ರಾಷ್ಟ್ರೀಯ

ಬಿಹಾರದಲ್ಲಿ ಚಿತೆಗೆ ಹಾರಿದ ‘ಸತಿ’

Pinterest LinkedIn Tumblr

pune-main

ಸಹರ್ಸಾ/ಪಟ್ನಾ (ಪಿಟಿಐ/ಐಎಎನ್‌ಎಸ್‌): ಬಿಹಾರ ಸಹರ್ಸಾ ಜಿಲ್ಲೆಯ ಪರ್ಮಿನಿಯಾ ಎಂಬಲ್ಲಿ 65 ವರ್ಷದ ಮಹಿಳೆಯೊಬ್ಬಳು ಪತಿಯ ಚಿತೆಗೆ ಹಾರಿ ‘ಸತಿ’ ಹೋದ ಘಟನೆ ಶನಿವಾರ ನಡೆದಿದೆ.

ಈ ಗ್ರಾಮ ಪಟ್ನಾದಿಂದ 250 ಕಿ.ಮೀ. ದೂರದಲ್ಲಿದೆ. ಮೃತ ಮಹಿಳೆಯನ್ನು ದಹ್ವಾ ದೇವಿ ಎಂದು ಗುರುತಿ­ಸಲಾಗಿದೆ ಎಂದು ಸಹರ್ಸಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಪಂಕಜ್‌ ಸಿನ್ಹಾ ತಿಳಿಸಿದ್ದಾರೆ.

ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಕೆಯ ಪತಿ ಚರಿತ್ರ ಯಾದವ್‌ (70) ಶನಿವಾರ ಮೃತನಾಗಿದ್ದ. ಆತನ ಮಕ್ಕಳು ಮತ್ತು ಸಂಬಂಧಿಗಳು ಊರಿನ ದೇವ­ಸ್ಥಾನದ ಬಳಿ ಅಂತ್ಯಸಂಸ್ಕಾರಕ್ಕಾಗಿ ಮೃತದೇಹ­ವನ್ನು ಒಯ್ದರು. ಸಂಪ್ರದಾಯದಂತೆ ದಹ್ವಾ ದೇವಿ ಮತ್ತು ಆಕೆಯ ಸೊಸೆ ಅಂತ್ಯಸಂಸ್ಕಾರಕ್ಕೆ ಹೋಗಿರಲಿಲ್ಲ.

ಅಂತ್ಯಕ್ರಿಯೆ ಮುಗಿಸಿ ಸ್ನಾನ ಮಾಡಲು ಎಲ್ಲರೂ ಗ್ರಾಮದ ಬೋರ್‌ವೆಲ್‌ ಬಳಿ ತೆರಳಿದರು. ಈ ಸಂದರ್ಭ­ದಲ್ಲಿ ಯಾದವ್‌ನ ಮಗ ರಮೇಶ್ ಮಂಡಲ್‌ ತನ್ನ ತಾಯಿಗೂ ಸ್ನಾನ ಮಾಡುವುದಕ್ಕಾಗಿ ಹೇಳಲು ಆಕೆಯನ್ನು ಹುಡುಕತೊಡಗಿದ. ಅಂತ್ಯಸಂಸ್ಕಾರದ ಸ್ಥಳದತ್ತ ದಹ್ವಾ ದೇವಿ ಹೋಗುತ್ತಿದ್ದಳು ಎಂದು ಕೆಲ ಗ್ರಾಮಸ್ಥರು ಹೇಳಿದರು.

ಮಂಡಲ್‌ ಹಾಗೂ ಇತರ ಕುಟುಂಬ ಸದಸ್ಯರು ಅಲ್ಲಿಗೆ ಧಾವಿಸುವಷ್ಟರಲ್ಲಿ ದಹ್ವಾ ದೇವಿ ಚಿತೆಗೆ ಹಾರಿ ಮೃತಪ­ಟ್ಟಿದ್ದಳು. ಕೂಡಲೇ ಆಕೆಯ ಅಂತ್ಯವಿಧಿ­ಗಳನ್ನೂ ಸಹ ಕುಟುಂಬ ಸದಸ್ಯರು ನೆರವೇರಿಸಿದರು.

ಯಾದವ್‌ ಅಂತ್ಯಸಂಸ್ಕಾರ ನಡೆದ 30 ನಿಮಿಷದೊಳಗೆ ಈ ಘಟನೆ ನಡೆದಿದೆ. ದಹ್ವಾ ದೇವಿ ದುಃಖಿಸುತ್ತಿದ್ದಳು. ಆದರೆ, ಮಾನಸಿಕ ಸಮತೋಲನ ಕಳೆದುಕೊಂಡಿಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮಸ್ಥರ ಹೇಳಿಕೆಗಳನ್ನು ವಿಡಿಯೊದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

185 ವರ್ಷಗಳ ಹಿಂದೆಯೇ ನಿಷೇಧ
ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ 1829ರಲ್ಲಿ ವಿಲಿಯಂ ಬೆಂಟಿಕ್‌ ಬಂಗಾಳದ ಗರ್ವನರ್‌ ಆಗಿದ್ದಾ­ಗಲೇ ಸತಿಯನ್ನು ನಿಷೇಧಿಸಲಾಗಿತ್ತು. 1830ರಲ್ಲಿ ಮದ್ರಾಸ್‌ ಹಾಗೂ ಬಾಂಬೆ ಪ್ರೆಸಿಡೆನ್ಸಿಗೂ ಈ ನಿಷೇಧ ವಿಸ್ತರಿಸಲಾಯಿತು.

ರೂಪ್‌ ಕನ್ವರ್‌ ಪ್ರಕರಣ
1987ರ ಸೆಪ್ಟೆಂಬರ್‌ 4ರಂದು ರಾಜಸ್ತಾನದ ಸಿಕರ್‌ ಜಿಲ್ಲೆಯ ದೇವ್ರಾಲಾ ಗ್ರಾಮದಲ್ಲಿ ರಜಪೂತ ಸಮು­ದಾಯಕ್ಕೆ ಸೇರಿದ ರೂಪ್‌ ಕನ್ವರ್‌ ಎಂಬ 18 ವರ್ಷದ ಯುವತಿ ಗ್ರಾಮಸ್ಥರ ಮುಂದೆ ತನ್ನ ಪತಿಯ ಚಿತೆಗೆ ಹಾರಿ ದ್ದಳು. ಆಕೆಯನ್ನು ಬಲವಂತವಾಗಿ ಚಿತೆಗೆ ದೂಡ­ಲಾಗಿತ್ತು ಎಂದೂ ಹೇಳಲಾಗಿತ್ತು. ಇದನ್ನು ವೈಭವೀಕ­ರಿಸಿ­­ದ್ದಕ್ಕಾಗಿ ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಹಲ­ವರ ವಿರುದ್ಧ ಪ್ರಕರಣ ದಾಖಲಿಸ­ಲಾಗಿತ್ತು.

Write A Comment