ಮನೋರಂಜನೆ

ಬಾಕ್ಸಿಂಗ್ ಡೇ ಟೆಸ್ಟ್ : ಮೊದಲ ದಿನ ಸಮಬಲದ ಹೋರಾಟ; ಆಸ್ಟ್ರೇಲಿಯ 259/5

Pinterest LinkedIn Tumblr

smithಮೆಲ್ಬೋರ್ನ್, ಡಿ.26: ನಾಯಕ ಸ್ಟೀವನ್ ಸ್ಮಿತ್ ಭರ್ಜರಿ ಬ್ಯಾಟಿಂಗ್, ಕ್ರಿಸ್ ರೋಜರ್ಸ್‌ ಮತ್ತು ಶೇನ್ ವ್ಯಾಟ್ಸನ್ ಅರ್ಧಶತಕಗಳ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಶುಕ್ರವಾರ ಇಲ್ಲಿ ಆರಂಭಗೊಂಡ ಟೀಮ್ ಇಂಡಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್(ಮೂರನೆ ಟೆಸ್ಟ್)ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಟೆಸ್ಟ್‌ನ ಮೊದಲ ದಿನ ಸ್ಮಿತ್ ನಾಯಕನಾಗಿ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 2014ರಲ್ಲಿ ಟೆಸ್ಟ್‌ನಲ್ಲಿ 1,000 ರನ್ ಪೂರೈಸಿದರು. ದಿನದ ಆಟ ಕೊನೆಗೊಂಡಾಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 259 ರನ್ ಗಳಿಸಿದೆ. ಔಟಾಗದೆ 72 ರನ್ ಗಳಿಸಿರುವ ನಾಯಕ ಸ್ಮಿತ್ ಮತ್ತು 23 ರನ್ ಗಳಿಸಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರಾಡ್ ಹಡಿನ್ ಕ್ರೀಸ್‌ನಲ್ಲಿದ್ದರು.

70,000 ಪ್ರೇಕ್ಷಕರ ಉಪಸ್ಥಿತಿಯಲ್ಲಿ ಆರಂಭಗೊಂಡ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಭಾರತದ ವಿರುದ್ಧ ಕಠಿಣ ಸವಾಲನ್ನು ಕಲೆಹಾಕುವ ಉದ್ದೇಶದೊಂದಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಆಸ್ಟ್ರೇಲಿಯ ಆರಂಭದಲ್ಲೇ ಆಘಾತ ಅನುಭವಿಸಿತ್ತು. 2ನೆ ಓವರ್‌ನ ಕೊನೆಯ ಎಸೆತದಲ್ಲಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಅವರು ಉಮೇಶ್ ಯಾದವ್ ಎಸೆತದಲ್ಲಿ ಶಿಖರ್ ಧವನ್‌ಗೆ ಕ್ಯಾಚ್ ನೀಡಿದರು. ಅಷ್ಟು ಹೊತ್ತಿಗೆ ಆಸ್ಟ್ರೇಲಿಯ ಖಾತೆ ತೆರೆದಿರಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಎರಡು ಶತಕ ದಾಖಲಿಸಿ ಮಿಂಚಿದ್ದ ವಾರ್ನರ್ 7 ನಿಮಿಷಗಳ ಬ್ಯಾಟಿಂಗ್‌ನಲ್ಲಿ 6 ಎಸೆತಗಳನ್ನು ಎದುರಿಸಿದ್ದರೂ, ಅವರಿಗೆ ಖಾತೆ ತೆರೆಯಲು ಸಾಧ್ಯವಾಗದೆ ಪೆವಿಲಿಯನ್ ಸೇರಿದರು.

ಈ ಆಘಾತದಿಂದ ಬೇಗನೆ ಚೇತರಿಸಿಕೊಂಡ ಆಸ್ಟ್ರೇಲಿಯಕ್ಕೆ ಎರಡನೆ ವಿಕೆಟ್‌ಗೆ ಆರಂಭಿಕ ದಾಂಡಿಗ ಕ್ರಿಸ್ ರೋಜರ್ಸ್‌ ಮತ್ತು ಶೇನ್ ವ್ಯಾಟ್ಸನ್ 115 ರನ್‌ಗಳ ಜೊತೆಯಾಟ ನೀಡಿದರು. ರೋಜರ್ಸ್‌ ಸತತ ಮೂರನೆ ಅರ್ಧಶತಕ ದಾಖಲಿಸಿದರು. ರೋಜರ್ಸ್‌ 57 ರನ್ ಗಳಿಸಿ ವೇಗಿ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 36.2 ಓವರ್‌ಗಳಲ್ಲಿ 115 ಆಗಿತ್ತು. ಐದು ನಿಮಿಷ ಕಳೆಯುವಷ್ಟರಲ್ಲಿ ಮುಂದಿನ ಓವರ್‌ನಲ್ಲಿ ಅದೇ ಮೊತ್ತಕ್ಕೆ ಆಸ್ಟ್ರೇಲಿಯದ ಇನ್ನೊಂದು ವಿಕೆಟ್ ಪತನಗೊಂಡಿತು. 52 ರನ್ ಗಳಿಸಿದ್ದ ಶೇನ್ ವ್ಯಾಟ್ಸನ್‌ರನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು.

ಭೋಜನಾ ವಿರಾಮಕ್ಕೆ ಸ್ವಲ್ಪ ಹೊತ್ತು ಮೊದಲು ವ್ಯಾಟ್ಸನ್ ಔಟಾಗುವ ಸಾಧ್ಯತೆ ಇತ್ತು. ಶಮಿ ಎಸೆತದಲ್ಲಿ ವ್ಯಾಟ್ಸನ್ ನೀಡಿದ ಕ್ಯಾಚನ್ನು ಶಿಖರ್ ಧವನ್ ನೆಲಕ್ಕೆ ಕೈ ಚೆಲ್ಲಿದ್ದರು. ಆಗ ವ್ಯಾಟ್ಸನ್ ಸ್ಕೋರ್ 37 ಆಗಿತ್ತು. ಜೀವದಾನ ಪಡೆದ ವ್ಯಾಟ್ಸನ್ 23ನೆ ಅರ್ಧಶತಕ ದಾಖಲಿಸಿ ನಿರ್ಗಮಿಸಿದರು. ಅವರು 102 ಇನಿಂಗ್ಸ್‌ಗಳಲ್ಲಿ 27ನೆ ಬಾರಿ ಎಲ್ ಬಿಡಬ್ಲು ಬಲೆಗೆ ಬಿದ್ದರು.

ಶಾನ್ ಮಾರ್ಷ್(32) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅವರಿಗೆ ಶಮಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ಶಾನ್ ಔಟಾಗುವ ಮೊದಲು ಸ್ಮಿತ್ ಜೊತೆ 86 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು. 69 ರನ್‌ಗಳ ಜೊತೆಯಾಟ ನೀಡಿದರು.

ಚೊಚ್ಚಲ ಟೆಸ್ಟ್ ಆಡುತ್ತಿರುವ ಜೋ ಬರ್ನ್ಸ್ ಅವರು ಶಮಿ ಎಸೆತದಲ್ಲಿ 3 ರನ್ ಗಳಿಸುವ ಮೂಲಕ ಖಾತೆ ತೆರೆದರು. ಆದರೆ ಅವರು 13 ರನ್ ಗಳಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.

ಆರನೆ ವಿಕೆಟ್‌ಗೆ ಸ್ಮಿತ್‌ಗೆ ಹಡಿನ್ ಜೊತೆಯಾದರು. ಇವರು ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು. ಇವರ ಮುರಿಯದ ಜೊತೆಯಾಟದಲ್ಲಿ ತಂಡದ ಖಾತೆಗೆ 43 ರನ್ ಸೇರ್ಪಡೆಗೊಂಡಿತು.

ಶಮಿ ಮತ್ತು ಯಾದವ್ ತಲಾ 2 ವಿಕೆಟ್, ಆರ್.ಅಶ್ವಿನ್ 1 ವಿಕೆಟ್ ಪಡೆದರು.

ಭಾರತ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಚೊಚ್ಚಲ ಟೆಸ್ಟ್ ಆಡುತ್ತಿರುವ ಕರ್ನಾಟಕದ ಯುವ ದಾಂಡಿಗ ಲೋಕೇಶ್ ರಾಹುಲ್ ಮತ್ತು ಮುಹಮ್ಮದ್ ಶಮಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆದಿದ್ದಾರೆ. ರಾಹುಲ್ ಅವರು ರೋಹಿತ್ ಶರ್ಮ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಹುಲ್ 6ನೆ ಕ್ರಮಾಂಕದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ವೇಗಿ ವರುಣ್ ಆ್ಯರೊನ್ ಫಾರ್ಮ್ ಕಳೆದುಕೊಂಡಿರುವ ಕಾರಣ ಶಮಿ ಅವಕಾಶ ಪಡೆದಿದ್ದಾರೆ.

ಆಸ್ಟ್ರೇಲಿಯ ತಂಡದಲ್ಲಿ ರ್ಯಾನ್ ಹ್ಯಾರಿಸ್ ಕಾಲುನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಮಿಚೆಲ್ ಸ್ಟಾರ್ಕ್ ಜಾಗ ತೆರವುಗೊಳಿಸಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಜಾನ್ಸನ್ ಮತ್ತು ಜೋಶ್ ಹೇಝ್ಲಾವುಡ್ ಅವರ ಜೊತೆ ಮೂರನೆ ಬೌಲರ್ ಆಗಿ ಹ್ಯಾರಿಸ್ ಸೇರ್ಪಡೆಗೊಂಡಿದ್ದಾರೆ.

ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 5 ವಿಕೆಟ್‌ಗೆ 259
ಕ್ರಿಸ್ ರೋಜರ್ಸ್‌ ಸಿ ಧೋನಿ ಬಿ ಶಮಿ 57, ಡೇವಿಡ್ ವಾರ್ನರ್ ಸಿ ಧವನ್ ಬಿ ಯಾದವ್ 0, ಶೇನ್ ವ್ಯಾಟ್ಸನ್ ಎಲ್‌ಬಿಡಬ್ಲು ಬಿ ಅಶ್ವಿನ್ 52, ಸ್ಟೀವನ್ ಸ್ಮಿತ್ ಔಟಾಗದೆ 72, ಶಾನ್ ಮಾರ್ಷ್ ಸಿ ಧೋನಿ ಬಿ ಶಮಿ 32, ಜೋ ಬರ್ನ್ಸ್ ಸಿ ಧೋನಿ ಬಿ ಯಾದವ್ 13, ಬ್ರಾಡ್ ಹಡಿನ್ ಔಟಾಗದೆ 23, ಇತರೆ 10.
ವಿಕೆಟ್ ಪತನ: 1-0, 2-115, 3-115, 4-184, 5-216.
ಬೌಲಿಂಗ್ ವಿವರ: ಇಶಾಂತ್ ಶರ್ಮ 21-6-54-0, ಉಮೇಶ್ ಯಾದವ್ 20-2-69-2, ಮುಹಮ್ಮದ್ ಶಮಿ 17-4-55-2, ಆರ್.ಅಶ್ವಿನ್ 27-7-60-1, ಮುರಳಿ ವಿಜಯ್ 5-0-14-0.

Write A Comment