ಮನೋರಂಜನೆ

ಭಾರತ ಟೆಸ್ಟ್‌ ತಂಡದ ನಾಯಕನ ಬಗ್ಗೆ ಮೆಚ್ಚುಗೆಯ ಮಹಾಪೂರ: ಕೊಹ್ಲಿ ಮೇಲೆ ಎಲ್ಲರ ಕಣ್ಣು

Pinterest LinkedIn Tumblr

CRICKET-AUS-IND

ಸಿಡ್ನಿ: ಮಹೇಂದ್ರ ಸಿಂಗ್‌ ದೋನಿ ನಿವೃತ್ತಿಯ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್‌ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆಕ್ರಮಣಕಾರಿ ಸ್ವಭಾವದ ಕೊಹ್ಲಿ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಬಳಿಕ ದೋನಿ ಟೆಸ್ಟ್‌ಗೆ ವಿದಾಯ ಹೇಳಿದ್ದರು. ಆದ್ದರಿಂದ ಉಪನಾಯಕರಾಗಿದ್ದ ಕೊಹ್ಲಿ ಹೆಗಲಿಗೆ ಈಗ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಬಿದ್ದಿದೆ.

ಯುವ ಆಟಗಾರ ಕೊಹ್ಲಿ ನಾಯಕತ್ವದಲ್ಲಿ ಪ್ರವಾಸಿ ತಂಡ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ದೋನಿ ನಿವೃತ್ತಿಯ ಬಳಿಕ ಕೊಹ್ಲಿ ಎಲ್ಲರ ಕೇಂದ್ರಬಿಂದು ಎನಿಸಿದ್ದಾರೆ.

‘ಕೊಹ್ಲಿ ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಅವರು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳ ಬಗ್ಗೆ ನನಗೆ ಅಚ್ಚರಿಯೆನಿಸುತ್ತದೆ. ನಾಯಕರಾಗಿ ತಂಡದ ಸಹ ಆಟಗಾರರ ಜೊತೆ ಹೇಗೆ ಇರಬೇಕು ಎನ್ನುವುದನ್ನೂ ಚೆನ್ನಾಗಿ ತಿಳಿದುಕೊಂಡಿದ್ದಾರೆ’ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಡೇಮಿಯಿನ್‌ ಫ್ಲೆಮಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂಗರೂ ನಾಡಿನ ಸರಣಿಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ದೋನಿ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದರಿಂದ ದೆಹಲಿಯ ಆಟಗಾರ ತಂಡವನ್ನು ಮುನ್ನಡೆಸಿದ್ದರು.

‘ಸಚಿನ್‌ ತೆಂಡೂಲ್ಕರ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌ ಅವರಿಗಿಂತಲೂ ಕೊಹ್ಲಿ ತೀರಾ ಭಿನ್ನ. ತಮ್ಮ ಬಗ್ಗೆ ಏನೇ ಟೀಕೆ ಕೇಳಿ ಬಂದರೂ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಗಟ್ಟಿ ವ್ಯಕ್ತಿತ್ವ ಅವರ  ಕ್ರಿಕೆಟ್‌ ಬದುಕಿಗೆ ಸಾಕಷ್ಟು ಸಹಕಾರಿಯಾಗಿದೆ’ ಎಂದೂ ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಕೊಹ್ಲಿ ಆಕ್ರಮಣಕಾರಿ ಸ್ವಭಾವದವರು.  ಅವರು ಫೀಲ್ಡಿಂಗ್ ಆಯೋಜಿಸುವ ಯೋಜನೆಯೂ ಆಸಕ್ತಿಕರವಾಗಿದೆ. ದೋನಿಗಿಂತಲೂ ಭಿನ್ನವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎದುರಾಳಿ ತಂಡ ಯಾವುದು ಎನ್ನುವುದನ್ನು ಲೆಕ್ಕಿಸುವುದಿಲ್ಲ. ಎಂಥದ್ದೇ ಕಠಿಣ ಸ್ಪರ್ಧೆ ಎದುರಿಸಬಲ್ಲ ಸಾಮರ್ಥ್ಯ ಅವರಲ್ಲಿದೆ’ ಎಂದು ಆಸ್ಟ್ರೇಲಿಯಾದ ವೇಗಿ ಮಿಷೆಲ್‌ ಜಾನ್ಸನ್‌ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ನ ಮಾಜಿ ಆಟಗಾರ ವಿವಿಯನ್‌ ರಿಚರ್ಡ್ಸ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹೋರಾಟ ಮನೋಭಾವ ಹೊಂದಿದ್ದ ದೋನಿ ಶ್ರೇಷ್ಠ ನಾಯಕ. ಅವರು ಭಾರತದ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದರು. ಆದರೆ, ಕೊಹ್ಲಿ ಸಾಕಷ್ಟು ಭಾವುಕರು’ ಎಂದು ಪಾಕಿಸ್ತಾನದ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ನುಡಿದಿದ್ದಾರೆ.

ಬದಲಿ ವಿಕೆಟ್‌ ಕೀಪರ್‌ ಇಲ್ಲ: ‘ದೋನಿ ಟೆಸ್ಟ್‌ಗೆ ನಿವೃತ್ತಿ ಪ್ರಕಟಿಸಿರುವ ಕಾರಣ ಕೊನೆಯ ಪಂದ್ಯಕ್ಕೆ ಬದಲಿ ವಿಕೆಟ್‌ ಕೀಪರ್‌ನನ್ನು ಕಳುಹಿಸುವ ವಿಚಾರ ಇಲ್ಲ’ ಎಂದು  ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಿಳಿಸಿದೆ. ಕೆ.ಎಲ್‌. ರಾಹುಲ್ ಅಥವಾ ವೃದ್ಧಿಮಾನ್‌ ಸಹಾ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಕರ್ನಾಟಕದ ರಾಹುಲ್‌ ಮೆಲ್ಬರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ರಾಹುಲ್‌ಗೆ ಮಾಜಿ ನಾಯಕ ದೋನಿ ‘ಕ್ಯಾಪ್‌’ ನೀಡಿದ್ದರು. ಈಗ ಹೊಸ ನಾಯಕ ಕೊಹ್ಲಿ ಇವರಲ್ಲಿ ಯಾರಿಗೆ ಅವಕಾಶ ನೀಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಟ್ವಿಟರ್‌ನಲ್ಲೂ ದಾಖಲೆ: ಸಚಿನ್‌ ಮತ್ತು ದೋನಿ ಅವರನ್ನು ಹಿಂದಿಕ್ಕಿರುವ ಕೊಹ್ಲಿ ಟ್ವಿಟರ್‌ನಲ್ಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ ಎನಿಸಿದ್ದಾರೆ.

ಕೊಹ್ಲಿ (50 ಲಕ್ಷ), ಸಚಿನ್‌ (49 ಲಕ್ಷ), ದೋನಿ (33 ಲಕ್ಷ) ಅಭಿಮಾನಿಗಳನ್ನು ಹೊಂದಿದ್ದಾರೆ. 50 ಲಕ್ಷ ಅಭಿಮಾನಿಗಳನ್ನು ಹೊಂದಿರುವ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

Write A Comment