ಅಮಾಯಕ ಹುಡುಗಿಯಾಗಿ ಚಿತ್ರರಸಿಕರ ಮನಸ್ಸು ಸೆಳೆದ ನಟಿ ಅಮೂಲ್ಯ. ಅವರೀಗ ಗ್ಲಾಮರಸ್ ಬೆಡಗಿಯಾಗಿ ಬದಲಾಗುವ ಪ್ರಯತ್ನದಲ್ಲಿದ್ದಾರೆ. 2014ರ ಸಿಹಿ 2015ರಲ್ಲೂ ಮುಂದುವರೆಯುವ ನಿರೀಕ್ಷೆ ಅವರದು.
‘ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡರೆ ನನಗೆ ಕನ್ಫ್ಯೂಸ್ ಆಗಿಬಿಡುತ್ತದೆ. ಹೀಗಾಗಿ ಒಂದು ಸಿನಿಮಾ ಮುಗಿಯುವವರೆಗೆ ಇನ್ನೊಂದನ್ನು ಒಪ್ಪಿಕೊಳ್ಳುವುದೇ ಇಲ್ಲ’ ಎನ್ನುವ ಪಾಲಿಸಿ ಅಮೂಲ್ಯ ಅವರದು. ನಿನ್ನೆಯಷ್ಟೇ (ಜ.1) ಬಿಡುಗಡೆಯಾಗಿರುವ ‘ಖುಷಿ ಖುಷಿಯಾಗಿ’ ಸಿನಿಮಾಕ್ಕೆ ಪ್ರೇಕ್ಷಕರ ಸ್ಪಂದನ ಹೇಗಿದೆ ಎಂಬುದನ್ನು ಅರಿತು ಮುಂದಿನ ಹೆಜ್ಜೆ ಇಡುವುದಾಗಿ ಅವರು ಹೇಳುತ್ತಾರೆ. ವರ್ಷಕ್ಕೆ ಒಂದೆರಡೇ ಚಿತ್ರವಾದರೂ ಪರವಾಗಿಲ್ಲ; ಅವುಗಳ ಮೂಲಕ ಪ್ರೇಕ್ಷಕರ ಗಮನಸೆಳೆಯಬೇಕು ಎಂಬುದು ಅಮೂಲ್ಯ ಸಿದ್ಧಾಂತ!
ಈತನಕ ಮುಗ್ಧ ಹುಡುಗಿ ಪಾತ್ರದ ಮೂಲಕ ಗಮನ ಸೆಳೆದಿದ್ದ ಅಮೂಲ್ಯ, ‘ಗಜಕೇಸರಿ’ಯೊಂದಿಗೆ ಹೊಸ ವರ್ಚಸ್ಸು ಗಳಿಸಿದ್ದಾರೆ. ಅದರಲ್ಲಿ ಅವರದು ಗ್ಲಾಮರಸ್ ಪಾತ್ರ. ಮೊದಲ ಬಾರಿಗೆ ಮಾದಕ ಉಡುಗೆ ಧರಿಸಿದ ಅಮೂಲ್ಯ, ಮುಂದಿನ ದಿನಗಳಲ್ಲಿ ಅಂಥ ಪಾತ್ರಗಳನ್ನೂ ಒಪ್ಪುವ ಇರಾದೆಯಿದೆ.
ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ವರ್ಷದ ಮಧ್ಯೆ ಬಿಡುಗಡೆಯಾದ ‘ಗಜಕೇಸರಿ’ ಎರಡೂ ಈ ವರ್ಷ ಕೊಟ್ಟ ಒಳ್ಳೆಯ ಉಡುಗೊರೆಗಳೇ ಎನ್ನುತ್ತಾರೆ ಅಮೂಲ್ಯ. ‘ಶ್ರಾವಣಿ…’ವರೆಗೆ ಮುಗ್ಧ ಹುಡುಗಿ ಪಾತ್ರಗಳನ್ನೇ ಪಡೆಯುತ್ತಿದ್ದ ಅಮೂಲ್ಯ, ‘ಗಜಕೇಸರಿ’ಯಲ್ಲಿ ಸಂಪೂರ್ಣ ಬೇರೆ ದಿಕ್ಕಿಗೆ ಹೊರಳಿದರು. ‘ಯಾವುದೇ ತರಹದ ಗ್ಲಾಮರ್ ಉಡುಪುಗಳಾದರೂ ಸರಿ; ಆದರೆ ಅದು ಅಸಭ್ಯವಾಗಿ ಕಾಣಬಾರದು ಅಂತ ನಾನು ನಿರ್ದೇಶಕರಿಗೆ ಸ್ಪಷ್ಟವಾಗಿ ಹೇಳಿದ್ದೆ. ಹೀಗಾಗಿ ಗಜಕೇಸರಿಯಲ್ಲಿ ನನ್ನನ್ನು ಪ್ರೇಕ್ಷಕ ನೋಡಿದ ಬಗೆಯೇ ಬೇರೆ ಆಯಿತು’ ಎಂದು ನೆನಪಿಸಿಕೊಳ್ಳುತ್ತಾರೆ. ಸದ್ಯ, ‘ಖುಷಿ ಖುಷಿಯಾಗಿ’ ಸಿನಿಮಾದಲ್ಲೂ ಅದೇ ಥರ ಕಾಣುತ್ತಾರಂತೆ ಅಮೂಲ್ಯ. ‘ಚೆಲುವಿನ ಚಿತ್ತಾರ’ದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ವಿಭಿನ್ನವಾದ ಪಾತ್ರ ನಿರ್ವಹಿಸುವ ಅವರ ಆಸೆಗೆ ಪೂರಕವಾಗಿ ಅವಕಾಶಗಳು ಸಿಗುತ್ತಿವೆ. ‘ಖುಷಿ ಖುಷಿಯಾಗಿ’ ಚಿತ್ರದಲ್ಲಿ ಅವರು ಬಲು ದಿಟ್ಟೆ ಯುವತಿ.
ನಾಯಕನನ್ನು ಆಟವಾಡಿಸುವ ತಂತ್ರ ಅರಿತವಳು. ‘ಈವರೆಗೆ ಮಾಡಿದ್ದಕ್ಕಿಂತ ಬೇರೆ ಥರದ ಪಾತ್ರ ಅದು. ಹೀಗಾಗಿಯೇ ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲದೊಂದಿಗೆ ಕಾಯುತ್ತಿದ್ದೇನೆ’ ಎನ್ನುತ್ತಾರೆ.
ತಮ್ಮ ಅಭಿಮಾನಿಗಳ ಒಂದು ವರ್ಗವೂ ಸೃಷ್ಟಿಯಾಗಿರುವುದಕ್ಕೆ ಅಮೂಲ್ಯ ಅವರಲ್ಲಿ ಖುಷಿಯಿದೆ. ಮೊದಲೆಲ್ಲ ಅಭಿಮಾನಿಗಳು ಹುಡುಕಿಕೊಂಡು ಬಂದರೆ ಆತಂಕ ಪಡುತ್ತಿದ್ದ ಅವರಿಗೆ ಒಂದಷ್ಟು ಕಹಿ ಅನುಭವಗಳಾಗಿವೆ. ಈಗ ಅಂಥದಕ್ಕೆಲ್ಲ ಅವರು ಹೆದರುವುದಿಲ್ಲ. ‘ಅಭಿಮಾನಿಗಳನ್ನು ಮಾತಾಡಿಸುತ್ತೇನೆ. ಎಲ್ಲಿಯಾದರೂ ಅಟೋದಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದರೆ ಅಂಥವರಿಗೆ ಹಲೋ ಹೇಳುತ್ತೇನೆ. ಆಗ ಅವರ ಮುಖದಲ್ಲಿ ಅರಳುವ ಖುಷಿ ಬಣ್ಣಿಸಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ.
‘ಶ್ರಾವಣಿ…’ಯಲ್ಲಿನ ಅಭಿನಯಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರೆ, ‘ಗಜಕೇಸರಿ’ ಶತದಿನೋತ್ಸವ ಆಚರಿಸಿದ್ದು 2014 ತಮಗೆ ನೀಡಿದ ಕೊಡುಗೆ ಎಂದು ನೆನೆಯುತ್ತಾರೆ. ವರ್ಷದ ಮೊದಲ ದಿನದಂದೇ ಬಿಡುಗಡೆಯಾದ ‘ಖುಷಿ ಖುಷಿಯಾಗಿ’ ಹಾಗೂ ಈ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುವ ‘ಮಳೆ’ ಕೂಡ ಇದೇ ಸಾಲಿನಲ್ಲಿ ಸೇರಲಿವೆ ಎಂಬುದು ಅವರ ಆಶಾವಾದ.
ಸಿನಿಮಾ ಅಂದರೆ ಪಂಚಪ್ರಾಣ ಎನ್ನುವ ಅಮೂಲ್ಯ, ಶೂಟಿಂಗ್ ಇಲ್ಲದ ಸಮಯದಲ್ಲಿ ಪರಮ ಸೋಮಾರಿಯಂತೆ! ಮನೆಯಲ್ಲೇ ಸುಮ್ಮನೇ ಇದ್ದು ಬಿಡುವ ಅವರಿಗೆ ಹೊರಗೆ ಹೋಗಿ ಸಿನಿಮಾ ನೋಡುವುದೂ ಅಷ್ಟೊಂದು ಇಷ್ಟವಿಲ್ಲವಂತೆ. ‘ನಾವು ನಾಲ್ಕೈದು ಮಂದಿ ಫ್ರೆಂಡ್ಸ್ ಇದ್ದೇವೆ. ಆಗಾಗ್ಗೆ ಎಲ್ಲರೂ ಸೇರಿ ಮಾತಾಡಿ, ಊಟ ಮಾಡಿ ಖುಷಿ ಪಡ್ತೀವಿ. ಅಷ್ಟೇ’ ಎನ್ನುತ್ತಾರೆ. ಸ್ಟಾರ್ ಪಟ್ಟದಲ್ಲಿ ನಂಬಿಕೆಯಿಡದ ಅಮೂಲ್ಯ ಹೇಳುವ ಮಾತು: ‘ನಾನು ಮನೆಯಲ್ಲಿ ತುಂಬ ಸಿಂಪಲ್ ಹುಡುಗಿ ಥರ ಇರುವೆ. ಈಗೇನೋ ಐದು ಅಥವಾ ಹತ್ತು ವರ್ಷಗಳ ಕಾಲ ಒಂದಷ್ಟು ಸಿನಿಮಾದಲ್ಲಿ ಅಭಿನಯಿಸಬಹುದು. ಆದರೆ ಮುಂದೆ..? ನಾನೊಬ್ಬ ಸಾಮಾನ್ಯ ಮಹಿಳೆ ಆಗೋದಿಲ್ವಾ? ಹೀಗಾಗಿಯೇ ನಾನು ಯಾವತ್ತೂ ಸರಳವಾಗಿ ಇರಬಯಸುವೆ’.