ಮನೋರಂಜನೆ

ಗುರಿ ಮುಟ್ಟುವ ದಿಟ್ಟ ನಿರ್ಧಾರ, ಕೊಹ್ಲಿ ಬೆಂಬಲಕ್ಕೆ ಅಜರ್‌; ನಥಾನ್‌ಗೆ ಮೆಚ್ಚುಗೆಯ ಮಹಾಪೂರ; ‘ವಿರಾಟ್‌ ನಿರ್ಧಾರ ಸರಿಯಾಗಿತ್ತು’

Pinterest LinkedIn Tumblr

kohli_22

ನವದೆಹಲಿ/ಅಡಿಲೇಡ್‌ (ಪಿಟಿಐ/ ಐಎಎನ್‌ಎಸ್‌): ‘ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿ ಗೆಲುವು ಒಲಿಸಿಕೊಳ್ಳಬೇಕೆಂಬ ಭಾರತದ ನಾಯಕ ವಿರಾಟ್‌ ಕೊಹ್ಲಿ ಅವರ ನಿರ್ಧಾರ ಸರಿಯಾಗಿಯೇ ಇತ್ತು’ ಎಂದು ಭಾರತದ ಮಾಜಿ ನಾಯಕ ಮಹಮ್ಮದ್‌ ಅಜರುದ್ದೀನ್‌ ಅಭಿಪ್ರಾಯಪಟ್ಟಿದ್ದಾರೆ.

‘ಗುರಿ ಬೆನ್ನಟ್ಟಲು ಮುಂದಾಗುವ ಮೂಲಕ ವಿರಾಟ್‌ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದರು. ಇದಕ್ಕೆ ಅನುಗುಣವಾಗಿ ಭಾರತದ ಆರಂಭವೂ ಉತ್ತಮವಾಗಿಯೇ ಇತ್ತು. ಆದರೆ ಕೊನೆಯ ಅವಧಿಯಲ್ಲಿ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿ ಹೊರನಡೆದಿದ್ದು ಸೋಲಿಗೆ ಕಾರಣವಾಯಿತು. ಭಾರತವನ್ನು ಕಟ್ಟಿಹಾಕಲು ಆಸ್ಟ್ರೇಲಿಯ ರೂಪಿಸಿದ್ದ ರಣತಂತ್ರವೂ ಫಲ ನೀಡಿತು’ ಎಂದು ಅಜರ್‌ ನುಡಿದಿದ್ದಾರೆ.

ಮೊದಲ ಬಾರಿಗೆ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ನಾಯಕನಾಗಿ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕದ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರ ಈ ಸಾಧನೆಯನ್ನು ಅಜರ್‌ ಪ್ರಶಂಸಿದ್ದಾರೆ.

‘ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರಶಸ್ತಿಯೆಡೆಗೆ ಕೊಂಡೊಯ್ಯುವ ಜವಾಬ್ದಾರಿ ಮಹೇಂದ್ರ ಸಿಂಗ್‌ ದೋನಿ ಮತ್ತು ವಿರಾಟ್‌ ಕೊಹ್ಲಿ ಅವರ ಹೆಗಲ ಮೇಲಿದೆ. ಈ ಸವಾಲನ್ನು ಅವರು ತಕ್ಕ ರೀತಿಯಲ್ಲೇ ನಿಭಾಯಿಸುತ್ತಾರೆ ಎಂಬ ವಿಶ್ವಾಸವೂ ಇದೆ. ಈ ಬಾರಿಯ ವಿಶ್ವಕಪ್‌ನ ವಿಷಯಕ್ಕೆ ಬರುವುದಾದರೆ ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್‌ ಮತ್ತು ವಿರಾಟ್‌ ಕೊಹ್ಲಿ ನನ್ನ ನೆಚ್ಚಿನ ಆಟಗಾರರು’ ಎಂದೂ ಮಾಜಿ ನಾಯಕ ಅಜರ್‌ ಹೇಳಿದ್ದಾರೆ.

‘ಮೊದಲ ಟೆಸ್ಟ್‌ನಲ್ಲಿ ವಿರಾಟ್‌ ತೋರಿದ ಆಟ ನೋಡಿದರೆ ಅವರು ಏಕದಿನ ಮಾತ್ರವಲ್ಲ ಟೆಸ್ಟ್‌ನಲ್ಲಿಯೂ ಅಬ್ಬರಿಸಬಲ್ಲರು ಎಂಬುದು ಸಾಬೀತಾಗಿದೆ’ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶೋಯಬ್‌ ಅಕ್ತರ್‌ ನುಡಿದಿದ್ದಾರೆ.

ನಾಯಕತ್ವ ನೀಡಲು ಸಕಾಲ
‘ಕೊಹ್ಲಿ ಅವರನ್ನು ಟೆಸ್ಟ್‌ ತಂಡದ ಪೂರ್ಣಕಾಲದ ನಾಯಕರನ್ನಾಗಿ ನೇಮಿಸಲು ಇದು ಸಕಾಲ’ ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ನಾಯಕನಾಗಿ ಆಡಿದ ರೀತಿ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಗಮನ ಸೆಳೆದಿರಬೇಕು. ಅವರು ಕೊಹ್ಲಿ ಅವರನ್ನು ನಾಯಕರನ್ನಾಗಿ ನೇಮಿಸುವ ಕುರಿತು ಗಂಭೀರವಾಗಿ ಚಿಂತಿಸುವುದು ಅಗತ್ಯ. ಮಹೇಂದ್ರ ಸಿಂಗ್‌ ದೋನಿ ಮುಂದಿನ ದಿನಗಳಲ್ಲಿ ಟೆಸ್ಟ್‌ ತಂಡದ ನಾಯಕರಾಗಿ ಮುಂದುವರಿಯುವುದು ಅನುಮಾನ. ಹೀಗಾಗಿ ಕೊಹ್ಲಿ ಅವರಿಗೆ ಪೂರ್ಣ ಕಾಲದ ನಾಯಕತ್ವದ ಜವಾಬ್ದಾರಿ ವಹಿಸಬಹುದು’ ಎಂದೂ ಇಯಾನ್‌ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಭಾರತ ತಂಡ ಯುವ ಆಟಗಾರರಿಂದ ಕೂಡಿದೆ. ಆಟಗಾರರಲ್ಲಿ ಅರ್ಪಣಾಭಾವ ಹಾಗೂ ಉತ್ಸಾಹ ಎದ್ದುಕಾಣುತ್ತಿದೆ. ಒಬ್ಬ ಆಟಗಾರನಾಗಿ ವಿರಾಟ್‌ ಏನೆಂಬುದನ್ನು ತಮ್ಮ ಪ್ರದರ್ಶನದ ಮೂಲಕವೇ ಸಾಬೀತು ಮಾಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ನಾಯಕತ್ವದ ಜವಾಬ್ದಾರಿಗಳನ್ನೂ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಹಡಿನ್‌ ಬೆಂಬಲಕ್ಕೆ ಕ್ಲಾರ್ಕ್‌: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಭಾರತದ ಎದುರಿನ ಟೆಸ್ಟ್‌ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದು, ತಮ್ಮ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬ್ರಾಡ್‌ ಹಡಿನ್‌ ತಂಡವನ್ನು ಮುನ್ನಡೆಸಲಿ ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದ ಅಂತಿಮ ದಿನದಾಟದ 44ನೇ ಓವರ್‌ನಲ್ಲಿ ಕ್ಲಾರ್ಕ್‌ ತೀವ್ರ ಬೆನ್ನು ನೋವಿನ ಕಾರಣ ಅಂಗಳ ತೊರೆದಿದ್ದರು. ಈ ವೇಳೆ ಬ್ರಾಡ್‌ ಹಡಿನ್‌ ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸಿ ಕಾಂಗರೂಗಳ ಬಳಗವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದರು.

‘ಅಂತಿಮ ದಿನದಾಟದಲ್ಲಿ ಹಡಿನ್‌ ಅತ್ಯುತ್ತಮ ನಿರ್ಧಾರಗಳನ್ನು ಕೈಗೊಂಡಿದ್ದರು. ಅವರಿಗೆ ತಂಡದ ಉಳಿದ ಆಟಗಾರರು ಸಂಪೂರ್ಣ ಸಹಕಾರ ನೀಡಿದ್ದರು. ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಅವರಲ್ಲಿದೆ. ಅವರು ನಾಯಕನಾಗಿ ಮುಂದಿನ ಮೂರು ಟೆಸ್ಟ್‌ಗಳಲ್ಲಿ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದ್ದಾರೆ’ ಎಂದು ಕ್ಲಾರ್ಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಲಾರ್ಕ್‌ ಮತ್ತೆ ಕಣಕ್ಕಿಳಿಯಲಿದ್ದಾರೆ
‘ಕ್ಲಾರ್ಕ್‌ ಗಾಯದ ಸಮಸ್ಯೆಯಿಂದ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಅಂಗಳಕ್ಕೆ ಇಳಿಯಲಿದ್ದಾರೆ’ ಎಂದು ಆಸ್ಟ್ರೇಲಿಯ ತಂಡದ ಕೋಚ್‌ ಡರೆನ್‌ ಲೆಹ್ಮಾನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಏಕದಿನ ಕ್ರಿಕೆಟ್‌ನಲ್ಲಿ ಆಡಬೇಕಾದರೆ ಪೂರ್ಣವಾಗಿ ಫಿಟ್‌ ಆಗಿರಬೇಕು ಎಂಬುದು ಕ್ಲಾರ್ಕ್‌ಗೆ ಚೆನ್ನಾಗಿ ಗೊತ್ತು. ಅವರಲ್ಲಿ ಇನ್ನೂ ಕ್ರಿಕೆಟ್‌ ಆಡುವ ಸಾಮರ್ಥ್ಯ ಇದೆ ಎಂಬುದನ್ನು ಮೊದಲ ಟೆಸ್ಟ್‌ನಲ್ಲಿ ಸಾಬೀತು ಮಾಡಿದ್ದಾರೆ. ಗಾಯದ ಸಮಸ್ಯೆಯಿಂದ ಶೀಘ್ರವೇ ಚೇತರಿಸಿಕೊಳ್ಳಲಿದ್ದಾರೆ’ ಎಂದೂ ಅವರು ನುಡಿದಿದ್ದಾರೆ.

ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಕ್ಲಾರ್ಕ್‌ ಕ್ರಿಕೆಟ್‌ ಬದುಕು ಇಲ್ಲಿಗೆ ಅಂತ್ಯಕಾಣಬಹುದು ಎಂಬ ಬೇಸರ ಎಲ್ಲರಲ್ಲೂ ಮನೆ ಮಾಡಿದೆ. ಮೊದಲ ಟೆಸ್ಟ್‌ ಪಂದ್ಯದ ಬಳಿಕ ಶನಿವಾರ ಸ್ವತಃ ಕ್ಲಾರ್ಕ್‌ ಆತಂಕ ವ್ಯಕ್ತಪಡಿಸಿದ್ದರು.

ನಥಾನ್‌ ಪ್ರದರ್ಶನ; ಪ್ರಶಂಸೆ
ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಪಡೆದು ಆಸ್ಟ್ರೇಲಿಯದ ಗೆಲುವಿಗೆ ಕಾರಣರಾಗಿದ್ದ ಸ್ಪಿನ್ನರ್‌ ನಥಾನ್‌ ಲಿಯೊನ್‌ ಪ್ರದರ್ಶನವನ್ನು ಸ್ಥಳೀಯ ಮಾಧ್ಯಮಗಳು ಕೊಂಡಾಡಿವೆ.
‘ಶೇನ್‌ ವಾರ್ನ್‌ ನಿವೃತ್ತಿಯ ಬಳಿಕ ಆಸ್ಟ್ರೇಲಿಯ ತಂಡಕ್ಕೆ ನಥಾನ್‌ ಲಿಯೊನ್‌ ಅವರ ರೂಪದಲ್ಲಿ ಸ್ಪಿನ್‌ ಬೌಲರ್‌ ಒಬ್ಬರು ದೊರೆತಿದ್ದಾರೆ’ ಎಂದು ಡೈಲಿ ಟೆಲಿಗ್ರಾಫ್‌ ವರದಿ ಮಾಡಿದೆ.

ಕ್ರಮಾಂಕ: ಕೊಹ್ಲಿಗೆ 16 ನೇ ಸ್ಥಾನ
ದುಬೈ: ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಬಾರಿಗೆ ಅಗ್ರ 20ರೊಳಗೆ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯ ಎದುರಿನ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕದ ದಾಖಲೆ ಗಳಿಸಿರುವ ಕೊಹ್ಲಿ ಟೆಸ್ಟ್‌ ಈಗ 16ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಭಾರತದ ಪರ ಕೊಹ್ಲಿ ಅತ್ಯುತ್ತಮ ಸ್ಥಾನ ಹೊಂದಿದ್ದರೆ, ಚೇತೇಶ್ವರ ಪೂಜಾರ 18 ನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌ ಮೊದಲ ಪಂದ್ಯದಲ್ಲಿ 145 ಹಾಗೂ 102 ರನ್‌ ಗಳಿಸುವ ಮೂಲಕ ಎರಡು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕ್‌ ಎನಿಸಿದೆ. ಅಗ್ರ 20ರೊಳಗೆ ಸ್ಥಾನ ಹೊಂದಿದ್ದ ವೇಗಿ ಇಶಾಂತ್‌ ಶರ್ಮ 21ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಎಂಟು ಸ್ಥಾನ ಏರಿಕೆ ಕಂಡಿದ್ದು, ಈಗ 28ನೇ ಸ್ಥಾನದಲ್ಲಿದ್ದಾರೆ. ಎರಡೂ ಇನಿಂಗ್ಸ್‌ನಲ್ಲಿ ಕ್ರಮವಾಗಿ 53 ಹಾಗೂ 99 ರನ್‌ ಗಳಿಸಿದ್ದರು.

Write A Comment