ಮನೋರಂಜನೆ

ಒಂಟಿಯಾಗಿ ಹೊಸಬರ ಚಿತ್ರ ‘ಪೈಪೋಟಿ’

Pinterest LinkedIn Tumblr

onti

ಹೊಸ ವರ್ಷದ ಮೊದಲ ವಾರದಲ್ಲಿ ಎರಡೆರಡು ಘಟಾನುಘಟಿಗಳ ಚಿತ್ರ ತೆರೆಗೆ ಬಂದು ಚಿತ್ರ ರಸಿಕರ ಮನ ತಣಿಸಿದ್ದಾಯ್ತು. ಆದರೆ ಎರಡನೇ ಶುಕ್ರವಾರವಾದ ಇಂದು (ಜ. 9) ಯಾವ ದೊಡ್ಡ ತಾರೆಯರ ಚಿತ್ರವೂ ತೆರೆಗೆ ಬರುತ್ತಿಲ್ಲ. ‘ಪೈಪೋಟಿ’ ಎಂಬ ಹೊಸಬರ ಚಿತ್ರವೊಂದೇ ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರಕ್ಕೆ ಪೈಪೋಟಿ ನೀಡಲು ಬೇರಾವ ಚಿತ್ರವೂ ಇಲ್ಲದಿರುವುದು ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.

ರಾಂ ನಾರಾಯಣ್ ‘ಪೈಪೋಟಿ’ಯ ನಿರ್ದೇಶಕರು. ‘ಚಿತ್ರವನ್ನು ಮೊದಲು ನೋಡಿ ಖುಷಿ ಪಡಬೇಕಿರುವುದು ನಿರ್ಮಾಪಕರು. ಹಾಗೆಯೇ ನಮ್ಮ ನಿರ್ಮಾಪಕ ಲಕ್ಷ್ ಒಬೆದ್ ಅವರು ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ’ ಎಂದರು ನಿರ್ದೇಶಕರು. ನಾಯಕ ನಟರಾದ ಗುರುರಾಜ್ ಹಾಗೂ ನಿರಂಜನ್ ಶೆಟ್ಟಿ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ ಎಂದು ಒಳ್ಳೆಯ ಅಂಕ ಕೊಟ್ಟಿದ್ದಾರೆ ಅವರು.

ನಾಯಕಿ ಪೂಜಾಗೆ ಇದು ಮೊದಲ ಚಿತ್ರ. ಹಾಗಾಗಿ ಅವರಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ಹೆಚ್ಚಿನ ಕಾತರವಿದೆ. ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡ ಅವರೇ ಮಾಡಿದ್ದಾರಂತೆ. ತನ್ನಿಂದ ಡಬ್ಬಿಂಗ್ ಮಾಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅವರು ಒಂದೇ ದಿನದಲ್ಲಿ ಡಬ್ಬಿಂಗ್ ಪೂರ್ಣಗೊಳಿಸಿದ ಹೆಮ್ಮೆಯಲ್ಲಿದ್ದಾರೆ. ‘ಛಾಯಾಗ್ರಾಹಕ ಅನಂತ್ ಅರಸ್ ಅವರ ಕ್ಯಾಮೆರಾ ಚಳಕದಿಂದಾಗಿ ಚಿತ್ರದಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಪೂಜಾ. ನಿರಂಜನ್‌ಗೆ ಇದು ಮೂರನೇ ಚಿತ್ರ. ಗುರುರಾಜ್ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ.

‘ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವ ಕಾರಣಕ್ಕೆ ಚಿತ್ರವೂ ಹಿಟ್ ಆಗಲಿದೆ’ ಎಂಬ ಭರವಸೆ ಸಂಗೀತ ನಿರ್ದೇಶಕ ಆರ್.ಎಸ್.ಗಣೇಶ್ ನಾರಾಯಣ ಅವರದು. ‘ಚಿತ್ರದ ತುಂಬೆಲ್ಲ ಅಚ್ಚರಿಗಳು ಕಾದಿರಲಿವೆ’ ಎಂದರು ನಿರ್ಮಾಪಕ ಒಬೆದ್. ಹಾಸ್ಯ ಪಾತ್ರದಲ್ಲಿ ನಾಗರಾಜ್ ಅರಸ್ ನಗಿಸಲಿದ್ದಾರೆ. ನೂರಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪೈಪೋಟಿ’ ಇಂದು ತೆರೆ ಕಾಣುತ್ತಿದೆ.

Write A Comment