ರಾಷ್ಟ್ರೀಯ

ಈ ವರ್ಷದ ಜನವರಿ ಗಾಂಧೀಜಿಯ ಭಾರತ ಪ್ರವೇಶದ ನೂರನೇ ವರ್ಷ

Pinterest LinkedIn Tumblr

gandhi

ಈ ವರ್ಷದ ಜನವರಿ ಗಾಂಧೀಜಿಯ ಭಾರತ ಪ್ರವೇಶದ ನೂರನೇ ವರ್ಷ ‘ಪ್ರವಾಸಿ ಭಾರತೀಯ ದಿವಸ್’ ಎಂಬ ಸಂಭ್ರಮವಾಗಿಬಿಟ್ಟಿದೆ. ಈ ಸಂಭ್ರಮ ಭಯವನ್ನೂ ಹುಟ್ಟಿಸುತ್ತಿದೆ. ಈ ಭಯಕ್ಕೆ ಕಾರಣ– ಹಿಂದಿಯಲ್ಲಿ ‘ಪ್ರವಾಸಿ ಭಾರತೀಯ’ರಾಗಿರುವವರ ಸಂಘಟನೆಯೊಂದು ಗೋಡ್ಸೆಗೆ ದೇಶಭಕ್ತನ ಪಟ್ಟ ಕೊಟ್ಟು ಆತನ ಪ್ರತಿಮೆಗಳನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಬೇಕೆಂದು ಅಧಿಕೃತವಾಗಿ ಮನವಿಗಳನ್ನು ನೀಡುತ್ತಿರುವುದರಲ್ಲಿ.

ಮೋಹನ್‌ದಾಸ್ ಗಾಂಧಿ ಮೊದಲನೆಯ ದರ್ಜೆಯ ಗುಜರಾತಿಯಾಗಿ ಭಾರತಕ್ಕೆ ಬಂದು ಆತನ ಪಯಣದಲ್ಲಿ ರೈಲು ನಿಂತಾಗ- ಉಟ್ಟ ಸೀರೆಯನ್ನೇ ಒಗೆದುಕೊಳ್ಳುತ್ತಿದ್ದ ಹೆಂಗಸಿಗೆ ತನ್ನ ಪೇಟ ಬಿಚ್ಚಿಕೊಟ್ಟು ಎರಡನೆಯ ದರ್ಜೆಯ ಭಾರತೀಯನಾಗುತ್ತಾನೆ. ಅಲ್ಲಿಂದ ಚಂಪಾರಣ್ಯವೂ ಆತನಿಗೆ ಲಂಗೋಟಿ ಮಾತ್ರದಷ್ಟು ಉಳಿಸಿಕೊಟ್ಟು ಮೂರನೆಯ ದರ್ಜೆಗೆ ಇಳಿಸಿ ಮಹಾತ್ಮನನ್ನಾಗಿಸುತ್ತದೆ, ಮೋಹನದಾಸ್ ಕರಮಚಂದ ಗಾಂಧಿಯು ಮಹಾತ್ಮಾ ಗಾಂಧಿಯಾಗುತ್ತಾರೆ.
–ದೇವನೂರ ಮಹಾದೇವ, ನಾನು ಗಾಂಧಿ ಚಿತ್ರ ನೋಡಿದೆ ಅಥವಾ ಆಕಾಶಕ್ಕೆ ಎರಡು ಗೇಣು ಕಮ್ಮಿ  (ಎದೆಗೆ ಬಿದ್ದ ಅಕ್ಷರ)

ರಿಚರ್ಡ್ ಅಟೆನ್ ಬರೋ ನಿರ್ಮಿಸಿದ ‘ಗಾಂಧಿ’ ಚಿತ್ರವನ್ನು ನೋಡಿ ಎರಡೂವರೆ ವಾಕ್ಯಗಳಲ್ಲಿ ದೇವನೂರ ಮಹಾದೇವ ಅವರು ಹೇಳಿರುವ ಮಾತುಗಳು ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಎಂಬ ಮಧ್ಯ ವಯಸ್ಕ ಅನಿವಾಸಿ ಭಾರತೀಯ ದೇಶಕ್ಕೆ ಮರಳಿ ‘ಮಹಾತ್ಮಾ ಗಾಂಧಿ’ ಆದ ಕತೆಯನ್ನು ಅದರ ಎಲ್ಲಾ ಆಯಾಮಗಳು ಮತ್ತು ಸಂಕೀರ್ಣತೆಯ ಜೊತೆಗೆ ಹೇಳುತ್ತವೆ.

ಇಲ್ಲಿ ಸೂಚಿತವಾಗಿರುವ ಒಂದೊಂದು ಅಂಶಕ್ಕೂ ಒಂದೊಂದು ಇಸ್ವಿಯನ್ನು ಬರೆದರೆ ಅದರಡಿಯಲ್ಲಿ ಹಲವು ಪುಟಗಳು ದೊಡ್ಡದಾಗಿರುವ ಒಂದೊಂದು ಅಧ್ಯಾಯವನ್ನೋ ಅಥವಾ ಪುಸ್ತಕವನ್ನೋ ಬರೆಯಬೇಕಾಗುತ್ತದೆ. ಗಾಂಧೀಜಿ ಮೊದಲ ದರ್ಜೆ ಗುಜರಾತಿಯಾಗಿದ್ದುದು ಯಾವಾಗ? ವಿಲಾಯಿತಿ ಹುಡುಗಿಯನ್ನು ಮದುವೆಯಾಗಬಹುದೆಂಬ ಅಮ್ಮನ ಭಯಕ್ಕೆ ಬಾಲ್ಯವಿವಾಹವಾಗಿ ಹೊರಟ ಹದಿಹರೆಯ ಅಂತ್ಯದಲ್ಲಿದ್ದ ಗಾಂಧಿ ಒಂದರ್ಥದಲ್ಲಿ ‘ಮೊದಲ ದರ್ಜೆ’ಯವನು. ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಆಗುವುದರ ಜೊತೆಗೇ ಭಗವದ್ಗೀತೆಯನ್ನು ಇಂಗ್ಲಿಷ್ ಅನುವಾದದಲ್ಲಿ ಓದಿಕೊಂಡ ಗುಜರಾತಿ ಯುವಕನೂ ಬೇರೊಂದು ಬಗೆಯಲ್ಲಿ ‘ಮೊದಲ ದರ್ಜೆ’ಯವನೇ. ಅಷ್ಟೇಕೆ ಮತ್ತೆ                  ಭಾರತಕ್ಕೆ ಹಿಂದಿರುಗಿ ಮುಂಬೈಯಲ್ಲಿ ವಕೀಲಿಕೆಯಲ್ಲಿ ಯಶಸ್ಸುಗಳಿಸುವ ಪ್ರಯತ್ನದಲ್ಲಿದ್ದಾಗಲೂ ಆತನಿನ್ನೂ ‘ಮೊದಲ ದರ್ಜೆ’ಯ ಮನಃಸ್ಥಿತಿಯಲ್ಲಿದ್ದ.

1893ರ ಏಪ್ರಿಲ್ ತಿಂಗಳಲ್ಲಿ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯ ಆಹ್ವಾನಕ್ಕೆ ಓಗೊಟ್ಟು ದಕ್ಷಿಣ ಆಫ್ರಿಕಾಕ್ಕೆ ಹೊರಟು ನಿಂತಾಗಲೂ ಈ ಯುವಕನಿಂದ ‘ಮೊದಲ ದರ್ಜೆ’ಯ ಭ್ರಮೆಗಳು ಕಳಚಿ ಹೋಗಿರಲಿಲ್ಲ. ಇಂಗ್ಲೆಂಡಿನ ಶಿಕ್ಷಣ, ಇಂಗ್ಲಿಷಿನ, ಇಂಗ್ಲಿಷರ ಕಾನೂನಿನ ಅರಿವುಗಳು ಇಷ್ಟನ್ನು ಮಾಡಿಬಿಟ್ಟಿದ್ದವು. ಕೆಲವೇ ತಿಂಗಳುಗಳ ದಕ್ಷಿಣ ಆಫ್ರಿಕಾದ ಕೆಲಸ ಈ ಯುವ ವಕೀಲನನ್ನು ಆ ದೇಶದಲ್ಲೇ ಎರಡೂ ದಶಕಗಳಿಗೂ ಹೆಚ್ಚು ಕಾಲ ಇರುವಂತೆ ಮಾಡಿದಾಗ ಬದಲಾದದ್ದು ಮೋಹನದಾಸ್ ಕರಮ್‌ಚಂದ್ ಗಾಂಧಿಯಲ್ಲಿದ್ದ ‘ಮೊದಲ ದರ್ಜೆಯ ಬ್ರಿಟಿಷ್ ಜಂಟ್ಲ್‌ಮನ್’.

ಈ ಮಾತುಗಳನ್ನು ದೇವನೂರ ಮಹಾದೇವರ ಮತ್ತೊಂದು ಮಾತಿನಲ್ಲಿ ವಿವರಿಸಬಹುದು– “ಆಫ್ರಿಕಾದಲ್ಲಿ ಕರಿಯನಾದ ಮೋಹನ್‌ದಾಸ್‌ಗೆ ಆ ಕರಿಯತನವೇ ಅವನಿಗೆ ದಿಕ್ಕು ತೋರಿಸುತ್ತದೆ. ಸಹನೆ, ದೃಢತೆ, ಅಹಿಂಸೆ ಇವುಗಳೊಡನೆ ಎದುರಾಳಿಯನ್ನು ಮನುಷ್ಯನನ್ನಾಗಿಸುವ ಅಪೂರ್ವತೆ, ಇದರೊಟ್ಟಿಗೇ ಹೊಸತಾಗಿ ಸಹಜೀವನ ಕಟ್ಟುವ ಒಳಗಣ್ಣು ಗಾಂಧಿಗೆ ಅಲ್ಲುಂಟಾಗುತ್ತದೆ. ಆ ಕಾಗದ ಸುಡುವ ಸಂದರ್ಭದಲ್ಲಿ ಮೋಹನದಾಸ್ ಗಾಂಧಿಗೆ ಬಿಳಿ ಪೊಲೀಸ್ ಹೊಡೆದೂ ಸುಸ್ತಾಗಿ ಗಾಂಧಿಯ ನಿರ್ಲಿಪ್ತ ಕಾಯಕಕ್ಕೆ ಆ ಕ್ರೂರ ಪೊಲೀಸ್‌ನಲ್ಲೂ ‘ಮಾನವ ಇಣುಕುವುದ’ರ ಎಳೆಯೇ ಗಾಂಧಿಯನ್ನು ಮುಂದೆ ನಡೆಸಿಕೊಂಡು ಹೋಗುತ್ತದೆ”.

‘ಗಾಂಧಿ’ ಸಿನಿಮಾದ ದೃಶ್ಯಗಳನ್ನು ಅನುಲಕ್ಷಿಸಿ ಹೇಳುವ ಮಾತುಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ನಡೆಸಿದ ಹೋರಾಟದ ಹಾದಿಯ ಚಿತ್ರಣವಿದೆ. ‘ಕಾಗದ ಸುಡುವ ಸಂದರ್ಭ’ ಬರುವುದು 1907ರಲ್ಲಿ ಟ್ರಾನ್ಸ್‌ವಾಲ್ ಸರ್ಕಾರ ಎಲ್ಲಾ ಭಾರತೀಯರೂ ಸೇರಿದಂತೆ ಎಲ್ಲಾ ಕರಿಯರಾದ ಹೆಣ್ಣು–ಗಂಡುಗಳು ತಮ್ಮನ್ನು ನೋಂದಾಯಿಸಿಕೊಳ್ಳಬೇಕೆಂಬ ‘ಕರಿಯರ ಕಾಯ್ದೆ’ಯನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸುವುದಕ್ಕೆ ಗಾಂಧಿ ಕರೆಕೊಡುತ್ತಾರೆ. ಭಾರತೀಯ ಮೂಲದವರೆಲ್ಲರೂ ತಮ್ಮ ನೋಂದಣಿ ಪತ್ರಗಳನ್ನು ಸಾರ್ವಜನಿಕವಾಗಿ ಬೆಂಕಿಗೆ ಹಾಕುತ್ತಾರೆ. ಜೈಲುಗಳು ತುಂಬಿಕೊಳ್ಳಲಾರಂಭಿಸುತ್ತವೆ. 1908 ಮತ್ತು 1909ರಲ್ಲಿ ಎರಡು ಬಾರಿ ಗಾಂಧೀಜಿಯ ಬಂಧನವಾಗಿ ಎರಡು ಹಾಗೂ ಮೂರು ತಿಂಗಳ ಕಠಿಣ ಸಜೆಯ ಶಿಕ್ಷೆಯೂ ಆಗುತ್ತದೆ.

1911ರಲ್ಲಿ ಈ ಸಮಸ್ಯೆಗೊಂದು ತಾತ್ಕಾಲಿಕ ಪರಿಹಾರ ದೊರೆಯುತ್ತದೆಯಾದರೂ ಹೋರಾಟ ಮುಂದುವರಿಯಬೇಕಾಗುತ್ತದೆ. ನೇಟಲ್ ಮತ್ತು ಟ್ರಾನ್ಸ್‌ವಾಲ್ ನಡುವಣ ಗಡಿಯನ್ನು ಭಾರತೀಯ ಮೂಲದ ಕೆಲಸಗಾರರು ಪರ್ಮಿಟ್ ಇಲ್ಲದೆ ದಾಟುವಂತಿರಲಿಲ್ಲ. ಈ ಕಾರಣಕ್ಕಾಗಿ ನೂರಾರು ಮಂದಿಯ ಬಂಧನವಾಗುತ್ತದೆ. 1914ರಲ್ಲಿ ಜನರಲ್ ಸ್ಮಟ್ ಭಾರತೀಯ ಮೂಲದ ಕೆಲಸಗಾರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಪ್ಪಲೇಬೇಕಾಗುತ್ತದೆ. ಈ ಹೊತ್ತಿಗೆ ಅಲ್ಪಕಾಲದ ಜೈಲು ಶಿಕ್ಷೆಯಿಂದ ಗಾಂಧೀಜಿಯ ಬಿಡುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಅವರು ಜನರಲ್ ಸ್ಮಟ್‌ಗೆ ಜೈಲಿನಲ್ಲಿ ತಾವೇ ತಯಾರಿಸಿದ್ದ ಚಪ್ಪಲಿಗಳ ಜೋಡಿಯೊಂದನ್ನು ಉಡುಗೊರೆಯಾಗಿ ಕೊಡುತ್ತಾರೆ. ಇದನ್ನು ಪಡೆದುಕೊಂಡ 25 ವರ್ಷಗಳ ನಂತರ ಜನರಲ್ ಸ್ಮಟ್ ಹೇಳುವ ಮಾತುಗಳಿಲ್ಲಿ ಉಲ್ಲೇಖನೀಯ–  ‘ಅಂದಿನಿಂದ ಈ ತನಕ ಈ ಮಹಾ ಮನುಷ್ಯನ ಚಪ್ಪಲಿಗಳ ಮೇಲೆ ನಿಲ್ಲುವುದಕ್ಕೆ ನಾನೆಷ್ಟು ಅರ್ಹ ಎಂಬ ಪ್ರಶ್ನೆಯೊಂದಿಗೇ ಇವುಗಳನ್ನು ಅದೆಷ್ಟೋ ಬೇಸಿಗೆಗಳಲ್ಲಿ ಸವೆಸಿದ್ದೇನೆ’. ಇದಾದ ಮಾರನೇ ವರ್ಷದ ಮೊದಲ ತಿಂಗಳಲ್ಲಿ ಅಂದರೆ 1915ರ ಜನವರಿಯಲ್ಲಿ ಗಾಂಧೀಜಿ ಭಾರತಕ್ಕೆ ಬರುವಾಗ ಅವರ ವಯಸ್ಸು ನಲವತ್ತಾರು.

g3

ಈ ಹೊತ್ತಿಗಾಗಲೇ ಅವರ ಬ್ರಿಟಿಷ್ ಜಂಟ್ಲ್‌ಮನ್ ಧರಿಸುವ ವಸ್ತ್ರಗಳು ಇಲ್ಲವಾಗಿ ಗುಜರಾತಿ ವಸ್ತ್ರ ಮೈಗೆ ಬಂದಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಎರಡು ದಶಕಗಳ ಅವಧಿಯಲ್ಲಿ ಈ ಗುಜರಾತಿ ವಕೀಲ ಮಾಡಿದ್ದ ಕೆಲಸಗಳ ಕುರಿತು ಭಾರತದ ಕುಲೀನ ಬುದ್ಧಿಜೀವಿಗಳಿಗೆ ಅರಿವಿತ್ತೇ ಹೊರತು ಸಾಮಾನ್ಯ ಜನರಿಗಲ್ಲ. ಗುರುದೇವ ರವೀಂದ್ರರು ಮುಂದೊಮ್ಮೆ ಹೇಳಿದಂತೆ, ‘ಭಿಕ್ಷುಕನ ವೇಷದಲ್ಲಿದ್ದ ಮಹಾತ್ಮ’ ಭಾರತಕ್ಕೆ ಬಂದದ್ದು ಯಾರಿಗೂ ಗೊತ್ತಿರಲಿಲ್ಲ.  ಭಾರತಕ್ಕೆ ಬಂದ ಗಾಂಧೀಜಿಗೆ ಸಿಕ್ಕದ್ದೆಲ್ಲವೂ ಇಂಥ ಬುದ್ಧಿಜೀವಿಗಳ ಸ್ವಾಗತದ ಔತಣ ಕೂಟಗಳೇ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಗ ಎರಡು ವಿಭಾಗಗಳಿದ್ದವು. ಹೊಂದಾಣಿಕೆ ಮತ್ತು ಸಂಧಾನಗಳ ಮೂಲಕ ಗುರಿ ಸಾಧಿಸಬಯಸಿದ್ದ ಮಂದಗಾಮಿಗಳದ್ದೊಂದು ವಿಭಾಗವಾದರೆ ತಕ್ಷಣವೇ ಪೂರ್ಣ ಸ್ವರಾಜ್ಯ ಬೇಕೆಂಬ ತೀವ್ರಗಾಮಿಗಳದ್ದು ಮತ್ತೊಂದು ವಿಭಾಗ. ಸತ್ಯಾಗ್ರಹ ಮಾರ್ಗದ ಪರಿಣಾಮವನ್ನು ದಕ್ಷಿಣ ಆಫ್ರಿಕಾದಲ್ಲಿ ಹಲವು ಬಾರಿ ಪರೀಕ್ಷೆಗೊಡ್ಡಿದ್ದ ಗಾಂಧೀಜಿಗೆ ಮಂದಗಾಮಿಗಳೇ ಹೆಚ್ಚು ಪ್ರಿಯರಾದರು.

ಮಂದಗಾಮಿಗಳಲ್ಲಿ ಪ್ರಮುಖರಾಗಿದ್ದ ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧೀಜಿ ಭಾರತವನ್ನು ಅರಿಯುವ ಯಾತ್ರೆಯೊಂದನ್ನು ಅದೇ ವರ್ಷ (1915) ಆರಂಭಿಸುತ್ತಾರೆ. ‘ಬಾಯಿ ಮುಚ್ಚಿ ಕಿವಿ–ಕಣ್ಣುಗಳನ್ನು ತೆರೆದಿಟ್ಟುಕೊಂಡ’ ಯಾತ್ರೆ ಮುಗಿಸಿದ್ದರ ಹಿಂದೆಯೇ ಗಾಂಧೀಜಿಯ ಸಾಬರಮತಿ ದಡದಲ್ಲಿ ‘ಸತ್ಯಾಗ್ರಹ ಆಶ್ರಮ’ವನ್ನು ಸ್ಥಾಪಿಸುತ್ತಾರೆ. ಯಾತ್ರೆಯ ಅನುಭವಗಳು ಅವರಲ್ಲಿ ತಂದ ಬದಲಾವಣೆಗಳು ಮೊದಲು ಕಾಣಿಸಿಕೊಳ್ಳುವುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉದ್ಘಾಟನೆಯ ಸಮಾರಂಭದಲ್ಲಿ ಅವರು ಆಡುವ ಮಾತುಗಳಲ್ಲಿ. ಅಂದಿನ ವೈಸ್‌ರಾಯ್, ರಾಜಕುಮಾರರ ಒಂದು ದೊಡ್ಡ ದಂಡು ಹಾಗೂ ಅನೇಕ ಕುಲೀನರಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದು ದರ್ಭಾಂಗ್‌ನ ಮಹಾರಾಜರು. ‘ನನ್ನ ದೇಶದ ಜನರನ್ನುದ್ದೇಶಿಸಿ ಮಾತನಾಡುವುದಕ್ಕೆ ಅನ್ಯವಾದ ಭಾಷೆಯನ್ನು ಬಳಸಬೇಕಾಗಿ ಬಂದಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ’ ಎಂದು ಗಾಂಧೀಜಿ ಇಂಗ್ಲಿಷಿನಲ್ಲಿ ಹೇಳಿದಾಗ ಇಡೀ ಸಭೆ ಬೆಚ್ಚಿ ಬಿತ್ತು. ಅಷ್ಟೇ ಅಲ್ಲ, ಅಲ್ಲಿದ್ದ ರಾಜಕುವರರನ್ನು ಉದ್ದೇಶಿಸಿ ‘ನೀವು ಧರಿಸಿದ ಆಭರಣಗಳನ್ನೆಲ್ಲಾ ಬಿಚ್ಚಿ ಅವುಗಳನ್ನು ನಮ್ಮ ಜನರ ಧರ್ಮದರ್ಶಿಗಳಾಗಿ ನೀವು ಇಟ್ಟುಕೊಳ್ಳುವ ತನಕವೂ ಭಾರತಕ್ಕೆ ವಿಮೋಚನೆಯಿಲ್ಲ’ ಎಂದಾಗ ಅನೇಕ ರಾಜಕುವರರು ಸಭಾತ್ಯಾಗ ಮಾಡಿದರು.

ಮುಂಬೈನಲ್ಲಿ ಹಡಗಿಳಿದ ದಿನದಿಂದ ಭಾಗವಹಿಸಿದ ಸ್ವಾಗತ ಸಮಾರಂಭಗಳಲ್ಲೆಲ್ಲಾ ತಮ್ಮ ದಕ್ಷಿಣ ಆಫ್ರಿಕಾದ ಅನುಭವದ ಬಗ್ಗೆ ಹೇಳುವ ಮಾತೊಂದಿತ್ತು. ‘ನಾನು ಜೈಲಿಗೆ ಹೋದ ನಂತರವೂ ಮುಷ್ಕರವನ್ನು ಮುಂದುವರಿಸುತ್ತಿದ್ದ ಕಾರ್ಮಿಕರೇ ನನ್ನ ನಾಯಕರು’– ಈ ಮಾತು ಅಂದು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದವರಿಗೆ ಅರ್ಥವಾಗಲೂ ತೊಡಗಿದ್ದು ಈ ಘಟನೆಯ ನಂತರವೇ ಅನ್ನಿಸುತ್ತದೆ. 1916ರಲ್ಲಿ ಗುಜರಾತಿನ ಸೂರತ್‌ನಲ್ಲಿ ತಮಗೆ ನೀಡಿದ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಹೇಳಿದ್ದ ‘ಭಾರತಕ್ಕೊಂದು ಜಾಗೃತಿಯ ಅಗತ್ಯವಿದೆ’ ಎಂಬ ಮಾತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಸ್ಪಷ್ಟಗೊಂಡಿತ್ತು.

ಗಾಂಧೀಜಿಯ ಹೋರಾಟದ ಉದ್ಘಾಟನೆಯಾದದ್ದು ಬಿಹಾರದ ಚಂಪಾರಣ್‌ನ ಕೃಷಿಕರ ಕಷ್ಟಕ್ಕೆ ಸ್ಪಂದಿಸುವುದರೊಂದಿಗೆ. 1917ರಲ್ಲಿ ಆರಂಭವಾದ ‘ಭಾರತದ ಮೊದಲ ಅಹಿಂಸಾತ್ಮಕ ಮುಷ್ಕರ’ ಎರಡು ವರ್ಷಗಳ ಅವಧಿಯಲ್ಲಿ ಗಾಂಧೀಜಿಯನ್ನು ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ತಂದು ನಿಲ್ಲಿಸಿಬಿಟ್ಟಿತು. ಇಲ್ಲಿಂದಾಚೆಗೆ ಗಾಂಧೀಜಿ ಹೋಗುತ್ತಿದ್ದೆಡೆ ಅವರ ಭಾಷಣಗಳನ್ನು ಕೇಳಲು ಬರುತ್ತಿದ್ದ ಜನರ ಸಂಖ್ಯೆ ಡರ್ಬಾನ್‌ನ ರೇಸ್‌ಕೋರ್ಸ್‌ನಲ್ಲಿ ಸೇರುತ್ತಿದ್ದುದಕ್ಕಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾಗಿರುತ್ತಿತ್ತು. ಸಾರ್ವಜನಿಕ ಸಮಾರಂಭಗಳಲ್ಲೆಲ್ಲಾ ಅವರು ತಮಗೆ ಗೊತ್ತಿದ್ದ ಗುಜರಾತಿ ಅಥವಾ ಅರೆಬರೆ ಹಿಂದಿಯಲ್ಲೇ ಮಾತನಾಡುತ್ತಿದ್ದರು.

ಈ ಪ್ರಕ್ರಿಯೆಯಲ್ಲೇ ಅವರು ಎಲ್ಲರಿಗೂ ಅರ್ಥವಾಗುವ ಹಿಂದುಸ್ತಾನಿಯೇ ಸರಿ ಎಂಬ ನಿರ್ಧಾರಕ್ಕೆ ಬಂದು ಅದನ್ನೇ ಪ್ರಚುರ ಪಡಿಸಿದರು. ಅವರ ಭಾಷಣಗಳು ಮೊದಲ ಸಾಲಿನಲ್ಲಿದ್ದ ಕೆಲವರಿಗೆ ಬಿಟ್ಟು ಉಳಿದವರಿಗೆ ಕೇಳುತ್ತಲೂ ಇರಲಿಲ್ಲ. ಉತ್ತರ ಭಾರತದ ಆಚೆಗೆ ಬಂದರೆ ಅವರು ಆಡುವ ಮಾತುಗಳು ಹೆಚ್ಚಿನವರಿಗೆ ಅರ್ಥವೂ ಆಗುತ್ತಿರಲಿಲ್ಲ ಎಂದು ಗಾಂಧೀಜಿಯ ಬದುಕಿನ ಕುರಿತು ಇತ್ತೀಚೆಗೆ ಬರೆದಿರುವ ಜೋಸೆಫ್ ಲೆಲಿವೆಲ್ಡ್ ದಾಖಲಿಸುತ್ತಾರೆ. ಇಷ್ಟಾಗಿಯೂ ಗಾಂಧೀಜಿಯ ಸಭೆಗಳಿಗೆ ಬರುತ್ತಿರುವ ಜನರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇತ್ತು.

ಈ ಹೆಚ್ಚುತ್ತಿರುವ ಸಂಖ್ಯೆಯ ಹಿಂದಿನ ಮನೋಭಾವವೂ ಗಾಂಧೀಜಿಗೆ ಅರ್ಥವಾಗತೊಡಗಿತು ಅನ್ನಿಸುತ್ತದೆ. ಈ ಹೊತ್ತಿಗಾಗಲೇ ಗಾಂಧಿ ಸಂತನಾಗಿದ್ದರು, ಋಷಿಯಾಗಿದ್ದರು. ದರ್ಶನಕ್ಕಾಗಿ ಬರುವವರ ಸಂಖ್ಯೆಯೂ ದೊಡ್ಡದಾಗಿತ್ತು. 1921ರ ಪೂರ್ವಾರ್ಧದಲ್ಲಿ ಅವರೇ ಹೇಳುತ್ತಾರೆ “ನನ್ನ ದರ್ಶನದಿಂದ ಜನರಿಗೇನಾದರೂ ಪ್ರಯೋಜನವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ದರ್ಶನ ಕೊಡುವವನ ಸ್ಥಿತಿ ಇನ್ನಷ್ಟು ಕೆಡುತ್ತದೆ”. ಮತ್ತೊಂದು ಸಂದರ್ಭದಲ್ಲಿ ಅವರು ಇನ್ನೂ ಹೆಚ್ಚು ಸ್ಪಷ್ಟವಾಗಿ  “ಭಾರತಕ್ಕೀಗ ಬೇಕಿರುವುದು ನಾಯಕರ ಆರಾಧನೆಯಲ್ಲ, ಅದಕ್ಕೆ ಅಗತ್ಯವಿರುವುದು ನಾಯಕರು ಮಾಡುವ ಸೇವೆ’’.
ಭಾರತವೀಗ ಮತ್ತೊಂದು ಬಗೆಯ ನಾಯಕಾರಾಧನೆಯಲ್ಲಿ ಮುಳುಗಿರುವ ಹೊತ್ತಿನಲ್ಲಿ ಈ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ಜನವರಿ ತಿಂಗಳ ಗಾಂಧೀಜಿಯ ನೆನಪಿಗೆ ಇದ್ದದ್ದು ಒಂದು ವಿಷಾದದ ಛಾಯೆ. ಅಂಧ ರಾಷ್ಟ್ರೀಯವಾದವೊಂದು ಭೂಮಿಯ ಮೇಲೆ ನಡೆದಾಡಿದ್ದನೆಂದು ನಂಬುವುದಕ್ಕೆ ಕಷ್ಟವಾಗುವಂಥ ಸಂತನೊಬ್ಬನ ಕೊಲೆಗೆ ಕಾರಣವಾದ ಅಪಾಯಕಾರಿ ಸಿದ್ಧಾಂತವೊಂದರ ಕುರಿತ ಎಚ್ಚರವೊಂದು ಈ ವಿಷಾದದಲ್ಲಿ ಕಾಣಿಸಿಕೊಳ್ಳುತ್ತಿತ್ತು.

ಈ ವರ್ಷದ ಜನವರಿ ಗಾಂಧೀಜಿಯ ಭಾರತ ಪ್ರವೇಶದ ನೂರನೇ ವರ್ಷ ‘ಪ್ರವಾಸಿ ಭಾರತೀಯ ದಿವಸ್’ ಎಂಬ ಸಂಭ್ರಮವಾಗಿಬಿಟ್ಟಿದೆ. ಈ ಸಂಭ್ರಮ ಭಯವನ್ನೂ ಹುಟ್ಟಿಸುತ್ತಿದೆ. ಈ ಭಯಕ್ಕೆ ಕಾರಣ– ಹಿಂದಿಯಲ್ಲಿ ‘ಪ್ರವಾಸಿ ಭಾರತೀಯ’ರಾಗಿರುವವರ ಸಂಘಟನೆಯೊಂದು ಗೋಡ್ಸೆಗೆ ದೇಶಭಕ್ತನ ಪಟ್ಟ ಕೊಟ್ಟು ಆತನ ಪ್ರತಿಮೆಗಳನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಬೇಕೆಂದು ಅಧಿಕೃತವಾಗಿ ಮನವಿಗಳನ್ನು ನೀಡುತ್ತಿರುವುದರಲ್ಲಿ ಹಾಗೂ ಇದು ಮತ್ತೊಂದು ಬಗೆಯ ನಾಯಕಾರಾಧನೆಯ ಭಾಗವಾಗಿಯೇ ನಡೆಯುತ್ತಿದೆ ಎಂಬುದರಲ್ಲಿ.

Write A Comment