ಮನೋರಂಜನೆ

ಕನ್ನಡ ಚಿತ್ರರಂಗದ ಖಳನಾಯಕ: ಅಪ್ಪಟ ಪ್ರತಿಭೆಗೆ ಸಾಣೆ ಹಿಡಿದ ವಜ್ರಮುನಿ

Pinterest LinkedIn Tumblr

vajra

ಕನ್ನಡ ಚಿತ್ರರಂಗದಲ್ಲಿ ನಾಯಕರ ಪರಂಪರೆಯನ್ನು ಗುರುತಿಸಲಾಗುತ್ತದೆ; ನಾಯಕಿಯರ ನೆನಪನ್ನೂ ಮಾಡಿಕೊಳ್ಳಲಾಗುತ್ತದೆ. ಆದರೆ ನಾಯಕ ಪಾತ್ರಕ್ಕೆ ಸರಿಸಾಟಿಯಾಗಿ ಚಿತ್ರದುದ್ದಕ್ಕೂ ಸಹಕರಿಸಿ ಮೆರೆಯುವ ಖಳನಾಯಕರನ್ನೂ ನಾವು ಸ್ಮರಿಸಲೇಬೇಕು. ಏಕೆಂದರೆ, ಕೆಲವೊಮ್ಮೆ ನಾಪಾತ್ರವನ್ನೇ ಮೀರಿ ನಿಲ್ಲುವಷ್ಟು ಪ್ರಮುಖ ಭೂಮಿಕೆಯನ್ನು ಖಳನಾಯಕರ ಪಾತ್ರಗಳು ಹೊಂದಿವೆ. ಕನ್ನಡ ಚಿತ್ರರಂಗದಲ್ಲೂ ಇಂಥ ಪ್ರತಿಭಾವಂತ ಖಳ ನಾಯಕರು ತಮ್ಮ ಪರಿಶ್ರಮವನ್ನು ಧಾರೆ ಎರೆದು ಸಿನಿಮಾಲೋಕವನ್ನು ಶ್ರೀಮಂತ-ಧೀಮಂತಗೊಳಿಸಿದ್ದಾರೆ. ಅಂತಹ ಅದ್ಭುತ ಖಳನಾಯಕರಲ್ಲಿ ಸದಾ ಪ್ರಜ್ವಲಿಸುವ ಒಂದು ಹೆಸರು ವಜ್ರಮುನಿ.

ಕೆಂಡಗಣ್ಣಿನ ಮುಖದ ಕ್ರೂರನೋಟಗಳಲ್ಲಿ ತಮ್ಮನ್ನು ತಾವೇ ಮೀರಿಸುವಂತಿದ್ದ ಅಪ್ರತಿಮ ಕಲಾವಿದ ವಜ್ರಮುನಿ. ಕಲಾವಿದರಿಗೆ ಸಾವೆನ್ನುವುದು ಸುಳ್ಳಿನ ಮಾತು. ಅವರು ತಮ್ಮ ಪಾತ್ರಗಳಿಂದ ಚಿರಂತನವಾಗಿ ಉಳಿದಿರುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ವಜ್ರಮುನಿ.

ಮೂಲತಃ ಕನಕನಪಾಳ್ಯದ ವಜ್ರಮುನಿಯವರ ತಂದೆ ವಜ್ರಪ್ಪ. ವಜ್ರಮುನೇಶ್ವರ ಸ್ವಾಮಿಯ ಭಕ್ತರಾದ್ದರಿಂದ ಅವರು ಮಗನಿಗೆ ವಜ್ರಮುನಿ ಎನ್ನುವ ಹೆಸರಿಟ್ಟರು. ಆದರೆ, ಇವರ ಮೂಲ ಹೆಸರು ಸದಾನಂದ ಸಾಗರ್. ಆದರೆ ಇವರು ಮುಂದೆ ಅವರು ನಿರ್ವಹಿಸಿದ ಖಳಪಾತ್ರಗಳಿಗೆ ವಜ್ರಮುನಿ ಎಂಬ ಹೆಸರೇ ಹೇಳಿಮಾಡಿಸಿದಂತಿತ್ತು!

ಕನ್ನಡ ಚಿತ್ರರಂಗಕ್ಕೆ ವಜ್ರಮುನಿ ಅವರನ್ನು ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ಪರಿಚಯಿಸಿದ್ದು ಪುಟ್ಟಣ್ಣ ಕಣಗಾಲ್ ಆದರೂ ಅವರಲ್ಲಿದ್ದ ಅಗಾಧ ಸಾಮರ್ಥ್ಯಮತ್ತು ಭಾಷಾಶುದ್ಧತೆಯ ಪರಿಪಾಕವನ್ನು ಗುರುತಿಸಿದ್ದು ಪುಟ್ಟಣ್ಣನವರ ಅಣ್ಣನವರಾದ ಕಣಗಾಲ್ ಪ್ರಭಾಕರಶಾಸ್ತ್ರಿಗಳು. ತಮ್ಮ ‘ಪ್ರಚಂಡ ರಾವಣ’ ನಾಟಕದಲ್ಲಿ ವಜ್ರಮುನಿಯವರಿಗೆ ಅವರು ರಾವಣನ ಪಾತ್ರ ಕೊಟ್ಟರು. ಇದರಿಂದ ಮುಂದೆ ಪ್ರಚಂಡ ರಾವಣ ಎಂದರೆ ವಜ್ರಮುನಿ, ವಜ್ರಮುನಿ ಎಂದರೆ ಪ್ರಚಂಡ ರಾವಣ ಎನ್ನುವಷ್ಟು ವಜ್ರಮುನಿ ಪ್ರಸಿದ್ಧರಾದರು. ಅವರೊಳಗಿನ ಅಮೋಘವಾದ ಕಲಾವಿದ ಹೊರಬಂದಿದ್ದು ‘ಸಂಪತ್ತಿಗೆ ಸವಾಲ್’ ಚಿತ್ರದಿಂದ. 1974ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಸಾಹುಕಾರ್ ಸಿದ್ಧಪ್ಪನಾಗಿ ಅವರು ವಿಜೃಂಭಿಸಿದ ರೀತಿ ಅವರಿಗೆ ಅಪಾರ ಖ್ಯಾತಿಯನ್ನೂ ಬೇಡಿಕೆಯನ್ನೂ ತಂದು ಕೊಟ್ಟಿತು.

ತಮ್ಮದೇ ಕಾಲದ ಖಳನಾಯಕರೊಂದಿಗೆವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಳ್ಳುವುದು ವಜ್ರಮುನಿಯವರಂಥ ಸಹಜ ಅಭಿನಯದ ಕಲಾವಿದನಿಗೆ ಕಷ್ಟವೇನಾಗಲಿಲ್ಲ. ಅಂದಿನ ಪ್ರಸಿದ್ಧ ಖಳನಾಯಕರಾಗಿದ್ದ ತೂಗುದೀಪ ಶ್ರೀನಿವಾಸ್, ಸುಂದರಕೃಷ್ಣ ಅರಸು ಇಬ್ಬರ ಶೈಲಿಯೂ ವಿಭಿನ್ನ. ಕಣ್ಣುಗಳಿಂದಲೇ ಕೆಕ್ಕರಿಸುತ್ತಾ, ಮೌನವಾದ ನೋಟದಲ್ಲೇ ಖಳತನದ ಬಿರುಸನ್ನು ಅಭಿನಯಿಸುತ್ತಿದ್ದ ತೂಗುದೀಪ, ತಮ್ಮ ಕಂಚಿನ ಕಂಠ ಮತ್ತು ಸೊಗಸಾದ ಮಾತುಗಳ ಏರಿಳಿತದ ಲಯ ಅರಿತಿದ್ದ ಅರಸು ನಡುವೆ ವಜ್ರಮುನಿ ಜೊತೆಜೊತೆಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದವರು. ಆಂಗಿಕ ಚಲನೆ ಮತ್ತು ಮಾತುಗಳ ಗರ್ಜನೆಯನ್ನು ಸಮರ್ಪಕವಾಗಿ ಹೊಂದಿಸಿಕೊಂಡ ವಜ್ರಮುನಿ ಮುಂದೆ ಖಳಪಾತ್ರಗಳಲ್ಲಿ ತಮ್ಮನ್ನು ತಾವು ಸರಿಯಾದ ಪಾಕದಲ್ಲಿ ವಿನ್ಯಾಸಗೊಳಿಸಿಕೊಂಡವರು. ಅವರ ಪ್ರತಿಭೆಗೆ ಮಾರುಹೋಗಿದ್ದ ಪ್ರಸಿದ್ಧ ನಟ ಶಿವಾಜಿ ಗಣೇಶನ್ ತಮಿಳು ಸಿನಿಮಾಕ್ಕೆ ಬರುವಂತೆ ಅವರನ್ನು ಆಹ್ವಾನಿಸಿದ್ದರು.

ಹಾಗೆ ನೋಡಿದರೆ, ವಜ್ರಮುನಿಯವರ ಪಾತ್ರಗಳನ್ನು ಆದ್ಯತೆಯ ಮೇಲೆ ಪಟ್ಟಿ ಮಾಡುವುದು ಕಷ್ಟ. ಗಿರಿಕನ್ಯೆ ಚಿತ್ರದ ಸೊಕ್ಕಿನ ಎಸ್ಟೇಟ್ ಯಜಮಾನ, ಪ್ರೇಮದ ಕಾಣಿಕೆ ಚಿತ್ರದ ಅತ್ಯಾಚಾರಿ, ಸಾಂಗ್ಲಿಯಾನ ಚಿತ್ರದ ನಾಗಪ್ಪ, ಗಜೇಂದ್ರ ಚಿತ್ರದ ಕೇಡಿ ಬಾಸ್, ಆರದ ಗಾಯ ಚಿತ್ರದ ಕೆಡುಕ, ಜಯಸಿಂಹ ಚಿತ್ರದ ದುಷ್ಟ ಶ್ರೀಮಂತ, ವಸಂತಲಕ್ಷ್ಮಿ ಚಿತ್ರದ ಕೊಲೆಗಾರ, ಮಾರುತಿ ಮಹಿಮೆ ಚಿತ್ರದ ಕಿಡಿಗೇಡಿ ಹೀಗೆ ಅವರದ್ದು ವೈವಿಧ್ಯಮಯ ಪಾತ್ರಗಳ ಪಾತಳಿಯಲ್ಲಿ ಹದಗೊಳ್ಳುತ್ತಾ ಹೋದ ಕಲಾವಂತಿಕೆ.

ಖಳಪಾತ್ರಗಳಲ್ಲೇ ಹೆಸರಾದರೂ ವಜ್ರಮುನಿ ಒಳ್ಳೆಯ ಪಾತ್ರಗಳನ್ನೂ ಮಾಡಿದ್ದಾರೆ. ‘ಮದುವೆ ಮಾಡು ತಮಾಷೆ ನೋಡು’ ಚಿತ್ರದಲ್ಲಿ ನಾಯಕನಿಗೆ ಹಣಸಹಾಯ ಮಾಡುವ ಗಿರವಿ ಅಂಗಡಿಯ ಮುಸ್ಲಿಂ, ಭರ್ಜರಿ ಬೇಟೆ ಚಿತ್ರದಲ್ಲಿನ ಹಣ್ಣುಹಣ್ಣು ಮುದುಕ (ಈ ಚಿತ್ರದಲ್ಲಿ ಇಳಯರಾಜಾ ಅವರು ಸಂಗೀತ ನೀಡಿ ಹಾಡಿದ ‘ಹಕ್ಕಿಗೂಡು ಒಂದು, ಮುದ್ದುಮರಿ ಎರಡು’ ಹಾಡು ವಜ್ರಮುನಿ ಅಭಿನಯದಲ್ಲೇ ಮೂಡಿದೆ)ಹೀಗೆ ವಜ್ರಮುನಿ ವಿಭಿನ್ನವಾಗಿಯೂ ಕಾಣಿಸಿಕೊಂಡಿದ್ದಾರೆ. ಅದರಲ್ಲೂ 1995ರಲ್ಲಿ ದ್ವಾರಕೀಶ್ ನಿರ್ಮಿಸಿದ ‘ರಾಯರು ಬಂದರು ಮಾವನ ಮನೆಗೆ’ ಚಿತ್ರದ ಜೈಲರ್ ಪಾತ್ರಕ್ಕೆ ಬೇಕಾಗಿದ್ದ ಗತ್ತು-ಗಾಂಭೀರ್ಯದ ವ್ಯಕ್ತಿತ್ವವನ್ನು ಅನನ್ಯವಾಗಿ ಪೋಷಿಸಿ, ಅದನ್ನು ನಾಯಕ ಪಾತ್ರದಷ್ಟೇ ಸಶಕ್ತವಾಗಿ ಅನುಸಂಧಾನಗೊಳಿಸಿಕೊಂಡವರು.

ವಜ್ರಮುನಿಯವರು ಬೆಂಗಳೂರಿನ ಜಯನಗರ ಕೋ-ಆಪರೇಟಿವ್‌ಸೊಸೈಟಿಯ ಅಧ್ಯಕ್ಷರಾಗಿದ್ದಅವಧಿಯಲ್ಲಿ 100ಕ್ಕೂ ಹೆಚ್ಚು ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ನಿವೇಶನಗಳನ್ನು ಒದಗಿಸಿಕೊಟ್ಟವರು. ಅಷ್ಟೇ ಅಲ್ಲ, ತಾವೇ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದಾಗಲೂ ಸಹನಟ ಟ್ಯೆಗರ್ ಪ್ರಭಾಕರ್ ಅನಾರೋಗ್ಯಕ್ಕೆ ತುತ್ತಾದಾಗ ಆರ್ಥಿಕ ನೆರವು ನೀಡಿದವರಲ್ಲಿ ಮುಂಚೂಣಿಯಲ್ಲಿದ್ದರು.

300ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ, ತಾಯಿಗಿಂತ ದೇವರಿಲ್ಲ, ಗಂಡಭೇರುಂಡ, ರಣಭೇರಿ ಹಾಗೂಬ್ರಹ್ಮಾಸ್ತ್ರ ಚಿತ್ರಗಳ ನಿರ್ಮಾಪಕರೂ ಆಗಿದ್ದ ವಜ್ರಮುನಿ ನಿರ್ಮಾಪಕರಾಗಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ನಟ ಭೈರವನೆಂದು ಹೆಸರು ಪಡೆದು ತೆರೆಯ ಮೇಲೆ ಮೂರು ದಶಕಗಳ ಕಾಲ ವಜ್ರಮುನಿ ಅಬ್ಬರಿಸಿದ್ದರೂ ಕಾಲಭೈರವನ ಮುಂದೆ ಅವರು ಶರಣಾಗಿ ಹೋದರು. 2006ರ ಜನವರಿಗೆ 5ರಂದು ಸಾವಿನ ಮುಸುಕು ಹಾಕಿಕೊಂಡು, ನಮ್ಮಿಂದ ದೂರವಾದರು ವಜ್ರಮುನಿ. ಆದರೆ ವಜ್ರಮುನಿಯವರಂಥ ಕನ್ನಡ ಚಿತ್ರರಂಗದ ಪ್ರಖರ ವಜ್ರಕ್ಕೆ ಸಾವೆಲ್ಲಿದೆ ಅಲ್ಲವೇ?

Write A Comment