ಮನೋರಂಜನೆ

ವಿಜಯ್ ಹಝಾರೆ ಟ್ರೋಫಿ: ಕರ್ನಾಟಕ, ಪಂಜಾಬ್ ಸೆಮಿ ಫೈನಲ್‌ಗೆ

Pinterest LinkedIn Tumblr

PANDE1

ವಡೋಧರ, ನ.21: ಕರ್ನಾಟಕ ಮತ್ತು ಪಂಜಾಬ್ ತಂಡ ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಶುಕ್ರವಾರ ವಡೋದರದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿ ಸೆಮಿ ಫೈನಲ್ ಪ್ರವೇಶಿಸಿತು. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ತಂಡ ರೈಲ್ವೇಸ್ ತಂಡವನ್ನು ಬಗ್ಗು ಬಡಿದು ಫೈನಲ್ ತಲುಪಿದೆ.
ಮನೀಷ್ ಪಾಂಡೆ ಔಟಾಗದೆ 99 ರನ್ ಗಳಿಸಿ ಕರ್ನಾಟಕ ತಂಡವನ್ನು ಸೆಮಿಫೈನಲ್‌ಗೆ ತಲುಪಿಸುವಲ್ಲಿ ನೆರವಾದರು.
ಟೂರ್ನಿಯ ವಿವಿಧ ಪಂದ್ಯಗಳಲ್ಲಿ 56, 101, 69, 75 ರನ್ ದಾಖಲಿಸಿ ಉತ್ತಮ ಫಾರ್ಮ್‌ನಲ್ಲಿರುವ ಪಾಂಡೆ ಮುಂಬೈ ವಿರುದ್ಧದ ಪಂದ್ಯದಲ್ಲಿ 112 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 1ಸಿಕ್ಸರ್ ಸಹಾಯದಿಂದ 99 ರನ್ ಗಳಿಸಿ ಶತಕ ವಂಚಿತರಾದರು.
ಗೆಲುವಿಗೆ 287 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿತು.
ಕರ್ನಾಟಕ ತಂಡ 5.3 ಓವರ್‌ಗಳಲ್ಲಿ 33 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಮಾಯಾಂಕ್ ಅಗರ್‌ವಾಲ್ ವಿಕೆಟ್ ಕಳೆದುಕೊಂಡರೂ, ರಾಬಿನ್ ಉತ್ತಪ್ಪ 45 ಎಸೆತಗಳಲ್ಲಿ 43 ರನ್‌ಗಳ ಕಾಣಿಕೆ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ರಾಬಿನ್ ಉತ್ತಪ್ಪ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ಎಸ್.ಗೋಪಾಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ನಾಲ್ಕನೆ ವಿಕೆಟ್‌ಗೆ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ 119 ರನ್‌ಗಳ ಜೊತೆಯಾಟ ನೀಡಿದರು. 38.3 ಓವರ್‌ಗಳಲ್ಲಿ ತಂಡದ ಸ್ಕೋರ್‌ನ್ನು 203ಕ್ಕೆ ಏರಿಸಿ ಬಿನ್ನಿ ಔಟಾದರು. ಬಿನ್ನಿ 58 ರನ್(67ಎ, 3ಬೌ, 1ಸಿ) ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಕರುಣ್ ನಾಯರ್ ಅವರು ಪಾಂಡೆಗೆ 60 ರನ್‌ಗಳ ಕೊಡುಗೆ ನೀಡಿದರು. ಇದಕ್ಕೂ ಮೊದಲು ಮುಂಬೈ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 286 ರನ್ ಸಂಪಾದಿಸಿತ್ತು. ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಐಯ್ಯರ್ 135 ರನ್‌ಗಳ ಜೊತೆಯಾಟ ನೀಡಿದರು. ಯಾದವ್ 67 ಮತ್ತು ಅಯ್ಯರ್ 77 ರನ್ ಗಳಿಸಿದರು.
ಪಂಜಾಬ್‌ಗೆ ಜಯ: ಪಂಜಾಬ್ ತಂಡ ರೈಲ್ವೇಸ್ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿತು.
244 ರನ್‌ಗಳ ಗೆಲುವಿನ ಗುರಿ ಪಡೆದ ಪಂಜಾಬ್ ತಂಡ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗಳ ನಷ್ಟದಲ್ಲಿ 247 ರನ್ ಗಳಿಸಿ ಗೆಲುವಿನ ದಡ ತಲುಪಿತು.
ಯುವರಾಜ್ ಸಿಂಗ್ (56), ಗುರುಕೀರತ್ ಸಿಂಗ್(56),ಅಮಿತೋಝೆ ಸಿಂಗ್(43), ಎಂ.ವೋರಾ (32), ಮನ್‌ದೀಪ್ ಸಿಂಗ್ (32) ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ನ ಅವಕಾಶ ಪಡೆದ ರೈಲ್ವೇಸ್ ತಂಡ ಬಲ್ಟೇಜ್ ಸಿಂಗ್(5-33) ಪ್ರಹಾರದ ನಡುವೆಯೂ ನಿಗದಿತ 50 ಓ ವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 243 ರನ್ ಗಳಿಸಿತ್ತು. ಎಪಿ.ಮಜುಂದಾರ್ (76) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಮುಂಬೈ 50 ಓವರ್‌ಗಳಲ್ಲಿ 286/8
( ಎಸ್‌ಎಸ್ ಅಯ್ಯರ್ 77, ಸೂರ್ಯಕುಮಾರ್ ಯಾದವ್ 67; ಅಭಿಮನ್ಯು ಮಿಥುನ್ 2-57).
ಕರ್ನಾಟಕ 49.4 ಓವರ್‌ಗಳಲ್ಲಿ 287/6
(ಪಾಂಡೆ ಔಟಾಗದೆ 99, ಸ್ಟುವರ್ಟ್ ಬಿನ್ನಿ 58; ಮೊಟಾ 2-39).
ರೈಲ್ವೇಸ್ 50 ಓವರ್‌ಗಳಲ್ಲಿ 243/9
(ಮಜುಂದಾರ್ 76, ಅಸದ್ ಪಠಾಣ್ 31, ಘೋಷ್ 31; ಬಾಲ್ಟೇಜ್ ಸಿಂಗ್ 5-33).
ಪಂಜಾಬ್ 47.2 ಓವರ್‌ಗಳಲ್ಲಿ 247/5 (ಯುವರಾಜ್ ಸಿಂಗ್ 56, ಗುರುಕೀರತ್ ಸಿಂಗ್ 56, ಅಮಿತೋಝೆ ಸಿಂಗ್ 43; ಎಸಿಪಿ 3-42).

http://vbnewsonline.com

Write A Comment