ಮನೋರಂಜನೆ

ಹಗ್ಗದ ಕೊನೆ ಕನ್ನಡ ಚಿತ್ರ: ಮನುಷ್ಯತ್ವದ ಮೊನೆಗೆ ನಾಟುವ ಹಗ್ಗದಕೊನೆ

Pinterest LinkedIn Tumblr

haggada-kone

ಕನ್ನಡದ ಜನಪ್ರಿಯ ಬರಹಗಾರರಾದ ಪರ್ವತವಾಣಿಯವರ ‘ಹಗ್ಗದ ಕೊನೆ’ ನಾಟಕ ಈಗ ಚಲನಚಿತ್ರವಾಗಿ ತೆರೆಯ ಮೇಲೆ ಮೂಡಿ ಬಂದಿದೆ. ಪ್ರಸ್ತುತ ಸಮಾಜದ ಒಳಕೋನಗಳನ್ನು ಪರಿಣಾಮಕಾರಿಯಾಗಿ ಕಾಡುವಂತೆ ಈ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. ಕಲಾತ್ಮಕ ಚಿತ್ರದ ಚೌಕಟ್ಟು ಮೀರಿ ಕಮರ್ಶಿಯಲ್ ಆಗಿಯೂ ಹೇಗೆ ಗಂಭೀರ ವಿಷಯವೊಂದನ್ನು ಸಿನಿಮಾ ಆಗಿ ಕಟ್ಟಿಕೊಡಬಹುದೆಂಬುದನ್ನು ನಿರೂಪಿಸಿ ತೋರಿಸಿರುವ ಚಿತ್ರ ಹಗ್ಗದ ಕೊನೆ.

ನೇಣು ಕುಣಿಕೆಗೆ ಕೊರಳೊಡ್ಡಲು ಕ್ಷಣಗಣನೆಯಲ್ಲಿರುವ ಒಬ್ಬ ಕೈದಿಯ ಒಳತೋಟಿಯ ಜೊತೆ ಜೊತೆಗೇ ಈ ನೆಲದ ಕಾನೂನು ಕಟ್ಟಳೆಗಳ ಲೂಪ್‌ಹೋಲ್‌ಗಳನ್ನು ತಣ್ಣಗೆ ಅನಾವರಣ ಮಾಡುತ್ತಾ ಸಾಗುತ್ತದೆ.

ಗಲ್ಲು ಶಿಕ್ಷೆ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಕೆಲ ದೇಶಗಳು ಇದರ ಹಿಂದಿರುವ ಕ್ರೌರ್ಯವನ್ನು ಮನಗಂಡು ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿವೆ. ಮಾನವ ಹಕ್ಕುಗಳ ಆಧಾರದಲ್ಲಿ ವಿಶ್ವಾದ್ಯಂತ ಈ ಗಲ್ಲುಶಿಕ್ಷೆಗೆ ಕಡಿವಾಣ ಹಾಕಬೇಕೆಂದು ಜಾಗತಿಕ ಹೋರಾಟಗಳೇ ನಡೆಯುತ್ತಿವೆ. ‘ಹಗ್ಗದ ಕೊನೆ ಚಿತ್ರ ಅಂಥಾದ್ದೊಂದು ಮಾನವೀಯ ಕಳಕಳಿಯ ಪರವಾಗಿ ಕೈದಿಯೊಬ್ಬನ ಆತ್ಮ ವೃತ್ತಾಂತದ ಮೂಲಕ ವಕಾಲತ್ತು ವಹಿಸುತ್ತದೆ. ಮರಣ ದಂಡನೆಯ ಹಿಂದಿರಬಹುದಾದ ಶೀತಲ ಕರಾಳ ಮುಖವನ್ನು ಈ ಸಮಾಜಕ್ಕೆ ಅನಾವರಣಗೊಳಿಸುತ್ತಾ ನೇಣಿಗೆ ಕೊರಳೊಡ್ಡುವ ಕೈದಿಯಾಗಿ ನವೀನ್ ಕೃಷ್ಣ ತನ್ಮಯರಾಗಿ ಅಭಿನಯಿಸಿದ್ದಾರೆ.

ಆತ ಮೂಲತಃ ಕಳ್ಳ. ಹರ್ಡೆಂಡ್ ಪರ್ಸೆಂಟ್ ಬೇಜವಾಬ್ದಾರಿ ತಂದೆಯ, ಕಕ್ಕುಲಾತಿಯೇ ಮೈವೆತ್ತಂತಿರುವ ತಾಯಿಯ ಏಕೈಕ ಪುತ್ರ. ಬದುಕಿನ ಅನಿವಾರ್ಯತೆಗಳ ಹೊರಳು ಹಾದಿಯಲ್ಲಿ ಕಳ್ಳನಾಗಿ, ಅದನ್ನೇ ಹೊಟ್ಟೆ ಹೊರೆಯುವ ವೃತ್ತಿಯನ್ನಾಗಿ ಪರಿಗಣಿಸಿದ್ದ ಆತ ಅದೊಂದು ದಿನ ಅಪರಾಧದ ಸುಳಿಯಲ್ಲಿ ಸಿಲುಕುತ್ತಾನೆ. ಆತನಿಗೆ ಕೋರ್ಟು ಮರಣದಂಡನೆ ವಿಧಿಸುತ್ತದೆ.

ಜೈಲು ವಾಸದಲ್ಲಿರುವಾಗ ಇಡೀ ಜೈಲು ವ್ಯವಸ್ಥೆಯ ಬಗ್ಗೆ ಕೈದಿ ಕಾದಂಬರಿ ಬರೆಯುತ್ತಾ ಕಾಲ ತಳ್ಳುತ್ತಾನೆ. ಇನ್ನೇನು ಒಂದು ರಾತ್ರಿ ಹೊರಳಿಕೊಂಡು ಬೆಳಕು ಕಣ್ಣುತೆರೆಯುವ ಹೊತ್ತಿಗೆಲ್ಲಾ ಈತ ನೇಣಿನ ಕುಣಿಕೆಗೆ ಕೊರಳೊಡ್ಡಿ ಜೀವ ಬಿಡಬೇಕು… ಆ ಕೈದಿಯೊಳಗಿನ ತುಮುಲ, ಪ್ರಶ್ನೆಗಳು ಮತ್ತು ಅವಕ್ಕೆ ಉತ್ತರಿಸಲಾಗದ ಜೈಲಾಧಿಕಾರಿಯ ಕಂಗಾಲು ಸ್ಥಿತಿ ಪ್ರೇಕ್ಷಕನ ಮನ ಮುಟ್ಟುವಂತೆ ಸಾಗುತ್ತದೆ. ಕೈದಿ ಅಧಿಕಾರಿಗೆ ಕೇಳುವ ಪ್ರತಿಯೊಂದು ಪ್ರಶ್ನೆಯಲ್ಲಿಯೂ ಗಲ್ಲುಶಿಕ್ಷೆಯ ಜಾಗತಿಕ ವಿರೋಧಿ ಧ್ವನಿಯ ಸದ್ದು ಕೇಳಿಸುತ್ತದೆ. ಜೈಲಾಧಿಕಾರಿಯ ಉತ್ತರಿಸಲಾಗದ ಸಂಕಟದಲ್ಲಿ ಈ ಕಾನೂನು, ವ್ಯವಸ್ಥೆಯ ಅಕರಾಳ-ವಿಕರಾಳ ಮತ್ತು ನಿಷ್ಕರುಣಿ ಸ್ವಭಾವಗಳೂ ಅವಿತಿರುವಂತೆ ಭಾಸವಾಗುತ್ತದೆ.

ನವೀನ್ ಕೃಷ್ಣ ಬರೆದಿರುವ ಪಂಚಿಂಗ್ ಡೈಲಾಗ್‌ಗಳು ಕಮರ್ಶಿಯಲ್ ಚಿತ್ರದ ಪ್ರೇಕ್ಷಕರನ್ನೂ ಹಿಡಿದಿಡುವಷ್ಟು ಶಕ್ತವಾಗಿವೆ. ಖೈದಿ ”ಈ ಗಲ್ಲು ಶಿಕ್ಷೆಯೂ ಸರ್ಕಾರಿ ಕೊಲೆ ಅನ್ಸಲ್ವೇ ಸಾರ್,” ಎಂದು ಜೈಲಾಧಿಕಾರಿಗೆ ಕೇಳುವ ಪ್ರಶ್ನೆ ನೋಡುಗನನ್ನೂ ಕಾಡುತ್ತದೆ. ಕೈದಿಯ ಪಾತ್ರವನ್ನು ನವೀನ್ ಆವಾಹಿಸಿಕೊಂಡಂತೆ ಅಭಿನಯಿಸಿದ್ದಾರೆ.

ಇಡೀ ಸಿನಿಮಾವನ್ನು ಎರಡು ಮೂರು ಲೊಕೇಷನ್ನುಗಳಲ್ಲಿ ಚಿತ್ರೀಕರಿಸಲಾಗಿದೆ. ತಮಿಳಿನ ಛಾಯಾಗ್ರಾಹಕ ಪಾಂಡಿ ಕುಮಾರ್ ತಮಗಿದ್ದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಕಮರ್ಶಿಯಲ್ ಚಿತ್ರಗಳಿಗೆ ಹೆಸರಾಗಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ಪ್ರಯತ್ನವನ್ನು ಮೆಚ್ಚಲೇಬೇಕು. ಇವರಿಗೆ ನಿರ್ಮಾಣದಲ್ಲಿ ಸಹಕರಿಸಿದ ಬಣಕಾರ್‌ರ ಅಭಿರುಚಿಯೂ ಅಭಿನಂದನಾರ್ಹ. ಇನ್ನುಳಿದಂತೆ ದತ್ತಣ್ಣ, ಸುಚೇಂದ್ರ ಪ್ರಸಾದ್, ವಿ. ಮನೋಹರ್, ಮೋಹನ್, ಸಿಹಿಕಹಿ ಗೀತಾ ಅವರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರ ಗಲ್ಲು ಶಿಕ್ಷೆಯ ವಿರುದ್ಧ ಎಂಥವರಾದರೂ ತಲೆಕೆಡಿಸಿಕೊಳ್ಳುವಂತೆ ಮಾಡುತ್ತದೆ.

ಇಡೀ ಚಿತ್ರದಲ್ಲಿ ಸಂಭಾಷಣೆಯೇ ಅತ್ಯಧಿಕವಾಗಿರುವುದರಿಂದ ಇದನ್ನು ದೃಶ್ಯರೂಪದಲ್ಲಿ ನೋಡುವುದು ಮಾತ್ರವಲ್ಲ, ರೇಡಿಯೋ ನಾಟಕವಾಗಿಯೂ ಕೇಳಬಹುದು!

ಕಡೆಯಲ್ಲಿ ಆತ ಕೊಲೆ ಮಾಡಿದ್ದು ನಿಜವಾಗಿಯೂ ಯಾಕೆಂಬುದು ಗೊತ್ತಾಗುತ್ತಲೇ ಕಂಗಾಲಾಗುವಂತಾಗುತ್ತದೆ. ಮಚ್ಚು ಲಾಂಗು ಮತ್ತು ಸೂತ್ರ ಸಂಬಂಧವಿಲ್ಲದ ಕಥೆ ಹೊಂದಿರುವ ಚಿತ್ರಗಳ ಅಬ್ಬರದ ನಡುವೆ ”ಹಗ್ಗದ ಕೊನೆ” ಒಂದು ವಿಭಿನ್ನ ಪ್ರಯತ್ನ.

Write A Comment