ಮನೋರಂಜನೆ

ದ್ವಿತೀಯ ಏಕದಿನ: ಆಂಗ್ಲರನ್ನು ಮಣಿಸಿದ ಶ್ರೀಲಂಕಾ

Pinterest LinkedIn Tumblr

jayavardane

ಕೊಲಂಬೊ, ನ.29: ಮಳೆ ಬಾಧಿತ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಲಂಕಾ ಏಳು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಶನಿವಾರ ಇಲ್ಲಿ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮಳೆ ಸುರಿದ ಕಾರಣ ಪಂದ್ಯವನ್ನು 45 ಓವರ್‌ಗೆ ಕಡಿತಗೊಳಿಸಲಾಗಿತ್ತು. ಆಂಗ್ಲರು 43 ಓವರ್‌ಗಳಲ್ಲಿ 185 ರನ್‌ಗೆ ಆಲೌಟಾದರು. ಗೆಲ್ಲಲು ಸುಲಭ ಸವಾಲು ಪಡೆದ ಲಂಕನ್ನರು ಹಿರಿಯ ಆಟಗಾರರಾದ ಮಹೇಲ ಜಯವರ್ಧನೆ (ಅಜೇಯ 77, 80 ಎ, 8 ಬೌಂಡರಿ, 1 ಸಿ.) ಹಾಗೂ ಕುಮಾರ ಸಂಗಕ್ಕರ(ಅಜೇಯ 67, 93 ಎಸೆತ, 8 ಬೌಂಡರಿ) 3ನೆ ವಿಕೆಟ್‌ಗೆ ಸೇರಿಸಿದ 149 ರನ್ ಜೊತೆಯಾಟದ ನೆರವಿನಿಂದ 64 ಎಸೆತಗಳು ಬಾಕಿಯಿರುವಂತೆಯೇ ಗೆಲುವಿನ ದಡ ಸೇರಿತು.

ಆಂಗ್ಲರು 37 ರನ್ ಸೇರಿಸುವಷ್ಟರಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತ್ತು. ಪಾರ್ಟ್ ಟೈಮ್ ಸ್ಪಿನ್ನರ್ ತಿಲಕರತ್ನೆ ದಿಲ್ಶನ್ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮೊಯೀನ್ ಅಲಿ 25 ರನ್‌ಗೆ ಔಟಾದರು. ನಾಯಕ ಅಲೆಸ್ಟೈರ್ ಕುಕ್ 22 ರನ್ ಗಳಿಸಿದರು. ಸತತ ಎರಡನೆ ಅರ್ಧಶತಕ ಸಿಡಿಸಿದ ರವಿ ಬೋಪಾರ (51), 42 ರನ್ ಗಳಿಸಿದ ರೂಟ್ ಇಂಗ್ಲೆಂಡ್ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಲಂಕಾದ ಆಫ್-ಸ್ಪಿನ್ನರ್ ಅಜಂತಾ ಮೆಂಡಿಸ್ (3-33) ಯಶಸ್ವಿ ಬೌಲರ್ ಎನಿಸಿಕೊಂಡರು. ಪ್ರಸಾದ್ (2-16) ಹಾಗೂ ದಿಲ್ಶನ್ (2-32) ತಲಾ ಎರಡು ವಿಕೆಟನ್ನು ಪಡೆದುಕೊಂಡರು.

ಶ್ರೀಲಂಕಾ ತಂಡ 186 ರನ್ ಚೇಸಿಂಗ್ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡಿತ್ತು. ಆದರೆ, ಮೂರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಶತಕದ ಜೊತೆಯಾಟವನ್ನು ನಡೆಸಿದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಮಹೇಲ ಜಯವರ್ಧನೆ (77) ಹಾಗೂ ಕುಮಾರ ಸಂಗಕ್ಕರ(67) 34.2 ಓವರ್‌ಗಳಲ್ಲಿ ತಂಡ ಗುರಿಯನ್ನು ತಲುಪಲು ನೆರವಾದರು. ಗುರುವಾರ ನಿಧನರಾದ ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಗೌರವಾರ್ಥ ಪ್ರೇಮದಾಸ ಸ್ಟೇಡಿಯಂನಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು. ಪಂದ್ಯ ಆರಂಭಕ್ಕೆ ಮೊದಲು ಒಂದು ನಿಮಿಷ ವೌನ ಪ್ರಾರ್ಥನೆ ನಡೆಸಲಾಯಿತು. ಸರಣಿಯ ಮೂರನೆ ಪಂದ್ಯ ಬುಧವಾರ ಹಂಬನ್‌ಟೋಟದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 43 ಓವರ್‌ಗಳಲ್ಲಿ 185 ರನ್‌ಗೆ ಆಲೌಟ್
(ಬೋಪಾರ 51, ರೂಟ್ 42, ಕುಕ್ 22, ಮೆಂಡಿಸ್ 3-33, ದಿಲ್ಶನ್ 2-32, ಪ್ರಸಾದ್ 2-16)
ಶ್ರೀಲಂಕಾ: 34.2 ಓವರ್‌ಗಳಲ್ಲಿ 186/2
(ಜಯವರ್ಧನೆ ಅಜೇಯ 77, ಸಂಗಕ್ಕರ ಅಜೇಯ 67)
ಪಂದ್ಯಶ್ರೇಷ್ಠ: ಮಹೇಲ ಜಯವರ್ಧನೆ

Write A Comment