ಮನೋರಂಜನೆ

ಪಾಕ್ ವಿರುದ್ಧ ಏಕದಿನ ಸರಣಿ ಜಯಿಸಿದ ಕಿವೀಸ್

Pinterest LinkedIn Tumblr

newgeland-with-trophy

ಅಬುಧಾಬಿ, ಡಿ.20: ನಾಯಕ ಕೇನೆ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅರ್ಧಶತಕ, ವೇಗದ ಬೌಲರ್ ಮ್ಯಾಟ್ ಹೆನ್ರಿ ಜೀವನ ಶ್ರೇಷ್ಠ ಬೌಲಿಂಗ್‌ನ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಐದನೆ ಹಾಗೂ ಕೊನೆಯ ಏಕದಿನ ಪಂದ್ಯವನ್ನು 68 ರನ್‌ಗಳಿಂದ ಜಯಿಸಿದೆ.

ಈ ಗೆಲುವಿನೊಂದಿಗೆ ಕಿವೀಸ್ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ. ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡ ವಿಲಿಯಮ್ಸನ್ (97 ರನ್) ಹಾಗೂ ಟೇಲರ್ (ಅಜೇಯ 88) ಅರ್ಧಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತು. ಗೆಲ್ಲಲು 276 ರನ್ ಕಠಿಣ ಸವಾಲು ಪಡೆದ ಪಾಕಿಸ್ತಾನ ಹೆನ್ರಿ (5-30) ಬೌಲಿಂಗ್‌ಗೆ ತತ್ತರಿಸಿ 43.3 ಓವರ್‌ಗಳಲ್ಲಿ 207 ರನ್‌ಗೆ ಆಲೌಟಾಯಿತು.

ಹೆನ್ರಿ ಪಾಕ್‌ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ಬಲಿ ಪಡೆದರು. ಆಗ ಪಾಕ್ 38 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. 4ನೆ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಹಾರಿಸ್ ಸೊಹೈಲ್(65 ರನ್) ಹಾಗೂ ಅಹ್ಮದ್ ಶೆಹಝಾದ್(54 ರನ್) ತಂಡವನ್ನು ಆಧರಿಸಲು ಯತ್ನಿಸಿದರು. ಶೆಹಝಾದ್ ವಿಕೆಟ್ ಪಡೆದು ಈ ಜೋಡಿಯನ್ನು ಬೇರ್ಪಡಿಸಿದ ಹೆನ್ರಿ, ಸರ್ಫ್ರಾಝ್ ಅಹ್ಮದ್(26) ಹಾಗೂ ಶಾಹಿದ್ ಅಫ್ರಿದಿ(13) ವಿಕೆಟನ್ನು ಉಡಾಯಿಸಿದರು.

ಪಾಕಿಸ್ತಾನ ಸರಣಿಯನ್ನು ಸಮಬಲಗೊಳಿಸಿದ ನಂತರ 12ನೆ ಬಾರಿ ಸರಣಿ ಕಳೆದುಕೊಂಡಿದೆ. 2012ರಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಬಾರಿ ಸರಣಿ ಜಯಿಸಿದೆ. ಈ ಸೋಲಿನೊಂದಿಗೆ ಪಾಕ್ 2014ರಲ್ಲಿ ಒಂದೂ ಏಕದಿನ ಸರಣಿಯನ್ನು ಜಯಿಸಿಲ್ಲ. ಈ ವರ್ಷ ಶ್ರೀಲಂಕಾ ವಿರುದ್ಧ 2-1 ಹಾಗೂ ಆಸ್ಟ್ರೇಲಿಯದ ವಿರುದ್ಧ 3-0 ಅಂತರದಿಂದ ಪಾಕ್ ಸೋತಿದೆ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡ ನಾಯಕ ವಿಲಿಯಮ್ಸನ್ ಹಾಗೂ ಟೇಲರ್ 3ನೆ ವಿಕೆಟ್‌ಗೆ ಸೇರಿಸಿದ 116 ರನ್ ಜೊತೆಯಾಟದ ನೆರವಿನಿಂದ ಉತ್ತಮ ಸ್ಕೋರನ್ನು ದಾಖಲಿಸಿತು. ಟೇಲರ್ 119 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಡೀನ್ ಬ್ರೌನ್‌ಲೀ(34) ಅವರೊಂದಿಗೆ 2ನೆ ವಿಕೆಟ್‌ಗೆ 66 ರನ್ ಸೇರಿಸಿದ ವಿಲಿಯಮ್ಸನ್ ತಂಡವನ್ನು ಆರಂಭಿಕ ಕುಸಿತದಿಂದ ರಕ್ಷಿಸಿದರು. ಸರಣಿಯಲ್ಲಿ ಪಾಕಿಸ್ತಾನ ಮೊದಲ ಏಕದಿನವನ್ನು 3 ವಿಕೆಟ್‌ನಿಂದ ಹಾಗೂ ಮೂರನೆ ಏಕದಿನ ಪಂದ್ಯವನ್ನು 147 ರನ್‌ಗಳಿಂದ ಜಯಿಸಿತ್ತು. ನ್ಯೂಝಿಲೆಂಡ್ ಎರಡನೆ ಏಕದಿನ ಪಂದ್ಯವನ್ನು 4 ವಿಕೆಟ್, 4ನೆ ಏಕದಿನ ಪಂದ್ಯವನ್ನು 7 ರನ್‌ಗಳಿಂದ ಗೆದ್ದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 275/4
(ವಿಲಿಯಮ್ಸನ್ 97, ರಾಸ್ ಟೇಲರ್ ಅಜೇಯ 88, ಇರ್ಫಾನ್ 2-62)
ಪಾಕಿಸ್ತಾನ: 43.3 ಓವರ್‌ಗಳಲ್ಲಿ 207/10
(ಅಹ್ಮದ್ ಶೆಹಝಾದ್ 54, ಸೊಹೈಲ್ 65, ಹೆನ್ರಿ 5-30, ಮೆಕಲಂ 2-59)
ಪಂದ್ಯಶ್ರೇಷ್ಠ: ಮ್ಯಾಟ್ ಹೆನ್ರಿ
ಸರಣಿ ಶ್ರೇಷ್ಠ: ವಿಲಿಯಮ್ಸನ್.

Write A Comment