ಕರ್ನಾಟಕ

ಮೊಬೈಲ್ ಒನ್ ಸೇವೆಗೆ ರಾಷ್ಟ್ರಪತಿ ಚಾಲನೆ: ಕರ್ನಾಟಕ ರಾಜ್ಯ ವಿಶ್ವದಲ್ಲಿಯೇ ಪ್ರಥಮ

Pinterest LinkedIn Tumblr

---

ಬೆಂಗಳೂರು, ಡಿ.8: ಸರಕಾರಿ ಹಾಗೂ ಖಾಸಗಿ ವಲಯಗಳ ಸೇವೆಗಳು ಪ್ರತಿಯೊಬ್ಬರಿಗೂ ಸುಲಲಿತವಾಗಿ ತಲುಪಲಿಯೆಂಬ ದೃಷ್ಟಿಯಿಂದ ಮೊಬೈಲ್ ಒನ್ ಯೋಜನೆಯನ್ನು ರಾಜ್ಯಸರಕಾರ ಜಾರಿಗೆ ತಂದಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ಮೊಬೈಲ್ ಒನ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯ ಈ ಹಿಂದೆ ಇ- ಭೂಮಿ ಯೋಜನೆ, ಕಾವೇರಿ ಯೋಜನೆಯಂತಹ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿಯಾಗಿ ರಾಜ್ಯ ಸರಕಾರ ದೇಶದಲ್ಲಿಯೇ ಪ್ರಥಮ ಬಾರಿಗೆ ಮೊಬೈಲ್ ಒನ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಪ್ರಣವ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಜನರು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದರೆ ರಾಜ್ಯ ಅಭಿವೃದ್ಧಿಯ ಕಡೆಗೆ ಮುಖ ಮಾಡಿದೆ ಎಂದು ಹೇಳುತ್ತೇವೆ. ರಾಜ್ಯದ ಜನರು ಸಂತೃಪ್ತಿ ಹಾಗೂ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರೆ ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎನ್ನುತ್ತೇವೆ. ರಾಜ್ಯ ಸರಕಾರ ಈ ಎರಡೂ ಸಂಗತಿಗಳನ್ನು ಮನದಲ್ಲಿಟ್ಟುಕೊಂಡು ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ದೇಶದ 106 ಕೋಟಿ ಜನಸಂಖ್ಯೆಯಲ್ಲಿ 93 ಕೋಟಿ ಜನ ಮೊಬೈಲ್ ಬಳಕೆದಾರರಿದ್ದು, ಅವರಲ್ಲಿ ಶೇ.75ರಷ್ಟು ಜನ ಹಳ್ಳಿ ಪ್ರದೇಶದಲ್ಲಿದ್ದಾರೆ. ಹೀಗಾಗಿ, ರಾಜ್ಯ ಸರಕಾರ ದೂರದೃಷ್ಟಿಯಿಂದ ಮೊಬೈಲ್ ಒನ್ ಸೇವೆಯಲ್ಲಿಯೇ 4 ಸಾವಿರಕ್ಕೂ ಹೆಚ್ಚು ಸೇವೆಗಳು ರಾಜ್ಯದ ವಿವಿಧ ಸರಕಾರಿ ಇಲಾಖೆಗಳು ಹಾಗೂ ಖಾಸಗಿ ವಲಯಗಳಿಂದ ಒದಗುವಂತೆ ಮಾಡಿದೆ ಎಂದು ಪ್ರಣವ್ ತಿಳಿಸಿದರು.

Write A Comment