ಮನೋರಂಜನೆ

ಟೆಸ್ಟ್ ಕ್ರಿಕೆಟ್‌ಗೆ ಕನ್ನಡಿಗ ರಾಹುಲ್ ಪಾದಾರ್ಪಣೆ

Pinterest LinkedIn Tumblr

rahul-2

ಮೆಲ್ಬೋರ್ನ್, ಡಿ.26: ಆಸ್ಟ್ರೇಲಿಯದ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಲೋಕೇಶ್ ರಾಹುಲ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದಾರೆ.

ರೋಹಿತ್ ಶರ್ಮ ಬದಲಿಗನಾಗಿ ಆರನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡ 22ರ ಹರೆಯದ ರಾಹುಲ್‌ಗೆ ಭಾರತದ ನಾಯಕ ಎಂಎಸ್ ಧೋನಿ ಟೆಸ್ಟ್ ಕ್ಯಾಪನ್ನು ಹಸ್ತಾಂತರಿಸಿದರು. ಇತ್ತೀಚೆಗೆ ದಕ್ಷಿಣ ವಲಯದ ಪರ ಕೇಂದ್ರ ವಲಯ ವಿರುದ್ಧ್ದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಎರಡು ಬಾರಿ ಶತಕವನ್ನು ಸಿಡಿಸಿದ್ದ ರಾಹುಲ್ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.

2013-14ರ ಸಾಲಿನ ರಣಜಿ ಟ್ರೋಫಿಯಲ್ಲಿ 52.63ರ ಸರಾಸರಿಯಲ್ಲಿ 1,158 ರನ್ ಗಳಿಸಿ ಎರಡನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದ ರಾಹುಲ್ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದ ರಾಹುಲ್ 27 ಪಂದ್ಯಗಳಲ್ಲಿ 51.21ರ ಸರಾಸರಿಯಲ್ಲಿ 2,100 ರನ್ ಗಳಿಸಿದ್ದಾರೆ. ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಮಿಂಚಿದ್ದ ರಾಹುಲ್ ಆಯ್ಕೆಗಾರರ ಗಮನ ಸೆಳೆಯಲು ಯಶಸ್ವಿಯಾಗಿದ್ದರು.

ರಾಹುಲ್ ಪ್ರದರ್ಶನವನ್ನು ವೀಕ್ಷಿಸಿದ್ದ ‘ಮಹಾಗೋಡೆ’ಖ್ಯಾತಿಯ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ರಾಹುಲ್‌ರನ್ನು ದ್ರಾವಿಡ್‌ಗೆ ಹೋಲಿಸಲಾಗುತ್ತಿತ್ತು. ಮಂಗಳೂರಿನ ಕೆ.ಎಲ್. ರಾಹುಲ್ ಮೂರನೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು.

ಆದರೆ, ರೋಹಿತ್ ಶರ್ಮ ಸತತ ವೈಫಲ್ಯ ಕಂಡಿದ್ದರಿಂದ ರಾಹುಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿದೆ. ‘‘ನನಗೆ ಉತ್ತಮ ಬ್ಯಾಟಿಂಗ್ ಮಾಡುವ ವಿಶ್ವಾಸವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದೇಶಿಯ ಕ್ರಿಕೆಟ್ ಪಂದ್ಯದಲ್ಲಿನ ಪ್ರದರ್ಶನವನ್ನು ಮುಂದುವರಿಸಲು ಪ್ರಯತ್ನಿಸುವೆನು’’ ಎಂದು ರಾಹುಲ್ ನುಡಿದರು.

Write A Comment