ಸಂಬಾ (ಜಮ್ಮು-ಕಾಶ್ಮೀರ), ಡಿ.8: ಎಕೆ-47 ರೈಫಲ್ಗಿಂತ ಬೆರಳೊತ್ತುವ ಎವಿಎಂ ಮತದಾನ ಯಂತ್ರ ಹೆಚ್ಚು ಪ್ರಭಾವಶಾಲಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ನಿರ್ಣಾಯಕವಾದ ಜನಾದೇಶವನ್ನು ಒದಗಿಸುವಂತೆ ರಾಜ್ಯದ ಜನತೆಯನ್ನು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ನೆಲೆ ಕಳೆದುಕೊಂಡಿರುವ ಜನರ ಪುನರ್ವಸತಿ ರಾಷ್ಟ್ರೀಯ ಜವಾಬ್ದಾರಿಯಾಗಿದೆ. ತಮ್ಮ ಸರಕಾರವು ನೆಲೆ ಕಳೆದುಕೊಂಡವರ ಪುನರ್ವಸತಿಗೆ ಕ್ರಮಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮಂಗಳವಾರ ಮೂರನೆ ಹಂತದ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಅವರು ಸಾಂಬಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಹಾದಿ ತಪ್ಪಿರುವ ಯುವಕರು ಈಗ ಎಕೆ-47 ರೈಫಲ್ನ ಭಾರವನ್ನು ಅನುಭವಿಸುತ್ತಿದ್ದಾರೆ. ಜೊತೆಗೆ ಮೊಬೈಲ್ ಫೋನ್ಗಳಲ್ಲಿನ ಆಂಡ್ರಾಯ್ಡಾ-1ಗಾಗಿ ಹಪಹಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ‘ವಂಶದ ಆಡಳಿತ’ವನ್ನು ತರಾಟೆ ತೆಗೆದುಕೊಂಡ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸುಭದ್ರ ಆಡಳಿತದ ಅವಶ್ಯಕತೆ ಇದೆ ಎಂದರು.
‘ನೀವು ಅಪ್ಪ ಮತ್ತು ಮಗನ ಆಡಳಿತವನ್ನು ನೋಡಿದ್ದೀರಿ. ನೀವು ತಂದೆ ಮತ್ತು ಮಗಳ ಆಳ್ವಿಕೆಯನ್ನು ಕಂಡಿದ್ದೀರಿ. ಅವರು ನಿಮಗೆ ಏನಾದರೂ ಒಳ್ಳೆಯದು ಮಾಡಿದ್ದಾರೆಯೇ?’ ಎಂದು ಅವರು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಸರಕಾರಗಳ ಹೆಸರನ್ನು ಪ್ರಸ್ತಾಪಿಸದೇ ಹೇಳಿದರು.
ರಾಜ್ಯದಲ್ಲಿ ಬಹುಮತದ ಸರಕಾರ ಮತ್ತು ಬಿಜೆಪಿ ಸರಕಾರದ ಅಗತ್ಯವಿದೆ. ರಾಜ್ಯದ ಯುವಕರಿಗೆ ಉದ್ಯೋಗ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಬಿಜೆಪಿ ಸರಕಾರದಿಂದ ಮಾತ್ರ ಇದು ಸಾಧ್ಯ ಎಂದು ಅವರು ತಿಳಿಸಿದರು.
