ಮನೋರಂಜನೆ

ಸ್ನೇಹ–ಸಂಘರ್ಷದ ‘ಪ್ರಕೃತಿ’ ಅನಂತಮೂರ್ತಿ ಕಥೆ ಆಧರಿಸಿದ ಚಿತ್ರ

Pinterest LinkedIn Tumblr

psmec04prakruti

ಮಲೆನಾಡಿನ ಹವ್ಯಕ ಕುಟುಂಬವೊಂದನ್ನು ಕೇಂದ್ರವಾಗಿಟ್ಟುಕೊಂಡು ಆಧುನಿಕತೆ ಮತ್ತು ಸಂಪ್ರದಾಯದ ನಡುವಿನ ಸಂಘರ್ಷವನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುವ ಚಿತ್ರ ‘ಪ್ರಕೃತಿ’. ಯು.ಆರ್‌. ಅನಂತಮೂರ್ತಿ ಅವರ ಪ್ರಸಿದ್ಧ ಕಥೆ ಆಧರಿಸಿದ ಚಿತ್ರವನ್ನು ಪಂಚಾಕ್ಷರಿ ನಿರ್ದೇಶಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಹಿನ್ನೆಲೆಯ ಈ ಚಿತ್ರಕ್ಕೆ 2013ನೇ ಸಾಲಿನ ಅತ್ಯುತ್ತಮ ಚಿತ್ರಕಥೆ (ರೂಪಾಂತರ) ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಂದಿದೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಗಳ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಕ್ಕೂ ಆಯ್ಕೆಯಾಗಿದೆ.

‘ಪ್ರಕೃತಿ’ ಹಲವು ಸಂಘರ್ಷಗಳ ಕಥನ. ಮಾನವ ಸಂಬಂಧಗಳ ನಡುವಿನ ವೈರುಧ್ಯ, ಆಧುನಿಕತೆ ಮತ್ತು ಸಂಪ್ರದಾಯದ ನಡುವಿನ ತಿಕ್ಕಾಟ, ಮನುಷ್ಯ ನಂಬಿಕೆ ಮತ್ತು ನಿಸರ್ಗ ವಾಸ್ತವಗಳ ಘರ್ಷಣೆ– ಹೀಗೆ ಹಲವು ನೆಲೆಗಳ ಸಂಘರ್ಷವನ್ನು ಚಿತ್ರ ಕಟ್ಟಿಕೊಡುತ್ತದೆ. ಇದು ಸರಿ – ಇದು ತಪ್ಪು ಎಂಬ ಸರಳ ಗ್ರಹಿಕೆಗಳಿಗೆ ನಿಲುಕದ ನೆಲೆಯಲ್ಲಿ ಈ ವೈರುಧ್ಯಗಳನ್ನು ಪ್ರೇಕ್ಷಕನಿಗೆ ದಾಟಿಸುವುದು ಚಿತ್ರದ ಹೆಚ್ಚುಗಾರಿಕೆ.

ಇಲ್ಲಿನ ಸಂಕಪ್ಪಯ್ಯನ ಕುಟುಂಬದ ಸ್ಥಿತಿ–ಗತಿ, ಆತನ ಒಳತೋಟಿಗಳು ಅಂದಿನ ಪರಿಸರ ಮತ್ತು ಪರಿಸ್ಥಿತಿಗಳ ದರ್ಶನ ಮಾಡಿಸುತ್ತದೆ. ಅಷ್ಟೇ ಅಲ್ಲದೆ ಬದುಕು ಮತ್ತು ಪ್ರಕೃತಿಯ ಜತೆಗಿನ ಮಾನವ ಸಂಘರ್ಷವನ್ನು ಅನಾವರಣಗೊಳಿಸುವ ಮೂಲಕ ಸಮಕಾಲೀನ ಸಂದರ್ಭದಲ್ಲೂ ಚಿಂತನೆಗೆ ದೂಡುತ್ತದೆ.

ಸಂಕಪ್ಪಯ್ಯ ಒಂದು ಕಾಲಕ್ಕೆ ಜಿಲ್ಲಾಧಿಕಾರಿಗಳಿಂದ ಒಳ್ಳೆಯ ರೈತ ಎಂದು ಪದಕವನ್ನು ಪಡೆದುಕೊಂಡ ರೈತ. ತಾನು ನಂಬಿದ ಭೂಮಿ ತನಗೆ ಎಲ್ಲವನ್ನೂ ಕೊಡುತ್ತಾಳೆ ಎಂಬುದು ಅವನ ಅಚಲ ನಂಬುಗೆ. ಅದೇ ಹಟದಲ್ಲಿ ಪ್ರಕೃತಿ ನಿಯಮದ ವಿರುದ್ಧ ಮಲೆನಾಡಿನಲ್ಲಿ ಕಿತ್ತಲೆ ಬೆಳೆಯಲು ಹೊರಡುತ್ತಾನೆ. ಬ್ರಾಹ್ಮಣನಾಗಿ ಜನಿಸಿದವನು ಅನ್ನವನ್ನು ಮಾರಾಟ ಮಾಡುವುದು (ಹೋಟೆಲ್‌) ಅಕ್ಷಮ್ಯ ಎಂಬ ಸಂಕಪ್ಪಯ್ಯನ ನಂಬಿಕೆಗೆ ವಿರುದ್ಧವಾಗಿ ಪೇಟೆಗೆ ಹೋಗಿ ಹೋಟೆಲ್‌ ಇಟ್ಟು ಹಣ ಮಾಡಬೇಕು ಎಂಬ ಆಸೆಯ ಮಗ.

ಮದುವೆಯಾಗಿ ಕೆಲವೇ ದಿನಗಳಲ್ಲಿ ವಿಧವೆಯಾಗಿ ಮನೆಗೆ ಹಿಂತಿರುಗಿದ ಮಗಳು ಲಕ್ಷ್ಮಿ. ಹೀಗೆ ಸಂಕಪ್ಪಯ್ಯನ ಕುಟುಂಬವೇ ಹಲವು ವೈರುಧ್ಯಗಳ ಒಡಲು. ಇದರೊಟ್ಟಿಗೆ ಸ್ವಾತಂತ್ರ್ಯ ಚಳವಳಿ ಪರಿ–ಮಿತಿಗಳು, ಅಭಿವೃದ್ಧಿಯ ಪರಿಕಲ್ಪನೆಗಳು ಗ್ರಾಮೀಣ ಭಾರತವನ್ನು ಪ್ರವೇಶಿಸುವ ಬಗೆ. ದೈವಪ್ರಭೆಯ ಮರೆಯಲ್ಲಿ ಮನುಷ್ಯ ತನ್ನ ದೈನಂದಿನ ಜಗತ್ತಿನ ಕ್ಷುದ್ರ ಸಂಕಟಗಳನ್ನು ಮೀರಲು ಯತ್ನಿಸುವ ರೀತಿ, ದೈವನಂಬಿಕೆ ಅತಿಯಲ್ಲಿ ‘ಅಂಧ’ವಾಗಿ ಮನುಷ್ಯ ಜೀವಕ್ಕೇ ಎರವಾಗುವ ದುರಂತ.. ಹೀಗೆ ಚಿಂತನೆಗೆ ಹಚ್ಚುವ ಹಲವು ಎಳೆಗಳು ಈ ಸಿನಿಮಾದಲ್ಲಿವೆ.

‘ಪ್ರಕೃತಿ ಜತೆ ಹೊಂದಿಕೊಂಡು ಬದುಕುವ ಇಚ್ಛೆ ಇಟ್ಟುಕೊಂಡೇ ಮನುಷ್ಯ ಅದೇ ಪ್ರಕೃತಿಯನ್ನು ಗೆಲ್ಲುವ ಬಯಕೆ ವ್ಯಕ್ತಪಡಿಸುತ್ತಾನೆ. ಈ ಹಿಂದೆ ತನ್ನವರು ಪ್ರಕೃತಿಯನ್ನು ಗೆದ್ದ ಕಥೆಗಳು ಅಥವಾ  ದೃಷ್ಟಾಂತಗಳು ಸ್ಫೂರ್ತಿಯಾಗಿರುತ್ತವೆ’ ಎನ್ನುವುದನ್ನು ಸಂಕಪ್ಪಯ್ಯನ ಮೂಲಕ ಕಾಣುತ್ತೇವೆ.

ರವಿ ಅವರ ಛಾಯಾಗ್ರಾಹಣ ‘ಪ್ರಕೃತಿ’ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಮಲೆನಾಡಿನ ಬಿಳಿಹುಲ್ಲಿನ ಗುಡ್ಡಗಳು, ಕೆಸುವಿನ ಗಿಡ ಬೆಳೆದ ಗೊಬ್ಬರ ಗುಂಡಿಗಳು, ಅಡಿಕೆ ಮರದಿಂದ ಕಟ್ಟಿದ ಸಂಕ, ಕಚ್ಚಾರಸ್ತೆ, ಮಣ್ಣಿನ ಮನೆ, ಹಂಡೆಯ ಸ್ನಾನ ಎಲ್ಲವೂ ಅವರ ಕ್ಯಾಮೆರಾ ಕಣ್ಣಿನಲ್ಲಿ ಶ್ರೀಮಂತವಾಗಿ ಮೂಡಿಬಂದಿದೆ. ಇತ್ತೀಚೆಗೆ ನಡೆದ ಮೊದಲ ಪ್ರದರ್ಶನದಲ್ಲಿ ‘ಪ್ರಕೃತಿ’ಗೆ ಮುಕ್ತಕಂಠದ ಪ್ರಶಂಸೆ ಸಿಕ್ಕಿತ್ತು.

ಈಚೆಗೆ ಆಯ್ದ ವೀಕ್ಷಕರಿಗೆಂದು ‘ಪ್ರಕೃತಿ’ ಚಿತ್ರದ ಪ್ರದರ್ಶನ ನಡೆಯಿತು. ಚಿತ್ರ ನೋಡಿದ ನಂತರ ಹಲವು ಗಣ್ಯರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ‘ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳು ಕಡಿಮೆ ಆಗುತ್ತಿವೆ ಎನ್ನುವ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಪ್ರಕೃತಿ ರೀತಿಯ ಚಿತ್ರಗಳು ಭರವಸೆಯ ಬೆಳಕಂತೆ ಕಾಣುತ್ತವೆ. ಭವಿಷ್ಯದಲ್ಲಿ ಹೊಸ ಅಲೆಯ ಚಿತ್ರಗಳ ಬಗ್ಗೆ ಭರವಸೆಯನ್ನು ಇಟ್ಟುಕೊಳ್ಳಬಹುದು’ ಎಂದರು ನಿರ್ದೇಶಕ ಪಿ. ಶೇಷಾದ್ರಿ. ಇತ್ತೀಚಿನ ಗೋವಾ ಸಿನಿಮೋತ್ಸವದಲ್ಲಿ ಪ್ರಕೃತಿಯ ಪ್ರದರ್ಶನಕ್ಕೆ ಏಕೆ ಅವಕಾಶವಾಗಲಿಲ್ಲ ಎನ್ನುವ ಬೇಸರದ ದನಿಯೂ ಅವರ ಮಾತಿನಲ್ಲಿತ್ತು.

ನಿರ್ದೇಶಕ ಗಿರೀಶ್ ಕಾಸರವಳ್ಳಿ, ಅನಂತಮೂರ್ತಿ ಅವರ ಪತ್ನಿ ಎಸ್ತರ್‌ ಅವರು ಕೂಡ ‘ಸಿನಿಮಾ ಚೆನ್ನಾಗಿ ಮೂಡಿದೆ’ ಎಂದು ಪ್ರಶಂಸಿಸಿದರು. ‘ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಅದೃಷ್ಟ’ ಎಂದರು ಸಂಭಾಷಣೆಯ ಮೇಲೆ ಕೆಲಸ ಮಾಡಿರುವ ಡಾ. ಪಿ. ಚಂದ್ರಿಕಾ. ‘ಸಿನಿಮಾ ನಿಧಾನಗತಿಯಲ್ಲಿದ್ದ ಕಾರಣ ತಮ್ಮ ಸಂಗೀತವೂ ನಿಧಾನವಾಗಿದೆ. ಆ ಕಾರಣಕ್ಕೆ ಮನಸ್ಸಿಗೆ ತಟ್ಟುತ್ತದೆ. ಸೀಮಿತ ಅವಕಾಶದಲ್ಲಿಯೇ ಉತ್ತಮ ಸಂಗೀತ ನೀಡಲಾಗಿದೆ’ ಎಂದರು ಸಂಗೀತ ನಿರ್ದೇಶಕ ರಾಮಕೃಷ್ಣ.

ಸಿನಿಮಾವೇ ನನ್ನ ಎಲ್ಲ ಮಾತುಗಳನ್ನು ಹೇಳುತ್ತದೆ ಎನ್ನುವಂತೆ ನಿರ್ದೇಶಕ ಪಂಚಾಕ್ಷರಿ ಮೌನಕ್ಕೆ ಜಾರಿದ್ದರು. ‘ಸಿನಿಮಾ ನೋಡಿದ್ದೀರಿ. ಅಭಿಪ್ರಾಯ ತಿಳಿಸಿದ್ದೀರಿ’ ಎಂದರು. ಸಂಕಪ್ಪಯ್ಯನ ಪಾತ್ರದಲ್ಲಿ ನಟಿಸಿರುವ ಅಶೋಕ್ ಕುಮಾರ್ ಚಿತ್ರಕ್ಕೆ ಬಂಡವಾಳ ತೊಡಗಿಸಿದವರಲ್ಲಿ ಒಬ್ಬರು. ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ, ಕಲಾ ನಿರ್ದೇಶಕ ಬಾದಲ್‌ ಸೇರಿದಂತೆ ಚಿತ್ರದ ನಟವರ್ಗ ಮತ್ತು ತಾಂತ್ರಿಕ ವರ್ಗ ಹಾಜರಿತ್ತು.

Write A Comment