ಮನೋರಂಜನೆ

ಸಿನಿಮೋತ್ಸವ: ಆಧುನಿಕ ಬದುಕಿಗೆ ಪ್ರತಿಕ್ರಿಯಿಸಿದ ಎರಡು ಸಿನೆಮಾಗಳು

Pinterest LinkedIn Tumblr

THE-BALLAD-OF-POOR-JEAN

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನೆಮಾಗಳು, ಈ ಮಾಧ್ಯಮದ ಸಾಧ್ಯತೆಗಳನ್ನು ಜನರಿಗೆ ಮತ್ತು ಸಿನಿಮಾಸಕ್ತರಿಗೆ ಅರಿವು ಮೂಡಿಸಲು ಯಶಸ್ವಿಯಾಗಿದೆ. ಜಾಗತಿಕರಣದ ಆಧುನಿಕ ಧಾವಂತ ಬದುಕಿನ ಚಿತ್ರಣವನ್ನೂ, ಅದರಿಂದಾಗುವ ದುರಂತವನ್ನು ಈ ಎರಡು ಸಿನೆಮಾಗಳು ವಿಶಿಷ್ಟವಾಗಿ ಪ್ರತಿನಿಧಿಸುತ್ತವೆ.

ಟೂ ಡೇಸ್ ಒನ್ ನೈಟ್: ಬೆಲ್ಜಿಯಮ್ ದೇಶದಲ್ಲಿ ನಡೆಯುವ ಈ ಫ್ರೆಂಚ್ ಸಿನೆಮಾದಲ್ಲಿ, ಸಾಂದ್ರಾ ಎಂಬ ಮಧ್ಯ ವಯಸ್ಕೆ ಮತ್ತು ಎರಡು ಮಕ್ಕಳ ತಾಯಿ ಅನಾರೋಗ್ಯದ ಕಾರಣ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ರಜೆ ಪಡೆದಿರುತ್ತಾಳೆ. ಈ ವೇಳೆಯಲ್ಲಿ ಅಲ್ಲಿನ ತನ್ನ ಸಹೋದ್ಯೋಗಿಗಳಿಗೆ ಬೋನಸ್ ಪಡೆಯಲು, ಸಾಂದ್ರಳನ್ನು ಕೆಲಸದಿಂದ ವಜಾ ಮಾಡುವಂತೆ ಮತ ಹಾಕಲು ಒತ್ತಡ ಬರುತ್ತದೆ. ೧೬ ಜನರಲ್ಲಿ ೧೩ ಜನ ತಮಗೆ ಬೋನಸ್ ಬೇಕೆಂದೂ ಅದರಿಂದ ಸಾಂದ್ರ ಕೆಲಸ ಕಳೆದುಕೊಳ್ಳಬಹುದಾಗಿ ಮತ ಹಾಕುತ್ತಾರೆ. ಈ ವಿಷಯ ತಿಳಿದು ಅತೀವ ದುಃಖಕ್ಕೊಳಗಾಗುವ ಸಾಂದ್ರ ತನ್ನ ಮೇಲ್ವಿಚಾರಕನನ್ನು ಕಂಡು ಮುಂದಿನ ಸೋಮವಾರ ಮತ್ತೊಮ್ಮೆ ಮತ ಚಲಾಯಿಸಲು ಅವಕಾಶ ಮಾಡಿಕೊಡುವಂತೆ ಒಪ್ಪಿಗೆ ಪಡೆಯುತ್ತಾಳೆ. ಈಗ ಉಳಿದ ಎರಡು ದಿನಗಳಲ್ಲಿ ತನ್ನ ಸಹೋದ್ಯೋಗಿಗಳನ್ನು ಭೇಟಿ ಮಾಡಿ ತಾನು ಕೆಲಸ ಕಳೆದುಕೊಳ್ಳದಂತೆ ಮತ ಹಾಕಲು ಪ್ರತಿಯೊಬ್ಬರನ್ನೂ ಒಪ್ಪಿಸಲು ಪ್ರಾರಂಭಿಸುತ್ತಾಳೆ. ಈ ಕಾರ್ಯದಲ್ಲಿ ಬೆರಳಣಿಕೆಯಷ್ಟೆ ಸಹೋದ್ಯೋಗಿಗಳು ಸುಲಭವಾಗಿ ಇದಕ್ಕೆ ಒಪ್ಪಿಕೊಳ್ಳುತ್ತಾರೆ. ಬಹುತೇಕ ಸಹೋದ್ಯೋಗಿಗಳು ತಮ್ಮ ಕಷ್ಟಗಳನ್ನು ವಿವರಿಸಿ, ತಮ್ಮ ಜೀವನಕ್ಕೆ ಹಣದ ಅವಶ್ಯಕತೆ ಹಾಗು ೧೦೦೦ ಯೂರೋ ಬೋನಸ್ ಎಷ್ಟು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ.

ಇದು ಮನುಷ್ಯನ ಪ್ರಲೋಭನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕಿಂತ, ನೇರವಾಗಿ ಹೇಳದಿದ್ದರೂ, ಆಧುನಿಕ ಮನುಷ್ಯ ತನ್ನ ಜೀವನವನ್ನು ಹೇಗೆ ಸಂಕೀರ್ಣಗೊಳಿಸಿಕೊಳ್ಳುತ್ತಿದ್ದಾನೆ ಎಂಬುದನ್ನೂ ಬಿಂಬಿಸುತ್ತದೆ. ಸಾಂದ್ರಾ ತನ್ನ ಗಂಡ ತನಗೆ ಸಹಾಯ ಮಾಡುತ್ತಿರುವುದನ್ನೂ ಲೆಕ್ಕಿಸದೆ ಇದು ಕನಿಕರ ಮಾತ್ರ, ಪ್ರೀತಿಯಲ್ಲ ಎಂದು  ಅವರು ನಾಲ್ಕು ತಿಂಗಳುಗಳಿಂದ ಲೈಂಗಿಕ ಸಂಪರ್ಕದಿಂದ ದೂರವಿರುವುದನ್ನು ನೆನಪಿಸುವ ಸಂಭಾಷಣೆ ಆಧುನಿಕ ಧಾವಂತದಲ್ಲಿ ಸಣ್ಣ ಸಣ್ಣ ಮೂಲಭೂತ ಅಗತ್ಯಗಳನ್ನು ಮರೆಯುವುದನ್ನು ಅತಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ತಮ್ಮ ಅಗತ್ಯಕ್ಕಿಂತ ಹೆಚ್ಚಿನದನ್ನು ಪಡೆಯಲು-ತಮ್ಮ ಗಳಿಕೆಗಿಂತ ಹೆಚ್ಚಿನದನ್ನು ವ್ಯಯಿಸಲು ಜೀವನದಲ್ಲಿ ಹೆಣಗಾಡುವ ಇಂದಿನ ಜೀವನಕ್ಕೆ ಸಿನೆಮಾ ಕನ್ನಡಿ ಹಿಡಿದಂತಿದೆ. ಕೊನೆಗೂ ತನ್ನ ಗಂಡನ ಸಹಾಯದಿಂದ ೧೬ ಸಹೋದ್ಯೋಗಿಗಳಲ್ಲಿ ೮ ಜನರನ್ನು ತನ್ನ ಪರವಾಗಿ ಮತ ಚಲಾಯಿಸಲು ಒಪ್ಪಿಸಲು ಸಾಂದ್ರಾಗೆ ಸಾಧ್ಯವಾಗುತ್ತದೆ.

ಡಾರ್ಡೆನ್ನೆ ಸಹೋದರರು ನಿರ್ದೇಶಿಸಿರುವ ಈ ಚಲನಚಿತ್ರದಲ್ಲಿ ಮಾರಿಯನ್ ಕಾಟಿಲ್ಲರ್ಡ್ ಅವರ ಉತ್ತಮ ಅಭಿನಯ ಇದೆ. ಈ ಸಿನೆಮಾ ಈಗಾಗಲೇ ಸಿಡ್ನಿ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ್ದು, ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ದ ಬ್ಯಾಲೆಡ್ ಆಫ್ ಪೂರ್ ಜಾನ್: ಮುಂದುವರೆಯುತ್ತಿರುವ ದೇಶವಾದ ಬ್ರೆಜಿಲ್ ನಲ್ಲಿ ನಡೆಯುವ ಈ ಕಥೆ ಕೂಡ ಆಧುನಿಕ ಜೀವನ, ಪಶ್ಚಿಮ ದೇಶಗಳ ಅನುಕರಣೆಗೆ ಪ್ರತಿಕ್ರಿಯೆಯಾಗಿ ಹೆಣೆಯಲಾಗಿದೆ. ಬ್ರೆಜಿಲ್ ರಾಜಧಾನಿ ರಿಯೋ ಡಿ ಜೆನೇರಿಯಾದ ವೈಭವಪೂರ್ಣ ಮನೆಯಲ್ಲಿ ಒಂದು ಕುಟುಂಬದ ವಾಸ. ಅಲ್ಲಿ ಜಾನ್ ಅತಿ ದುಬಾರಿ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ. ಮನೆಯಲ್ಲೆಲ್ಲಾ ಆಳು ಕಾಳುಗಳು. ಆದ್ರೆ ಮನೆಯಲ್ಲಿ ಜಾನ್ ಮೇಲೆ ವಿಪರೀತ ಹಿಡಿತ. ಮನೆಯ ಸುರಕ್ಷಿತೆಗೆ ಇಲ್ಲಿಲ್ಲದ ಭಯ. ಹೀಗಿರುವಾಗ ಮನೆಯ ಒಡೆಯನಿಗೆ ಮೈತುಂಬಾ ಸಾಲವಿರುವುದು ಗೊತ್ತಾಗುತ್ತದೆ. ಆಗ ಮಗನನ್ನು ಬಸ್ಸಿನಲ್ಲಿ ಕಳುಹಿಸುವುದು, ಮನೆಯಲ್ಲಿ ಕೆಲಸದವರ ಕಡಿತ ಹೀಗೆ ಯಾವುದೇ ಉಳಿತಾಯದಿಂದಲೂ ತೊಂದರೆಗಳು ಸುಲಭವಾಗಿ ಪರಿಹಾರವಾಗುವುದಿಲ್ಲ. ಇಂತಹ ಸಮಯದಲ್ಲಿ ಜಾನ್ ಜೊತೆಗೆ ಒಬ್ಬಳು ಕಪ್ಪು ಹುಡುಗಿಯ ಸಾಂಗತ್ಯದಲ್ಲಿ ಪ್ರೀತಿ.ಅರಳುತ್ತದೆ. ಅಲ್ಲಿ ತನ್ನ ಸಂತಸವನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾನೆ.

ಮೀಸಲಾತಿ, ಜನಾಂಗ ಬೇಧ ಇತ್ಯಾದಿ ಸಾಮಾಜಿಕ ವಿಷಯಗಳನ್ನು ಸಿನೆಮಾ ಚರ್ಚೆ ಮಾಡಿದರೂ ಮತ್ತೆ ತಮ್ಮ ಅಗತ್ಯ ಮತ್ತು ಗಳಿಕೆಗೆ ವ್ಯತಿರಿಕ್ತವಾದ ಜೀವನಕ್ಕೆ ತನ್ನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಆಧುನಿಕ ಜೀವನದ ಧಾವಂತೆತೆಯನ್ನು ಸಿನಿಮಾ ಚಿತ್ರಿಸುತ್ತದೆ. ಕೊನೆಗೆ ಜಾನ್ ತನ್ನ ಮನೆಯ ಮಾಜಿ ನೌಕರರ ಸಂಘದಲ್ಲಿ ಕಾಲ ಕಳೆದು ನೆಮ್ಮದಿ ಕಂಡುಕೊಳ್ಳುವ ದೃಶ್ಯದಿಂದ ಮುಕ್ತಾಯವಾಗುವೆ ಸಿನೆಮಾ ಇಂದಿನ ಜೀವನದ ಪ್ರತಿಕ್ರಿಯೆಯಂತಿದೆ.

Write A Comment