‘ಲವ್ ಇನ್ ಮಂಡ್ಯ’ ಚಿತ್ರದಿಂದ ‘ದೇಸಿ ಚೆಲ್ವಿ’ ಬಿರುದುಗಿಟ್ಟಿಸಿದ್ದಾರೆ ನಟಿ ಸಿಂಧು ಲೋಕನಾಥ್. ಇದಕ್ಕೂ ಮುನ್ನ ಯೋಗರಾಜ ಭಟ್ಟರು ‘ಕೌಂಟರ್ ಕ್ವೀನ್’ ನಾಮಾಂಕಿತ ದಯಪಾಲಿಸಿದ್ದರು. ಅಂದಹಾಗೆ ಈ ನಟಿಮಣಿಗೆ ತರ್ಲೆ ಮಾಡುವುದೆಂದರೆ ಪಂಚಪ್ರಾಣ. ಒಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಸಿಂಧು ತರ್ಲೆ ಸ್ಟೋರಿ ಇಲ್ಲಿದೆ.
* ಗಾಂಧಿನಗರದ ನಿರ್ದೇಶಕರಿಗೆ ಇನ್ನೂ ಚಿಕ್ಕ ಹುಡುಗಿ ಹಾಗೆ ಕಾಣುತ್ತೀರಂತೆ?
ನೀನು ಸದಾ ಹೀಗೇ ಇರು ಎಂದು ದೇವರು ಹೇಳಿರಬೇಕು. ನನ್ನ ದನಿ, ಮಾತಿನ ಶೈಲಿ ಆ ರೀತಿ ಇದೆ. ನಾನು ಇರುವುದೇ ಹೀಗೆ.
* ಸಿನಿಮಾದ ಸುದ್ದಿಗೋಷ್ಠಿಗಳಲ್ಲಿ ಪಟ ಪಟ ಅರಳು ಹುರಿದಂಗೆ ಮಾತನಾಡುತ್ತೀರಿ?
ಹಾಗೇನೂ ಇಲ್ಲ. ನಾನು ತುಂಬಾ ಸೈಲೆಂಟು! ಆದರೆ ಸಿಕ್ಕಾಪಟ್ಟೆ ತರ್ಲೆ ಮಾಡುವೆ. ಸೆಟ್‌ಗಳಲ್ಲಿ ಲೈಟ್‌ಬಾಯ್, ಸೆಟ್ ಬಾಯ್ ಸೇರಿದಂತೆ ಎಲ್ಲರ ಕಾಲೆಳೆಯುವೆ.
* ‘ಡ್ರಾಮಾ’ ಚಿತ್ರದಲ್ಲಿ ಭಟ್ಟರು ಡೈಲಾಗ್ ಕೊಡದೆ ಮೂಕಿಯನ್ನಾಗಿಸಿಬಿಟ್ಟರು. ಅವರ ಜತೆಯೂ ತರ್ಲೆ ಮಾಡಿದ್ರಾ?
ಅಯ್ಯೋ ಬಿಡಿ, ಅವರಿಗೂ ನನ್ನ ಕಂಡರೆ ಭಯ. ಮಾತಿಗೆ ಇಳಿದರೆ ಇವಳು ನನ್ನ ಕಾಲು ಎಳೀತಾಳೆ ಅಂತ. ಅದಕ್ಕೆ ಮೂಗಿ ಪಾತ್ರ ಕೊಟ್ಟರು. ಆದರೂ ಕಾಲು ಎಳೆದಿದ್ದೀನಿ. ನಾನೂ ಮತ್ತು ನೀನಾಸಂ ಸತೀಶ್ ಅಲ್ಲಿ ಮಾತನಾಡುವುದಕ್ಕೆ ಭಟ್ಟರು ಅವಕಾಶ ಮಾಡಿಕೊಡಲಿಲ್ಲ. ಅದಕ್ಕೆ ‘ಲವ್ ಇನ್ ಮಂಡ್ಯ’ದಲ್ಲಿ ಸಿಕ್ಕಾಪಟ್ಟೆ ಮಾತನಾಡಿದ್ದೀವಿ. ಭಟ್ಟರು ನನಗೆ ‘ಕೌಂಟರ್ ಕ್ವೀನ್’ ಬಿರುದು ಕೊಟ್ಟಿದ್ದಾರೆ. ಇವಳು ಮಾತಿಗೆ ನಿಂತರೆ ಎದುರಿನವರು ಪ್ರತಿಕ್ರಿಯೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು!
* ‘ಲವ್ ಇನ್ ಮಂಡ್ಯ’ದಲ್ಲಿ ನೀನಾಸಂ ಸತೀಶ್‌ಗೆ ತುಂಬಾ ಕ್ವಾಟ್ಲೆ ಕೊಟ್ಟು, ‘ದೇಸಿ ಚೆಲ್ವಿ’ ಪಟ್ಟ ಗಿಟ್ಟಿಸಿಬಿಟ್ರಿ?
ನಾನು ಹಳ್ಳಿ ಪಾತ್ರಗಳಿಗೆ ಚೆನ್ನಾಗಿ ಹೊಂದಿಕೆ ಆಗುವೆ ಎಂದು ನಿರ್ದೇಶಕ ಅರಸು ಅವರಿಗೆ ಅನ್ನಿಸಿದೆಯಂತೆ. ಅದಕ್ಕೆ ‘ದೇಸಿ ಚೆಲ್ವಿ’ ಬಿರುದು ಕೊಟ್ಟಿದ್ದಾರೆ. ನನ್ನ ಪ್ರಕಾರ ನಾನು ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುತ್ತೇನೆ. ‘ಲವ್ ಇನ್ ಮಂಡ್ಯ’ದ ಒಂದು ಹಾಡಿನಲ್ಲಿ ಗ್ಲಾಮರ್ ಆಗಿಯೂ ನೋಡಬಹುದು, ತೀರ ಹಳ್ಳಿ ಹುಡುಗಿಯಾಗಿಯೂ ನೋಡಬಹುದು.
* ‘ಕಾಲೆಳೆವ ಕನ್ಯೆ’ ಎಂದು ಸಿನಿಮಾ ಮಾಡಿದರೆ ನೀವೇ ಹೀರೋಯಿನ್ ಅಂತೆ?
ಗ್ಲಾಮರ್ ಮತ್ತು ಹಳ್ಳಿ ಪಾತ್ರಗಳಲ್ಲಿ ನಟಿಸಿದ್ದೇನೆ. ಇಲ್ಲಿವರೆಗೂ ನನ್ನ ನೈಜ ವ್ಯಕ್ತಿತ್ವಕ್ಕೆ ಹತ್ತಿರದ ಪಾತ್ರ ಸಿಕ್ಕಿಲ್ಲ. ಆ ರೀತಿ ಪಾತ್ರ ಮಾಡುವ ಆಸೆ ಸಖತ್ ಇದೆ. ಯಾವುದಕ್ಕೂ ಕೇರ್ ಮಾಡದ, ಟಾಮ್‌ಬಾಯ್ ಪಾತ್ರ ಅದು. ‘ಜೈ ಭಜರಂಗಬಲಿ’ಯಲ್ಲಿ ಗ್ಲಾಮರ್ ಆಗಿ ಬೇರೆ ರೀತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದೇನೆ. ಅದು ತೆರೆಗೆ ಬಂದ ನಂತರ ಮತ್ತಷ್ಟು ಭಿನ್ನವಾದ ಅವಕಾಶಗಳು ಸಿಕ್ಕುತ್ತವೆ ಎನ್ನುವ ಭರವಸೆ ಇದೆ.
* ‘ದೇಸಿ ಚೆಲ್ವಿ’ಯ ಹೃದಯದ ಬಾಗಿಲಿಗೆ ಇಣುಕುವ ದುಸ್ಸಾಹಸವನ್ನು ಯಾರಾದ್ರೂ ಮಾಡಿದ್ದಾರಾ?
ಇಲ, ಇಲ್ಲ. ನಾನು ಕಾಲೇಜು ಲೈಫಲ್ಲಿ ಟಾಮ್‌ಬಾಯ್ ರೀತಿ ಇದ್ದವಳು. ಹುಡುಗರು ಹಿಂದೆ ಬೀಳಲಿಲ್ಲ, ಹುಡುಗಿಯರು ಹಿಂದೆ ಬಿದ್ದಿದ್ರು. ‘ನೀನು ನನಗೆ ಇಷ್ಟ’ ಅಂತ ಅಭಿಮಾನಿಮಣಿಯರು ಪತ್ರ ಬರೆದಿದ್ದಾರೆ. ನಾನು ತರ್ಲೆ ಅನ್ನೋ ಕಾರಣಕ್ಕೇ ಹುಡುಗರು ಆ ಪ್ರಯತ್ನವನ್ನು ಮಾಡಲಿಲ್ಲ ಬಿಡಿ! ಸಿನಿಮಾಕ್ಕೆ ಬಂದ ನಂತರ ನಾನು ಹುಡುಗಿ ವರ್ತನೆಯಲ್ಲಿ ಕಾಣಿಸಿಕೊಂಡಿದ್ದು! ಕಣ್ಣು ಕಣ್ಣು ಕಲೆತಾಗ… ಫೀಲ್ ಇನ್ನೂ ಯಾರ ಮೇಲೂ ಆಗಿಲ್ಲ.
* ಆಂಜನೇಯನ ಪರಮಭಕ್ತೆಯಂತೆ ನೀವು. ಈ ವಯಸ್ಸಿನಲ್ಲಿ ಬ್ರಹ್ಮಚಾರಿ ಹನುಮಂತನ ಸಹವಾಸ ಬೇಕಿತ್ತೆ?
ಪ್ರತಿ ಶನಿವಾರ ತಪ್ಪದೇ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇನೆ. ನನ್ನ ಪರಮದೇವರು ಹನುಮಂತ. ಆ ಆಶೀರ್ವಾದದಿಂದಲೇ ‘ಜೈ ಭಜರಂಗಬಲಿ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು. ಬ್ರಹ್ಮಚಾರಿ ದೇವರಿಗೆ ಯಾರ ಸಹವಾಸವೂ ಇರುವುದಿಲ್ಲ. ಗಮನ ಒಂದೇ ಕಡೆ ಇರುತ್ತೆ ನೋಡಿ. ನನ್ನ ಮೇಲೆ ದಯೆಯೂ ಜಾಸ್ತಿ ಇರುತ್ತೆ.
* ನಿಮ್ಮನ್ನು ಮದುವೆಯಾಗುವ ಸಾಹಸ ಮಾಡುವ ‘ಗಂಡು’ಗಲಿ ಬಗ್ಗೆ ಯಾವ ಕನಸಿದೆ?
ಗೂಗಲ್‌ನಲ್ಲಿ ಹುಡುಕಿದರೆ not found ಅಂತ ಬರುತ್ತಿದೆ! ಆ ರೀತಿ ಹುಡುಗ ಬೇಕು, ಈ ರೀತಿ ಇರಬೇಕು ಎಂದೇನೂ ಇಲ್ಲ. ಮದುವೆ ಮಾಡಿಕೊಂಡ ಮೇಲೆ ಎಲ್ಲವೂ ಎಲ್ಲರಿಗೂ ಅರ್ಥ ಆಗುತ್ತದೆ. ಆದರೆ ಸಿನಿಮಾ ರಂಗದ ಹುಡುಗ ಬೇಡವೇ ಬೇಡ. ನಾನು ಸಿನಿಮಾ ರಂಗವನ್ನು ಹತ್ತಿರದಿಂದ ನೋಡಿದ್ದೇನೆ.
* ಇಷ್ಟೆಲ್ಲಾ ತರ್ಲೆ ವ್ಯಕ್ತಿತ್ವದ ನಿಮ್ಮ ಮುಂದೆ ಲೈಫು ಇಷ್ಟೇನಾ ಎನ್ನುವ ಪ್ರಶ್ನೆ ಇಟ್ಟರೆ?
ಜೀವನದಲ್ಲಿ ಸೋಲು ಗೆಲುವು ಸಹಜ. ಒಂದು ಸಿನಿಮಾ ಯಶಸ್ಸುಗಳಿಸುತ್ತದೆ, ಸೋಲುತ್ತದೆ ಅದು ಮುಖ್ಯವಲ್ಲ. ಬದುಕಿನಲ್ಲಿ ಗೆದ್ದವರು ಸಿನಿಮಾದಲ್ಲಿ ಸೋಲುತ್ತಾರೆ. ಸಿನಿಮಾದಲ್ಲಿ ಗೆದ್ದವರು ಬದುಕಿನಲ್ಲಿ ಸೋಲುತ್ತಾರೆ. ಎಲ್ಲವನ್ನೂ ಒಂದೇ ರೀತಿ ಸ್ವೀಕರಿಸುತ್ತಾ ಸಮಾಧಾನವಾಗಿ ಹೋಗಬೇಕು. ಅದೇ ನನ್ನ ಲೈಫು.
