ಮನೋರಂಜನೆ

ಎರಡು ದಿನಗಳ ಅಭ್ಯಾಸ ಪಂದ್ಯ ಡ್ರಾ: ಬೌಲಿಂಗ್, ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದ ಭಾರತ

Pinterest LinkedIn Tumblr

virat-kohli__

ಅಡಿಲೇಡ್, ನ.25: ಭಾರತ-ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ನಡುವಿನ ಎರಡು ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಆಲ್‌ರೌಂಡ್ ಪ್ರದಶರ್ನ ನೀಡಿದ ಭಾರತ ಆಸ್ಟ್ರೇಲಿಯ ಪ್ರವಾಸವನ್ನು ಸಕಾರಾತ್ಮಕವಾಗಿ ಆರಂಭಿಸಿದೆ. ಎರಡನೆ ದಿನದಾಟವಾದ ಮಂಗಳವಾರ ಆತಿಥೇಯ ಆಸ್ಟ್ರೇಲಿಯದ 219 ರನ್‌ಗೆ ಉತ್ತರವಾಗಿ ಪ್ರವಾಸಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 8 ವಿಕೆಟ್‌ಗೆ 363 ರನ್ ಗಳಿಸಿತು. ಮೊದಲ ದಿನದ ಅಭ್ಯಾಸ ಪಂದ್ಯದಲ್ಲಿ ವೇಗದ ಬೌಲರ್ ವರುಣ್ ಆ್ಯರೊನ್ ವೇಗದ ಪಿಚ್‌ನ ಲಾಭವನ್ನು ಪಡೆದುಕೊಂಡಿದ್ದರು. ಮಂಗಳವಾರ ಭಾರತದ ಐವರು ಬ್ಯಾಟ್ಸ್‌ಮನ್‌ಗಳು ಐದು ಅರ್ಧಶತಕವನ್ನು ಸಿಡಿಸಿ ಚೆನ್ನಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ನಾಯಕ ವಿರಾಟ್ ಕೊಹ್ಲಿ 60 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಮುರಳಿ ವಿಜಯ್(51), ಚೇತೇಶ್ವರ ಪೂಜಾರ(55), ವೃದ್ದಿಮಾನ್ ಸಹಾ(ಅಜೇಯ 56) ಹಾಗೂ ಕರಣ್ ಶರ್ಮ(ಅಜೇಯ 52) ಅರ್ಧಶತಕವನ್ನು ಸಿಡಿಸಿದರು. ಸುರೇಶ್ ರೈನಾ(44) ಹಾಗೂ ರೋಹಿತ್ ಶರ್ಮ(23) ಉಪಯುಕ್ತ ಕಾಣಿಕೆ ನೀಡಿದರು.

1 ವಿಕೆಟ್ ನಷ್ಟಕ್ಕೆ 55 ರನ್‌ನಿಂದ ಇನಿಂಗ್ಸ್ ಮುಂದುವರಿಸಿದ ವಿಜಯ್ ಹಾಗೂ ಪೂಜಾರ ಬ್ಯಾಟಿಂಗ್ ಪಿಚ್‌ನ ಸಂಪೂರ್ಣ ಲಾಭ ಪಡೆದರು. ಎರಡನೆ ವಿಕೆಟ್‌ಗೆ 85 ರನ್ ಸೇರಿಸಿದ ವಿಜಯ್ ಹಾಗೂ ಪೂಜಾರ ಅರ್ಧಶತಕಕ ಸಿಡಿಸಿದ ನಂತರ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅಜಿಂಕ್ಯ ರಹಾನೆ (1) ಮಾತ್ರ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದರು. ರೋಹಿತ್ ಶರ್ಮ ಹಾಗೂ ಕೊಹ್ಲಿ 5ನೆ ವಿಕೆಟ್‌ನಲ್ಲಿ 47 ರನ್ ಜೊತೆಯಾಟ ನಡೆಸಿದರು. ಭೋಜನ ವಿರಾಮದ ನಂತರ ಕೊಹ್ಲಿ ಹಾಗೂ ರೈನಾ ಸ್ಪಿನ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದರು. ಅರ್ಧಶತಕ ಸಿಡಿಸಿದ ಕರಣ್ ಶರ್ಮ ಹಾಗೂ ಸಹಾ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಮೊದಲ ದಿನದಾಟದಲ್ಲಿ 72 ರನ್‌ಗೆ 3 ವಿಕೆಟ್ ಕಬಳಿಸಿದ್ದ ವರುಣ್ ಆ್ಯರೊನ್ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಭುವನೇಶ್ವರ ಕುಮಾರ್ ಹಾಗೂ ಮುಹಮ್ಮದ್ ಶಮಿ ತಲಾ ಎರಡು ವಿಕೆಟನ್ನು ಕಬಳಿಸಿ ಆತಿಥೇಯ ಆಸ್ಟ್ರೇಲಿಯ ತಂಡವ್ನ 71.5 ಓವರ್‌ಗಳಲ್ಲಿ 219 ರನ್‌ಗೆ ನಿಯಂತ್ರಿಸಿದ್ದರು.

ಸಂಕ್ಷಿಪ್ತ ಸ್ಕೋರ್
ಕ್ರಿಕೆಟ್ ಆಸ್ಟ್ರೇಲಿಯ: 71.5 ಓವರ್‌ಗಳಲ್ಲಿ 219 ರನ್‌ಗೆ ಆಲೌಟ್
ಭಾರತ: 91 ಓವರ್‌ಗಳಲ್ಲಿ 363/8
(ವಿರಾಟ್ ಕೊಹ್ಲಿ 60, ವೃದ್ದಿಮಾನ್ ಸಹಾ ಅಜೇಯ 56, ಚೇತೇಶ್ವರ ಪೂಜಾರ 55, ಮುರಳಿ ವಿಜಯ್ 51, ಕರಣ್ ಶರ್ಮ 52, ಸುರೇಶ್ ರೈನಾ 44, ಶಾರ್ಟ್ 2-60, ಲಾಲರ್ 2-55)
http://vbnewsonline.com

Write A Comment