ಮನೋರಂಜನೆ

ಕೃಷ್ಣಲೀಲಾ ಅನುಭವಕ್ಕೆ ದಕ್ಕುವ ಸಿನಿಮಾ…: : ಖ್ಯಾತ ನಿದೇಱಶಕ ಶಶಾಂಕ್

Pinterest LinkedIn Tumblr

krishna

*‘ಕೃಷ್ಣಲೀಲಾ’ ಸಿನಿಮಾ ಕೃಷ್ಣನ ಸರಣಿಯ ಮುಂದುವರಿದ ಲೀಲಾ ವಿನೋದವೇ?
ಇಲ್ಲ. 2010ರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರವಿದು. ಮಾಧ್ಯಮಗಳಲ್ಲಿ ವರದಿಯಾಗಿರುವ, ಎಲ್ಲರಿಗೂ ತಿಳಿದಿರುವ ಘಟನೆ ಇದು. ಪ್ರೇಮಕಥೆಗೆ ಜತೆಯಾಗಿ ಬೇರೆ ಬೇರೆ ಸನ್ನಿವೇಶಗಳನ್ನು ಪೋಣಿಸಿದ್ದೇನೆ. ಮೇಲ್ನೋಟಕ್ಕೆ ಪಾತ್ರಗಳು ಗಂಭೀರವಾಗಿರುತ್ತದೆ, ಕಥೆಯೂ ಗಂಭೀರವಾಗಿರಯುತ್ತದೆ. ನೋಡುವವರಿಗೆ ಆ ಘಟನೆಗಳು ತಮಾಷೆಯಾಗಿ ಕಾಣಿಸುತ್ತದೆ. ಸುದ್ದಿವಾಹಿನಿಗಳಿಂದ ಹುಟ್ಟಿಕೊಂಡಿರುವ ಟ್ರೆಂಡ್ ಅದು. ಚಾನೆಲ್‌ನಲ್ಲಿ ಗಂಭೀರವಾದ ಸುದ್ದಿ ಬರುತ್ತಿದ್ದರೆ, ಮನೆಯಲ್ಲಿ ಕುಳಿತು ನೋಡುವವರಿಗೆ ಅದು ಮನರಂಜನೆಯಾಗಿರುತ್ತದೆ. ಮನರಂಜನಾ ವಾಹಿನಿಗಳಿಗಿಂತಲೂ ಸುದ್ದಿವಾಹಿನಿಗಳಲ್ಲಿ ಸಿಗುವ ಮನರಂಜನೆಯೇ ಜಾಸ್ತಿ. ಇದು ಕೂಡ ಆ ರೀತಿಯ ಕಥೆ. ನಿರೂಪಣೆ ಈ ಚಿತ್ರದ ದೊಡ್ಡ ಶಕ್ತಿ. ಈ ಬಗೆಯ ನಿರೂಪಣೆ ನನಗೇ ಹೊಸತು, ಕನ್ನಡಕ್ಕೂ ಹೊಸತು.

*ನಿರೂಪಣಾ ತಂತ್ರದ ಬಗ್ಗೆ ವಿವರವಾಗಿ ಹೇಳಿ…
ಸಿನಿಮಾ ನೋಡುತ್ತಿದ್ದೇನೆ ಎಂದು ಪ್ರೇಕ್ಷಕನಿಗೆ ಅನಿಸುವುದಿಲ್ಲ. ಹಾಡುಗಳು ಬಂದಾಗ ಮಾತ್ರ ಆ ಅನುಭವ ಆಗುವುದು. ಉಳಿದಂತೆ ಕಥೆ ಸಾಗುವಾಗ ಕಣ್ಣೆದುರು ಘಟನೆ ನಡೆಯುತ್ತಿದೆ, ಅದನ್ನು ನೀವು ನಿಂತು ನೋಡುತ್ತಿದ್ದೀರಿ ಎನ್ನುವಷ್ಟು ಸಹಜವಾಗಿ ದೃಶ್ಯಗಳಿವೆ. ಹೆಚ್ಚಿನ ಸಿನಿಮಾಗಳಲ್ಲಿ ಕ್ಯಾಮೆರಾ ನಟಿಸುತ್ತಿರುತ್ತದೆ. ಇಲ್ಲಿ ಎಲ್ಲಿಯೂ ಕ್ಯಾಮೆರಾದ ಅಸ್ತಿತ್ವ ಅರಿವಾಗುವುದಿಲ್ಲ. ನಟನೆ, ಸಂಭಾಷಣೆಗಳಲ್ಲಿಯೂ ಸಿನಿಮೀಯತೆ ಇಲ್ಲ. ನಾಯಕ-ನಾಯಕಿ ಸುತ್ತ ಕಥೆ ಸುತ್ತುವುದು ಸಿನಿಮಾಗಳಲ್ಲಿ ಮಾತ್ರ. ಒಂದು ಕಾದಂಬರಿ ಓದಿದಾಗ ಅದರಲ್ಲಿ ನಾಯಕ ನಾಯಕಿಯ ಪಾತ್ರಗಳಲ್ಲದೆ, ಹತ್ತಾರು ಪ್ರಮುಖ ಪಾತ್ರಗಳು ಗಟ್ಟಿಯಾಗಿರುತ್ತದೆ. ಇಲ್ಲಿ ರಂಗಾಯಣ ರಘು, ತಬಲಾ ನಾಣಿ, ಅಚ್ಯುತ್ ಕುಮಾರ್, ಧರ್ಮೇಂದ್ರ ಅರಸ್ ಮುಂತಾದವರ ವಿಶೇಷ ಪಾತ್ರಗಳಿವೆ.

*ಸಿನಿಮಾ ಯಾವ ಹಂತದಲ್ಲಿದೆ?
ಈ ವಾರ ಅಥವಾ ಮುಂದಿನ ವಾರದಲ್ಲಿ ‘ಕೃಷ್ಣಲೀಲಾ’ ಸೆನ್ಸಾರ್ ಆಗಬಹುದು. ಚಿತ್ರವನ್ನು ತೆರೆಕಾಣಿಸಲು ಚಿತ್ರಮಂದಿರಗಳ ಕೊರತೆ ಇದೆ. ಎಲ್ಲಾ ಚಿತ್ರಮಂದಿರಗಳೂ ಸಿನಿಮಾಗಳಿಂದ ಭರ್ತಿಯಾಗಿವೆ. ಅವು ಖಾಲಿಯಾಗುವವರೆಗೂ ಕಾಯಬೇಕು. ಫೆಬ್ರುವರಿ ಎರಡನೇ ವಾರದ ಸುಮಾರಿಗೆ ಚಿತ್ರ ತೆರೆಕಾಣಬಹುದು. ಸಂಕ್ರಾಂತಿಗೆ ಟ್ರೇಲರ್ ಬಿಡುಗಡೆಯಾಗುತ್ತಿದೆ.

*ಎರಡು ಹಾಡುಗಳನ್ನು ಸ್ಟಾರ್‌ಗಳಿಂದ ಹಾಡಿಸಿದ್ದೀರಿ. ಯಾಕೆ?
ಪುನೀತ್ ರಾಜ್‌ಕುಮಾರ್ ಮತ್ತು ಉಪೇಂದ್ರ ಅವರಿಂದ ಹಾಡುಗಳನ್ನು ಹಾಡಿಸಿರುವುದರ ಹಿಂದೆ ವ್ಯಾವಹಾರಿಕ ಉದ್ದೇಶ ಇದೆ. ಈ ಎರಡೂ ಹಾಡುಗಳ ಸಾಹಿತ್ಯ ಮತ್ತು ಅದರಲ್ಲಿರುವ ಪದಗಳಿಗೆ ಅವರ ಧ್ವನಿ ಕೂಡ ಒಗ್ಗುತ್ತದೆ. ‘ಕಷ್ಟಪಟ್ಟು ದುಡಿಯುವವನೇ ಸೂಪರ್‌ಮ್ಯಾನ್’ ಎಂಬ ಶ್ರಮಿಕವರ್ಗವನ್ನು ಹೊಗಳುವ ಹಾಡಿಗೆ ಪುನೀತ್ ಧ್ವನಿ ಚೆನ್ನಾಗಿ ಹೊಂದಿಕೆಯಾಗುತ್ತದೆ ಎನಿಸಿತು.

ಒಂದು ಒಳ್ಳೆಯ ಮಾತನ್ನು ಸಾಮಾನ್ಯ ವ್ಯಕ್ತಿ ಹೇಳುವುದಕ್ಕೂ, ಜನರು ಗೌರವಿಸುವ ಜನಪ್ರಿಯ ವ್ಯಕ್ತಿ ಹೇಳುವುದಕ್ಕೂ ವ್ಯತ್ಯಾಸಗಳಿವೆ. ಈ ಹಾಡಿನ ಕಾನ್ಸೆಪ್ಟ್‌ಗೆ ತೂಕ ಸಿಗಲು ಪುನೀತ್‌ರಂತಹ ನಟರಿಂದಲೇ ಹಾಡಿಸಬೇಕಿತ್ತು. ಉಪೇಂದ್ರ ಅವರು ಹಾಡಿದ ಹಾಡು ಚಿತ್ರದ ಥೀಮ್ ಸಾಂಗ್. ಒಬ್ಬ ಮಾಮೂಲಿ ಗಾಯಕ ಹಾಡಿದರೆ ಅದು ಹಾಡಿನಂತೆ ಅನಿಸುತ್ತದೆಯೇ ವಿನಃ ಥೀಮ್ ಅನಿಸುವುದಿಲ್ಲ. ಈ ಗೀತೆ ಬರುವುದೂ ನಿರ್ದೇಶಕನ ವ್ಯೂ ಪಾಯಿಂಟ್‌ನಲ್ಲಿ. ನಿರ್ದೇಶನದ ಥೀಮ್ ಅನ್ನು ನಿರ್ದೇಶಕನೇ ಹಾಡಿದರೆ ಚೆನ್ನ. ಅದಕ್ಕೆ ಉಪೇಂದ್ರ ಅವರಿಗಿಂತ ಬೇರೆ ಆಯ್ಕೆ ಇರಲಿಲ್ಲ. ನನ್ನ ಪ್ರಕಾರ ಕನ್ನಡದಲ್ಲಿ ಅವರೇ ನಂಬರ್ ಒನ್ ನಿರ್ದೇಶಕ. ಉಪೇಂದ್ರರ ದನಿಯಲ್ಲಿ ಒಂದು ಕಿಕ್ ಇದೆ. ಈಗ ಈ ಎರಡೂ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

*ನಾಯಕ ಮತ್ತು ನಾಯಕಿಯ ಬಗ್ಗೆ?
ಇದು ಅಜಯ್ ರಾವ್ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರ. ನಿರ್ಮಾಪಕರಾಗಿಯೂ ಅವರ ಮೊದಲ ಹೆಜ್ಜೆಗೆ ಪೂರಕವಾಗಲಿದೆ. ನಟರಾಗಿ ಹೊಸ ಅಜಯ್‌ರನ್ನು ನೋಡುತ್ತೀರ. ಸಹಜ ಅಭಿನಯ ನೀಡುವವರೇ ಮಹಾನ್ ಕಲಾವಿದ ಎನಿಸಿಕೊಳ್ಳುವುದು. ಅಜಯ್ ಅವರ ನೈಜ ಪ್ರತಿಭೆ ಇಲ್ಲಿ ಕಾಣಿಸುತ್ತದೆ. ನಟಿ ಮಯೂರಿ ಕನ್ನಡ ಚಿತ್ರರಂಗಕ್ಕೆ ದೊರೆತ ಇನ್ನೊಬ್ಬ ಪ್ರತಿಭಾವಂತೆ. ಇದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಮಯೂರಿಯನ್ನು ಧಾರಾವಾಹಿಯಲ್ಲಿ ನೋಡಿರುವವರಿಗೆ ಒಂದು ಭಾವನೆ ಮೂಡಿರುತ್ತದೆ. ಸಿನಿಮಾದಲ್ಲಿ ನೋಡಿದರೆ ಅಚ್ಚರಿಯಾಗುತ್ತದೆ – ಇಷ್ಟು ಚೆನ್ನಾಗಿದ್ದಾಳಾ, ಇಷ್ಟು ಚೆನ್ನಾಗಿ ನಟಿಸುತ್ತಾಳಾ ಎಂದು.

*‘ಕೃಷ್ಣಲೀಲಾ’ ಸಿನಿಮಾ ಮೂಲಕ ಸಾಹಸದ ಹಳಿಯಿಂದ ಪ್ರೇಮಲೋಕಕ್ಕೆ ಮರಳಿದಂತಿದೆ?
ನಾನು ಹಿಂದಕ್ಕೆ ಹೋಗುವ ನಿರ್ದೇಶಕನಲ್ಲ. ನಿರೂಪಣೆ, ಹಿನ್ನೆಲೆ ಎಲ್ಲವೂ ಇಲ್ಲಿ ವಿಭಿನ್ನ. ಯಾವ ನಟನ ಜತೆ ಮಾಡಿದರೂ ಕಥೆ ಏನು ಬಯಸಿದೆಯೋ ಅದನ್ನೇ ನಾನು ಮಾಡಿರುವುದು. ಅದನ್ನು ಮೀರಿ ರಾಜಿಯಾಗುವುದಿಲ್ಲ. ಕಥೆಯ ಹೊರತು ನಾನು ಬೇರೇನನ್ನೂ ನಂಬುವುದಿಲ್ಲ.

Write A Comment