ಕೇಪ್‌ಟೌನ್, ಡಿ.8: ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಕ್ರಿಕೆಟ್ ತಂಡ ನಾಲ್ಕನೆ ಆವೃತ್ತಿಯ ಅಂಧರ ವಿಶ್ವಕಪನ್ನು ಜಯಿಸಿದೆ.
ರವಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 390 ರನ್ ಚೇಸಿಂಗ್ ಮಾಡಿದ್ದ ಭಾರತ 5 ವಿಕೆಟ್ ನಷ್ಟದಲ್ಲಿ ಇನ್ನು 2 ಎಸೆತಗಳು ಬಾಕಿಯಿರುವಂತೆಯೇ 392 ರನ್ ಗಳಿಸಿ ಗೆಲುವಿನ ದಡ ಸೇರಿತ್ತು. ಭಾರತ ತಂಡ ಪಾಕ್ ವಿರುದ್ಧದ ಲೀಗ್ ಪಂದ್ಯ ಹೊರತಾಗಿ ಉಳಿದೆಲ್ಲ ಪಂದ್ಯವನ್ನು ಗೆದ್ದುಕೊಂಡಿತ್ತು. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನವಲ್ಲದೆ ಶ್ರೀಲಂಕಾ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ಆತಿಥೇಯ ದಕ್ಷಿಣ ಆಫ್ರಿಕ ತಂಡಗಳು ಪಾಲ್ಗೊಂಡಿದ್ದವು.
ಪಾಕ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದರೆ, ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಫೈನಲ್‌ಗೆ ತಲುಪಿತ್ತು. ‘‘ಬಿಸಿಸಿಐ ಪ್ರೋತ್ಸಾಹದ ಕೊರತೆಯ ನಡುವೆಯೂ ನಮ್ಮ ತಂಡ ವಿಶ್ವಕಪನ್ನು ಜಯಿಸಿದೆ. ಭಾರತದಲ್ಲಿ ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿದ್ದರೂ ಬಿಸಿಸಿಐ ಈ ತನಕ ಅಂಧರ ಕ್ರಿಕೆಟಗರನ್ನು ಬೆಂಬಲಿಸಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಣದ ಅಭಾವವಿದ್ದರೂ ಅಂಧರ ಕ್ರಿಕೆಟಿಗರಿಗೆ ಬೆಂಬಲ ನೀಡುವುದಲ್ಲದೆ ಸಂಭಾವನೆ ನೀಡುತ್ತಿದೆ. ಕೇಂದ್ರ ಸರಕಾರ 25 ಲಕ್ಷ ರೂ. ನೆರವು ನೀಡಿದ್ದರಿಂದ ದಕ್ಷಿಣ ಆಫ್ರಿಕಕ್ಕೆ ಬರಲು ಸಾಧ್ಯವಾಯಿತು’’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ, ಕರ್ನಾಟಕದ ಶೇಖರ್ ನಾಯಕ್ ಹೇಳಿದ್ದಾರೆ.
