ಮನೋರಂಜನೆ

ಅಂಬರೀಶ ಬರೆದೀತೆ ಮುನ್ನುಡಿ?

Pinterest LinkedIn Tumblr

10-ambareesh

ದರ್ಶನ್ ಅಭಿನಯದ ‘ಅಂಬರೀಶ’ ಸಿನಿಮಾ ನ. 20ರಂದು ತೆರೆಕಂಡಿದೆ. ಅಭಿಮಾನಿಗಳ ಮಾತಿನಲ್ಲಿ ಹೇಳುವುದಾದರೆ, ‘ಅಂಬರೀಶ’ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿದೆ.

ಜನಪ್ರಿಯ ನಟನೊಬ್ಬನ ಸಿನಿಮಾ ತೆರೆಕಂಡಾಗ ಚಿತ್ರರಂಗದಲ್ಲಿ ದೊಡ್ಡ ಸಂಭ್ರಮ ರೂಪುಗೊಳ್ಳುತ್ತದೆ. ಅದರಲ್ಲೂ ದರ್ಶನ್‌ರ ಜೊತೆಗೆ ಹಿರಿಯ ನಟ ಅಂಬರೀಷ್‌ ಅವರೂ ನಟಿಸಿರುವ  ‘ಅಂಬರೀಶ’ದಂಥ ಚಿತ್ರ ಹಬ್ಬದ ವಾತಾವರಣ ಸೃಷ್ಟಿಸುವುದು ಸಹಜ. ಆದರೆ, ನಿಜವಾದ ವಿಶೇಷ ಇರುವುದು ಮತ್ತೆರಡು ಸಂಗತಿಗಳಲ್ಲಿ. ಮೊದಲನೆಯದು, ಇದು ಮಹೇಶ್‌ ಸುಖಧರೆ ನಿರ್ಮಾಣ – ನಿರ್ದೇಶನದ ಸಿನಿಮಾ ಎನ್ನುವುದರಲ್ಲಿ. ಕಥೆಯ ಬಗ್ಗೆ, ಸ್ವಂತಿಕೆಯ ಬಗ್ಗೆ ನೆಚ್ಚುಳ್ಳ ಕೆಲವೇ ಕೆಲವು ನಿರ್ದೇಶಕರಲ್ಲಿ ಸುಖಧರೆ ಕೂಡ ಒಬ್ಬರು. ‘ಸೈನಿಕ’, ‘ಸಂಭ್ರಮ’, ‘ಸಾರ್ವಭೌಮ’ದಂಥ ಭಿನ್ನ ಚಿತ್ರಗಳ ಕೊಟ್ಟ ಅವರು, ಇದೀಗ ‘ಅಂಬರೀಶ’ದ ಮೂಲಕ ಮತ್ತೆ ಸಹೃದಯರ ಎದುರು ನಿಂತಿದ್ದಾರೆ. ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಖಧರೆ ಅವರು ಆ ಕಹಿಯಿಂದ ಹೊರಬರಲು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆ ಗೆಲುವಿ­ಗಾಗಿಯೇ ಅವರು ದರ್ಶನ್‌–ಅಂಬರೀಷ್‌ರಂಥ ತಾರೆಗಳ ಮೇಲೆ ಪಣ ಕಟ್ಟಿದ್ದಾರೆ. ಇದು ಚಿತ್ರದ ಮೊದಲ ವಿಶೇಷ. ಮತ್ತೊಂದು, ಬಹುಮುಖ್ಯವಾದ ವಿಶೇಷ ಸಿನಿಮಾ ಕಥೆಯದು; ಆ ಕಥೆ ಕನ್ನಡದ್ದೇ ಎನ್ನುವುದು.

ಈ ವರ್ಷದ ಬಹು ಯಶಸ್ವಿ ಚಿತ್ರಗಳನ್ನು ನೆನಪಿಸಿಕೊಳ್ಳಿ. ಸುದೀಪ್‌ರ ‘ಮಾಣಿಕ್ಯ’, ಪುನೀತ್‌ರ ‘ಪವರ್‌’, ಶರಣ್‌ರ ‘ಅಧ್ಯಕ್ಷ’, ರವಿಚಂದ್ರನ್‌ರ ‘ದೃಶ್ಯ’– ಇವೆಲ್ಲವೂ ರೀಮೇಕ್‌ ಸರಕುಗಳೇ. ಅಂದರೆ, ಗೆದ್ದಿರುವುದೆಲ್ಲ ಕಡತಂದ ಕಥನಗಳೇ. ಸುದ್ದಿಮಾಡಿದ ಪ್ರಕಾಶ್‌ ರೈ ಅವರ ‘ಒಗ್ಗರಣೆ’ ಕೂಡ ಮಲಯಾಳಂ ಕೃಪೆಯೇ. ಯಶ್‌ ನಟನೆಯ ‘ಗಜಕೇಸರಿ’ ನೇರ ರೀಮೇಕ್‌ ಅಲ್ಲವಾದರೂ, ಮೂರ್‍್ನಾಲ್ಕು ತೆಲುಗು ಸಿನಿಮಾಗಳು, ಹಾಲಿವುಡ್‌ನ ಸಾಹಸ ದೃಶ್ಯಗಳು ಅಲ್ಲಿ ಇಣುಕಿರುವುದನ್ನು ಸಿನಿಮಾಪ್ರಿಯರು ಬಲ್ಲರು. ಪ್ರಶಾಂತ್‌ ನೀಲ್‌ ನಿರ್ದೇಶನದ ‘ಉಗ್ರಂ’ ಚಿತ್ರವೊಂದೇ ಗೆಲುವು ಕಂಡ ಸ್ವಮೇಕ್‌. ರಕ್ಷಿತ್‌ ಶೆಟ್ಟಿ ನಟನೆ–ನಿರ್ದೇಶನದ ‘ಉಳಿದವರು ಕಂಡಂತೆ’ ಒಂದು ವರ್ಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ, ಅದರಿಂದ ಲಾಭವಾದುದು ನಿರ್ದೇಶಕರಿಗೇ ಹೊರತು ನಿರ್ಮಾಪಕರಿಗಲ್ಲ. ಪರಿಸ್ಥಿತಿ ಹೀಗಿರುವಾಗ, ನಾಯಕರು–ನಿರ್ದೇಶಕರೆಲ್ಲ ‘ಗೆಲುವಿಗಾಗಿ ರೀಮೇಕ್‌’ ಎಂದು ಮಂತ್ರ ಪಠಣದಲ್ಲಿ ತೊಡಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳ ನಂಬಿಕೆಯನ್ನು ಅಲುಗಾಡಿಸುವ ರೀತಿ, ಸುಖಧರೆ ಅವರ ‘ಅಂಬರೀಶ’ ತೆರೆಕಂಡಿದೆ.

‘ಅಂಬರೀಶ’ ಚಿತ್ರ ದೊಡ್ಡ ಗೆಲುವು ಸಾಧಿಸಿದರೆ ಸ್ವಮೇಕ್‌ ಚಿತ್ರಗಳ ಬಗ್ಗೆ ಚಿತ್ರರಂಗ ಯೋಚಿಸಲು ಪ್ರೇರಣೆ ಆಗಬಹುದು. ಅಲ್ಲದೆ, ಈ ಚಿತ್ರದ ಬೆನ್ನಿಗೆ ಒಂದಷ್ಟು ಕುತೂಹಲಕಾರಿ ಕನ್ನಡ ಕಥನಗಳು ಸರತಿಯಲ್ಲಿವೆ. ಪುನೀತ್‌ರ ಮುಂದಿನ ಚಿತ್ರ ‘ರಣವಿಕ್ರಮ’ ಸದ್ಯಕ್ಕಂತೂ ಸ್ವಮೇಕ್‌ ಎಂದು ಹೇಳಲಾಗುತ್ತಿದೆ.

ನಂತರದ ಅವರ ಸಿನಿಮಾ, ಸೂರಿ ನಿರ್ದೇಶನದ ‘ದೊಡ್ಮನೆ ಹುಡುಗ’ ಅಪ್ಪಟ ಕನ್ನಡ ಕಥನ. ದರ್ಶನ್‌ನ ಮುಂದಿನ ಸಿನಿಮಾಗಳಾದ ‘ಐರಾವತ’ ಕೂಡ ಸ್ವಮೇಕ್‌ ಕಥನವೇ. ಯೋಗರಾಜ ಭಟ್‌ರ ‘ವಾಸ್ತುಪ್ರಕಾರ’ ಕೂಡ ಬಹುನಿರೀಕ್ಷಿತ ಕನ್ನಡ ಚಿತ್ರಕಥನ. ತೆರೆಕಾಣಲು ತವಕಿಸುತ್ತಿರುವ ಯಶ್‌ರ ‘ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ’ ಕೂಡ ಸ್ವಮೇಕ್‌ ಎನ್ನಲಾಗಿದೆ. ಹೀಗೆ, ‘ಅಂಬರೀಶ’ನ ಬೆನ್ನಹಿಂದೆ ಭರವಸೆಯ ಹಲವು ಸ್ವಮೇಕ್‌ ಚಿತ್ರಗಳಿವೆ. ‘ಅಂಬರೀಶ’ ಗೆದ್ದರೆ ಈ ಚಿತ್ರಗಳಿಗೊಂದು ಮೇಲ್ಪಂಕ್ತಿ ಒದಗಿದಂತಾಗುತ್ತದೆ.

ತಾರಾ ವರ್ಚಸ್ಸಿನ ನಟರುಗಳ ಗೆಲುವಿನ ಗಣಿತ ವಿಚಿತ್ರವಾದುದು. ಮೂರ್‍್ನಾಲ್ಕು ರೀಮೇಕ್‌ ಸಿನಿಮಾಗಳು ಸೋತರೂ ಅವರು ಯೋಚಿಸುವುದಿಲ್ಲ. ಆದರೆ, ಒಂದು ಸ್ವಮೇಕ್‌ ಸೋತರೆ ಅವರು ಕಂಗಾಲಾಗುತ್ತಾರೆ. ನಂತರದ ಚಿತ್ರಗಳಿಗಾಗಿ ಈಗಾಗಲೇ ಗೆಲುವು ಸಾಧಿಸಿದ ಚಿತ್ರಗಳ ಕಥೆಗಳತ್ತಲೇ ಮನಸ್ಸು ಮಾಡುತ್ತಾರೆ. ಅಂಥವರನ್ನು ಮತ್ತೆ ಸ್ವಮೇಕ್‌ಗೆ ಕರೆತರುವುದು ಸುಲಭವೇನಲ್ಲ. ಸುದೀಪ್‌ ಅವರ ಉದಾಹರಣೆಯನ್ನೇ ನೋಡಿ. ಸಾಲು ಸಾಲು ರೀಮೇಕ್‌ಗಳಲ್ಲಿ ಮುಳುಗಿಹೋಗಿರುವ ಅವರು ಸದ್ಯಕ್ಕಂತೂ ಸ್ವಂತ ಕಥೆಯಲ್ಲಿ ನಟಿಸುವ ಸುಳಿವಿಲ್ಲ. ನಿರ್ದೇಶಕರೂ ಆದ ಸುದೀಪ್‌, ನಟನೆಯ ಮಟ್ಟಿಗೆ ತಮಿಳಿನ ಸಿಂಗಂ ಅಥವಾ ತೆಲುಗು ಪುಲಿಯ ಅನುಕರಣೆಯಲ್ಲಿ ಸಮಾಧಾನ ಕಾಣುತ್ತಿರುವುದು ಅನುಕೂಲಸಿಂಧು ಲೆಕ್ಕಾಚಾರವಲ್ಲದೆ ಬೇರೇನೂ ಅಲ್ಲ. ಸುದೀಪ್‌ ಮತ್ತು ದರ್ಶನ್‌ ಆಪ್ತಮಿತ್ರರು. ಆದರೆ, ಸ್ವಂತಿಕೆಯ ಬಗ್ಗೆ ದರ್ಶನ್‌ ಅವರಲ್ಲಿನ ಆತ್ಮವಿಶ್ವಾಸ ಸುದೀಪ್‌ ಅವರಿಗೆ ಇದ್ದಂತಿಲ್ಲ.

ಮತ್ತೆ ‘ಅಂಬರೀಶ’ ಚಿತ್ರದ ವಿಷಯಕ್ಕೆ ಬರೋಣ. ಈ ಸಿನಿಮಾದ ಗೆಲುವು ಕೇವಲ ಮಹೇಶ್‌ ಸುಖಧರೆ ಅಥವಾ ದರ್ಶನ್‌ರಿಗೆ ಸಂಬಂಧಿಸಿದ್ದಲ್ಲ. ಇಂಥ ಸಿನಿಮಾಗಳು ಗೆಲ್ಲಬೇಕಾದುದು ಈ ಹೊತ್ತಿನ ಕನ್ನಡ ಚಿತ್ರರಂಗದ ಹಿತದೃಷ್ಟಿಗೆ ಅನಿವಾರ್ಯ. ‘ಅಂಬರೀಶ’ ಗೆಲ್ಲುವ ಮೂಲಕ ಈ ವರ್ಷದ ಕೊನೆಯಲ್ಲಿ ಸ್ವಮೇಕ್‌ ಕಥನಗಳ ಗೆಲುವಿಗೆ ಮುನ್ನುಡಿ ಬರೆಯಲಿ, ಅದು 2015ಕ್ಕೂ ಮಾದರಿಯಾಗಲಿ ಎಂದು ಆಶಿಸಬಹುದು.

Write A Comment