ್‌ಗೆ ಏನು ಸಲಹೆ ನೀಡಲು ಬಯಸುತ್ತೀರಿ?

ರಾಘವೇಂದ್ರ: ನಾನು ಅವನಿಗೆ ಏನೂ ಹೇಳಲ್ಲ ಮತ್ತು ಅವನಾಗಿಯೇ ಅವನು ಇರಬೇಕು ಎಂದು ಹೇಳುತ್ತೇನೆ. ನಾನೂ ಸಿನಿಮಾದಲ್ಲಿ ನಟಿಸಲು ಆರಂಭಿಸಿದಾಗ ನನ್ನ ತಂದೆ ಏನೂ ಹೇಳಲಿಲ್ಲ. ಆದ್ದರಿಂದ ಅವರ ಮುಂದೆ ನಾನು ಯಾರು? ಎಂದು ಯೋಚಿಸುತ್ತೇನೆ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇರುತ್ತದೆ ಎಂದು ನನ್ನ ತಂದೆ ಹೇಳುತ್ತಿದ್ದರು. ಅದನ್ನು ತಡೆಯಬಾರದು. ವಿನಯ್ ಅವನದೇ ದಾರಿಯನ್ನು ಆಯ್ಕೆ ಮಾಡಿದ್ದಾನೆ ಮತ್ತು ಅವನ ಕೆಲಸವನ್ನು ಅವನೇ ಮಾಡುತ್ತಾನೆ. ಅವನ ಚೊಚ್ಚಲ ಚಿತ್ರದಲ್ಲಿ ಅವನು ತಪ್ಪು ಮಾಡಬೇಕೆಂಬುದೇ ನನ್ನ ಇಚ್ಛೆ. ಆ ಮುಗ್ಧತೆಯನ್ನು ಸೆರೆಹಿಡಿಯಬೇಕು. 20 ವರ್ಷ ಕಳೆದ ಬಳಿಕ ಅವನು ತನ್ನ ಮೊದಲ ಸಿನಿಮಾ ನೋಡಿದಾಗ ಆ ತಪ್ಪುಗಳನ್ನು ಕಂಡು ಹಿಡಿಯಬೇಕು. ನನ್ನ ಮೊದಲ ಚಿತ್ರವನ್ನು ನೋಡಿದಾಗ ಈಗಲೂ ನಾನು ನಗುತ್ತೇನೆ.

* ವಿನಯ್, ನಿನ್ನ ತಂದೆ ನಟನಾಗಿ ಮತ್ತು ವ್ಯಕ್ತಿಯಾಗಿ ಬೇರೆಬೇರೆಯಾಗಿ ನೋಡುವುದು ಸಾಧ್ಯವಾಯಿತೇ?

ವಿನಯ್: ಅಷ್ಟೇನು ಕಷ್ಟವಾಗುತ್ತಿರಲಿಲ್ಲ. ಯಾಕೆಂದರೆ ಅವರು ಶೂಟಿಂಗ್‌ಗೆ ಹೋಗುವಾಗ ನಾನು ಅವರೊಂದಿಗೆ ಹೋಗುತ್ತಿದ್ದೆ. ಹೀಗಾಗಿ ಏನಾಗುತ್ತಿದೆ ಎಂದು ನನಗೆ ಗೊತ್ತಾಗುತ್ತಿತ್ತು. ಆದರೆ ಶೂಟಿಂಗ್‌ನಲ್ಲಿ ಅವರು ಅನೇಕ ನಟಿಯರನ್ನು ಮದುವೆಯಾಗುತ್ತಿದ್ದರು. ಮನೆಗೆ ಮಾತ್ರ ಒಬ್ಬರೇ ಬರುತ್ತಿದ್ದರು. ಅದು ನನ್ನನ್ನು ಗೊಂದಲಕ್ಕೆ ದೂಡುತ್ತಿತ್ತು.

ರಾಘವೇಂದ್ರ: ಬಹುಶಃ ಅವನಿಗೆ ಅವರಲ್ಲಿ ತನ್ನ ತಾಯಿ ಯಾರು ಎಂಬ ಗೊಂದಲ ಕಾಡಿರಬೇಕು(ನಗು).

* ನಿಮ್ಮ ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ತಂದೆಯ ಅನುಮೋದನೆ ಪಡೆಯುವುದು ಎಷ್ಟು ಮುಖ್ಯ?

ವಿನಯ್: ಅದು ಮುಖ್ಯವಾಗುತ್ತದೆ. ಯಾಕೆಂದರೆ, ಅವರು ಒಪ್ಪಿಗೆ ಕೊಟ್ಟ ವಿಷಯಗಳಲ್ಲಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ನಾನು ಅವರ ಸಲಹೆ ಕೇಳುತ್ತೇನೆ ಮತ್ತು ವಿಷಯಗಳು ಸಾಗುತ್ತಿರುವ ಬಗೆ ಅವರಿಗೆ ತೃಪ್ತಿ ನೀಡಿದೆಯೇ ಎಂದು ಕೇಳುತ್ತೇನೆ. ನನ್ನ ವೈಯಕ್ತಿಕ ಜೀವನದ ವಿಷಯ ಬಂದಾಗ ನಾನಿನ್ನೂ ಯಾವುದೇ ಹುಡುಗಿಯನ್ನು ಮನೆಗೆ ಕರೆತಂದಿಲ್ಲ.

ರಾಘವೇಂದ್ರ: ವಿಷಯ ಗೊತ್ತಾಗುತ್ತಿದ್ದಂತೆಯೇ ಬೇಗ ಮದುವೆ ಆಗೋಕೆ ನಾನೇ ಮೊದಲು ಹೇಳುತ್ತೇನೆ. ಅವನ ಆಯ್ಕೆಗಳಲ್ಲಿ ನನಗೆ ನಂಬಿಕೆ ಇರೋದ್ರಿಂದ ನನ್ನ ಆಶೀರ್ವಾದ ಯಾವಾಗಲು ಅವನ ಮೇಲಿರುತ್ತದೆ.

* ತಂದೆಯಾಗಿ ಮತ್ತು ಹಿರಿಯ ನಟರಾಗಿ ವಿನಯ್ ಪ್ರಾಯೋಗಿಕ ಸಿನಿಮಾಗಳಲ್ಲಿ ನಟಿಸುವುದು ಸರಿಯೇ?

ರಾಘವೇಂದ್ರ: ಅವನು ಎಲ್ಲ ವಿಧದ ಸಿನಿಮಾ ಮಾಡುವುದು ನನಗಿಷ್ಟ ಮತ್ತು ಪ್ಯಾರಲಲ್ ಸಿನಿಮಾದಲ್ಲಿ ನಟಿಸುವುದು ನನಗಿಷ್ಟ. ಅನಗಿಂತ ಹೆಚ್ಚಾಗಿ, ಜನರು ಬದಲಾಗಬೇಕು. ಅವರು ಎಲ್ಲ ರೀತಿಯ ಸಿನಿಮಾ ನೋಡಬೇಕು. ಸಿಮಾಗಳು ಕೇವಲ ಮನರಂಜನೆಗಲ್ಲ. ಅದಕ್ಕಿಂತ ಹೆಚ್ಚಿನದು ಅವುಗಳಲ್ಲಿವೆ. ಎಲ್ಲ ರೀತಿಯ ಸಿನಿಮಾಗಳನ್ನು ಒಂದೇ ದೃಷ್ಟಿಯಲ್ಲಿ ನೋಡಬೇಕು. ಅದು ಕಮರ್ಷಿಯಲ್ ಚಿತ್ರವೇ ಆಗಿರಬಹುದು ಅಥವಾ ಆರ್ಟ್ ಚಿತ್ರವೇ ಆಗಿರಬಹುದು ಅವೆಲ್ಲವೂ ಹೃದಯಕ್ಕೆ ತಟ್ಟುವಂತಹ ಚಿತ್ರಗಳು. ನನಗೂ ಚಿತ್ರ ನಿರ್ಮಿಸಬೇಕೆಂಬ ಇಚ್ಛೆ ಇದೆ. ನನಗೆ ಸಿಗುವ ಸ್ಕ್ರಿಪ್ಟ್ ಹೃದಯ ತಟ್ಟುವಂತಿರಬೇಕು.

* ಶಿವರಾಜ್‌ಕುಮಾರ್ ಆಕ್ಷನ್ ಹೀರೋ ಎಂದೇ ಫೇಮಸ್ ಮತ್ತು ಪುನೀತ್ ರಾಜ್‌ಕುಮಾರ್ ಡ್ಯಾನ್ಸ್‌ನಲ್ಲಿ ಫೇಮಸ್. ನೀವು ಹೇಗೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ?

ವಿನಯ್: ನಾನು ಒಳ್ಳೆಯ ನಟನೆಂದು ಗುರುತಿಸಿಕೊಳ್ಳುವ ಆಸೆ.

ರಾಘವೇಂದ್ರ: ವಿನಯ್ ವೃತ್ತಿಯಲ್ಲಿ ಆಮೀರ್ ಖಾನ್‌ರಂತೆ ಆಗಬೇಕು ಅಂದರೆ ಒಳ್ಳೆಯ ವಿಷಯವನ್ನು ಆಯ್ಕೆ ಮಾಡಬೇಕು ಮತ್ತು ಪ್ಯಾರಲಲ್ ಚಿತ್ರದಲ್ಲಿ ಕೆಲಸ ಮಾಡಬೇಕು. ಸಿನಿಮಾ ಅಂದರೆ ಅದು ಮರವಿದ್ದಂತೆ ಮತ್ತು ಇವನು ಹಣ್ಣು ಎಂದು ನಾನು ಭಾವಿಸುತ್ತೇನೆ. ಇವನು ಮರ ಆಗಬಾರದು. ಆ್ಯಕ್ಷನ್ ಹೀರೋ ಅಥವಾ ಇನ್ನೇನಾದರು ಆಗಿ ಗುರುತಿಸುವುದಕ್ಕಿಂತ ವಿನಯ್ ಒಬ್ಬ ನಟನಾಗಿ ಗುರುತಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ. ಅವನು ಎಲ್ಲ ರೀತಿಯ ಚಿತ್ರದಲ್ಲಿ ಕೆಲಸ ಮಾಡಬೇಕೆಂಬುದೇ ನನ್ನ ಬಯಕೆ. ಅಂದರೆ ನನ್ನ ತಂದೆಯಂತೆ.

* ತಂದೆ ಮತ್ತು ಮಗ ಒಟ್ಟಿಗೆ ಅಭಿನಯಿಸುವುದನ್ನು ನಾವು ಭವಿಷ್ಯದಲ್ಲಿ ನೋಡಬಹುದೇ?

ರಾಘವೇಂದ್ರ: ಯಾಕೆ ಆಗಲ್ಲ? ಅಂಥ ಸ್ಕ್ರಿಪ್ಟ್ ಕೊಟ್ಟರೆ ನನಗೆ ತುಂಬಾ ಇಷ್ಟ. ತಂದೆ ಮತ್ತು ಮಗನ ಸಂಬಂಧವನ್ನು ಒತ್ತಾಯಪೂರ್ವಕವಾಗಿ ತೋರಿಸಿ ಸಿನಿಮಾಕ್ಕೆ ಅಳವಡಿಸಬಾರದು. ಯಾವುದೇ ಅಭಿನಯ ಮಾಡಲು ನನಗೆ ಇಷ್ಟ. ಅವನ ಸ್ನೇಹಿತನಾಗಿ ಅಥವಾ ತಾತನಾಗಿ ಅಭಿನಯಿಸಲು ನನ್ನದೇನೂ ಅಭ್ಯಂತರವಿಲ್ಲ. ನನ್ನಿಂದ ಯಾವ ಪಾತ್ರ ಬೇಕು ಅದನ್ನು ಮಾಡಲು ಸಿದ್ಧ.

* ರಾಜ್‌ಕುಮಾರ್‌ರ ಸಂಪೂರ್ಣ ಕುಟುಂಬ ಒಟ್ಟು ಸೇರಿದಾಗ ಏನು ಮಾಡಲು ಇಷ್ಟ?

ವಿನಯ್: ನಮ್ಮ ಕುಟುಂಬ ನಿಜವಾಗಿಯೂ ದೊಡ್ಡದು. ಹೀಗಾಗಿ ಮಾತನಾಡಲು ಸಾಕಷ್ಟು ಇರುತ್ತದೆ. ಹಳೆಯ ನೆನಪುಗಳನ್ನು ಸ್ಮರಿಸುವುದು ಇರುತ್ತದೆ. ನಾವೆಲ್ಲರೂ ಭೋಜನ ಪ್ರಿಯರು. ಆದ್ದರಿಂದ ನಾನಾ ರೀತಿಯ ಮಾಂಸಾಹಾರದ ಅಡುಗೆ ಯಾವಾಗಲೂ ಮನೆಯಲ್ಲಿ ರೆಡಿ ಇರುತ್ತದೆ.

ರಾಘವೇಂದ್ರ: ಒಬ್ಬರು ಮತ್ತೊಬ್ಬರ ಕಾಲೆಳೆಯುವುದು ನಡೆದೇ ಇರುತ್ತದೆ. ಎಲ್ಲರೂ ವಿನಯ್‌ಯನ್ನು ಚುಡಾಯಿಸುತ್ತಾರೆ (ನಗು).

* ಕುಟುಂಬದ ಸಂಪ್ರದಾಯವನ್ನು ನೀವು ಅನುಸರಿಸುತ್ತೀರಾ?

ವಿನಯ್: ಪ್ರತಿ ಶಿವರಾತ್ರಿಯಂದು ನಾವೆಲ್ಲರೂ ಜತೆಗೆ ಸೇರಿ ನನ್ನ ತಾತನ ಸಿನಿಮಾವನ್ನು ರಾತ್ರಿ ಪೂರ್ತಿ ನೋಡುತ್ತೇವೆ. ನಾವು ಇದನ್ನು ಅವರಿದ್ದಾಗಿನಿಂದಲೂ (ರಾಜ್‌ಕುಮಾರ್) ಅನುಸರಿಸಿಕೊಂಡು ಬರುತ್ತಿದ್ದೇವೆ.

ರಾಘವೇಂದ್ರ: ನಾವು ಸಾಮಾನ್ಯವಾಗಿ ಅಪ್ಪಾಜಿ ಸಿನಿಮಾ ನೋಡುತ್ತೇವೆ. ಅಂದರೆ ಅದು ಸಂದರ್ಭಕ್ಕೆ ತಕ್ಕಂತೆ ಸಾಂಪ್ರದಾಯಿಕ ಚಿತ್ರವೇ ಆಗಿರುತ್ತದೆ. ಸಿನಿಮಾ ನೋಡುವ ಪೈಕಿ ಸತ್ಯಹರಿಶ್ಚಂದ್ರವೂ ಒಂದು. ಇನ್ನುಳಿದವು ಎಂದರೆ ಮಯೂರ ಅಥವಾ ಭಕ್ತ ಪ್ರಹ್ಲಾದ.

1 Comment

Write A Comment