ಕರ್ನಾಟಕ

ಚರ್ಚ್‌ಸ್ಟ್ರೀಟ್‌ ಸ್ಫೋಟ ಪ್ರಕರಣದ ಶಂಕಿತ ಮೂವರ ಬಂಧನ: ನಮ್ಮ ಮಕ್ಕಳು ಅಮಾಯಕರು; ಪಾಕಿಸ್ತಾನದವರ ಜತೆ ಸಂಬಂಧ ತಪ್ಪಾ?; ಪೋಷಕರ ಅಳಲು

Pinterest LinkedIn Tumblr

bamb

ಬೆಂಗಳೂರು, ಜ.10: ನಮ್ಮ ಮಕ್ಕಳು ಯಾವುದೇ ಹಾನಿ ಮಾಡುವ ಕೆಲಸಗಳಲ್ಲಿ ಭಾಗಿಯಾಗಿಲ್ಲ, ಪೊಲೀಸರೇ ಸ್ಫೋಟಕಗಳನ್ನು ಮನೆಯ ಬಳಿಯಿಟ್ಟು ಶಂಕಿತ ಉಗ್ರರು ಎಂದು ಹೆಸರಿಟ್ಟಿರುವುದು ಸರಿಯಲ್ಲ ಎಂದು ಬಂಧಿತರಾಗಿರುವ ಶಂಕಿತ ಉಗ್ರರ ಪೋಷಕರು ಆಪಾದಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲನೆ ಶಂಕಿತ ಉಗ್ರ ಎನ್ನಲಾದ ಡಾ. ಸೈಯದ್ ಇಸ್ಮಾಯೀಲ್ ಆಫಕ್(35) ಪತ್ನಿ ಆರ್ಚಲಾ ಅಬೀರ್ ಮಾತನಾಡಿ, ನನ್ನ ಗಂಡ ಒಬ್ಬ ಪ್ರಾಮಾಣಿಕ ಹೋಮಿಯೋಪತಿ ವೈದ್ಯನಾಗಿದ್ದು, 2002ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ಮಹಿಳೆಯೊಬ್ಬಳನ್ನು ವಿವಾಹವಾದರೆಂಬ ಕಾರಣಕ್ಕಾಗಿ ಅವರನ್ನು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅನಂತರ ಆಫಕ್‌ನ ತಾಯಿ ನೂರ್ ಉನ್ನಿಸಾ ಮಾತನಾಡಿ, ನನ್ನ ಮಗ ಪಾಕಿಸ್ತಾನಿ ನಾಗರಿಕಳನ್ನು ವಿವಾಹವಾಗಿರುವುದು ಸತ್ಯ.

ಆದರೆ ಕೆಲವೊಂದು ಮಾಧ್ಯಮಗಳು ಹಾಗೂ ಪೊಲೀಸ್ ಇಲಾಖೆ ಈ ವಿಚಾರವನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನದ ಮುಖ್ಯ ಉಗ್ರರ ಸಂಪರ್ಕ ಹೊಂದಿದ್ದ ಎಂದು ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುತ್ತಿರುವುದನ್ನು ಖಂಡಿಸುತ್ತಿದ್ದೇನೆ ಎಂದರು. ಬಳಿಕ ಎರಡನೆ ಶಂಕಿತ ಉಗ್ರ ಎನ್ನಲಾದ ಅಬ್ದುಲ್ ಸುಬೂರ್(24)ಎಂಬಾತನ ತಾಯಿ ಕಮರುನ್ನೀಸಾ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ತನ್ನ ಹಿರಿಯ ಮಗನಿಗೆ ಕಿಡ್ನಿ ನೀಡಲು ಕೇರಳ ರಾಜ್ಯಕ್ಕೆ ಹೋಗಿದ್ದೆ. ಸುಬೂರ್ ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಆದರೆ ಪೊಲೀಸರು ಏಕಾಏಕಿ ಭಟ್ಕಳದಲ್ಲಿ ಬೀಗ ಹಾಕಿದ್ದ ತಮ್ಮ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರಿಗೆ ಯಾವುದೇ ಸ್ಫೋಟಕ ವಸ್ತು ಸಿಕ್ಕಿಲ್ಲ. ಆದರೂ ಸಹ ಸ್ಫೋಟಕಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳಿಗೆ ತನಿಖಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದರು.

ಪೊಲೀಸರು ಪರಿಶೀಲನೆ ನಡೆಸಿದಾಗ ತಾವು ಮನೆಯಲ್ಲಿ ಇರಲಿಲ್ಲ. ತನ್ನ ಮಗ ಸಹ ಯಾವುದೇ ಹಿಂಸೆ ಮಾಡುವ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಅವನಿಗೆ ಹಿಂದೂ ಸಮುದಾಯದ ಸ್ನೇಹಿತರು ಸಹ ಇದ್ದಾರೆ. ಪೊಲೀಸ್ ಇಲಾಖೆಯ ಈ ಧೋರಣೆಯಿಂದ ತಮ್ಮ ಮಗನ ಭವಿಷ್ಯ ಹಾಳಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅನಂತರ ಮೂರನೆ ಶಂಕಿತ ಉಗ್ರ ಎನ್ನಲಾದ ಸದ್ದಾಂ ಹುಸೇನ್(35) ಎಂಬಾತನ ಪತ್ನಿ ಸಾಯಿರಾ ಎಂಬವರು ಮಾತನಾಡಿ, ದಿನದ ಊಟಕ್ಕಾಗಿ ದುಡಿಮೆ ಮಾಡುವ ಬಡ ಕುಟುಂಬ ತಮ್ಮದು, ಗುಜರಿ ವ್ಯಾಪಾರ ಮಾಡುವುದು ಇಲ್ಲವೆಂದರೆ ಪೇಂಟರ್ ಕೆಲಸ ಮಾಡುತ್ತಿದ್ದರು. ತನ್ನ ಗಂಡ ಸರಕಾರಿ ಉರ್ದು ಶಾಲೆಯಲ್ಲಿ 5ನೆ ತರಗತಿ ಮಾತ್ರ ವ್ಯಾಸಂಗ ಮಾಡಿದ್ದು, ಮನೆ ಬಿಟ್ಟರೆ ಬೇರೆಲ್ಲೂ ಹೋಗುತ್ತಿರಲಿಲ್ಲ. ಅವರು ಒಮ್ಮೆ ಸಹ ಬೆಂಗಳೂರಿಗೆ ಭೇಟಿ ನೀಡಿಲ್ಲ. ಆದರೂ ಪೊಲೀಸರು ಆತನನ್ನು ಶಂಕಿತ ಉಗ್ರ ಎಂದು ನಾಮಕರಣ ಮಾಡಿದ್ದಾರೆ. ಇದು ಯಾವುದೋ ಪ್ರಭಾವಿ ವ್ಯಕ್ತಿಗಳ ಪಿತೂರಿ ಎಂದು ದೂರಿದರು.

ಜನವರಿ 28ರಂದು ಬಂಧಿತರಾಗಿರುವ ಸದ್ದಾಂನ ತಂಗಿಯ ಮದುವೆ ಇದೆ. ಆದರೆ ಈ ಆರೋಪದಿಂದ ತಂಗಿಯ ಭವಿಷ್ಯದ ಬಾಳು ಸಹ ಕತ್ತಲಾಗಲಿದೆ. ತಮಗೆ ಮೂರು ಮಕ್ಕಳಿದ್ದು, ಅವರ ದಿನದ ಊಟಕ್ಕೂ ಸಹ ಕಷ್ಟವಾಗಿದೆ ಎಂದು ಅವರು ಕಣ್ಣೀರಿಟ್ಟರು. ಪತ್ರಿಕಾಗೋಷ್ಠಿಯಲ್ಲಿ ವಕೀಲ ಅಕ್ಮಲ್ ರಜೀಸ್ಸವಿ, ಪೋಷಕರಾದ ಅಬ್ದುಲ್ ಅಲೀಮ್, ಮುಹಮ್ಮದ್ ಹುಸೇನ್ ಸೇರಿದಂತೆ ಸಂಬಂಧಿಕರು ಹಾಜರಿದ್ದರು.

ಪಾಕಿಸ್ತಾನದವರ ಜತೆ ಸಂಬಂಧ ತಪ್ಪಾ?: ಶಂಕಿತ ಉಗ್ರನ ಕುಟುಂಬದವರ ಅಳಲು
ನನ್ನ ಮಗ ಪಾಕಿಸ್ತಾನದ ಯುವತಿಯನ್ನು ಭಾರತ ಸರಕಾರದ ಅನುಮತಿ ಪಡೆದು ಮದುವೆಯಾಗಿದ್ದಾನೆ. ಆದ್ದರಿಂದ ಪಾಕಿಸ್ತಾನಕ್ಕೆ ಪದೇಪದೆ ದೂರವಾಣಿ ಕರೆ ಮಾಡಿದ್ದಾನೆ. ಇದೊಂದೇ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. 2 ತಿಂಗಳಿನಿಂದ ಖಾಲಿ ಇದ್ದ ಮನೆಯಲ್ಲಿ ಪೊಲೀಸರೇ ಏನೇನನ್ನೋ ತಂದಿಟ್ಟು ಅದನ್ನೆಲ್ಲಾ ನಮ್ಮ ಮಕ್ಕಳ ತಲೆಗೆ ಕಟ್ಟಿದ್ದಾರೆ. ನಮ್ಮ ಮಕ್ಕಳು ಎಲ್ಲಾ ಜಾತಿ ಧರ್ಮದವರಿಂದ ಪ್ರೀತಿ-ಗೌರವ ಗಳಿಸಿದ್ದವರು. ಅವರು ಯಾವುದೇ ತಪ್ಪು ಮಾಡಿಲ್ಲ…

ಇದು ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಶಂಕಿತ ಉಗ್ರ ಇಸ್ಮಾಯಿಲ್ ಅಫಾಕ್‌ನ ತಾಯಿ ನೂರುನ್ನೀಸಾ ಅವರ ಅಳಲು.

ಎಪಿಸಿಆರ್ ಮಾನವ ಹಕ್ಕು ಸಂಘಟನೆಯ ವಕೀಲರ ಜತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯನಾಗಿರುವ ತನ್ನ ಮಗ ಅಫಾಕ್ ಮತ್ತು ಎಂಬಿಎ ಓದುತ್ತಿರುವ ಅಬ್ದುಸ್ ಸಬೂರ್‌ಗೆ ಇಂತಹ ಕೆಟ್ಟ ಕೆಲಸಗಳಲ್ಲಿ ಪಾಲ್ಗೊಳ್ಳುವ ಅಗತ್ಯವೇ ಇಲ್ಲ. ಗುಜರಿ ವ್ಯಾಪಾರ ಮಾಡಿಕೊಂಡು ತಿಂಗಳಿಗೆ ಸಾವಿರ ರೂ. ಬಾಡಿಗೆ ಮನೆಯಲ್ಲಿರುವ ಸದ್ದಾಂ ಕೂಡ ಅಮಾಯಕ ಎಂದರು.

”ಅಫಾಕ್ ಪಾಕಿಸ್ತಾನಕ್ಕೆ ಪದೇಪದೆ ಮಾತನಾಡುತ್ತಿದ್ದ ಎನ್ನುವ ಅನುಮಾನದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಮ್ಮ ಬಂದುಗಳು ದುಬೈನಲ್ಲಿದ್ದಾರೆ. ಅವರಿಗೂ ಆಗಾಗ ಕರೆ ಮಾಡಿದ್ದಾನೆ. ಮದುವೆ ಮಾತುಕತೆ ಮತ್ತು ಬಾಮೈದನ ಮದುವೆಗೆ ಮಾತ್ರ ಅಫಾಕ್ ಪಾಕಿಸ್ತಾನಕ್ಕೆ ಹೋಗಿದ್ದ. ಇದನ್ನು ಬಿಟ್ಟರೆ ಆತನಿಂದ ಯಾವುದೇ ತಪ್ಪಾಗಿಲ್ಲ. ಪಾಕಿಸ್ತಾನದ ಜತೆಗೆ ಸಂಬಂಧ ಬೆಳೆಸುವುದು ಕಾನೂನಿನ ಪ್ರಕಾರ ತಪ್ಪಿಲ್ಲ. ಪಾರದರ್ಶಕ ತನಿಖೆ ನಡೆಯಬೇಕು,” ಎಂದು ಒತ್ತಾಯಿಸಿದರು.

”ಪೊಲೀಸರು ಕಾಕ್ಸ್‌ಟೌನ್‌ನಲ್ಲಿರುವ ನಮ್ಮ ಮನೆಯ ತಪಾಸಣೆ ನಡೆಸಿದರು. ಏನೂ ಸಿಗಲಿಲ್ಲ. ಆ ನಂತರ ಭಟ್ಕಳದಲ್ಲಿ 2 ತಿಂಗಳಿನಿಂದ ಖಾಲಿ ಉಳಿದಿದ್ದ ಸಬೂರ್ ನಿವಾಸದಲ್ಲಿ ಪೊಲಿಸರೇ ಏನನ್ನೋ ಇಟ್ಟಿದ್ದಾರೆ. ಎಂಬಿಎ ಓದುವ ಎಲ್ಲಾ ಮಕ್ಕಳ ಮನೆಯಲ್ಲೂ ಇರುವ ಲ್ಯಾಪ್‌ಟಾಪ್ ಮತ್ತು ಇತರೆ ಸಾಧನಗಳನ್ನು ಪೊಲೀಸರು ಕಾಕ್ಸ್‌ಟೌನ್‌ನ ಮನೆಯಿಂದ ತೆಗೆದುಕೊಂಡು ಹೋಗಿದ್ದಾರೆ. ಇವರ ಎಲ್ಲಾ ವರ್ತನೆಗಳೂ ಬಹಳ ಅನುಮಾನಕ್ಕೆ ಕಾರಣವಾಗಿದೆ,” ಎಂದು ಆರೋಪಿಸಿದರು.

”ತಿಂಗಳ ಹಿಂದಷ್ಟೆ ಅಫಾಕ್‌ಗೆ ಮಗು ಹುಟ್ಟಿದೆ. ಆ ಮಗುವಿನ ಪೋಷಣೆಗಾಗಿ ಸಬೂರ್‌ನ ಪೋಷಕರು ಬೆಂಗಳೂರಿನ ಕಾಕ್ಸ್‌ಟೌನ್‌ನ ನಿವಾಸಕ್ಕೆ ಬಂದಿದ್ದರು. ಈ ಕಾರಣದಿಂದ ಭಟ್ಕಳದ ಆ ಮನೆಯಲ್ಲಿ ಯಾರೂ ಇರಲಿಲ್ಲ. ಈ ಹೊತ್ತಿನಲ್ಲೇ ಪೊಲೀಸರು ಆ ಮನೆಗೆ ಪ್ರವೇಶಿಸಿದ್ದಾರೆ,” ಎಂದರು.

ಜ.28ಕ್ಕೆ ಸದ್ದಾಂ ತಂಗಿಯ ಮದುವೆ
”ನನ್ನ ಮಗ ಸದ್ದಾಂ ಬಾಡಿಗೆ ಆಟೋದಲ್ಲಿ ಹಳೆ ಸಾಮಾನು ಸಂಗ್ರಹಿಸಿ ಗುಜರಿಗೆ ಮಾರಾಟ ಮಾಡುತ್ತಾನೆ. ನಾನು ಕಾಯಿಲೆ ಬಿದ್ದಿದ್ದೇನೆ. ಅವನಿಗೂ ಮೂವರು ಮಕ್ಕಳಿದ್ದಾರೆ. ಸದ್ದಾಂನ ತಂಗಿಯ ಮದುವೆ ಜ.28ಕ್ಕೆ ನಿಗದಿಯಾಗಿದೆ. ಈಗ ಈ ಮದುವೆ ನಡೆಯುತ್ತೋ ಇಲ್ಲವೋ. ನನ್ನ ಮಗ ಇಂತಹ ತಪ್ಪು ಮಾಡಲು ಸಾಧ್ಯವೇ ಇಲ್ಲ,” ಎಂದು ಸದ್ದಾಂನ ತಂದೆ ಫೈರೋಜ್ ಖಾನ್ ಕಣ್ಣೀರು ಹಾಕಿದರು.

ಗೋಷ್ಠಿಯಲ್ಲಿ ಬಂಧಿತ ಮೂವರ ಪೋಷಕರು, ಸಂಬಂಧಿಗಳು ಮತ್ತು ವಕೀಲರಾದ ಎಪಿಸಿಆರ್ ಸಂಘಟನೆಯ ಅಫ್ಸಲ್ ಅಲಿ ಮತ್ತು ಮುಕ್ತದೀರ್ ಉಪಸ್ಥಿತರಿದ್ದರು.

Write A Comment