ಮನೋರಂಜನೆ

ಬೆಂಗಳೂರು ಅಂತರ­ರಾಷ್ಟ್ರೀಯ ಚಲನ­ಚಿತ್ರೋತ್ಸ­ವ: ಬಯಲು ಚಿತ್ರ: ಹಾಡು – ಹಾಸ್ಯದ ಸಂಜೆ

Pinterest LinkedIn Tumblr

pvec09-FILM-FEST-02

ಬೆಂಗಳೂರು: ಆಗಸದಲ್ಲಿ ತಾರೆಗಳು ಒಂದೊಂದಾಗಿ ಮೂಡುತ್ತಿವೆ. ತಣ್ಣನೆ ಏರುತ್ತಿರುವ ಚಳಿಗೆ ಮೈ–ಮನ ತೆರೆದು­ಕೊಂಡಿದೆ. ಸಾಲು ಸಾಲಾಗಿ ಕಲ್ಲು ಬೆಂಚಿನ ಮೇಲೆ ಕುಳಿತು ಸಿನಿಮಾ ಕಣ್ತುಂಬಿ­ಕೊಳ್ಳು­ತ್ತಿ­ದ್ದಾರೆ. ಅಲ್ಲಿ ಪಾಸು ತೋರಿಸಿ ಸರತಿ ಸಾಲಿ­ನಲ್ಲಿ ನಿಲ್ಲಿ. ಇದೇ ಆಸನದಲ್ಲಿ ಕುಳಿತು­ಕೊಳ್ಳಿ ಎನ್ನುವ ಕಟ್ಟಪ್ಪಣೆಗಳು ಇಲ್ಲ. ಅಲ್ಲಿರುವುದು ಸಿನಿಮಾ ಮಾತ್ರ.

ಹುಲ್ಲು ಹಾಸು, ಕಲ್ಲು ಬೆಂಚುಗಳು, ಮೆಟ್ಟಿಲುಗಳು ಹೀಗೆ ಎಲ್ಲೆಂದರಲ್ಲಿ ಕುಳಿತು ಜನರು ಉಚಿತವಾಗಿ ಸಿನಿಮಾ ಸವಿಯು­ತ್ತಿದ್ದಾರೆ. ಕೆಲವರು ಆರಾಮಾಗಿ ಕೈ ಕಾಲು ಚಾಚಿ ಕುಳಿತ್ತಿದ್ದರೆ, ಮತ್ತಷ್ಟು ಮಂದಿ ಮನೆಯಲ್ಲಿ ಕುಳಿತು ಸಿನಿಮಾ ನೋಡಿದಂತೆ ಅನುಭವ ದಕ್ಕಿಸಿಕೊಳ್ಳುತ್ತಿದ್ದಾರೆ.

ನಗರದ ಸ್ವತಂತ್ರ್ಯ ಉದ್ಯಾನದಲ್ಲಿನ ‘ಬಯಲು ಚಿತ್ರೋತ್ಸವ’ ಪ್ರೇಕ್ಷಕರಿಗೆ ಇಂಥ­ದ್ದೊಂದು ಅನುಭೂತಿಯನ್ನು ಒದಗಿಸಿ­ಕೊಟ್ಟಿದೆ. ಕಳೆದ ವರ್ಷ ತೆರೆಗೆ ಸರಿದು ಸಾಮಾನ್ಯ ಜನರಿಂದ ಟೀಕೆಗೆ ಗುರಿಯಾ­ಗಿದ್ದ ‘ಬಯಲು ಚಿತ್ರೋತ್ಸವ’ ಈ ವರ್ಷ ಮತ್ತೆ ಜಾರಿಗೆ ಬಂದಿದೆ. ಒಂದೆಡೆ ಐಷಾ­ರಾಮಿ ಮಾಲ್‌ಗಳಲ್ಲಿ ಸಿನಿಮಾ ಪ್ರದರ್ಶನ­ವಾಗುತ್ತಿದ್ದರೆ, ಇತ್ತ ಜನರಿಗೆ ಪುಕ್ಕಟೆಯಾಗಿ ಸಿನಿಮಾ ವೀಕ್ಷಿಸುವ ಸಂಭ್ರಮ.

ಬಯಲು ಚಿತ್ರ ಪ್ರದರ್ಶನಕ್ಕೆ ಸ್ಫೂರ್ತಿ ಗೋವಾದಲ್ಲಿ ನಡೆಯುವ ಭಾರತೀಯ ಅಂತರ­ರಾಷ್ಟ್ರೀಯ ಚಲನಚಿತ್ರೋತ್ಸವ. ಅಲ್ಲಿ ಸಮುದ್ರ ತೀರದಲ್ಲಿ ನಡೆಯುವ ಸಿನಿಮಾ ಪ್ರದರ್ಶನವನ್ನು ಅನುಸರಿಸಿ ಇಲ್ಲಿ ಬಯಲು ಚಿತ್ರೋತ್ಸವವನ್ನು ಅನುಷ್ಠಾನಕ್ಕೆ ತರಲಾಯಿತು. ಇದು ದುಬಾರಿಯೂ ಅಲ್ಲ. ಪರದೆ, ಸೌಂಡ್ ಸಿಸ್ಟಂ ಸೇರಿದಂತೆ ಮೂಲ­ಸೌಲಭ್ಯಗಳಿಗೆ ಮಾತ್ರ ವೆಚ್ಚ ಮಾಡ­ಬೇಕಷ್ಟೇ. ಕಳೆದ ಸಲ ಚಲನಚಿತ್ರ ಅಕಾ­ಡೆಮಿ ಇದನ್ನು ಸಂಘಟಿಸಿತ್ತು. ಆದರೆ ಈ ಬಾರಿ ‘ಬೆಳ್ಳಿ ಮಂಡಲ–ಗಾನಸುಧಾ’ ಸಾಂಸ್ಕೃತಿಕ ತಂಡಕ್ಕೆ ನಿರ್ವಹಣೆ ಉಸ್ತು­ವಾರಿ ಒಪ್ಪಿಸಲಾಗಿದೆ.

ಚಿತ್ರ ಪ್ರದ­ರ್ಶನಕ್ಕೆ ಸುಮಾರು ಅರ್ಧ­ಗಂಟೆ ಮುನ್ನ ಪ್ರಸಿದ್ಧ ಗಾಯಕ ಗಾಯಕಿ­ಯರು ಸಂಗೀತವನ್ನು ಉಣ­ಬಡಿ­ಸು­ತ್ತಾರೆ. ಶಾಸ್ತ್ರೀಯ ಸಂಗೀತ, ಭರತ ನಾಟ್ಯ, ಕಳರಿಪಯಟ್ಟು ಕಲೆ­ ಪ್ರದ­ರ್ಶಿಸಲಾಗಿದೆ. ಸ್ವಾತಂತ್ರ್ಯ ಉದ್ಯಾನದ ಸುತ್ತ ವಾಯು ವಿಹಾರಕ್ಕೆ ಬರುವ­ವರು, ಸುತ್ತಲಿನ ನಾಗರಿಕರು, ಪರ­ಊರುಗಳಿಂದ ನಗರಕ್ಕೆ ಕೆಲಸ ಕಾರ್ಯ ನಿಮಿತ್ತ ಬಂದವರು ಪ್ರೇಕ್ಷಕರು.

‘ಬಯಲಿನಲ್ಲಿ ಚಿತ್ರಗಳನ್ನು ಪ್ರದ­ರ್ಶಿಸು­ತ್ತಿದ್ದರೂ ಯಾವುದೇ ಗದ್ದಲ­ಗಳಿಲ್ಲ. ವಾಯುವಿಹಾರ ಮುಗಿಸಿ ಸ್ವಲ್ಪ ಹೊತ್ತು ಸಿನಿಮಾ ವೀಕ್ಷಿಸುತ್ತೇವೆ. ಚಳಿ ಹೆಚ್ಚುವ ವೇಳೆಗೆ ಪ್ರದರ್ಶನ ಕೊನೆ­ಗೊಳ್ಳು­ವುದರಿಂದ ಕಷ್ಟವೇನೂ ಆಗುವು­ದಿಲ್ಲ. ಇಲ್ಲಿ ಪ್ರದರ್ಶನ ಆಯೋಜಿಸಿ­ದಾಗಲೇ ನಮಗೆ ನಗರದಲ್ಲಿ ಚಿತ್ರೋತ್ಸವ ನಡೆಯುತ್ತಿರುವುದು ತಿಳಿದಿದ್ದು’ ಎನ್ನುತ್ತಾರೆ ಶೇಷಾದ್ರಿಪುರಂ ನಿವಾಸಿ ಕೃಷ್ಣಮೂರ್ತಿ. ಬಯಲು ಚಿತ್ರೋತ್ಸವದಲ್ಲಿ ಈ ಬಾರಿ ಪ್ರದರ್ಶಿಸ­ಲಾಗುತ್ತಿರುವುದು ಹಾಸ್ಯ ಚಿತ್ರಗಳು ಎನ್ನುವುದು ವಿಶೇಷ.

‘ಚಾರ್ಲಿ ಚಾಪ್ಲಿನ್‌’ ‘ಎಕ್ಸ್‌ಪಿರಿಮೆಂಟ್‌ ವಿತ್‌ ಮ್ಯೂಸಿಕ್ ಪ್ರಿನ್ಸ್ ಅಚ್ಮದ್‌’, ‘ಉಲ್ಟಾ ಪಲ್ಟಾ’ ಈಗಾಗಲೇ ಪ್ರದರ್ಶನ­ಗೊಂಡಿವೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾದ ಎಂ.ಎಸ್‌. ಮೂರ್ತಿ, ಗಾಯಕ ಅಪ್ಪಗೆರೆ ತಿಮ್ಮರಾಜು ಸೇರಿಂದತೆ ಹಲವು ಗಾಯಕರು ಕಾರ್ಯಕ್ರಮ ನೀಡಿದ್ದಾರೆ.

‘ಚಲನಚಿತ್ರ ಅಕಾಡೆಮಿ ಆಹ್ವಾನ ಒಪ್ಪಿ ಈ ಜವಾಬ್ದಾರಿ ವಹಿಸಿ­ಕೊಂಡಿ­ದ್ದೇವೆ. ಅವರೇ ಮೂಲಸೌಲಭ್ಯ ಕಲ್ಪಿಸಿ­ಕೊಡುತ್ತಾರೆ. ನಮ್ಮ ಜೇಬಿನಿಂದ ಯಾವುದೇ ವೆಚ್ಚ ಮಾಡಿಲ್ಲ. ಹಣ­ವನ್ನೂ ನಾವು ತೆಗೆದುಕೊಂಡಿಲ್ಲ. ಸ್ಥಳೀಯ ಪ್ರತಿಭೆಗಳಿಗೆ ಬಯಲು ಚಿತ್ರೋತ್ಸವ ಒಂದು ವೇದಿಕೆಯೂ ಆಗಿದೆ. ಎರಡು ನಿಮಿಷಗಳ ಕಾಲ ಅತಿಥಿಗಳು ಮಾತನಾಡಲು ಅವಕಾಶ ನೀಡಲಾಗುತ್ತದೆ.

ಆರಂಭದಲ್ಲಿ ಜನರು ಬರುತ್ತಾರೆಯೇ ಎನ್ನುವ ಭಯವಿತ್ತು. ನಮ್ಮ ಸಂಸ್ಥೆಯ ಸದಸ್ಯರು ನಿತ್ಯ ಬೆಳಿಗ್ಗೆ ಲಾಲ್‌ಬಾಗ್, ಶೇಷಾದ್ರಿಪುರಂ, ಶ್ರೀರಾಂಪುರ ಸುತ್ತಮುತ್ತಲ ಪ್ರದೇಶ ಗಳಲ್ಲಿ ಪ್ರಚಾರ ನಡೆಸಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಜನರು ಬರುತ್ತಿದ್ದಾರೆ’ ಎನ್ನುತ್ತಾರೆ ಬೆಳ್ಳಿ ಮಂಡಲದ ಮುಖ್ಯಸ್ಥರಾದ ಉಮಾ ಶಂಕರ್‌.

ಪ್ರತಿ ವರ್ಷ ನಡೆಯಲಿದೆ…
ಸಿನಿಮೋತ್ಸವಕ್ಕೆ ಬಯಲು ಚಿತ್ರೋತ್ಸವ ಒಂದು ವಿಶಿಷ್ಟವಾದ ಹೆಮ್ಮೆ ಎಂದರೆ ತಪ್ಪಲ್ಲ. ಇನ್ನು ಮುಂದೆ ಪ್ರತಿ ವರ್ಷದ ಚಿತ್ರೋತ್ಸವದಲ್ಲೂ ಇದನ್ನು ಸಂಘಟಿಸ ಲಾಗುವುದು. ಮತ್ತಷ್ಟು ಹೊಸ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶ ಮಾಡಿ ಕೊಡಲಾಗುವುದು. ಅಂತರರಾಷ್ಟ್ರೀಯ ಚಿತ್ರಗಳ ಡಿವಿಡಿಗಳನ್ನು ಎರಡು ಮೂರು ಬಾರಿ ಮಾತ್ರ ಪ್ರದರ್ಶಿಸಲು ಅವಕಾಶ ಇರುತ್ತದೆ. ಆ ಕಾರಣಕ್ಕೆ ಇಲ್ಲಿ ಕೆಲವು ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಾಧ್ಯವಾಗುತ್ತಿಲ್ಲ.

–ಎಸ್‌.ವಿ. ರಾಜೇಂದ್ರಸಿಂಗ್ ಬಾಬು,
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

Write A Comment