ಮನೋರಂಜನೆ

ಗಬ್ಬಾದಲ್ಲಿ ಕಾಂಗರೂಗಳ ಗೆಲುವಿನ ಹಬ್ಬ: ನಾಲ್ಕೇ ದಿನದಲ್ಲಿ ಮುಗಿದ ಎರಡನೆ ಟೆಸ್ಟ್; ಭಾರತದ ಕಳಪೆ ಬ್ಯಾಟಿಂಗ್; ಆಸ್ಟ್ರೇಲಿಯಕ್ಕೆ 4 ವಿಕೆಟ್‌ಗಳ ಜಯ

Pinterest LinkedIn Tumblr

jonson____

ಬ್ರಿಸ್ಬೇನ್,ಡಿ.20: ಇಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿದ್ದು, ಆಸ್ಟ್ರೇಲಿಯ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 128 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 23.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 130 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ಗೆಲುವು ದಾಖಲಿಸಿತು.

ಶುಕ್ರವಾರ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟದಲ್ಲಿ 71 ರನ್ ಗಳಿಸಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 16 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. 87ಕ್ಕೆ 5 ವಿಕೆಟ್ ಉರುಳಿಸಿ ಆಸೀಸ್ ತಂಡ ಮೇಲುಗೈ ಸಾಧಿಸಿತು. ಮೂರನೆ ದಿನದಾಟದಂತ್ಯಕ್ಕೆ ಔಟಾಗದೆ ಉಳಿದಿದ್ದ ಆರಂಭಿಕ ದಾಂಡಿಗ ಶಿಖರ್ ಧವನ್ ಗಾಯದ ಕಾರಣದಿಂದಾಗಿ ಬೆಳಗ್ಗೆ ಆಟ ಮುಂದುವರಿಸಲಿಲ್ಲ. ಧವನ್ ಅಭ್ಯಾಸದ ವೇಳೆ ಕೈಗೆ ಗಾಯ ಮಾಡಿಕೊಂಡ ಕಾರಣದಿಂದಾಗಿ ಚೇತೇಶ್ವರ ಪೂಜಾರ ಜೊತೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದರು. ಆದರೆ ಕೊಹ್ಲಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವೇಗಿ ಮಿಚೆಲ್ ಜಾನ್ಸನ್ ಅವಕಾಶ ನೀಡಲಿಲ್ಲ. ಕೊಹ್ಲಿ 13 ನಿಮಿಷಗಳ ಬ್ಯಾಟಿಂಗ್‌ನಲ್ಲಿ 11 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಅಜಿಂಕ್ಯ ರಹಾನೆ (10) ತಂಡದ ಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲರಾದರು. ರೋಹಿತ್ ಶರ್ಮಗೆ(0) ಖಾತೆ ತೆರೆಯುವ ಮೊದಲೇ ಜಾನ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಒತ್ತಡದ ಪರಿಸ್ಥಿತಿಯಲ್ಲಿ ತಂಡವನ್ನು ಆಧರಿಸುವ ನಾಯಕ ಮಹೇಂದ್ರ ಸಿಂಗ್ ಧೋನಿ (0) ಅವರನ್ನು ವೇಗಿ ಜೋಶ್ ಹೇಝ್ಲಿವುಡ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ಮಾಡುತ್ತಿದ್ದ ಚೇತೇಶ್ವರ ಪೂಜಾರಗೆ ಆರನೆ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಜೊತೆಯಾದರು. 30 ರನ್ ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಅಶ್ವಿನ್ 36 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿ 19 ರನ್ ಸೇರಿಸಿದರು. 36.4ನೆ ಓವರ್‌ನಲ್ಲಿ ಅಶ್ವಿನ್ ಅವರು ಸ್ಟಾರ್ಕ್ ಎಸೆತದಲ್ಲಿ ಚೆಂಡನ್ನು ರಕ್ಷಣಾತ್ಮಕವಾಗಿ ಎದುರಿಸುವಲ್ಲಿ ಎಡವಿದರು. ಅವರ ಬ್ಯಾಟನ್ನು ಸ್ಪರ್ಶಿಸಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಹಡಿನ್ ಕೈ ಸೇರಿತು. ಈ ಹಂತದಲ್ಲಿ ಶಿಖರ್ ಧವನ್ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಅರ್ಧಶತಕ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದ ಪೂಜಾರ 43 ರನ್ ಗಳಿಸಿ ಹೇಝ್ಲೆವುಡ್ ಎಸೆತದಲ್ಲಿ ಲಿನ್‌ಗೆ ಕ್ಯಾಚ್ ನೀಡಿದರು. ಪೂಜಾರ ಔಟಾದ ಬಳಿಕ ಭಾರತದ ಸ್ಕೋರ್ 200ರ ಗಡಿ ದಾಟುವುದಿಲ್ಲವೋ ಎಂಬ ಆತಂಕ ಉಂಟಾಗಿತ್ತು. ಆದರೆ ಧವನ್‌ಗೆ ಉಮೇಶ್ ಯಾದವ್ ಉತ್ತಮ ಬೆಂಬಲ ನೀಡಿ 200ರ ಗಡಿ ದಾಟಲು ನೆರವಾದರು. ಶಿಖರ್ ಧವನ್ ಟೆಸ್ಟ್‌ನಲ್ಲಿ ಎರಡನೆ ಅರ್ಧಶತಕ ದಾಖಲಿಸಿದರು.

ಎಂಟನೆ ವಿಕೆಟ್‌ಗೆ ಧವನ್ ಮತ್ತು ಉಮೇಶ್ ಯಾದವ್ 60 ರನ್‌ಗಳ ಕೊಡುಗೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಧವನ್ ಶತಕ ದಾಖಲಿಸುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಅವರು 81 ರನ್(202 ನಿ, 145ಎ, 8 ಬೌ) ಗಳಿಸಿದ್ದಾಗ ಅವರನ್ನು ಲಿನ್ ಎಲ್ ಬಿಡಬ್ಲು ಬಲೆಗೆ ಬೀಳಿಸಿದರು. ವರುಣ್ ಆ್ಯರೊನ್ 3 ರನ್ ಗಳಿಸಿ ಔಟಾದರು. ಅಂತಿಮವಾಗಿ ಉಮೇಶ್ ಯಾದವ್ 30 ರನ್ (83ನಿ, 42ಎ, 2ಬೌ, 2ಸಿ) ಗಳಿಸಿ ನಿರ್ಗಮಿಸುವುದರೊಂದಿಗೆ ಭಾರತದ ಎರಡನೆ ಇನಿಂಗ್ಸ್ ಮುಕ್ತಾಯಗೊಂಡಿತು. ಇಶಾಂತ್ ಶರ್ಮ ಔಟಾಗದೆ 1 ರನ್ ಗಳಿಸಿದರು.

ಮಿಚೆಲ್ ಜಾನ್ಸನ್ 61ಕ್ಕೆ 4, ಹೇಝ್ಲೆವುಡ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಹಂಚಿಕೊಂಡರು.

ಆಸ್ಟ್ರೇಲಿಯಕ್ಕೆ ಸವಾಲು ಕಠಿಣವಾಗಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 97 ರನ್‌ಗಳ ಮುನ್ನಡೆ ಸಾಧಿಸಿದ್ದ ಕಾರಣದಿಂದಾಗಿ ಅದು ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ ಕೇವಲ 128 ರನ್ ಗಳಿಸಬೇಕಿತ್ತು.

ಎರಡನೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ 6.3 ಓವರ್‌ಗಳಲ್ಲಿ 22 ರನ್ ಸೇರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಹಾಗೂ ಮೊದಲ ಟೆಸ್ಟ್‌ನ ಗೆಲುವಿನ ರೂವಾರಿ ಡೇವಿಡ್ ವಾರ್ನರ್(6) ಮತ್ತು ಶೇನ್ ವ್ಯಾಟ್ಸನ್(0) ಅವರು ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಮೂರನೆ ವಿಕೆಟ್‌ಗೆ ಕ್ರಿಸ್ ರೋಜರ್ಸ್‌ ಮತ್ತು ನಾಯಕ ಸ್ಟೀವನ್ ಸ್ಮಿತ್ 63 ರನ್ ಸೇರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಸ್ಮಿತ್ 9 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಕ್ಯಾಚ್ ನೆಲಕ್ಕೆ ಕೈಚೆಲ್ಲಿ ಜೀವದಾನ ನೀಡಿದರು. ರೋಜರ್ಸ್‌ಗೂ ಜೀವದಾನ ದೊರೆಯಿತು. ಇದು ಆಸ್ಟ್ರೇಲಿಯ ವಿರುದ್ದ ಗೆಲುವು ದಾಖಲಿಸುವ ಭಾರತದ ಯತ್ನಕ್ಕೆ ಹಿನ್ನಡೆ ಉಂಟಾಯಿತು. ರೋಜರ್ಸ್‌ (55) ಏಳನೆ ಅರ್ಧಶತಕ ದಾಖಲಿಸಿದರು. 16.2ನೆ ಓವರ್‌ನಲ್ಲಿ ರೋಜರ್ಸ್‌ ಅವರು ಇಶಾಂತ್ ಶರ್ಮರಿಗೆ ವಿಕೆಟ್ ಒಪ್ಪಿಸಿದರು. ಶಾನ್ ಮಾರ್ಷ್ ಮತ್ತು ಸ್ಮಿತ್ 4ನೆ ವಿಕೆಟ್‌ಗೆ 29 ರನ್ ಸೇರಿಸಿದರು. ಮಾರ್ಷ್ ಔಟಾಗುವ ಮೊದಲು 17 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 17 ರನ್ ಸೇರಿಸಿದರು. ಸ್ಮಿತ್ 28 ರನ್ ಗಳಿಸಿ ರನೌಟಾದರು. ವಿಕೆಟ್ ಕೀಪರ್ ಬ್ರಾಡ್ ಹಡಿನ್(1) ಅವರು ಯಾದವ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದಾಗ ಆಸ್ಟ್ರೇಲಿಯದ ಸ್ಕೋರ್ 22.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 122 ಆಗಿತ್ತು. ಈ ಹಂತದಲ್ಲಿ ಮಿಚೆಲ್ ಜಾನ್ಸನ್ ಔಟಾಗದೆ 2 ಮತ್ತು ಮಿಚೆಲ್ ಮಾರ್ಷ್ ಔಟಾಗದೆ 6 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇಶಾಂತ್ ಶರ್ಮ 38ಕ್ಕೆ 3 ಮತ್ತು ಉಮೇಶ್ ಯಾದವ್ 46ಕ್ಕೆ 2 ವಿಕೆಟ್ ಪಡೆದರು.

ಈ ಸೋಲಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ 2011ರಿಂದ ಈ ತನಕ ವಿದೇಶದಲ್ಲಿ ನಡೆದ ಟೆಸ್ಟ್‌ಗಳಲ್ಲಿ 14ನೆ ಸೋಲು ಅನುಭವಿಸಿದೆ. ಇಂಗ್ಲೆಂಡ್‌ನಲ್ಲಿ 7, ಆಸ್ಟ್ರೇಲಿಯದಲ್ಲಿ 5, ದಕ್ಷಿಣ ಆಫ್ರಿಕ ಮತ್ತು ನ್ಯೂಝಿಲೆಂಡ್‌ನಲ್ಲಿ ತಲಾ 1 ಟೆಸ್ಟ್‌ನಲ್ಲಿ ಸೋಲು ಅನುಭವಿಸಿದೆ.

ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನಿಂಗ್ಸ್: 109.4 ಓವರ್‌ಗಳಲ್ಲಿ ಆಲೌಟ್ 408
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 109.4 ಓವರ್‌ಗಳಲ್ಲಿ ಆಲೌಟ್ 505
ಭಾರತ ಎರಡನೆ ಇನಿಂಗ್ಸ್ 64.3 ಓವರ್‌ಗಳಲ್ಲಿ ಆಲೌಟ್ 224.
ಮುರಳಿ ವಿಜಯ್ ಬಿ ಸ್ಟಾರ್ಕ್ 27, ಶಿಖರ್ ಧವನ್ ಎಲ್‌ಬಿಡಬ್ಲು ಬಿ ಲಿನ್ 81, ಚೇತೇಶ್ವರ ಪೂಜಾರ ಸಿ ಲಿನ್ ಬಿ ಹೇಝ್ಲಾ ವುಡ್ 43, ವಿರಾಟ್ ಕೊಹ್ಲಿ ಬಿ ಜಾನ್ಸನ್ 1, ಅಜಿಂಕ್ಯ ರಹಾನೆ ಸಿ ಲಿನ್ ಬಿ ಜಾನ್ಸನ್ 10, ರೋಹಿತ್ ಶರ್ಮ ಸಿ ಹಡಿನ್ ಬಿ ಜಾನ್ಸನ್ 0, ಮಹೇಂದ್ರ ಸಿಂಗ್ ಧೋನಿ ಎಲ್‌ಬಿಡಬ್ಲು ಬಿ ಹೇಝ್ಲಿವುಡ್ 0, ಆರ್.ಅಶ್ವಿನ್ ಸಿ ಹಡಿನ್ ಬಿ ಸ್ಟಾರ್ಕ್ 19, ಉಮೇಶ್ ಯಾದವ್ ಸಿ ಹಡಿನ್ ಬಿ ಜಾನ್ಸನ್ 30, ವರುಣ್ ಆ್ಯರೊನ್ ಸಿ ಹೇಝ್ಲಾವುಡ್ ಬಿ ಲಿನ್ 3, ಇಶಾಂತ್ ಶರ್ಮ ಔಟಾಗದೆ 1, ಇತರೆ 9.
ವಿಕೆಟ್ ಪತನ: 1-41, 1-71, 2-76, 3-86, 4-86, 5-87, 6-117, 7-143, 8-203, 9-211, 10-224.

ಬೌಲಿಂಗ್: ಜಾನ್ಸನ್ 17.3-4-61-4, ಹೇಝ್ಲವುಡ್ 16-0-74-2, ಮಿಚೆಲ್ ಸ್ಟಾರ್ಕ್ 8-1-27-2, ವ್ಯಾಟ್ಸನ್ 13-6-27-0, ಲಿನ್ 10-1-33-2
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 23.1 ಓವರ್‌ಗಳಲ್ಲಿ 6 ವಿಕೆಟ್‌ಗೆ 130
ಕ್ರಿಸ್ ರೋಜರ್ಸ್‌ ಸಿ ಧವನ್ ಬಿ ಇಶಾಂತ್ ಶರ್ಮ 55, ಡೇವಿಡ್ ವಾರ್ನರ್ ಸಿ ಧೋನಿ ಬಿ ಇಶಾಂತ್ ಶರ್ಮ 6, ಶೇನ್ ವ್ಯಾಟ್ಸನ್ ಸಿ ಧೋನಿ ಬಿ ಇಶಾಂತ್ ಶರ್ಮ 0, ಸ್ಟೀವನ್ ಸ್ಮಿತ್ ರನೌಟ್ (ಯಾದವ್/ಧೋನಿ) 28, ಶಾನ್ ಮಾರ್ಷ್ ಸಿ ಧೋನಿ ಬಿ ಯಾದವ್ 17, ಮಿಚೆಲ್ ಮಾರ್ಷ್ ಔಟಾಗದೆ 6, ಬ್ರಾಡ್ ಹಡಿನ್ ಸಿ ಕೊಹ್ಲಿ ಬಿ ಯಾದವ್ 1, ಮಿಚೆಲ್ ಜಾನ್ಸನ್ ಔಟಾಗದೆ 2, ಇತರೆ 15.
ವಿ ಕೆಟ್ ಪತನ: 1-18, 2-22, 3-85, 4-114, 5-122, 6-122
ಬೌಲಿಂಗ್ ವಿವರ: ಇಶಾಂತ್ ಶರ್ಮ 9-2-38-3, ವರುಣ್ ಆ್ಯರೊನ್ 5.1-0-38-0, ಉಮೇಶ್ ಯಾದವ್ 9-0-46-2.
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್.

Write A Comment