ಆಗ್ರಾ (ಐಎಎನ್‌ಎಸ್): ‘ವಿಶ್ವ ವಿಖ್ಯಾತ ತಾಜ್‌ಮಹಲನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು’ ಎಂಬ ಉತ್ತರಪ್ರದೇಶ ಸಚಿವ ಮಹಮದ್ ಅಜಂ ಖಾನ್ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಖಾನ್ ಅವರು ತಾಜ್‌ಮಹಲನ್ನು ವಕ್ಫ್ ಆಸ್ತಿಯಾಗಿ ಘೋಷಿಸಬೇಕೆಂದು ಗುರುವಾರ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಮಾರಕ ಪ್ರೇಮಿಗಳು ಮತ್ತು ಕೆಲವು ಹಿಂದೂ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ತಾಜ್‌ಮಹಲ್‌ನಲ್ಲಿ ಮುಸ್ಲಿಮರಿಗೆ ದಿನದಲ್ಲಿ ಐದು ಬಾರಿ ನಮಾಜು (ಪ್ರಾರ್ಥನೆ) ಸಲ್ಲಿಸಲು ಅವಕಾಶ ನೀಡಬೇಕೆಂದು ಇನ್ನೋರ್ವ ಮುಸ್ಲಿಂ ಮುಖಂಡ ಸಮಾಜವಾದಿ ಪಕ್ಷವನ್ನು ಕೇಳಿಕೊಂಡಿರುವುದು ಕೂಡ ವಿವಾದದ ಕಿಡಿ ಹೊತ್ತಿಸಿದೆ.
‘ಅಜಂ ಖಾನ್ ಅವರು ಈ ರೀತಿಯ ವಿವಾದಿತ ಹೇಳಿಕೆ ನೀಡುವ ಮೊದಲು ತಮ್ಮ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ’ ಎಂದು ಪಾರಂಪರಿಕ ತಾಣಗಳ ಹಿತರಕ್ಷಣಾ ಸಮಿತಿ ‘ಬರ್ಜ್ ಮಂಡಳ್’ನ ಅಧ್ಯಕ್ಷ ಶರ್ಮಾ ಹೇಳಿದ್ದಾರೆ.
ಆಗ್ರಾದಲ್ಲಿನ ಸ್ಥಳೀಯ ಪ್ರವಾಸೋದ್ಯಮ ಸಂಸ್ಥೆಗಳು ಸಚಿವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ.