ಮನೋರಂಜನೆ

ಪೀಕೇ ಮೂಡ್!; ಆಮೀರನ ಹೊಸ ಅವತಾರ

Pinterest LinkedIn Tumblr

pk-movie

ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿದ್ದ ‘ತ್ರೀ ಈಡಿಯಟ್ಸ್’ನ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಿರ್ಮಾಪಕ ವಿಧು ವಿನೋದ್ ವಿನೋದ್ ಚೋಪ್ರಾ ಹಾಗೂ ನಾಯಕ ನಟ ಆಮಿರ್ ಖಾನ್ ಪುನಃ ಪ್ರೇಕ್ಷಕರಿಗೆ ಖುಷಿಯ ರಸದೌತಣ ಉಣಬಡಿಸಲು ಬರುತ್ತಿದ್ದಾರೆ.

ನಿರ್ಮಾಪಕರ ಡಾರ್ಲಿಂಗ್ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಆಮಿರ್ ಖಾನ್ ಕಾಂಬಿನೇಷನ್ ನ ‘ಪಿ.ಕೆ.’ ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ.

  ಡಿ.19 ಚಿತ್ರದ ಬಿಡುಗಡೆ ದಿನಾಂಕ
    85 ಕೋಟಿ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಬಂದ ಹಣ
    300 ಕೋಟಿ ಸ್ವದೇಶದಲ್ಲಿ ಪಿ.ಕೆಗಳಿಗೆ ಬಗ್ಗೆ ಪಂಡಿತರ ಅಂದಾಜು ಲೆಕ್ಕ

ಈಗಾಗಲೇ ಪ್ರಮೋಷನ್ ಗಳು, ಚರ್ಚೆಗಳು ಆರಂಭವಾಗಿವೆ. ಚಾನೆಲ್ ಗಳು ಚಿತ್ರದ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಬೊಬ್ಬೆ ಹೊಡೆಯುತ್ತಿವೆ. ತ್ರೀ ಈಡಿಯಟ್ಸ್ ಮೂಲಕ ಬಾಕ್ಸಾಫೀಸ್ ಚಿಂದಿ ಮಾಡಿದ್ದ ಈ ಜೋಡಿ ಈ ಬಾರಿಯೂ ಅಂಥದ್ದೇ ಮೋಡಿ ಮಾಡುತ್ತಾ ಅನ್ನೋ ಗುಂಗಿನಲ್ಲೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಹೊಸ ಭಾಷ್ಯ ಬರೆವ ಹಿರಾನಿ

ಕಾನ್ಸೆಪ್ಟ್ ಯಾವುದೇ ಇರಲಿ, ಅದಕ್ಕೆ ತಿಳಿ ಹಾಸ್ಯದ ಲೇಪನ ಕೊಟ್ಟು ವಿನೋದಮಯವಾಗಿ ತಾವು ಹೇಳಬೇಕಿದ್ದನ್ನು ಹೇಳುವುದೇ ಹಿರಾನಿ ಸ್ಟೈಲ್. ತಾವು ನಿರ್ದೇಶಿಸಿದ ಮೊದಲ ಚಿತ್ರ ಮುನ್ನಾಭಾಯಿ ಎಂಬಿಬಿಎಸ್ನಲ್ಲಿ ಹಾಸ್ಯ ಲೇಪಿತ ಚಿತ್ರಕಥೆ ಬರೆದು ಗೆದ್ದ ಹಿರಾನಿ, ಮುಂದೆ ಲಗೇ ರಹೋ ಮುನ್ನಭಾಯಿ, ತ್ರೀ ಈಡಿಯಟ್ಸ್ಗಳಲ್ಲೂ ಇದೇ ಲಯವನ್ನು ಮುಂದುವರಿಸಿದರು. ಇವರ ಚಿತ್ರಗಳು ಆರಂಭವಾಗೋದೇ ಒಂದು ಫನ್ನಿ ಸನ್ನಿವೇಶದ ಮೂಲಕ. ಮುನ್ನಾಭಾಯಿ ಸರಣಿಯ ಎರಡೂ ಚಿತ್ರಗಳಲ್ಲಿ ವ್ಯಕ್ತಿಗಳ ಕಿಡ್ನಾಪ್ ಮಾಡುವ ದೃಶ್ಯಗಳಿವೆ. ಆದರೆ, ಇವ್ಯಾವ ದೃಶ್ಯಗಳಲ್ಲೂ ಹಿಂಸೆ, ರಕ್ತವಿಲ್ಲ. ಇದು ಹಿರಾನಿ ಈವರೆಗೆ ಅನುಸರಿಸಿರುವ ಸೂತ್ರ.

ಮತ್ತೊಂದು ಪರ್ಫೆಕ್ಟ್ ನೆಸ್?!

‘ಖಯಾಮತ್ ಸೇ ಖಯಾಮತ್ ತಕ್’ ನಿಂದ ‘ಧೂಮ್ 3’ ವರೆಗೆ ವಿವಿಧ ಪಾತ್ರಗಳಲ್ಲಿ ಜನರನ್ನು ರಂಜಿಸುತ್ತಾ, ನಟನೆಯ ಮೂಲಕ ಅಚ್ಚಳಿಯದ ಛಾಪು ಮೂಡಿಸುವ ಆಮೀರ್ ಖಾನ್ ಬಾಲಿವುಡ್ನಲ್ಲಿ ಮಿಸ್ಟ್ ಪರ್ಫೆಕ್ಟ್ ಎಂದೇ ಖ್ಯಾತಿ. ಇದೀಗ ಪಿ.ಕೆ. ಚಿತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರಿಗೆ ಸವಾಲಿನ ಪಾತ್ರ ಸಿಕ್ಕಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಏಕೆಂದರೆ, ಚಿತ್ರದ ಟ್ರೇಲರ್ಗಳೇ ಇದನ್ನು ಸಾರಿ ಹೇಳುತ್ತವೆ. ಅಲ್ಲದೆ ಚಿತ್ರದ ಬಗ್ಗೆ ಕೆಲವಾರು ವೆಬ್ಸೈಟ್ಗಳಲ್ಲಿ ಪ್ರಕಟವಾಗಿರುವಂತೆ ಆಮೀರ್ ಇದರಲ್ಲಿ ಏಲಿಯನ್ (ಅನ್ಯಗ್ರಹ ಜೀವಿ)ಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಪಿ.ಕೆ ಎಂಬುದೇ ಈತನ ಹೆಸರು ಎಂದು ಹೇಳಲಾಗುತ್ತಿದೆ. ಆದರೆ, ಪಿ.ಕೆ. ಅಂದ್ರೇನು ಎಂಬ ಪ್ರಶ್ನೆಗೆ ಥಿಯೇಟರ್ನಲ್ಲೇ ಉತ್ತರ ಸಿಗಲಿದೆ.

ಅದೇನೇ ಇರಲಿ, ಚಿತ್ರದಲ್ಲಿ ವಿಚಿತ್ರ ಗೆಟಪ್ನಲ್ಲಿ ಆಮಿರ್ ಕಾಣಿಸಿಕೊಂಡಿರೋದು ಮಾತ್ರ ವಿಶೇಷ. ಯಾವುದೇ ಪಾತ್ರವಿರಲಿ ಅದರ ಅಗತ್ಯಕ್ಕೆ ತಕ್ಕಂತೆ, ತಮ್ಮ ದೇಹ, ಮನಸ್ಸು ಎರಡನ್ನೂ ಸ್ಥಿತ್ಯಂತರಗೊಳಿಸಿಕೊಂಡು ಆ್ಯಕ್ಟ್ ಮಾಡುವುದು ಆಮೀರ್ ಅವರ ಸ್ಪೆಷಾಲಿಟಿ. ಉದಾಹರಣೆಗೆ, ಗಜನಿಗಾಗಿ ದೇಹವನ್ನು ಹುರಿಗೊಳಿಸಿದ್ದ ಆಮೀರ್, ಅದರ ಬೆನ್ನಲ್ಲೇ ಬಂದ ತ್ರೀ ಈಡಿಯಟ್ಸ್ಗಾಗಿ ತೆಳ್ಳಗಾಗಿ ಕಾಲೇಜು ಹುಡುಗನಂತೆ ಆಗಿಬಿಟ್ಟರು.

ಹೀಗೆ, ಪಾತ್ರಕ್ಕೆ ತಕ್ಕಂತೆ ದೇಹವನ್ನು ಹಿಗ್ಗಿಸುವುತದು, ಕುಗ್ಗಿಸುವುದು ಸಾಮಾನ್ಯ ವಿಷಯವಲ್ಲ. ಅದೂ ಒಂದು ಕಲೆ. ಅಂಥ ಕಲೆಯನ್ನು ಬಲ್ಲ ಕೆಲವೇ ಕೆಲವು ಭಾರತೀಯ ನಟರಲ್ಲಿ ಆಮೀರ್ ಸಹ ಒಬ್ಬರು. ಕಳೆದ 25 ವರ್ಷಗಳಿಂದ ನಾಯಕ ನಟನಾಗಿ ಸದಾ ತಮ್ಮನ್ನು ತಮ್ಮ ಪಾತ್ರಗಳಿಗೆ ಡೆಡಿಕೇಟ್ ಮಾಡುವ ಆಮೀರ್ ಪಿ.ಕೆ. ಯಲ್ಲೇನು ಮಾಡಿದ್ದಾರೆ ಅನ್ನೋದು ಸದ್ಯಕ್ಕಿರುವ ಪ್ರಶ್ನೆ.

ವಿಭಿನ್ನವಾಗಿಸಲು ಕಸರತ್ತು

ನಮಗೆಲ್ಲಾ ಗೊತ್ತಿರುವಂತೆ, ಚಿತ್ರದಲ್ಲಿ ಆಮೀರ್ ರದ್ದು ‘ಮಾನವ ರೂಪದ ಅನ್ಯಗ್ರಹ ಜೀವಿ’ಯ ಪಾತ್ರ. ಹಾಗಾಗಿ, ಆಮೀರ್ ಅವರನ್ನು ಸಾಧಾರಣ ಮಾನವರಿಗಿಂತ ಕೊಂಚವಾದರೂ ವಿಭಿನ್ನವಾಗಿ ತೋರಿಸಲು ಚಿತ್ರದಲ್ಲಿ ಸಾಕಷ್ಟು ಕಸರತ್ತು ಮಾಡಲಾಗಿದೆ. ಅವರ ಕಿವಿಯನ್ನು ಮತ್ತಷ್ಟು ಅಗಲಗೊಳಿಸಲಾಗಿದೆ. ಚಿತ್ರ ವಿಚಿತ್ರ ಕಾಸ್ಟ್ಯೂಮ್ ನೀಡಲಾಗಿದೆ.

ಹಾಂ…ಕಾಸ್ಟ್ಯೂಮ್ ವಿಚಾರದಲ್ಲಿ ಆಮೀರ್ ಸೇರಿ ಇಡೀ ಚಿತ್ರತಂಡ ಸಾಕಷ್ಟು ತಲೆಕೆಡಿಸಿಕೊಂಡಿದೆ. ಅನ್ ನ್ಯಾಚುರಲ್ ಎಂದೆನಿಸುವ ಸಾಕಷ್ಟು ಡ್ರೆಸ್ಗಳ ಟ್ರಯಲ್ ನೋಡಿದ ನಂತರ, ನಿರ್ದೇಶಕ ಹಿರಾನಿಗೆ ಹೊಸದೊಂದು ಐಡಿಯಾ ಹೊಳೆದಿದೆ.

ಅದೇನೆಂದರೆ, ಚಿತ್ರದ ಶೂಟಿಂಗ್ ನೋಡಲು ಬರುವ ಪ್ರೇಕ್ಷಕರಿಂಲೇ ಬಟ್ಟೆಗಳನ್ನು ಪಡೆದು ಅವನ್ನೇ ಆಮೀರ್ ಅವರಿಗೆ ಹಾಕಿಸಿ, ಚಿತ್ರಿಸುವುದು. ರಾಜಸ್ಥಾನ, ದೆಹಲಿಯಲ್ಲಿ ಚಿತ್ರದ ಶೂಟಿಂಗ್ ವೇಳೆ, ಹಾದಿ ಬೀದಿಯಲ್ಲಿ ಸಂಚರಿಸುತ್ತಿದ್ದವರ ಡ್ರೆಸ್ಗಳನ್ನು ಪಡೆದು ಆಮೀರ್ ಅವರಿಗೆ ಹಾಕಿಸಲಾಗಿದೆ.

ಆಮಿರ್ ಮಗನೂ ಬಾಲಿವುಡ್ ಗೆ

ಪಿ.ಕೆ. ಚಿತ್ರದ ಮೂಲಕ ಆಮಿರ್ ಖಾನ್ ಅವರ ಜುನೈದ್ ಖಾನ್ ಸಹ ಬಾಲಿವುಡ್ಗೆ ಕಾಲಿಟ್ಟಿದ್ದಾನೆ. ಆದರೆ, ನಟನಾಗಿ ಅಲ್ಲ, ನಿರ್ದೇಶಕನಾಗಿ. ಹೌದು, 17 ವರ್ಷ ವಯಸ್ಸಿನ ಜುನೈದ್, ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದಿದ್ದಾನೆ.

ವಿಶೇಷ ಪಾತ್ರದಲ್ಲಿ ದತ್, ಇರಾನಿ

ಚಿತ್ರದ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಾಜಸ್ತಾನ ಮೂಲದ ಭೈರೋನ್ ಸಿಂಗ್ ಎಂಬ ಹಲ್ಳಿಗನ ಪಾತ್ರದಲ್ಲಿ ಮಿಂಚಿದ್ದಾರೆ ಅವರು. ಆಮಿರ್ ಹಾಗೂ ಅವರ ಜುಗಲ್ ಬಂದಿಯಲ್ಲಿ ಚಿತ್ರದಲ್ಲಿ ಒಂದು ಹಾಡು ಇದೆ. ಇನ್ನು, ಹಿರಾನಿಯ ಪ್ರತಿ ಚಿತ್ರದಲ್ಲೂ ಮುಖ್ಯ ಪಾತ್ರ ಪಡೆಯುವ ಬೋಮನ್ ಇರಾನಿ ಅವರೂ ಚಿತ್ರದಲ್ಲಿದ್ದಾರೆ.

Write A Comment