ಮನೋರಂಜನೆ

ಯಶ್…ಮಿಸ್ಟರ್ ರಾಮಚಾರಿ ಹಿಯರ್

Pinterest LinkedIn Tumblr

Mr-and-mss-ramachari1

ಯಶ್ ರಾಧಿಕಾ ಪಂಡಿತ್ ಜೋಡಿಯ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿಗೆ ಇದು ಬಿಡುಗಡೆಯ ಕಾಲ. ಆದರೆ ಹಾಗಂತ ರಾಮಾಚಾರಿ ದಂಪತಿಗಳು ಡಿವೋರ್ಸ್ ಮಾಡ್ಕೊತಾ ಇದಾರೆ ಅಂದ್ಕೊಬೇಡಿ. ಇದು ‘ಆ ಥರದ ಬಿಡುಗಡೆ’ ಅಲ್ಲ. ಅವರ ಸಂಸಾರ ಬೀದಿಗೆ ಬರುತ್ತಿಲ್ಲ. ಬದಲಾಗಿ ಥಿಯೇಟರ್‌ಗೆ ಬರುತ್ತಿದೆ. ರಾಜಾಹುಲಿ, ಗಜಕೇಸರಿ ಸಿನಿಮಾಗಳ ನಂತರ ಯಶ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಇನ್ನೊಂದು ರೀತಿಯಲ್ಲಿ ನೋಡುವ ಅವಕಾಶ. ಗಜಕೇಸರಿ ಚಿತ್ರದಲ್ಲಿ ರಾಜ್ ಅಭಿಮಾನಿಯಾಗಿ ‘ಯಶ್ ರಾಜ್‌’ ಎನಿಸಿಕೊಂಡಿದ್ದ ಯಶ್, ಈಗ ವಿಷ್ಣು ಅಭಿಮಾನಿಯಾಗಿದ್ದಾರೆ.

‘ಮೊನ್ನೆ ತಾನೇ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರಕ್ಕೆ ಯಾವುದೇ ಕಟ್ ಇಲ್ಲದೆ ಯು ಸರ್ಟಿಫಿಕೇಟ್ ಸಿಕ್ಕಿದೆ. ಡಿ.25ರ ಗುರುವಾರ ಕ್ರಿಸ್‌ಮಸ್‌ಗೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ರಿಲೀಸ್. ಸಿನಿಮಾಗೆ ಒಳ್ಳೆಯ ಕ್ರೇಜ್ ಇದೆ. ಮೊದಲು ಕರ್ನಾಟಕದಲ್ಲಿ 175 ರಿಂದ 200 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಸೆಕೆಂಡ್ ವೀಕ್ ಇಂಡಿಯಾದಲ್ಲಿ ಬಾಂಬೆ, ಪೂನಾ, ಗೋವಾ, ಹೈದರಾಬಾದ್, ಚೆನ್ನೈನಲ್ಲಿ ರಿಲೀಸ್ ಮಾಡ್ತೀವಿ. ಅನಂತರ ವಿದೇಶದಲ್ಲೂ ರಿಲೀಸ್ ಮಾಡೋ ಪ್ಲ್ಯಾನ್ ಇದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಜಯಣ್ಣ.

ವಿಷ್ಣುವರ್ಧನ್ ಅಭಿಮಾನಿಯಾಗಿ ಯಶ್ ಅಭಿನಯಿಸಿರುವ ರಾಮಾಚಾರಿ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ನಾಯಕ ನಟ ಯಶ್ ಜೊತೆ ಒಂದು ಮಾತುಕತೆ.

ರಾಜಾಹುಲಿ, ಗಜಕೇಸರಿಯಂಥ ಆ್ಯಕ್ಷನ್, ಹೀರೋ ಓರಿಯೆಂಟೆಡ್ ಸಿನಿಮಾಗಳ ನಂತರ ಒಂದು ನಾರ್ಮಲ್ ಹುಡುಗನ ಪಾತ್ರ ಮಾಡ್ತಿದ್ದೀರಿ ಹೇಗೆ ಅನ್ಸುತ್ತೆ?

ಹೌದು, ಅದು ಇಂಟೆನ್‌ಶನಲ್, ಬರೀ ಹೀರೋಯಿಸಂ ಅಂತ ಹೋದ್ರೆ ಅದಕ್ಕೆ ಎಂಡ್ ಇರಲ್ಲ. ಅದರ ಜೊತೆಗೆ ಒಂದು ರಿಯಲಿಸ್ಟಿಕ್ ಟಚ್ ಬೇಕು. ಆದರೆ ಹೀರೋಯಿಸಂ ಎಕ್ಸಪೆಕ್ಟ್ ಮಾಡೋ ಜನಕ್ಕೆ ನಿರಾಸೆ ಆಗಲ್ಲ. ಆ ಕಮರ್ಷಿಯಲ್ ಪ್ಯಾಕೇಜ್ ಇದ್ದೇ ಇರುತ್ತೆ. ಜೊತೆಗೆ ಸಾಮಾನ್ಯ ಹುಡುಗನಾಗಿ ಅವರಲ್ಲೊಬ್ಬನಾಗಿ ಕಾಣೋದು ನಿಜವಾದ ಹೀರೋಯಿಸಂ ಅನ್ಸುತ್ತೆ.

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಅಂತ ಹೆಸರಿಟ್ಟಿದ್ದೀರ, ಅಂದ್ರೆ ಇದು ಮದುವೆ ಆದ ನಂತರದ ಲವ್ ಸ್ಟೋರಿನಾ?

ಮದುವೆ ಆಗ್ತಾರೋ ಇಲ್ವೋ ಅನ್ನೋ ಲವ್‌ಸ್ಟೋರಿ ಅದರ ಸೆಲೆಬ್ರೇಶನ್.

ಈಗಾಗಲೇ ಚಿತ್ರರಂಗದ ಅನೇಕ ನಟರು ನಾನೇ ಮುಂದಿನ ವಿಷ್ಣುವರ್ಧನ್ ಅಂತ ಪೋಸು ಕೊಡ್ತಾ ಇದ್ದಾರೆ. ಈಗ ನೀವು ಕೂಡ ವಿಷ್ಣು ಹೆಸರನ್ನ ಬಳಸಿಕೊಳ್ಳುತ್ತಿದ್ದೀರ, ಅದಕ್ಕೆ ಕಾರಣ?

ನಾನು ವಿಷ್ಣುವರ್ಧನ್ ಆಗೋಕೆ ಯಾವತ್ತೂ ಸಾಧ್ಯ ಇಲ್ಲ. ಅವರ ಹೆಸರು ಹೇಳಿದಾಗ ನಾನು ಅವರಾಗ್ತೀನಿ ಅನ್ನೋ ಭಾವನೆ, ಅವರ ಲೆವೆಲ್ಲಿಗೆ ತೂಗುತ್ತೀನಿ ಅಂತ ಭ್ರಮೆ ಇರಲ್ಲ. ನಾನು ಎಲ್ಲ ನಟರ ಹೆಸರುಗಳನ್ನು ಹೇಳಿಕೊಂಡು ಬಂದವನು. ಚಿಕ್ಕಂದಿನಿಂದ ನಾವು ಗೆಳೆಯರು, ಕಸಿನ್ಸ್ ಒಬ್ಬೊಬ್ಬರು ಒಬ್ಬೊಬರ ಫ್ಯಾನ್ ಆಗಿದ್ದು. ನಾನೂ ಹಾಗೇ. ಈಗ ಅದನ್ನೇ ನಾನು ಸಿನಿಮಾಗಳಲ್ಲೂ ತೋರಿಸುತ್ತಿದ್ದೇನೆ. ಆದರೆ, ನಾನು ತುಂಬಾ ಎಚ್ಚರಿಕೆಯಿಂದ ಅದನ್ನ ಅಳವಡಿಸಿಕೊಂಡು ಬಂದಿದ್ದೇನೆ.

ನಾವು ಇಷ್ಟಪಡುವ ನಟರ ಹೆಸರು ಹೇಳೋದೂ ತಪ್ಪಾ? ಗಜಕೇಸರಿಯಲ್ಲಿ ರಾಜ್ ಅವರ ಬಗ್ಗೆ ಸ್ವಲ್ಪ ಜಾಸ್ತಿನೇ ಇತ್ತು. ಆದರೆ ಅದು ರಾಜ್ ಅವರ ಮೇಲಿನ ಪ್ರೀತಿ. ಇಲ್ಲಿ ವಿಷ್ಣು ಅವರ ಹೆಸರನ್ನ ತುಂಬಾ ಸೂಕ್ತವಾಗಿ ಬಳಸಿಕೊಂಡಿದ್ದೇವೆ. ನಾನು ಮಾಡ್ತಾ ಇರೋದೇ ವಿಷ್ಣು ಅವರ ಫ್ಯಾನ್ ಪಾತ್ರ.

ಈ ಚಿತ್ರದ ಹೈಲೆಟ್ ಏನು?

ಕಾನ್ಸೆಪ್ಟ್ ರಿಯಲಿಸ್ಟಿಕ್ ಆಗಿದೆ. ರಾಮಾಚಾರಿ ಪಾತ್ರ, ಅದರ ಟ್ರೀಟ್‌ಮೆಂಟ್ ವ್ಯಾಲ್ಯೂಸ್, ಎಥಿಕ್ಸ್, ಜೊತೆಗೆ ಅಗ್ರೆಶನ್, ಅದೇ ಹೈಲೈಟ್. ಜೊತೆಗೆ ಅದ್ಭುತವಾದ ಲವ್‌ಸ್ಟೋರಿ ಇದೆ. ಫ್ಯಾಮಿಲಿ ವ್ಯಾಲ್ಯೂಸ್, ಇವತ್ತಿನ ಜನರೇಶನ್ ಸಮಸ್ಯೆಗಳು. ಇಡೀ ಸಿನಿಮಾನೇ ಒಂದು ಪ್ಯಾಕೇಜ್. ಕ್ಲಾಸ್‌ಮಾಸ್ ಮಿಕ್ಸ್ ಆಗಿದೆ.

ಮತ್ತೆ ನಿಮ್ಮ, ರಾಧಿಕಾ ಪಂಡಿತ್ ಜೋಡಿ ಒಂದಾಗಿದೆ. ಈ ಸಲ ನಿಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಪ್ರೇಕ್ಷಕರಿಗೆ ಏನಾದರೂ ವ್ಯತ್ಯಾಸ ಕಾಣಿಸುತ್ತಾ?

ಖಂಡಿತಾ ಕಾಣಿಸುತ್ತೆ. ಮೊಗ್ಗಿನ ಮನಸ್ಸು, ಡ್ರಾಮಾದಲ್ಲೂ ವಿಭಿನ್ನವಾಗಿತ್ತು. ಇಲ್ಲಿ ಕೂಡ ಬೇರೆ ಥರ ಕೆಮಿಸ್ಟ್ರಿ ಇದೆ. ಈಗ ನಟರಾಗಿ ಇಬ್ಬರೂ ಮೆಚ್ಯೂರ್ಡ್ ಆದಿದ್ದೇವೆ, ನಮ್ಮಿಬ್ಬರಿಗೆ ಅಂತನೇ ಮಾಡಿರೋ ಟೈಲರ್ ಮೇಡ್ ಪಾತ್ರಗಳು ಇವು.

ನಿಮ್ಮ ನಿರ್ದೇಶಖ ಸಂತೋಷ್, ರಾಕಿ ಸಿನಿಮಾಗೆ ಹಾಡು ಬರೆದವರು. ಆಗಿನಿಂದ ನಿಮ್ಮ ಮತ್ತು ರಾಧಿಕಾ ಅವರ ಜೊತೆ ಸಿನಿಮಾ ಮಾಡೋಣ ಅಂತಿದ್ದ. ಡ್ರಾಮಾ ಅನೌನ್ಸ್ ಆದಾಗ ಪಾಪ ಬೇಜಾರು ಮಾಡಿಕೊಂಡ. ಗಜಕೇಸರಿ ಸಂಭಾಷಣೆ ಬರೆದಿದ್ದ. ಇಷ್ಟ ಆಯ್ತು. ಆಗ ಸ್ಟೋರಿ ಮಾಡಿದ್ರೆ ಕಥೆ ಹೇಳಿ ಅಂದೆ. ಜಿಮ್‌ನಲ್ಲಿ ವರ್ಕ್ ಔಟ್ ಮಾಡುವಾಗ ಕಥೆ ಹೇಳಿದ. ಅವನು ಹೇಳಿದ ಲೈನ್ ನನಗೆ ಇಷ್ಟ ಆಯ್ತು. ಸೋ ಸಿನಿಮಾ ಕೂಡ ವರ್ಕ್ ಔಟ್ ಆಯ್ತು.

ರಾಮಾಚಾರಿಯ ಹಾಡುಗಳ ಬಗ್ಗೆ ಹೇಳಿ, ನೀವೂ ಒಂದು ಹಾಡು ಹಾಡಿದ್ದೀರಿ, ನಾಗರಹಾವಿನ ಹಾಡನ್ನು ಬಳಸಿಕೊಂಡಿದ್ದೀರಾ?

ಸಿನಿಮಾ ಬಗ್ಗೆ ಜಾಸ್ತಿ ಹೇಳೋದು ಬೇಡ. ಆದರೆ ಖಂಡಿತಾ ಆ ಫ್ಲೇವರ್ ಇರುತ್ತೆ. ನೀವು ನೋಡಿ. ನೀವು ಎಕ್ಸ್‌ಪೆಕ್ಟ್ ಮಾಡೋದೆಲ್ಲ ಇರುತ್ತೆ.

ನಿರ್ದೇಶಕ ಸಂತೋಷ್ ಆನಂದರಾಮ್ ಹೊಸಬರು. ಸಿನಿಮಾ ಬಿಡುಗಡೆಗೆ ರೆಡಿಯಾಗಿರುವ ಹೊತ್ತಲ್ಲಿ ಅವರ ಬಗ್ಗೆ ಏನು ಹೇಳ್ತೀರಿ?

ನನಗೆ ತುಂಬಾ ಸರ್‌ಪ್ರೈಸ್ ಆಗುವಂತೆ ಕೆಲಸ ಮಾಡಿದ್ದಾರೆ. ಅವರ ತಂಡವೇ ಚೆನ್ನಾಗಿದೆ. ನಾನು ಪ್ರೇಕ್ಷಕರ ದೃಷ್ಠಿಯಿಂದ ತುಂಬಾ ಡಿಮ್ಯಾಂಡ್ ಮಾಡ್ತೀನಿ. ಯಾಕಂದ್ರೆ ಒಬ್ಬ ನಟ ಆಗೋಕೆ ಮುಂಚೆ ನಾನೊಬ್ಬ ಪ್ರೇಕ್ಷಕ. ಅದನ್ನೆಲ್ಲ ಅರಗಿಸಿಕೊಂಡು ಕೆಲಸ ಮಾಡೋದು ಕಷ್ಟ. ಆದರೆ ಅವರು ತುಂಬಾ ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಈ ಕಥೆ ನೋಡಿದಾಗ ಇದು ಒಂದು ಪಾಪ್ಯುಲರ್ ಕಪಲ್ ಮಾಡಿದ್ರೇನೇ ಚೆಂದ ಅನ್ಸುತ್ತೆ. ನನಗೆ ಸಿನಿಮಾ ಇಷ್ಟ ಆಗಿದೆ. ನೀವೂ ನೋಡಿ ನಿಮಗೂ ಇಷ್ಟ ಆಗುತ್ತೆ.

ನಿಮ್ಮ ಆಫ್ ದಿ ಸ್ಕ್ರೀನ್ ಇಮೇಜ್ ಇತ್ತೀಚೆಗೆ ಬದಲಾದಂತಿದೆ. ನಿಮ್ಮ ಬಗ್ಗೆ ಜನ ಮೊದಲಿಗಿಂತ ತುಂಬಾ ಒಳ್ಳೆಯ ಮಾತುಗಳನ್ನು ಆಡ್ತಾ ಇದಾರೆ. ಈ ಬದಲಾವಣೆಗೆ ಏನು ಕಾರಣ?

ಪಾಪ್ಯುಲಾರಿಟಿ ಬಂದ ಮೇಲೆ ನಮ್ಮಲ್ಲಿ ಬದಲಾವಣೆ ಆಗ್ತವೆ ಅನ್ಸುತ್ತೆ. ನನ್ನದು ತುಂಬಾ ಆಗ್ರೆಸಿವ್ ನೇಚರ್, ತುಂಬಾ ಸ್ಪೀಡ್, ಅಕ್ಕಪಕ್ಕೆ ನೋಡದೆ ನುಗ್ಗುವ ಅಭ್ಯಾಸ. ಈಗ ಎಳ್ಲರ ಭಾವನೆಗಳನ್ನು ನೋಡಿಕೊಂಡು ಬಿಹೇವ್ ಮಾಡ್ತಿದೀನಿ. ನಮಗೆ ಜನ ಇಷ್ಟೊಂದು ಗೌರವ ಕೊಟ್ಟಾಗ ನಮ್ಮನ್ನ ಫಾಲೋ ಮಾಡ್ತಿದಾರೆ ಅಂದಾಗ ಜವಾಬ್ದಾರಿ ಬರುತ್ತೆ.

ತಗ್ಗಿ ಬಗ್ಗಿ ನಡೆಯೋ ಅಭ್ಯಾಸ ಆಗುತ್ತೆ. ಜನರಿಂದ ಒಳ್ಳೇದು, ಕೆಟ್ಟದು ಎರಡನ್ನೂ ಮುಚ್ಚಿಡೋಕಾಗಲ್ಲ. ಬಟ್ ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ, ಬಯಸಿಲ್ಲ. ನಾನು ಹೆಚ್ಚು ಮಾತನಾಡುವವನಲ್ಲ. ಹಾಗಾಗಿ ಜನ ಅದನ್ನ ಜಂಭ ಅಂದ್ಕೊಬಹುದು. ಏನು ಮಾಡಲಿ? ನನಗೆ ಸಬ್ಜೆಕ್ಟ್ ಇಲ್ಲ ಅಂದ್ರೆ 5 ನಿಮಿಷಕ್ಕಿಂತ ಜಾಸ್ತಿ ಮಾತಾಡಕಾಗಲ್ಲ. ಆಗ ಅದನ್ನು ಬೇರೆಯವರು ತಪ್ಪು ತಿಳ್ಕೊಬಹುದು. ನನಗೆ ಪಾರ್ಟಿ ಮಾಡೋಕಾಗಲ್ಲ. 5 ನಿಮಿಷ ಸುಮ್ನೆ ಕೂತ್ರೆ ಭಯ ಆಗುತ್ತೆ. ಟೈಮ್ ವೇಸ್ಟ್ ಮಾಡ್ತಾ ಇದೀನಿ ಅನ್ಸುತ್ತೆ.

ಕಷ್ಟಪಟ್ಟುಗಳಿಸಿರೋದನ್ನ ಕಳ್ಕೊಬಾರದು ಅಂತ ನಿರಂತರವಾಗಿ ಹೋರಾಡ್ತಾ ಇರ್ತೀನಿ. ಮುಂಚೆ ಕೆಲಸ ಆಗೋವರೆಗೂ ಮೇಲೆ ಬಿದ್ದು ಹೋಗಿ ಮಾತಾಡಿಸಿ, ಈಗ ಬದಲಾದರೆ ಅದು ತಪ್ಪು. ಆದರೆ ನಾನು ಯಾವತ್ತೂ ಹಾಗೆ ಮಾಡಿಲ್ಲ. ಕರೆದಾಗ ಖಂಡಿತಾ ಹೋಗ್ತೀನಿ. ಮಾತಾಡ್ತೀನಿ. ಕರೆಯದೇ ಇದ್ರೆ ಹೇಗೆ ಹೋಗಲಿ ಹೇಗೆ ಮಾತಾಡಲಿ?. ಬಟ್, ನೀವು ಹೇಳಿದ ಹಾಗೆ, ಜನಗಳ ಪ್ರೀತಿ ನಾರ್ಮಲ್‌ಗಿಂತ ಜಾಸ್ತಿ ಆಗಿದೆ ಅನ್ನಿಸ್ತಾ ಇದೆ. ಆದರೆ ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ.

-ಹರಿ

Write A Comment