ಮನೋರಂಜನೆ

ಪುರುಷ ಬ್ರಹ್ಮಚಾರಿ ಕುರಿತು ಒಂದಿಷ್ಟು…

Pinterest LinkedIn Tumblr

bachelorLife

ಸಮಕಾಲೀನ ಪ್ರಪಂಚದಲ್ಲಿ ಬ್ರಹ್ಮಚಾರಿಯಾಗಿ ಅರ್ಥಾತ್ ಅವಿವಾಹಿತನಾಗಿ ಬದುಕುವುದು ಹೇಗೆ? ಎಂಟೂವರೆ ದಶಕಗಳ ಹಿಂದೆ ಪ್ರಕಟವಾದ ‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ’ ಪುಸ್ತಕದಿಂದ ಆರಂಭಿಸಿ ನಾಲ್ಕೇ ವರ್ಷಗಳ ಹಿಂದೆ ಪ್ರಕಟವಾದ ‘ದ ಇಂಪಾರ್ಟೆನ್ಸ್ ಬೀಯಿಂಗ್ ಎ ಬ್ಯಾಚೆಲರ್’ ಪುಸ್ತಕದ ತನಕ ಎಲ್ಲವನ್ನೂ ಅರೆದು ಕುಡಿದರೂ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಇನ್ನು ಗೂಗಲಿಸಿದರೆ ಒಂದಷ್ಟು ಉತ್ತರಗಳು ದೊರೆಯಬಹುದೇ ಎಂದುಕೊಂಡರೆ ಅಲ್ಲಿ ಸಿಗುವುದು ಪುಸ್ತಕಗಳಲ್ಲಿ ಕಂಡುಕೊಂಡ ಚರ್ವಿತ ಚರ್ವಣವೇ. ಪರಿಸ್ಥಿತಿ ಹೀಗಿರುವಾಗ ಅವಿವಾಹಿತರು, ಬ್ರಹ್ಮಚಾರಿಗಳು ಮತ್ತು ವಿವಾಹಿತರಾಗಿಯೂ ಹಳೆಯ ಜೀವನ ವಿಧಾನಗಳನ್ನು ಬದಲಾಯಿಸಿಕೊಳ್ಳಲಾಗದೆ ತೊಳಲಾಡುತ್ತಿರುವ ಪುರುಷ ಜನಕೋಟಿಗೆ ಸಾಂತ್ವನ ಹೇಳುವವರಾರೂ ಇಲ್ಲವೇ? ಅವರು ಟೀಕಾಸ್ತ್ರಗಳಿಗೆ ಮೈ ಮನಸ್ಸುಗಳನ್ನು ಒಡ್ಡಿಕೊಂಡು ಕಲ್ಲಾಗಿ ಬದುಕುವುದೊಂದೇ ಮಾರ್ಗವೇ?

ಉತ್ತರಗಳಿರುವಾಗಲಷ್ಟೇ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ ಎಂಬುದು ಈ ವಿಷಯದಲ್ಲೂ ನಿಜವೇ. ನಮ್ಮ ಶಿಕ್ಷಣ ವ್ಯವಸ್ಥೆ ಇಂಥದ್ದಕ್ಕೆಲ್ಲಾ ಉತ್ತರಗಳನ್ನು ಕೊಡುವುದಕ್ಕಾಗಿಯೇ ಭಾಷೆ, ಇತಿಹಾಸ, ಗಣಿತ ಮತ್ತು ವಿಜ್ಞಾನದಂಥ ಎಲ್ಲಾ ಪಠ್ಯಗಳಲ್ಲಿಯೂ ಅನೇಕ ವಿಚಾರಗಳನ್ನು ಅಳವಡಿಸಿಕೊಂಡಿದೆ. ಇವನ್ನೆಲ್ಲಾ ಕೇವಲ ಪಾಠದಂತೆ ಓದಿಕೊಳ್ಳುವ ನಾವು ಮೂಢಾತ್ಮರಷ್ಟೇ. ಅರೆ ಕ್ಷಣ ಇವನ್ನೆಲ್ಲಾ ಬದುಕಿನೊಂದಿಗೆ ಜೋಡಿಸಿ ನೋಡಿಕೊಂಡಿದ್ದರೆ ಮೇಲಿನ ಪ್ರಶ್ನೆಗಳೆಲ್ಲಾ ಹುಟ್ಟಿಕೊಳ್ಳುತ್ತಲೇ ಇರಲಿಲ್ಲ.

ಹಿಂದೆ ಗುರುಕುಲ ಪದ್ಧತಿಯಿದ್ದಾಗ ಅವಿವಾಹಿತ ಜೀವನವನ್ನು ಕಳೆಯುವುದಕ್ಕೆ ಪ್ರಾಯೋಗಿಕ ತರಬೇತಿಯೇ ದೊರೆಯುತ್ತಿತ್ತು. ಉಷಾ ಕಿರಣಗಳು ಭೂಮಿಯನ್ನು ತಲುಪುವ ಹೊತ್ತಿಗೇ ಎದ್ದು ಹತ್ತಿರದಲ್ಲಿದ್ದ ತಟಾಕದಲ್ಲೋ ನದಿಯಲ್ಲೋ ಪ್ರಾತಃ ವಿಧಿಗಳನ್ನು ಮುಗಿಸಬೇಕಾಗಿತ್ತು. ಅದಕ್ಕೂ ಮೊದಲು ಕಾಡಿನಲ್ಲಿ ಅಲೆದಾಡಿ ಅಡುಗೆ ಮಾಡಲು ಗುರುಪತ್ನಿಗೆ ಅಗತ್ಯವಿರುವ ಗೆಡ್ಡೆ ಗೆಣಸುಗಳನ್ನೋ ಅಥವಾ ಸೌದೆಯನ್ನೋ ಸಂಗ್ರಹಿಸುವ ಕೆಲಸವಿರುತ್ತಿತ್ತು. ಇದನ್ನು ತಂದು ಹಾಕಿದ ಮೇಲೆ ಪಠಣ, ಪಾರಾಯಣ, ಅಧ್ಯಯನಗಳೆಲ್ಲವೂ ಆರಂಭವಾಗುತ್ತಿದ್ದವು.

ದಶಕಗಳ ಕಾಲ ಇದನ್ನೇ ಮಾಡಿದವರು ಸ್ನಾತಕರಾಗಿ ಮನೆಗೆ ಬಂದ ನಂತರವೂ ಇದು ಸಹಜವಾಗಿ ಮುಂದುವರಿಯುತ್ತಿತ್ತು. ಬೆಳಗಾಗಿ ಅಮ್ಮನ ಕಿರಿಕಿರಿ ಆರಂಭವಾಗುವ ಮೊದಲೇ ಕಾಡಿಗೋ ಇಲ್ಲವಾದರೆ ಹೊಲಕ್ಕೋ ಹೋಗಲು ಸಾಧ್ಯವಿತ್ತು. ಅದು ಮದುವೆಯಾದ ನಂತರವೂ ಮುಂದುವರಿಯುತ್ತಿತ್ತು. ಇರುವ ಒಂದೆರಡು ತುಂಡು ಬಟ್ಟೆಗಳನ್ನು ತೊಳೆಯುವ ಕೆಲಸ ಪ್ರಾತಃ ವಿಧಿಗಳ ಜೊತೆಗೇ ಮುಗಿದು ಹೋಗುತ್ತಿತ್ತು. ಇನ್ನು ಅಶನ, ಶಯನಾದಿಗಳೆಲ್ಲವೂ ಈ ಶಿಸ್ತಿಗೇ ಒಳಪಟ್ಟು ನಡೆಯುತ್ತಿದ್ದವು. ಅದು ಮುಂದೆ ಅವರ ಬದುಕಿನ ಭಾಗವೂ ಆಗುತ್ತಿತ್ತು.

ಆಧುನಿಕ ಶಿಕ್ಷಣ ಪದ್ಧತಿಯನ್ನು ರೂಪಿಸಿದವರು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರ ಈ ಉದ್ದೇಶವನ್ನು ನಾವು, ಅರ್ಥಾತ್ ಜೀವನದಲ್ಲಿ ಕನಿಷ್ಠ ಒಮ್ಮೆಯಾದರೂ ಅವಿವಾಹಿತ ಬದುಕನ್ನು ಬದುಕುವವರು ಅರ್ಥ ಮಾಡಿಕೊಂಡಿಲ್ಲ. ನಮಗೆ ಪಾಠ ಮಾಡುವವರೂ ಈ ವಿದ್ಯೆಯಲ್ಲಿ ಅಡಗಿದ್ದ ಗೂಢಾರ್ಥಗಳನ್ನು ಹೇಳಿಕೊಟ್ಟಿಲ್ಲ ಎಂಬುದು ಕಟುವಾದ ಹಾಗೂ ಕುಟುಕುವ ವಾಸ್ತವ.

ಬ್ರಹ್ಮಚರ್ಯವನ್ನೇ ಜೀವನ ಎಂದು ಹೇಳಿದವರು ವೀರ್ಯ ನಾಶವಾಗದಂತೆ ಕಾಪಾಡಿಕೊಳ್ಳುವುದಕ್ಕೆ ನೂರೆಂಟು ಸಲಹೆಗಳನ್ನು ನೀಡಿದರೇ ಹೊರತು ಅದರ ಹೊರತಾದ ‘ಜೀವನ’ದ ಬಗ್ಗೆ ಏನೂ ಹೇಳಲಿಲ್ಲ. ಪ್ರಾಚೀನ ಕಾಲದಿಂದ ಈ ಆಧುನಿಕೋತ್ತರ ಕಾಲದ ತನಕವೂ ವೀರ್ಯನಾಶದ ಸವಾಲಿಗಿಂತಲೂ ಮುಖ್ಯವಾದುದು ಬ್ರಹ್ಮಚಾರಿಯಾಗಿ ಅಥವಾ ಈಗಿನ ಕಾಲಕ್ಕೆ ಹೊಂದುವಂತೆ ಹೇಳುವುದಾದರೆ ಅವಿವಾಹಿತನಾಗಿ ಅರ್ಥಾತ್ ಬ್ಯಾಚೆಲರ್ ಬದುಕನ್ನು ಯಶಸ್ವಿಯಾಗಿ ಬಾಳುವುದು.

ಇಲ್ಲಿ ಯಶಸ್ಸು ಎಂಬುದಕ್ಕೆ ಬಹುದೊಡ್ಡ ಆಧ್ಯಾತ್ಮಿಕ ಅಥವಾ ಪಾರಲೌಕಿಕವಾದ ಯಾವ ಅರ್ಥಗಳೂ ಇಲ್ಲ. ಸರಳವಾಗಿ ಹೇಳುವುದಾದರೆ ತಿಂಗಳುಗಟ್ಟಲೆ ತೊಳೆಯದೇ ತೊಡುವ ಬಟ್ಟೆಗಳಿಲ್ಲದೆ, ಕಣ್ಣು ಹಾಯಿಸಿದಲ್ಲಿ, ಕುಳಿತುಕೊಳ್ಳಲು ಹೊರಟ ಲ್ಲೆಲ್ಲಾ ಒಳಗಿನಿಂದ ಹೊರಗಿನ ತನಕದ ಬಟ್ಟೆಗಳು, ವಿವಿಧ ವಿದ್ವಾಂಸರ ಪುಸ್ತಕಗಳು ಮತ್ತು ಬೇರೆ ಬೇರೆ ಅಂಗಡಿಯಿಂದ ತಂದ ಬಿಯರು, ವ್ಹಿಸ್ಕಿ, ಸೋಡ ಅಥವಾ ರೆಡ್‌ಬುಲ್ ಬಾಟಲು ಮತ್ತು ಕ್ಯಾನುಗಳಿಲ್ಲದೆ ಬದುಕುವುದು ಅವಿವಾಹಿತ ಯುವಕರ ಮಟ್ಟಿಗೆ ಯಶಸ್ವೀ ಬದುಕು.

ಅವಿವಾಹಿತರೇ ಇರುವ ಮನೆ ಅಥವಾ ಕೋಣೆಯಲ್ಲಿ ಇವೆಲ್ಲವೂ ಇಲ್ಲವಾದರೆ ಅದು ಕಳೆಗಟ್ಟುವುದಾದರೂ ಹೇಗೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಹುಟ್ಟಿರಬಹುದು. ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಹಾಲೀ ಅವಿವಾಹಿತ ಅಲಿಯಾಸ್ ಬ್ರಹ್ಮಚಾರಿಗಳ ಮನಸ್ಸಿನಲ್ಲಲ್ಲ. ಇವೆಲ್ಲವೂ ಮಾಜಿ ಅವಿವಾಹಿತರ ನಾಸ್ಟಾಲ್ಜಿಕ್ ಪ್ರಶ್ನೆಗಳು. ಅವರಿಗೆ ಇವೆಲ್ಲವೂ ಸಿಹಿ ನೆನಪುಗಳು ಮಾತ್ರ. ಆದರೆ ವರ್ತಮಾನದಲ್ಲಿ ಈ ಸ್ಥಿತಿಯಲ್ಲಿರುವವರ ಮಟ್ಟಿಗೆ ಇವೆಲ್ಲವೂ ದೊಡ್ಡ ಸಮಸ್ಯೆಗಳು. ಊರಿನಿಂದ ದಿಢೀರ್ ಎಂದು ಇಳಿದು ಬಿಡುವ ಅಮ್ಮ, ಅಪ್ಪ, ಮಾವ, ಅಣ್ಣ, ಅತ್ತಿಗೆ, ಅಜ್ಜ ಅಥವಾ ಪಕ್ಕದ ಮನೆಯ ಅಂಕಲ್‌ಗಳ ದೃಷ್ಟಿಯಲ್ಲಿ ಇಮೇಜ್ ಕುಸಿತಕ್ಕೆ ಒಳಗಾಗುವ ಅಂಶಗಳು. ಅಷ್ಟೇಕೆ ಎದುರು ಮನೆಯ ಸುಂದರಿಯೇನಾದರೂ ಇದ್ದಕ್ಕಿದ್ದಂತೆಯೇ ಮನೆಯೊಳಕ್ಕೆ ಬಂದರೆ ಏನು ಮಾಡಬೇಕೆಂದು ಅರಿಯದೇ ಹೆಣಗಬೇಕಾದ ಪರಿಸ್ಥಿತಿ.

ಮೊದಲೇ ಹೇಳಿದಂತೆ ಇವನ್ನು ನಿವಾರಿಸಿಕೊಳ್ಳುವುದಕ್ಕೆ ಇರುವುದು ಒಂದೇ ಮಾರ್ಗ. ನರ್ಸರಿಯಿಂದ ಸ್ನಾತಕೋತ್ತರ ಪದವಿಯ ತನಕ ನಾವು ಕಲಿತ ಪಠ್ಯಗಳಲ್ಲಿ ಉತ್ತರಗಳನ್ನು ಹುಡುಕುವುದು. ನಾವೆಲ್ಲರೂ ಗಾಂಧೀಜಿಯ ಬಗ್ಗೆ ಓದಿದ್ದೇವೆ. ಎಚ್.ನರಸಿಂಹಯ್ಯನವರ ಬ್ರಹ್ಮಚಾರಿ ಬದುಕಿನ ಬಗ್ಗೆ ಅರಿತಿದ್ದೇವೆ. ಬುದ್ಧ, ಕ್ರಿಸ್ತ, ಹೀಗೆ ಮದುವೆಯಾಗದ, ಆದರೂ ಅದರಿಂದ ಹೊರಬಂದು ಬದುಕಿದ ಹಲವು ಮಹಾನುಭಾವರ ಬಗ್ಗೆ ಮಾರ್ಕು ತೆಗೆಯುವುದಕ್ಕಾಗಿಯೇ ಕಷ್ಟಪಟ್ಟು ಓದಿ ಅರಿತಿದ್ದೇವೆ. ಪರೀಕ್ಷೆಯಲ್ಲಿ ನಮಗೆ ಮಾರ್ಕು ಬಂದಿದೆಯೇ ಹೊರತು ಜೀವನವೆಂಬ ಪರೀಕ್ಷೆಗೆ ಇವರಾರಿಂದಲೂ ನಾವು ಏನನ್ನೂ ಕಲಿತಿಲ್ಲ. ಯಾವತ್ತಾದರೂ ನಾವು ಗಾಂಧೀಜಿಯ ಬಳಿ ಎಷ್ಟು ಜೊತೆ ಬಟ್ಟೆ ಇತ್ತು ಎಂಬ ಪ್ರಶ್ನೆ ಎತ್ತಿದ್ದೇವೆಯೇ? ಬುದ್ಧ ಮೈತುಂಬಾ ಬಟ್ಟೆ ಧರಿಸಿದ ಚಿತ್ರಗಳನ್ನು ನೋಡಿದ ನಾವು ಅದರಲ್ಲಿ ಎಷ್ಟು ತುಂಡುಗಳಿವೆಯೆಂದಾಗಲೀ ಅದೇಕೆ ಕಾಷಾಯ ಬಣ್ಣದ್ದಾಗಿತ್ತೆಂದಾಗಲೀ ಪ್ರಶ್ನಿಸಿಕೊಂಡಿದ್ದೇವೆಯೇ? ಕ್ರಿಸ್ತ, ಅಷ್ಟೇಕೆ ನಮ್ಮ ನಡುವೆಯೇ ಬದುಕಿದ್ದ ಎಚ್. ನರಸಿಂಹಯ್ಯನವರ ಬಳಿ ಇದ್ದ ಬಿಳಿ ಬಟ್ಟೆಗಳ ಸಂಖ್ಯೆಯೆಷ್ಟು?

ಪ್ರಶ್ನೆ ಎಂದರೆ ಆಯಾ ಕ್ಲಾಸುಗಳ ಪರೀಕ್ಷೆಗೆ ಬರುವ ಪ್ರಶ್ನೆಗಳಷ್ಟೇ ಎಂದು ಭಾವಿಸಿದ ನಮ್ಮ ದಡ್ಡತನದ ಪರಿಣಾಮವಿದು. ಜೀವನವೆಂಬ ಪರೀಕ್ಷೆಯ ಪ್ರಶ್ನೆಗಳ ಬಗ್ಗೆ ನಾವು ಯೋಚಿಸ ತೊಡಗಿದರೆ ಈ ಎಲ್ಲಾ ಮಹಾನುಭಾವರ ಬದುಕು ನಮ್ಮ ಬ್ಯಾಚೆಲರ್ ಬದುಕನ್ನು ಸುಖಕರವಾಗಿಡಬಲ್ಲದು.

ಒಂದು ಬ್ಯಾಚೆಲರ್ ಕುಟುಂಬ– ಇದೂ ಒಂದು ಕುಟುಂಬವೇ– ವಾಸಿಸುವ ಮನೆಯೊಳಕ್ಕೆ ಹೊಕ್ಕು ನೋಡಿ. ಅಲ್ಲಿ ಬಟ್ಟೆಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತವೆ. ಅಥವಾ ಯಾವುದೇ ಬ್ಯಾಚೆಲರ್‌ ಧರಿಸಿರುವ ಬಟ್ಟೆ ನೋಡಿ. ಆತ ಯಾವುದಾದರೂ ಸಂದರ್ಶನಕ್ಕೋ ಅಥವಾ ಡ್ರೆಸ್ ಕೋಡ್ ಇರುವ ಆಫೀಸಿಗೋ ಹೋಗುವವನಲ್ಲದಿದ್ದರೆ ಅವನ ದೇಹದ ಕೆಳ ಅರ್ಧವನ್ನು ಒಂದು ಜೀನ್ಸ್ ಪ್ಯಾಂಟ್ ಆವರಿಸಿರುತ್ತದೆ. ತೀರಾ ಹತ್ತಿರ ಹೋದರೆ ಯಾವುದೋ ಒಂದು ಪ್ರಖ್ಯಾತ ಬಾಡಿ ಸ್ಪ್ರೇಯ ಸುವಾಸನೆ ಇರುತ್ತದೆ. ಸೂಕ್ಷ್ಮವಾಗಿ ನೋಡಿದರೆ ಆ ಜೀನ್ಸ್ ಪ್ಯಾಂಟ್ ಸಾವಿರಾರು ವರ್ಷಗಳಿಂದ ತೊಳೆಸಿಕೊಳ್ಳದೆ ವಿವರಣೆಗೆ ಸಿಗದ ಬಣ್ಣವೊಂದಕ್ಕೆ ತಿರುಗಿರುತ್ತದೆ. ಇನ್ನು ಸದಾ ಫಾರ್ಮಲ್ ತೊಡುವವರ ಸಮಸ್ಯೆಯೇ ಬೇರೆ. ಪ್ರತೀ ತಿಂಗಳೂ ಕನಿಷ್ಠ ಐದು ಹೊಸ ಶರ್ಟು ಪ್ಯಾಂಟುಗಳನ್ನು ಖರೀದಿಸಿ ಜೇಬಿಗೊಂದು ದೊಡ್ಡ ತೂತು ಮಾಡಿಕೊಂಡಿರುತ್ತಾರೆ.

ಈ ಸಮಸ್ಯೆಗೆ ನಮಗೆ ಪರಿಹಾರ ಸಿಗಬೇಕೆಂದರೆ ಬ್ರಹ್ಮಚರ್ಯವನ್ನು ಬೋಧಿಸಿ ಪಾಲಿಸಿದ ನಮ್ಮ ಪೂರ್ವಸೂರಿಗಳ ಬದುಕನ್ನೊಮ್ಮೆ ನೋಡಬೇಕಾಗುತ್ತದೆ.

ಗಾಂಧೀಜಿ ಬ್ರಹ್ಮಚರ್ಯವನ್ನು ಬೋಧಿಸಿದ್ದರ ಜೊತೆಗೇ ಸರಳ ಜೀವನವನ್ನೂ ಬೋಧಿಸಿದರು. ಬ್ರಹ್ಮಚಾರಿ ಅಥವಾ ಅವಿವಾಹಿತನಾಗಿ ಬದುಕಬೇಕಿದ್ದರೆ ಈ ಸರಳತೆ ತುಂಬಾ ಅಗತ್ಯ. ಕೇವಲ ಐದು ಜೊತೆ ಬಟ್ಟೆಗಳನ್ನು ಇಟ್ಟುಕೊಳ್ಳಲು ತೀರ್ಮಾನಿಸಿ ಕಾರ್ಯರೂಪಕ್ಕೆ ತಂದರೆ ಗಾಂಧೀಜಿ ಹೇಳಿದ್ದು ಅರ್ಥವಾಗುತ್ತದೆ. ವೀಕೆಂಡ್ ಬರುವ ಹೊತ್ತಿಗೆ ಎಲ್ಲಾ ಬಟ್ಟೆಗಳನ್ನೂ ಒಮ್ಮೆ ತೊಟ್ಟು ಮುಗಿದಿರುತ್ತದೆ. ತುಂಬಾ ಗಲೀಜು ಮನುಷ್ಯನಾಗಿದ್ದರಷ್ಟೇ ಇನ್ನೊಂದು ವಾರಕ್ಕೂ ಇದನ್ನು ಎಳೆಯಬಹುದು. ಆ ವೀಕೆಂಡಿನ ಜೊತೆಗೆ ಇವುಗಳನ್ನು ತೊಳೆಯಬೇಕಾದ ಅಥವಾ ತೊಳೆಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ನೀವು ಶುಚಿಯಾದ ಬಟ್ಟೆಗಳನ್ನಷ್ಟೇ ತೊಡುತ್ತೀರಿ. ಸರಳ ಜೀವನ ತತ್ವವನ್ನು ಬಿಟ್ಟು ಬಿಟ್ಟರೆ ಪ್ರತೀ ತಿಂಗಳು ಹೊಸ ಪ್ಯಾಂಟು ಶರ್ಟುಗಳನ್ನು ಖರೀದಿಸುತ್ತಾ ವಾಸಿಸುವ ಕೋಣೆ ಅಥವಾ ಮನೆಯಲ್ಲಿ ತೊಳೆಯದೇ ಉಳಿದ ಬಟ್ಟೆಗಳ ಪರ್ವತ ಸೃಷ್ಟಿಯಾಗುತ್ತದೆ.

ಬ್ಯಾಚೆಲರ್ ವಸತಿಯಲ್ಲಿ ಅಡುಗೆ ಮಾಡಿಕೊಳ್ಳುವುದಿದ್ದರಂತೂ ಸರಳತೆಯನ್ನು ಇಲ್ಲಿಗೂ ಮುಂದುವರಿಸಬೇಕಾಗುತ್ತದೆ. ಇಂಥವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳೆಲ್ಲವೂ ನಿಷಿದ್ಧ. ಇದರಿಂದ ಆರೋಗ್ಯಕ್ಕಿರುವ ಅನುಕೂಲಗಳ ಬಗ್ಗೆ ಅನೇಕರು ಈಗಾಗಲೇ ಬರೆದಿದ್ದಾರೆ. ಬ್ಯಾಚೆಲರ್ ಬದುಕಿಗೆ ಇದರಿಂದಾಗುವ ದೊಡ್ಡ ಅನುಕೂಲ ಎಂದರೆ ಪಾತ್ರೆಯನ್ನು ಶುಚಿಯಾಗಿಡುವ ಕೆಲಸ ಸುಲಭವಾಗುತ್ತದೆ. ಹಾಲನ್ನು ಕುದಿಸದೆ ಅದು ಒಡೆದು ವಾಸನೆ ಬರುವ ಸಾಧ್ಯತೆಯೂ ಇಲ್ಲವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಬ್ಲಾಕ್ ಟೀ ಅಥವಾ ಬ್ಲಾಕ್ ಕಾಫಿ ಕುಡಿಯುವುದು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ.

ನಿಮ್ಮ ಬ್ಯಾಚೆಲರ್ ವಸತಿಗೆ ಅಗತ್ಯವಿರುವ ಅಡುಗೆ ಪಾತ್ರೆಗಳನ್ನು ಅಮ್ಮಂದಿರು ಕೊಡಿಸುವುದಿದ್ದರೆ ನೀವು ಸ್ವಲ್ಪ ಕಠಿಣ ಹೃದಯಿಗಳಾಗಲೇ ಬೇಕಾಗುತ್ತದೆ. ಅಡುಗೆಯ ಅಧ್ಯಾತ್ಮವನ್ನು ಅರಿತಿರುವ ಅಮ್ಮಂದಿರಿಗೆ ಮಾತ್ರ ಬಹುಸಂಖ್ಯೆಯ ಪಾತ್ರೆಗಳನ್ನು ನಿರ್ವಹಿಸಲು ಸಾಧ್ಯವೇ ಹೊರತು ಬಡಪಾಯಿ ಬ್ಯಾಚೆಲರ್‌ಗಳಿಗಲ್ಲ ಎಂಬುದನ್ನು ಅರಿಯಬೇಕು. ಅಷ್ಟೇ ಅಲ್ಲ ಅದನ್ನು ಪಾತ್ರೆ ಪಗಡಿಗಳನ್ನು ಕೊಡಿಸಲು ಬರುವ ಅಮ್ಮನಿಗೂ ಬೋಧಿಸಬೇಕು. ಇಲ್ಲವಾದರೆ ಹೊತ್ತು ಹೊತ್ತಿನ ಅಡುಗೆಗೆ ಅಮ್ಮ ಕೊಡಿಸಿರುವ ಪಾತ್ರೆಗಳು ಬಳಕೆಯಾಗಿ ಅವೆಲ್ಲವೂ ಮುಗಿಯುವ ತನಕವೂ ತೊಳೆಸಿಕೊಳ್ಳದೆ ಸಿಂಕ್ ತುಂಬುತ್ತಿರುತ್ತದೆ. ಮತ್ತೆ ತೊಳೆಯುವ ಕೆಲಸವನ್ನು ಯಾರು ಮಾಡಬೇಕು ಎಂಬುದು ನಿಮ್ಮ ಬ್ಯಾಚೆಲರ್ ವಸತಿಯಲ್ಲಿರುವ ಸಂಗಡಿಗರ ಜೊತೆ ಯುದ್ಧಕ್ಕೆ ಕಾರಣವಾಗಿಬಿಡಬಹುದು. ಆದ್ದರಿಂದ ಕಡಿಮೆ ಸಂಖ್ಯೆ ಪಾತ್ರೆಗಳಿದ್ದರೆ ಅವುಗಳನ್ನು ಆಗಾಗ ತೊಳೆಯಲೇಬೇಕಾದ ಅಗತ್ಯ ಸೃಷ್ಟಿಯಾಗುತ್ತದೆ. ಎಲ್ಲಾ ಆವಿಷ್ಕಾರಗಳ ಮೂಲದಲ್ಲೊಂದು ಅಗತ್ಯವಿದ್ದಂತೆ ಎಲ್ಲಾ ಸೋಮಾರಿತನದ ನಿವಾರಣೆಯ ಹಿಂದೆಯೂ ಅಗತ್ಯಗಳಿರುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ಸರಳ ಜೀವನ ಇಂಥದ್ದೊಂದು ಅಗತ್ಯ ಸೃಷ್ಟಿಸುತ್ತದೆ.

ಈ ಎಲ್ಲಾ ವಿದ್ಯೆಗಳನ್ನು ರೂಢಿಸಿಕೊಳ್ಳುವುದರಿಂದ ಅನುಕೂಲವಿರುವುದು ಕೇವಲ ಅವಿವಾಹಿತ ಬದುಕಿನಲ್ಲಷ್ಟೇ ಅಲ್ಲ ಎಂಬುದನ್ನು ನೀವು ಅರಿಯಬೇಕಾಗಿದೆ. ಮುಂದೆ ಅರ್ಧಾಂಗಿಯೊಡಗೂಡಿ ಪೂರ್ಣ ಮನುಷ್ಯನಾಗುವ ಹೊತ್ತಿಗೆ ಇವೆಲ್ಲವೂ ಉಪಕಾರಕ್ಕೆ ಬರುತ್ತವೆ. ಆಗ ನೀವು ಬಟ್ಟೆಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಬೇಕಾಗಿಲ್ಲ. ಅಥವಾ ಪಾತ್ರೆಗಳ ಸಂಖ್ಯೆಯನ್ನು ಕಡಿಮೆ ಇಟ್ಟುಕೊಳ್ಳಬೇಕಾಗಿಲ್ಲ. ನಿಮ್ಮ ಸೋಮಾರಿತನಕ್ಕೆ ಯಾವುದು ಮದ್ದು ಎಂಬುದು ನಿಮ್ಮ ಅರ್ಧಭಾಗವೇ ಆಗಿರುವವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಅವರು ನಿಮಗೆ ತಾತ್ಕಾಲಿಕ ಸ್ವಾತಂತ್ರ್ಯ ಕೊಟ್ಟ ಕಾಲಘಟ್ಟದಲ್ಲಿ ಅವರಿಗೆ ಮೆಚ್ಚುಗೆಯಾಗುವಂತೆ ಬದುಕುವುದಕ್ಕೆ ಸರಳ ಜೀವನ ತತ್ವಗಳನ್ನು ಬಳಸಬಹುದು.
ಉದಾಹರಣೆಗೆ ಪತ್ನಿ ಮನೆಯಲ್ಲಿ ಇಲ್ಲದ ದಿನಗಳಲ್ಲಿ ಕೇವಲ ಒಂದೇ ಕೋಣೆಯನ್ನು ಬಳಸುವುದು. ಹಾಗೆಯೇ ಅಡುಗೆ ಮನೆಯನ್ನು ಬಳಸುವುದಾದರೆ ಕೆಲವೇ ಪಾತ್ರಗಳನ್ನಷ್ಟೇ ಬಳಸುವುದು ನಿಮಗೆ ಕಷ್ಟವಾಗುವುದಿಲ್ಲ. ಇದರಿಂದ ಆಕೆ ಹಿಂದಿರುಗುವ ಹೊತ್ತಿಗೆ ಮನೆಯನ್ನು ಆಕೆ ಹೋಗುವಾಗಿದ್ದ ಸ್ಥಿತಿಯಲ್ಲೇ ಇಟ್ಟುಕೊಂಡಿರಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ದಿನಗಳಲ್ಲಿ ಗೆಳೆಯರನ್ನು ಕರೆದು ಪಾರ್ಟಿ ಮಾಡಿದರೂ ಇದೇ ತತ್ವಗಳನ್ನು ಪಾಲಿಸಿದರೆ ನಿಮ್ಮ ಸಂಸಾರ ಸುಖಕರವಾಗಿರುತ್ತದೆ.

ಯಶಸ್ವಿ ಬ್ಯಾಚೆಲರ್ ಬದುಕಿಗಾಗಿ ಪಂಚ ಸೂತ್ರಗಳು*

ಬಟ್ಟೆಗಳ ಸಂಖ್ಯೆ ಐದು ಮೀರದಿರಲಿ. ಇದರಿಂದ ವಾರ ಕೊನೆಯಲ್ಲಿ ಬಟ್ಟೆ ತೊಳೆಯಲೇಬೇಕಾಗುತ್ತದೆ. ವಾರಕ್ಕೊಮ್ಮೆ  ಅಮ್ಮ–ಅಪ್ಪನನ್ನು ಕಾಣಲು ಹೋಗುವವರಾದರೆ ಇನ್ನೂ ಅನುಕೂಲ. ಅಲ್ಲಿಂದಲೇ ಎಲ್ಲವನ್ನು ತೊಳೆಯಿಸಿಕೊಂಡು ಬರಬಹುದು. ನಿಮ್ಮ ಬ್ಯಾಗೂ ಭಾರವಾಗುವುದಿಲ್ಲ. ಅಮ್ಮನಿಗೂ ನಿಮ್ಮ ತಂತ್ರದ ಸುಳಿವು ಸಿಗುವುದಿಲ್ಲ.

ಅಡುಗೆ ಮಾಡಿಕೊಳ್ಳುವ ಹುಚ್ಚಿದ್ದರೆ ಪಾತ್ರೆಗಳ ಸಂಖ್ಯೆ ಕಡಿಮೆ ಇರಲಿ. ಇದು ತೊಳೆಯುವ ಅನಿವಾರ್ಯತೆ ಸೃಷ್ಟಿಸುತ್ತದೆ. ಪಾತ್ರೆ ತೊಳೆಯುವುದು ಹಂಚಿಕೊಂಡು ಮಾಡಬೇಕಾದ ಕೆಲಸವಾಗಿ ಉಳಿಯದೆ ರೂಮ್ ಮೇಟ್‌ಗಳ ನಡುವಣ ಸಾಮರಸ್ಯ ಉಳಿಯುತ್ತದೆ.

ಚಿಕ್ಕದು ಚೊಕ್ಕ ಎಂಬುದನ್ನು ಮರೆಯಬೇಡಿ. ಸಾಕಷ್ಟು ಸಣ್ಣ ಮನೆ ಸಾಧ್ಯವಿದ್ದರೆ ಹಾಲ್ ಕಿಚನ್ ಮನೆಗಳಲ್ಲಷ್ಟೇ ವಾಸಿಸಿ. ಕೋಣೆಗಳಿಲ್ಲದೇ ಇರುವುದು ಬ್ರಹ್ಮಚರ್ಯ ಕಾಪಾಡಿಕೊಳ್ಳುವ ಮಾರ್ಗದಂತೆಯೇ ಮನೆಯನ್ನು ಶುಚಿಯಾಗಿಡುವ ಅಗತ್ಯವನ್ನು ಸೃಷ್ಟಿಸುತ್ತದೆ ಎಂಬುದು ನೆನಪಿರಲಿ.

ಆಗೀಗ ಊರಿನಿಂದ ಯಾರಾದರೂ ಬರುತ್ತಿದ್ದರೆ ಒಳ್ಳೆಯದೇ. ಅಂಥವರನ್ನು ಸ್ವಾಗತಿಸುವ ವಿಶಾಲ ಮನಸ್ಸು ನಿಮ್ಮದಾಗಿರಲಿ. ಕನಿಷ್ಠ ಅವರಿಗಾಗಿಯಾದರೂ ನೀವು ಮನೆಯನ್ನು ಶುಚಿಯಾಗಿಟ್ಟುಕೊಳ್ಳುತ್ತೀರಿ. ಅವರೂ ನಿಮ್ಮ ಒಳ್ಳೆಯತನವನ್ನು ಹಾಡಿ ಹೊಗಳಿ ನಿಮ್ಮ ಬ್ರಹ್ಮಚರ್ಯ ಜೀವನ ಕೊನೆಗೊಳಿಸುವುದಕ್ಕೆ ನೆರವಾಗಲೂಬಹುದು. (ಇದರಲ್ಲಿ ಅಪಾಯಗಳೂ ಇರುತ್ತವೆ ಎಚ್ಚರ).

ನೆರೆಹೊರೆಯವರ ಕಷ್ಟ ಸುಖಗಳಿಗೆ ಕಿವಿಗೊಡಿ. ಇದು ನಿಮಗೆ ಆಗೀಗ ಒಳ್ಳೆಯ ಸಾಂಬಾರು, ಸಾರು, ಮಟನ್, ಚಿಕನ್ ಇತ್ಯಾದಿಗಳನ್ನು ಒದಗಿಸುತ್ತದೆ. ಊಟದ ಡಬ್ಬಿಯ ಜೊತೆಗೆ ನಿಮ್ಮ ಬದುಕೂ ವಿಸ್ತರಿಸಿಕೊಳ್ಳಬಹುದು!

Write A Comment