ಮನೋರಂಜನೆ

ಇಂದು ಚೊಚ್ಚಲ ಐಎಸ್‌ಎಲ್ ಫೈನಲ್: ಪ್ರಶಸ್ತಿಗಾಗಿ ಕೇರಳ-ಕೋಲ್ಕತಾ ಹಣಾಹಣಿ

Pinterest LinkedIn Tumblr

keralablastersvsatlticodekolkatainfirstislfinal

ಮುಂಬೈ, ಡಿ.19: ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಮೆಂಟ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಮತ್ತು ಅಟ್ಲೆಟಿಕೊ ಡಿ ಕೋಲ್ಕತಾ (ಎಟಿಕೆ) ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ಡಿ.ವೈ ಪಾಟೀಲ್ ಸ್ಟೇಡಿಯಂಲ್ಲಿ ನಡೆಯಲಿರುವ ಫೈನಲ್ ಪಂದ್ಯ ಕುತೂಹಲ ಕೆರಳಿಸಿದ್ದು, ಅಂಕಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ಸೆಮಿಫೈನಲ್ ತಲುಪಿದ್ದ ಬಲಿಷ್ಠ ಚೆನ್ನೈಯಿನ್ ತಂಡವನ್ನು ಬಗ್ಗು ಬಡಿದು ಫೈನಲ್ ತಲುಪಿದ್ದ ನಂ.4 ಕೇರಳ ತಂಡ ಫೇವರಿಟ್ ಆಗಿ ಗಮನ ಸೆಳೆದಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಮಾಲಕತ್ವದ ಕೇರಳ ಬ್ಲಾಸ್ಟರ್ಸ್‌ ತಂಡ ಮತ್ತು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಸಹ ಮಾಲಕತ್ವದ ಕೋಲ್ಕತಾ ತಂಡ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಭಾರತದ ಕ್ರಿಕೆಟ್‌ನ ಇಬ್ಬರು ಲೆಜೆಂಡ್‌ಗಳ ತಂಡಗಳ ನಡುವಿನ ಪಂದ್ಯವಾಗಿರುವ ಕಾರಣದಿಂದಾಗಿ ಫೈನಲ್ ಪಂದ್ಯ ಗಮನ ಸೆಳೆದಿದೆ.

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಮಾಲಕತ್ವದ ಚೆನ್ನೈಯಿನ್ ಎಫ್‌ಸಿ ಆರಂಭದಲ್ಲಿ ಪ್ರಶಸ್ತಿ ಗೆಲ್ಲುವ ತಂಡವಾಗಿ ಕಾಣಿಸಿಕೊಂಡಿತ್ತು, ಆದರೆ ಸೆಮಿಫೈನಲ್‌ನಲ್ಲಿ ಅದು ಕೇರಳ ತಂಡದ ವಿರುದ್ಧ ಸೋತು ಫೈನಲ್‌ಗೇರುವ ಅವಕಾಶ ವಂಚಿತಗೊಂಡಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದ್ದ ಕೇರಳ ಎರಡನೆ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 1-3 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದರೂ, ಎರಡೂ ಪಂದ್ಯಗಳಲ್ಲಿ 4 ಗೋಲು ದಾಖಲಿಸಿದ್ದ ಕೇರಳ ತಂಡ ಚೆನ್ನೈ ತಂಡವನ್ನು 4-3 ಅಂತರದಲ್ಲಿ ಕೂಟದಿಂದ ಹೊರದಬ್ಬಿ ಫೈನಲ್ ತಲುಪಿತ್ತು. ಉಭಯ ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದ್ದಾಗ, ಮಿಡ್ ಫೀಲ್ಡರ್ ಸ್ಟೀವನ್ ಪಿಯರ್‌ಸನ್ ಹೆಚ್ಚುವರಿ ಸಮಯದಲ್ಲಿ ದಾಖಲಿಸಿದ ಗೋಲು ನೆರವಿನಲ್ಲಿ ಕೇರಳ ಫೈನಲ್ ತಲುಪಿತ್ತು.

ಕೋಲ್ಕತಾ ತಂಡ ಮೊದಲ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು. ಆದರೆ ಎರಡನೆ ಸೆಮಿಫೈನಲ್‌ನಲ್ಲಿ ಕೋಲ್ಕತಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಗೋವಾವನ್ನು 4-2 ಅಂತರದಲ್ಲಿ ಬಗ್ಗು ಬಡಿದು ಫೈನಲ್‌ಗೆ ತೇರ್ಗಡೆಯಾಗಿತ್ತು.

ಕೋಲ್ಕತಾ ತಂಡ ಇಥೋಪಿಯಾದ ಸ್ಟ್ರೈಕರ್ ಫಿಕ್ರು ಟೆಫೆರಾ ಅವರ ಅನುಪಸ್ಥಿತಿಯಲ್ಲಿ ಕೇರಳ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಫಿಕ್ರು ಗಾಯದ ಕಾರಣದಿಂದಾಗಿ ತಂಡದ ಸೇವೆಗೆ ಲಭ್ಯರಿಲ್ಲ. ಅವರನ್ನು ತಂಡದ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಫಿಕ್ರು ಚಿಕಿತ್ಸೆಗಾಗಿ ದಕ್ಷಿಣ ಆಫ್ರಿಕಕ್ಕೆ ತೆರಳಲಿದ್ದಾರೆ. ಸ್ಟಾರ್ ಆಟಗಾರ ಲೂಯಿಸ್ ಗಾರ್ಸಿಯಾ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ದೃಢಪಟ್ಟಿಲ್ಲ. ಸ್ಪೇನ್‌ನ ಜೊಫ್ರಿ ಮಾಟೆಯು ಮತ್ತು ಬೊರ್ಜಾ ಫೆರ್ನಾಂಡೆಝ್ , ಸ್ಟ್ರೈಕರ್‌ಗಳಾದ ಮುಹಮ್ಮದ್ ರಫಿ ಮತ್ತು ಸಂಜು ಪ್ರಧಾನ್ ಕೋಲ್ಕತಾ ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.

ಕೇರಳ ತಂಡಕ್ಕೆ ಕೆನಡಾದ ಫಾರ್ವರ್ಡ್ ಸ್ಟಾರ್ ಇಯಾನ್ ಹುಮೆ ಮತ್ತು ಇಂಗ್ಲೆಂಡ್‌ನ ಮೈಕಲ್ ಚೋಪ್ರಾ ಅವರನ್ನು ಅವಲಂಭಿಸಿದೆ. ತಂಡದ ಕೋಚ್ ಕಮ್ ಗೋಲ್ ಕೀಪರ್ ಡೇವಿಡ್ ಜೇಮ್ಸ್ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಮಿಡ್‌ಫೀಲ್ಡ್‌ನಲ್ಲಿ ಭಾರತದ ಅಶ್ಫಾಕ್ ಅಹ್ಮದ್ ಮತ್ತು ಸುಶಾಂತ್ ಮ್ಯಾಥ್ಯೂ ತಂಡಕ್ಕೆ ಶಕ್ತಿ ಆಗಿದ್ದಾರೆ. ಚೆನ್ನೈ ವಿರುದ್ಧದ ಮೊದಲ ಸೆಮಿಫೈನಲ್‌ನಲ್ಲಿ ಸುಶಾಂತ್ 25 ಮೀಟರ್ ದೂರದಿಂದ ಎಡಗಾಲಲ್ಲಿ ಒದ್ದು ಚೆಂಡನ್ನು ಗುರಿ ತಲುಪಿಸುವ ಮೂಲಕ ಗೋಲು ಜಮೆ ಮಾಡಿದ್ದರು. ಫೈನಲ್‌ನಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.
ಪಂದ್ಯದ ಸಮಯ: ಸಂಜೆ 6:00ಕ್ಕೆ ಆರಂಭ.

Write A Comment