**ಆರಂಭದಲ್ಲಿ ಭರ್ಜರಿ ಎಂಟ್ರಿ ಕೊಟ್ಟ ನೀವು, ಇತ್ತೀಚಿನ ದಿನಗಳಲ್ಲಿ ಆಟದಲ್ಲಿ ತೊಡಗಿದ್ದೇ ಕಡಿಮೆ, ಏಕೆ ?
ನಾನು ಅಂದುಕೊಂಡ, ನನಗೆ ಇಷ್ಟವಾದ, ಒಪ್ಪಿಕೊಳ್ಳಬಹುದು ಎನಿಸಿದ ಚಿತ್ರಕಥೆಗಳು ಬಂದಿದ್ದು ಬಹಳ ಕಡಿಮೆ. ಒಳ್ಳೆಯ ಕಥೆಗಳು ಬಂದಿದ್ದರೆ ನಾನು ಕ್ರೀಸ್‌ನಲ್ಲಿ ಯಾವಾಗಲೂ ಇರುತ್ತಿದ್ದೆ. ಆಟವನ್ನೂ ಚೆನ್ನಾಗಿ ಆಡುತ್ತಿದ್ದೆ. ಆ ಶಕ್ತಿ ನನಗೆ ಇದೆ.
**ಸದ್ಯ ತೊಡಗಿಕೊಂಡಿರುವ ‘ಪ್ರೀತಿ ಕಿತಾಬು’ ಚಿತ್ರದ ಬಗ್ಗೆ ಹೇಳಿ?
ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಇದು ಲವ್ ಸ್ಟೋರಿ ಕಥೆ. ನನ್ನ ಹೆಸರು ಪ್ರೀತಿ. ಪುಸ್ತಕದಲ್ಲಿ ಪ್ರೀತಿಯ ಬಗ್ಗೆ ಬರೆಯುತ್ತಾ ಹೋಗುವೆ.
**‘ದುನಿಯಾ’ ನಂತರ ನಿಮಗೆ ಗೆಲುವು ಮರೀಚಿಕೆ ಆಗಿರುವಂತಿದೆ?
ನಿಜ. ಕಥೆಯ ಆಯ್ಕೆಯಲ್ಲಿ ಎಡವಿದೆ ಎನಿಸುತ್ತದೆ. ಒಳ್ಳೆಯ ನಿರ್ದೇಶಕರು ಮತ್ತು ಚಿತ್ರತಂಡ ಸಿಗದಿದ್ದೂ ಸೋಲಿಗೆ ಕಾರಣ ಇರಬಹುದು. ಆರಂಭದ ದಿನಗಳಲ್ಲಿ ನನಗೆ ಕಥೆ ಆಯ್ಕೆ ಮಾಡಿಕೊಳ್ಳುವುದು ಮತ್ತು ಚರ್ಚಿಸುವುದು ಕಷ್ಟವಾಗುತ್ತಿತ್ತು. ಇತ್ತೀಚೆಗೆ ಸ್ನೇಹಿತರು – ಹಿತೈಷಿಗಳ ಜತೆ ಚರ್ಚಿಸಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ. ಈಗ ಒಳ್ಳೆಯ ಆಯ್ಕೆಗಳು ನನ್ನ ಮುಂದಿವೆ.
**ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸೂಕ್ತ ಸಂಭಾವನೆ ಮತ್ತು ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಮಾತಿದೆ. ಈ ಕಹಿ ಅನುಭವ ನಿಮಗೂ ಆಗಿದೆಯೇ?
ಹೌದು. ನಾಯಕಿಯರು ಎಷ್ಟು ಕಡಿಮೆ ಸಂಭಾವನೆಗಾದರೂ ಒಪ್ಪಿಕೊಳ್ಳುವರು ಎನ್ನುವ ಮನೋಭಾವವಿದೆ. ಈ ವಿಚಾದರಲ್ಲಿ ನನಗೆ ಅಪಾರ ಬೇಸರವಿದೆ. ಅವರು ಕೊಟ್ಟಷ್ಟನ್ನು ನಾವು ಒಪ್ಪಿಕೊಳ್ಳಬೇಕು ಅಷ್ಟೇ. ಒಂದು ವೇಳೆ ಸರಿಯಾದ ಸಂಭಾವನೆ ಕೇಳಿದರೆ ಅನಗತ್ಯವಾಗಿ ವಿವಾದಕ್ಕೆ ಸಿಲುಕಿಸಲಾಗುತ್ತದೆ. ಅನವಶ್ಯಕ ಮಾತುಗಳು ನಮ್ಮ ಮೇಲೆ ಬರುತ್ತವೆ. ಇದು ಸ್ಟಾರ್ ಎನಿಸಿಕೊಳ್ಳುವ ನಟಿಗೂ ತಪ್ಪಿದ್ದಲ್ಲ.
** ಚಿತ್ರಕ್ಕೆ ಆಯ್ಕೆಯಾದ ನಾಯಕಿಯನ್ನು ಬದಲಾಯಿಸುವ ನಿರ್ದೇಶಕರ ಬಗ್ಗೆ ನಿಮ್ಮ ಅಭಿಪ್ರಾಯ?
ಇಷ್ಟು ವರುಷಗಳ ಕಾಲ ನಾನು ಚಿತ್ರರಂಗದಲ್ಲಿ ಇದ್ದರೂ ಇನ್ನೂ ಅರ್ಥವಾಗದ ವಿಷಯ ಏಕಾಏಕಿ ನಾಯಕಿಯರ ಬದಲಾವಣೆ ಮಾಡುವುದು. ಬಹುಶಃ ಇದು ಸಂಭಾವನೆ ವಿಚಾರದಲ್ಲಿಯೇ ನಡೆಯಬಹುದು ಎನಿಸುತ್ತದೆ. ಆದರೆ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು ಸಾರ್ವಜನಿಕವಾಗಿಯೂ ಹೇಳಿ ಪ್ರಚಾರವನ್ನೂ ಕೊಟ್ಟ ನಂತರ ನಾಯಕಿಯರನ್ನು ಬದಲಾಯಿಸಲಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.
**ಗಾಂಧಿನಗರದಲ್ಲಿ ರಶ್ಮಿ ಖಡಕ್ ಎನ್ನುವ ಮಾತಿದೆ. ವಿವಾದಗಳೂ ಬೆನ್ನು ಬಿದ್ದಿವೆ?
ನಾನು ನನ್ನ ಕೆಲಸವನ್ನು ಮಾಡಿಕೊಂಡು ಹೋಗುವೆ. ಅನಗತ್ಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಷಯ ತಪ್ಪು ಇದ್ದರೆ ತಪ್ಪು, ಸರಿ ಇದ್ದರೆ ಸರಿ ಎಂದು ನೇರವಾಗಿಯೇ ಹೇಳುವೆ. ನಾನು ಬೇರೆಯವರ ವಿಷಯಗಳಲ್ಲಿ ತಲೆಹಾಕುವವಳಲ್ಲ. ನಾನು ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ. ಕೆಲವು ವೇಳೆ ಅನಗತ್ಯವಾಗಿ ಕೆಲವರು ನನ್ನ ಹೆಸರನ್ನು ಎಳೆ ತಂದಿದ್ದಾರೆ. ಆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ.
**‘ಆ್ಯಕ್ಷನ್’, ‘ಹ್ಯಾಕ್’ ಚಿತ್ರಗಳು ಯಾವ ಹಂತದಲ್ಲಿವೆ?
‘ಆ್ಯಕ್ಷನ್’ ಬಿಡುಗಡೆಗೆ ಸಿದ್ದವಿದೆ. ‘ಹ್ಯಾಕ್’ ಚಿತ್ರೀಕರಣ ಶುರು ಆಗಬೇಕಿದೆ.
**ಮುಂದೆ?
‘ಪ್ರೀತಿ ಕಿತಾಬು’ ಮುಗಿಸಿದ ನಂತರ ‘ಅಮೃತ’ ಚಿತ್ರದಲ್ಲಿ ತೊಡಗುವೆ. ಮತ್ತೊಂದು ಚಿತ್ರದ ಮಾತುಕತೆಯೂ ನಡೆಯುತ್ತಿದೆ. ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಆಸೆ ಇದೆ.
**2015ರ ಬಗ್ಗೆ ಭರಪೂರ ನಿರೀಕ್ಷೆಗಳಿದ್ದಂತಿದೆ?
ಈ ಹಿಂದೆ ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಅದೆಲ್ಲವೂ ಈ ವರ್ಷ ಸಿಹಿಯಾಗಲಿದೆ ಎನ್ನುವ ನಿರೀಕ್ಷೆ ಇದೆ. 2015ರಲ್ಲಿ ‘ಆ್ಯಕ್ಷನ್’, ‘ಅಮರಾವತಿ’ ಚಿತ್ರಗಳು ಬಿಡುಗಡೆಯಾಗುತ್ತವೆ. ‘ಪ್ರೀತಿ ಕಿತಾಬು’ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೊಸ ಲುಕ್ ಮತ್ತು ಪಾತ್ರಗಳಲ್ಲಿ ಈ ವರ್ಷ ಕಾಣಿಸಿಕೊಳ್ಳುವೆ.
**ದೇಹವನ್ನು ಹೂ ಕೋಲಿನಂತೆ ಕಡೆದ್ದಿದ್ದೀರಿ. ಮೊದಲಿಗಿಂತಲೂ ಹೆಚ್ಚು ಗ್ಲಾಮರಸ್ ಎನಿಸುತ್ತಿದ್ದೀರಿ?
ಸುಮಾರು 58 ಕೆ.ಜಿ ತೂ ಇದ್ದೆ. ಈಗ 10 ಕೆ.ಜಿ. ಕಡಿಮೆ ಆಗಿದ್ದೇನೆ. ‘ರಶ್ಮಿ ನೀವು ತುಂಬಾ ದಪ್ಪ ಇದ್ದೀಯಾ’ ಎಂದು ಕೆಲವರು ಹೇಳುತ್ತಿದ್ದರು. ಆಗ ನನಗೆ ಬೇಸರವಾಗುತ್ತಿತ್ತು. ಅದರ ಫಲ ಈಗ ಕಾಣುತ್ತಿರುವ ಹೊಸ ಲುಕ್.
One Comment
Revansiddu
Best of luck Rashmi