ಮನೋರಂಜನೆ

“ದೇವರ ನಾಡಲ್ಲಿ’ ತೆರೆಕಾಣುವ ಮೊದಲೇ ಹಲವು ಅಡಚಣೆ

Pinterest LinkedIn Tumblr

prakash_0

ಸಮಾಜ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಗುರ್ತಿಸಲು ಇಟ್ಟುಕೊಂಡಿರುವ ಮಾನದಂಡ ಹೇಗೆ ಧರ್ಮ ಪ್ರೇರಿತವಾಗಿದೆ ಎನ್ನುವುದನ್ನು ಹೇಳುವ ಪ್ರಯತ್ನ ‘ದೇವರ ನಾಡಲ್ಲಿ’. ಈ ಚಿತ್ರ ತೆರೆಕಾಣುವ ಮೊದಲೇ ಹಲವು ಅಡಚಣೆ ಎದುರಿಸುವಂತಾಗಿದೆ.

ಒಂದು ಬಾಂಬ್‌ ಸ್ಫೋಟಗೊಂಡಿದೆ!
ಅನುಮಾನವೇ ಇಲ್ಲ. ಆ ಬಾಂಬ್‌ ಇಟ್ಟಿರುವುದು ಮುಸ್ಲಿಂ ಸಂಘಟನೆಗಳೇ ಇರಬೇಕು ಅಥವಾ ಅದು ನಕ್ಸಲೀಯರ ದುಷ್ಕೃತ್ಯ ಆಗಿರಬೇಕು. ದುರಂತದ ಘಟನೆಗೆ ನಮ್ಮಲ್ಲಿ ತಕ್ಷಣದ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳುವುದು ಹೀಗೆ. ಇಂಥ ಪೂರ್ವಗ್ರಹಗಳು ಸಮಾಜದ ಆಲೋಚನೆಯ ದಿಕ್ಕನ್ನು ತಪ್ಪಿಸುತ್ತದೆ. ನಿಜವಾದ ಅಪರಾಧಿಗಳು ಸ್ವಚ್ಛಂದವಾಗಿ ಓಡಾಡುತ್ತಾ ಮುಂದೆ ರಾಜಕೀಯ ನಾಯಕರೂ ಆಗುತ್ತಾರೆ…
‘ದೇವರ ನಾಡಲ್ಲಿ’ ಚಿತ್ರದ ಕಥಾವಸ್ತುವಿನ ತಿರುಳನ್ನು ನಿರ್ದೇಶಕ ಬಿ. ಸುರೇಶ್‌ ಬಣ್ಣಿಸುವುದು ಹೀಗೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಪುಟ್ಟಕ್ಕನ ಹೈವೇ’ ಚಿತ್ರದ ಬಳಿಕ ಸುರೇಶ್‌ ನಿರ್ಮಾಣ–ನಿರ್ದೇಶನದ ಸಿನಿಮಾ ‘ದೇವರನಾಡಲ್ಲಿ’. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುರೇಶ್‌ರ ಸಿನಿಮಾ ಪ್ರದರ್ಶನ ಕಾಣಬೇಕಿತ್ತು. ಆದರೆ, ಚಿತ್ರಕ್ಕೆ ಸೆನ್ಸಾರ್‌ನ ಹಸಿರು ನಿಶಾನೆ ಸಿಗಲಿಲ್ಲ. ಡಿ. 1ರಂದು ಸಿನಿಮಾ ಮಂಡಳಿಯ ಮುಂದೆ ಹೋದರೂ, ಸೆನ್ಸಾರ್‌ ಮಂಡಳಿ ಅದನ್ನು ವೀಕ್ಷಿಸಿದ್ದು ಡಿ. 15ರಂದು. ಅಷ್ಟಕ್ಕೆ ಸಮಸ್ಯೆ ಬಗೆಹರಿದಿಲ್ಲ. ‘ಈ ಚಿತ್ರ 12 ವರ್ಷಕ್ಕಿಂತ ಮೇಲಿನವರು ಮಾತ್ರ ನೋಡಲು ಯೋಗ್ಯ. ಕತ್ತರಿ ಪ್ರಯೋಗ ಮಾಡಬೇಕು, ಇಲ್ಲವೇ ಯು/ಎ ಪ್ರಮಾಣ ಪತ್ರ ನೀಡುತ್ತೇವೆ’ ಎಂದು ಸೆನ್ಸಾರ್‌ ಮಂಡಳಿ ಹೇಳಿದೆ.

‘ನನ್ನ ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ಅಥವಾ ಅಶ್ಲೀಲ ಅಂಶಗಳಿಲ್ಲ. ಮಿಗಿಲಾಗಿ ಇದು ಸಮಾಜವನ್ನು ಉದ್ದೇಶಿಸಿರುವ ಕಥನ. ನನ್ನ ನಿರ್ಮಾಣ–ನಿರ್ದೇಶನದ ಪ್ರತಿ ಚಿತ್ರಕ್ಕೂ ವಿವಿಧ ವಲಯದ ಪರಿಣತರ ಸಲಹೆ ಸೂಚನೆಯನ್ನು  ನೀಡಿದ ಬಳಿಕವಷ್ಟೇ ಮುಂದುವರಿಯುವುದು. ಅವರಾರಿಗೂ ಕಾಣದ ಲೋಪ ಇವರಿಗೇನು ಕಂಡಿತು’ ಎಂಬ ಅಚ್ಚರಿ ಸುರೇಶ್‌ ಅವರನ್ನು ಕಾಡುತ್ತಿದೆ. ‘ಕತ್ತರಿ ಹಾಕಬೇಕು, ಇಲ್ಲದಿದ್ದರೆ ಪ್ರಮಾಣಪತ್ರ ನೀಡುವುದಿಲ್ಲ’ ಎಂಬ ಸೆನ್ಸಾರ್‌ ಮಂಡಳಿಯ ಸೂಚನೆಯನ್ನು ಒಪ್ಪಿಕೊಳ್ಳದ ಅವರೀಗ ಪರಿಷ್ಕರಣ ಸಮಿತಿ ಮೊರೆ ಹೊಕ್ಕಿದ್ದಾರೆ. ಹೀಗಾಗಿ, 2014ರಲ್ಲೇ ಸಿನಿಮಾ ತೆರೆಕಾಣಿಸಬೇಕು ಎನ್ನುವ ಅವರ ಆಸೆ ಕೈಗೂಡಿಲ್ಲ.

‘ನನ್ನ ಸಿನಿಮಾದಲ್ಲಿ ಕತ್ತರಿ ಹಾಕುವಂತಹ ಯಾವುದೇ ಅಂಶವಿಲ್ಲ. ಸಮಾಜಮುಖಿ ಸಂವೇದನೆಯೊಂದಿಗೆ ಮಾಡಿರುವ ಚಿತ್ರವಿದು. ಅದಕ್ಕಾಗಿ ಕೊನೆಯವರೆಗೂ ಹೋರಾಡುತ್ತೇನೆ’ ಎನ್ನುತ್ತಾರೆ ಸುರೇಶ್‌. ಒಂದು ವೇಳೆ ಪರಿಷ್ಕರಣ ಸಮಿತಿಯಲ್ಲಿಯೂ ನಕಾರಾತ್ಮಕ ಪ್ರತಿಕ್ರಿಯೆ ದೊರೆತರೆ ಟ್ರಿಬ್ಯುನಲ್‌ ಮೆಟ್ಟಿಲೇರಲೂ ಅವರು ಸಿದ್ಧರಾಗಿದ್ದಾರೆ.

ಈ ಸೆನ್ಸಾರ್‌ ಪ್ರಸಂಗದಾಚೆಗೆ ‘ದೇವರ ನಾಡಲ್ಲಿ’ ಚಿತ್ರದ ಕಥೆ ಕುತೂಹಲ ಹುಟ್ಟಿಸುವಂತಿದೆ. 1993ರಲ್ಲಿ ಉಪ್ಪುಂದ ಮತ್ತು ಕುಂದಾಪುರ ನಡುವಿನ ಗಳಗೊಳ್ಳಿಯ ಪದವಿಪೂರ್ವ ಕಾಲೆೇಜಿನಲ್ಲಿ ಬಾಂಬ್ ಸ್ಫೋಟವಾಗುತ್ತದೆ. ಆ ಪ್ರಕರಣದ ಆರೋಪಿಗಳು ಸಾಕ್ಯ್ಷಗಳು ಸಿಗದೆ 1998ರಲ್ಲಿ ಬಿಡುಗಡೆ ಹೊಂದುತ್ತಾರೆ. ಆ ಬಾಂಬ್‌ ಬ್ಲಾಸ್ಟ್‌ ಆದ ಮೇಲೆ ಒಟ್ಟು ಸಮಾಜ ಅದನ್ನು ಹೇಗೆ ನೋಡುತ್ತದೆ ಎನ್ನುವುದು ಸಿನಿಮಾದ ಕಥೆ. ಈ ಕಥನದ ಹಿನ್ನೆಲೆಯಲ್ಲಿ ಸುಮಾರು 20 ವರ್ಷಗಳಲ್ಲಿ ಪಲ್ಲಟಗೊಂಡ ಸಮಾಜವನ್ನು ಅವರು ಈ ಚಿತ್ರದಲ್ಲಿ ಚರ್ಚಿಸಿದ್ದಾರೆ. ಬೆಳಿಗ್ಗೆ10 ರಿಂದ ಮರುದಿನದ ಬೆಳಿಗ್ಗೆ 10ಗಂಟೆವರೆಗಿನ ಒಂದು ದಿನದ ಅವಧಿಯಲ್ಲಿ ಮುಗಿಯುವುದು ಸಿನಿಮಾದ ವಿಶೇಷ.

ಸಮಾಜ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಗುರುತಿಸಲು ಇಟ್ಟುಕೊಂಡಿರುವ ಮಾನದಂಡ ಹೇಗೆ ಧರ್ಮ ಪ್ರೇರಿತವಾಗಿದೆ ಎನ್ನುವುದನ್ನು ಹೇಳುವ ಪ್ರಯತ್ನ ಈ ಚಿತ್ರ ಎನ್ನುವ ಸುರೇಶ್‌, ತಮ್ಮ ಚಿತ್ರವನ್ನು ‘ಪೊಲಿಟಿಕಲ್‌ ಥ್ರಿಲ್ಲರ್‌’ ಎಂದು ಕರೆಯುತ್ತಾರೆ.

ಅದ್ವೈತ ಅವರ ಛಾಯಾಗ್ರಹಣ, ಹಂಸಲೇಖ ಹಾಡುಗಳು ಚಿತ್ರದಲ್ಲಿವೆ. ಪ್ರಕಾಶ್‌ ರೈ, ಅಚ್ಯುತ, ಸಿಹಿಕಹಿ ಚಂದ್ರು, ಮನು ಹೆಗಡೆ, ದಿಶಾ ರಮೇಶ್‌ ತಾರಾಗಣದಲ್ಲಿದ್ದಾರೆ. ನಿರ್ದೇಶಕನಾಗಿ ಇಷ್ಟವಾಗುವ ಕೆಲಸವನ್ನು ಇಡೀ ತಂಡ ಮಾಡಿದೆ ಎನ್ನುವ ಸುರೇಶ್‌, ಹೂಡಿದ ಬಂಡವಾಳವನ್ನು ಜನರೇ ವಾಪಸು ನೀಡುತ್ತಾರೆ ಎಂಬ ನಂಬಿಕೆ ಹೊಂದಿದ್ದಾರೆ.
‘ದೇವರ ನಾಡಲ್ಲಿ’ ಬೆನ್ನಲ್ಲೇ ಎಂಡೋಸಲ್ಫಾನ್‌ ದುರಂತಗಳ ಕಥೆಯ ‘ಸ್ವರ್ಗ’ ಎನ್ನುವ ಚಿತ್ರಕಥೆಯನ್ನು ಸಿನಿಮಾ ಮಾಡುವ ಪ್ರಯತ್ನದಲ್ಲಿ ಸುರೇಶ್‌ ತೊಡಗಿಕೊಂಡಿದ್ದಾರೆ. ಜೊತೆಗೆ, ಯೋಗರಾಜ್‌ ಭಟ್ಟರ ನಿರ್ದೇಶನದಲ್ಲಿ ಸಿನಿಮಾ ನಿರ್ಮಿಸಲೂ ಸಿದ್ಧತೆ ನಡೆಸಿದ್ದಾರೆ.

‘ನನ್ನ ನಿರ್ದೇಶನದ ಚಿತ್ರಗಳು ತೀರಾ ಕಲಾತ್ಮಕವಲ್ಲದ, ಕಮರ್ಷಿಯಲ್‌ ಕೂಡ ಅಲ್ಲದ ಶೈಲಿಯಲ್ಲಿರುತ್ತವೆ. ಆದರೆ ನಿರ್ಮಾಣದ ಚಿತ್ರಗಳು ಜನಪ್ರಿಯ ಶೈಲಿಯದ್ದಾಗಿರುತ್ತದೆ. ಮನರಂಜನಾ ಸಿನಿಮಾ ಮಾದರಿಯ ನಿರ್ದೇಶನ ಮನಸಿಗೆ ಒಗ್ಗದೇ ಇರುವ ಸಂಗತಿ. ರಾಜಕೀಯ–ಸಾಮಾಜಿಕವಾದ ಗಂಭೀರ ವಸ್ತುಗಳನ್ನು ಹೆಣೆಯುವುದನ್ನು ಬಯಸುತ್ತೇನೆ. ಇವು ಒಂದು ರೀತಿ ಬೀದಿ ನಾಟಕಗಳ ವಿಸ್ತೃತ ರೂಪ. ಇವು ಜನರಿಗೆ ಇಷ್ಟವಾಗಬೇಕು. ಕೇವಲ ನಿರ್ಮಾಣ ಎಂದಾಗ ಅಲ್ಲಿ ಕಂಪೆನಿ ಕಟ್ಟುವ ಕೆಲಸವೂ ಮುಖ್ಯವಾಗುತ್ತದೆ’ ಎಂದು ಸುರೇಶ್‌ ಹೇಳುತ್ತಾರೆ.

ಒಂದು ಸಿನಿಮಾ ಯಾವುದಾದರೂ ಸಮಸ್ಯೆಯ ಕುರಿತು ದನಿ ಎತ್ತಬೇಕು. ಚರ್ಚೆಗಳನ್ನು ಹುಟ್ಟುಹಾಕಬೇಕು. ಅದೇ ಸಮಾಜಕ್ಕೆ ಸಿನಿಮಾ ನೀಡಬಹುದಾದ ಕೊಡುಗೆ ಎನ್ನುವ ಅವರು, ‘ಪುಟ್ಟಕ್ಕನ ಹೈವೇ’ ಹೇಗೆ ಹಲವು ಬದಲಾವಣೆಗಳಿಗೆ ಕಾರಣವಾಯಿತು ಎಂಬುದನ್ನು ಉದಾಹರಿಸುತ್ತಾರೆ. ‘ಪುಟ್ಟಕ್ಕನ ಹೈವೇ’ಯಿಂದಾಗಿ ಒಡೆದುಹೋಗಿದ್ದ ಬಳ್ಳಾರಿ ವಿಮಾನ ನಿಲ್ದಾಣ ವಿರುದ್ಧದ ಹೋರಾಟವನ್ನು ಸಿನಿಮಾ ಮತ್ತೆ ಒಂದುಗೂಡಿಸಿತು. ಗದಗದ ಪೋಸ್ಕೊ ವಿರುದ್ಧದ ಹೋರಾಟದಲ್ಲಿಯೂ ಸಿನಿಮಾದ ಅಳಿಲು ಪ್ರೇರಣೆಯಿದೆ. ಇದು ಸಿನಿಮಾ ಮಾಡಬಹುದಾದ ಕೆಲಸ. ‘ದೇವರ ನಾಡಲ್ಲಿ’ ಕೂಡ ಇಂಥದ್ದೇ ಚಿಂತನೆಯನ್ನು ಹುಟ್ಟುಹಾಕುತ್ತದೆ ಎಂಬ ನಿರೀಕ್ಷೆ ಅವರಲ್ಲಿದೆ.

Write A Comment