ರಾಷ್ಟ್ರೀಯ

ತರೂರ್‌ಗೆ ನೋಟಿಸ್ ನೀಡಿಲ್ಲ: ದಿಲ್ಲಿ ಪೊಲೀಸ್ ಆಯುಕ್ತ

Pinterest LinkedIn Tumblr

sunanda

ಹೊಸದಿಲ್ಲಿ: ಸುನಂದಾ ಪುಷ್ಕರ್ ಸಾವಿನ ಸಂಬಂಧ ಆಕೆಯ ಪತಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ನೋಟಿಸ್ ನೀಡಿಲ್ಲ ಎಂದು ದಿಲ್ಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಪುಷ್ಕರ್ ಅವರ ಸಾವಿನ ವಿಚಾರಣೆಗೆ ಎಲ್ಲಿದ್ದರೂ ಹಾಜರಾಗಬೇಕೆಂದು ಸೂಚಿಸಿ ದಿಲ್ಲಿ ಪೊಲೀಸರು ತರೂರ್ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಬುಧವಾರ ವರದಿಯಾಗಿತ್ತು. ಇದನ್ನು ಅಲ್ಲಗಳೆದಿರುವ ಆಯುಕ್ತರು, ”ಪುಷ್ಕರ್ ಸಾವಿನ ಸಂಬಂಧ ತನಿಖಾಧಿಕಾರಿಗಳು ಎಲ್ಲ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಅವರು ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಬೇಕು. ಈಗ ದೊರೆತಿರುವ ಎಲ್ಲ ಸಾಕ್ಷ್ಯಗಳನ್ನು ಪರಾಮರ್ಶೆ ಮಾಡಲಾಗುತ್ತಿದೆ. ಆದರೆ, ತರೂರ್ ಅವರಿಗೆ ಅಧಿಕೃತವಾಗಿ ಯಾವುದೇ ರೀತಿಯ ಲೀಗಲ್ ನೋಟಿಸ್ ಜಾರಿ ಮಾಡಿಲ್ಲ,” ಎಂದಿದ್ದಾರೆ.

ಏಮ್ಸ್ ವೈದ್ಯ ಮಂಡಳಿ ನೀಡಿದ್ದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಆಧಾರವಾಗಿಟ್ಟುಕೊಂಡು ಪುಷ್ಕರ್ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ದಿಲ್ಲಿ ಪೊಲೀಸರು, ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರು.

ಕಳೆದ ವರ್ಷದ ಜ.17ರಂದು ಪುಷ್ಕರ್ ಅವರು ದಿಲ್ಲಿಯ ಹೋಟೆಲ್‌ವೊಂದರಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಅವರ ಕುತ್ತಿಗೆ ಮತ್ತು ಮೊಣಕೈ ಭಾಗಗಳಲ್ಲಿ ಗಾಯಗಳಾಗಿದ್ದವು. ವಿಷಪ್ರಾಸನದಿಂದ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿತ್ತು. ಪುಷ್ಕರ್ ಅವರೇ ಖುದ್ದಾಗಿ ವಿಷ ತೆಗೆದುಕೊಂಡಿದ್ದರೋ ಅಥವಾ ಬೇರೆ ಯಾರಾದರೂ ಅವರಿಗೆ ವಿಷ ಕುಡಿಸಿದ್ದರೋ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಹಾಗೆಯೇ, ವಿಷದಲ್ಲಿ ವಿಕಿರಣ ಸೂಸುವ ವಸ್ತುಗಳಿದ್ದು, ಇದನ್ನು ಪತ್ತೆಹಚ್ಚಲು ಭಾರತದಲ್ಲಿ ಸೌಕರ‌್ಯಗಳಿಲ್ಲ. ಹೀಗಾಗಿ ಅವರು ಮೃತಪಟ್ಟ ವೇಳೆ ಅವರ ಪಚನ ವ್ಯೆಹದಲ್ಲಿ ಇದ್ದ ಆಹಾರದ ಮಾದರಿಯನ್ನು ಬ್ರಿಟನ್ ಅಥವಾ ಅಮೆರಿಕಕ್ಕೆ ರವಾನಿಸಿ ಫಲಿತಾಂಶ ತಿಳಿದುಕೊಳ್ಳಲು ದಿಲ್ಲಿ ಪೊಲೀಸರು ನಿರ್ಧರಿಸಿದ್ದಾರೆ.

*ಪರಿಚಾರಕನ ವಿಚಾರಣೆ: ಈ ಮಧ್ಯೆ, ಪುಷ್ಕರ್ ಸಾವಿನ ಕುರಿತು ತರೂರ್ ಅವರ ಪರಿಚಾರಕ ನಾರಾಯಣ್ ಸಿಂಗ್‌ನನ್ನು ಅಜ್ಞಾತ ಸ್ಥಳದಲ್ಲಿ ವಿಶೇಷ ತನಿಖಾ ತಂಡವು ಗುರುವಾರ ವಿಚಾರಣೆಗೆ ಒಳಪಡಿಸಿದೆ. ಈ ಹಿಂದೆಯೂ ಈತನನ್ನು ದಿಲ್ಲಿ ಪೊಲೀಸರು ಎರಡು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಹಿಮಾಚಲ ಪ್ರದೇಶದಲ್ಲಿದ್ದ ನಾರಾಯಣ್‌ನನ್ನು ತನಿಖಾಧಿಕಾರಿಗಳು ಗುರುವಾರ ಮುಂಜಾನೆಯಷ್ಟೇ ದಿಲ್ಲಿಗೆ ಕರೆಸಿಕೊಂಡಿದ್ದರು.

ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಕೆಲವು ದಿಲ್ಲಿ ಪೊಲೀಸರು ಯತ್ನಿಸುತ್ತಿದ್ದು, ತಮ್ಮ ವಿರುದ್ಧ ಹೇಳಿಕೆ ನೀಡುವಂತೆ ಪರಿಚಾರಕ ನಾರಾಯಣ್‌ಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ತರೂರ್ ದೂರಿ ದಿಲ್ಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿ ಅವರಿಗೆ ಬರೆದಿದ್ದ ಪತ್ರ ಬೆಳಕಿಗೆ ಬಂದ ಮಾರನೆಯ ದಿನವೇ ಈ ಬೆಳವಣಿಗೆ ನಡೆದಿದೆ.

”ಪುಷ್ಕರ್ ಅವರನ್ನು ನಾನು ಕೊಲೆ ಮಾಡಿರುವುದಾಗಿ ಲಿಖಿತ ಹೇಳಿಕೆ ನೀಡುವಂತೆ ನಿಮ್ಮ ಅಧಿಕಾರಿಗಳು ನನ್ನ ಸಹಾಯಕ ಶ್ರೀ ನಾರಾಯಣ್ ಸಿಂಗ್‌ಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಬೆದರಿಕೆ ಹಾಕಿದ್ದಾರೆ,” ಎಂದು ತರೂರ್ ಕಳೆದ ವರ್ಷದ ನ.13ರಂದು ಬಸ್ಸಿ ಅವರಿಗೆ ಪತ್ರ ಬರೆದಿದ್ದರು.

*ಕೇರಳದಲ್ಲಿ ತರೂರ್, ಮಾಧ್ಯಮದಿಂದ ದೂರ: ಭುಜ ಹಾಗೂ ಸ್ನಾಯು ಸೆಳೆತದಿಂದ ಬಳಲುತ್ತಿರುವ ತರೂರ್ ಅವರು ಕೇರಳದ ತ್ರಿಶೂರ್‌ನಲ್ಲಿರುವ ಆರ್ಯುವೇದ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ”ತರೂರ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿಯೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರು ಸಂಪೂರ್ಣ ಗುಣಮುಖರಾಗಲು 14 ದಿನದ ಚಿಕಿತ್ಸೆಗೆ ಒಳಗಾಗುವಂತೆ ಹೇಳಲಾಗಿತ್ತು. ಆದರೆ ಆಗ ಅವರ ಬಳಿ ಸಮಯವಿರದಿದ್ದ ಕಾರಣ ಡಿ.26ರಂದು ಮತ್ತೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಶುಕ್ರವಾರಕ್ಕೆ ಚಿಕಿತ್ಸೆ ಮುಗಿಯಲಿದೆ. ಅದೇ ದಿನ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು,” ಎಂದು ಪೆರುಮ್‌ಬಾಯಿಲ್ ಆರ್ಯುವೇದ ಕೇಂದ್ರದ ಮಾಲೀಕ ಸಂಜೀವ್ ಕುರುಪ್ ಹೇಳಿದ್ದಾರೆ.

ತರೂರ್ ಅವರು ಮಾಧ್ಯಮದವರನ್ನು ಭೇಟಿಯಾಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ. ”ಕೇಂದ್ರಕ್ಕೆ ದಾಖಲಾಗುವವರು ಚಿಕಿತ್ಸೆ ಮುಗಿಯುವುದಕ್ಕೆ ಮುನ್ನ ಯಾವುದೇ ಸಂದರ್ಶಕರನ್ನು ಭೇಟಿಯಾಗಲು ನಾವು ಅವಕಾಶ ಕೊಡುವುದಿಲ್ಲ. ಶುಕ್ರವಾರ ಅವರ ಚಿಕಿತ್ಸೆ ಪೂರ್ಣಗೊಳ್ಳುತ್ತದೆ. ನಂತರ ಮಾಧ್ಯಮದವರನ್ನು ಭೇಟಿಯಾಗುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು,” ಎಂದು ಕುರುಪ್ ಹೇಳಿದ್ದಾರೆ.

ಪುಷ್ಕರ್ ಅವರ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಿದ ಬಳಿಕ ತರೂರ್ ಅವರ ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ವಾಹಿನಿಗಳ ಸಹಿತ ಪತ್ರಕರ್ತರ ದಂಡು ಆರ್ಯುವೇದ ಕೇಂದ್ರದ ಬಳಿ ನೆರೆದಿದೆ.

Write A Comment