ಮನೋರಂಜನೆ

ನಿನಗೆ ಅರ್ಪಿತ: ಬಾಲಿವುಡ್ ನ ಮುದ್ದಿನ ತಂಗಿ

Pinterest LinkedIn Tumblr

arpita-salman-salim-aayush

ಎಂದಿನಂತದೇ ಒಂದು ರಾತ್ರಿ. ಮಳೆ ಜೋರಾಗಿ ಹೊಯ್ಯುತ್ತಿತ್ತು. ಸಲೀಂಖಾನ್ ನ ಎರಡನೇ ಪತ್ನಿ ಹೆಲೆನ್ ಗೆ ಮಗುವೊಂದರ ಅಳು ಜೋರಾಗಿ ಕೇಳತೊಡಗಿತು.

ಹುಡುಕ ಹೊರಟವಳಿಗೆ ಕಂಡಿದ್ದು ರಸ್ತೆ ಬದಿಯಲ್ಲಿ ಮಳೆಯಲ್ಲಿ ಮಲಗಿದ್ದ ಅನಾಥಮಗು. ಅದನ್ನೆತ್ತಿಕೊಂಡು ಬಂದ ಹೆಲೆನ್ ಅದಕ್ಕೊಂದು ಹೆಸರು ನೀಡಿದಳು. ದೊಡ್ಡ ಕುಟುಂಬ ನೀಡಿದಳು. ಪ್ರೀತಿಯು  ಧಾರೆಯಾಗಿ ಅವಳ ಮೇಲೆ ಹರಿಯ ತೊಡಗಿತು.

ಎಲ್ಲೋ ಕಾಡಿನಲ್ಲಿ ಅಳುತ್ತಿದ್ದ ಮಗು, ರಾಜಕುಮಾರಿ ಸೀತೆಯಾದಂತೆ ಈ ಅರ್ಪಿತಾಖಾನ್ ಶ್ರೀಮಂತ ಕುಟುಂಬದ ಮುದ್ದಿನ ಕುಡಿಯಾಗಿ ರಾಜಕುಮಾರಿಯಂತೆಯೇ ಬೆಳೆದಳು. ನಿನ್ನೆ ಅವಳ ಮದುವೆ. ದಿನವೊಂದಕ್ಕೆ 1 ಕೋಟಿ ಬಾಡಿಗೆಯ ಹೈದರಾಬಾದ್ ನ ಫಲುಕ್ ನುಮ ಪ್ಯಾಲೇಸನ್ನು ಖಾನ್ ಫ್ಯಾಮಿಲಿ 5 ದಿನಗಳಿಗೆ ಬುಕ್ ಮಾಡಿದೆ.

ಸೀತಿಯೆ ಮದುವೆಯೂ ಇಷ್ಟು ಅದ್ಧೂರಿಯಾಗಿ ನಡೆದಿತ್ತೋ ಇಲ್ಲವೋ, ಅರ್ಪಿತಾ ಮದುವೆ ಮಾತ್ರ ಇಡೀ ದೇಶದ ಗಮನ ಸೆಳೆದಿದೆ. ಸಲ್ಲುಭಾಯ್ ಮೇಲಿನ ಪ್ರೀತಿಯಿಂದ ಬಾಲಿವುಡ್ ನಕ್ಷತ್ರಗಳೆಲ್ಲ ಪ್ಯಾಲೇಸ್ ಅಂಗಳದಲ್ಲಿ ಮಿನುಗಿದವು.

ಸಲ್ಮಾನ್ ಭಯ್ಯ 16 ಸದಸ್ಯರ ಖಾನ್ ಖಾಂದಾನ್ ನಲ್ಲಿ 16 ವರ್ಷಗಳ ನಂತರ ಮದುವೆ ಸಂಭ್ರಮ ತುಂಬಿದೆ. ಎಲ್ಲರಿಗೂ ಅರ್ಪಿತಾ ಅಚ್ಚುಮೆಚ್ಚೆಂದ ಮೇಲೆ ಅರ್ಪಿತಾಳಿಗೂ ಎಲ್ಲರೂ ಹೆಚ್ಚೇ. ಅತಿ ಚಿಕ್ಕ ತಂಗಿಯಾದ್ದರಿಂದ ಸಲ್ಮಾನ್ ಖಾನ್ ಗೂ ತಂಗಿಯ ಮೇಲೆ ಮುದ್ದೋ ಮುದ್ದು. ಅಣ್ಣ ಅಷ್ಟೆಲ್ಲ ಕೆಲಸಗಳಲ್ಲಿ ಬ್ಯುಸಿ ಇರುವಾಗಲೂ ನನ್ನೊಂದಿಗೆ ಸಲುಗೆಯ ಸಂಬಂಧ ಹಂಚಿಕೊಳ್ಳುತ್ತಾನೆ.

ನನಗಾಗಿ ಸಮಯ ಮಾಡಿಕೊಳ್ಳುತ್ತಾನೆ ಎಂದು ಬೀಗುತ್ತಾಳೆ ಅರ್ಪಿತಾ. ಸಲ್ಮಾನ್ ಭಯ್ಯಾನ ಜೊತೆ ನಟಿಸಿದ ನಟಿಯರೆಲ್ಲ ಅರ್ಪಿತಾಳಿಗೆ ಗೆಳತಿಯರಂತೆ. ಅವರಿಬ್ಬರ ನಡುವೆ ವಯಸ್ಸಿನ ಅಂತರ ತುಂಬಾ ಇರುವುದರಿಂದ, ಅಣ್ಣ ತಂಗಿಯರ ನಡುವಿನ ಸಾಮಾನ್ಯ ಜಗಳಗಳೂ ನಡೆದೇ ಇಲ್ಲ. ಹೀಗಾಗಿ ಅಂದಿನಿಂದ ಇಂದಿನವರೆಗೂ ಸಲ್ಮಾನ್ ಎಂದಿಗೂ ಅವಳ ಮುದ್ದಿನ ಅಣ್ಣನೇ.

ಮಲತಾಯಿಯ ದತ್ತುಪುತ್ರಿಯ ಮದುವೆ ಎಂದರೂ ಸಲ್ಮಾನ್ ಹಿಗ್ಗಿ ಹೀರೇಕಾಯಿಯಾಗಿ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ಬಾಲಿವುಡ್ನ ಬಚ್ಚನ್, ಕಪೂರ್, ಖಾನ್ ಫ್ಯಾಮಿಲಿಗಳೆಲ್ಲವನ್ನೂ ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾನೆ. ಅರ್ಪಿತಾ ಬಯಸಿದಳೆಂದು ದಿನವೊಂದಕ್ಕೆ ಕೋಟಿ ಬಾಡಿಗೆ ನೀಡಿ ಅರಮನೆಯಲ್ಲಿ ಮದುವೆ ವ್ಯವಸ್ಥೆ ಮಾಡಿದ್ದಾನೆ.

‘ನನ್ನ ತಂಗಿಯ ಮದುವೆ ಜೋರು ಜೋರು ಜೋರು’ ಎಂದು ಸಂಭ್ರಮವನ್ನು ಬದುಕಿಗಿಂತಾ ದೊಡ್ಡದಾಗಿ ಆಚರಿಸುತ್ತಿದ್ದಾನೆ. ಇದಲ್ಲದೆ ಈ ‘ದೇವರು ಕೊಟ್ಟ ತಂಗಿ’ಗಾಗಿ ಮುಂಬೈನಲ್ಲಿ 16 ಕೋಟಿ ಬೆಲೆಬಾಳುವ 3 ಬೆಡ್ರೂಂನ ಮನೆಯೊಂದನ್ನೂ ಗಿಫ್ಟ್ ಕೊಡಲು ಖರೀದಿಸಿದ್ದಾನೆ. ಅದು ‘ಬಿಯಿಂಗ್ ಹ್ಯೂಮನ್’ ಎನ್ ಜಿಒ ಒಂದರ ಯಜಮಾನನಾಗುವಲ್ಲಿ ಸಲ್ಮಾನ್ ಗಿರುವ ಅರ್ಹತೆ.

ಇನ್ನು ಅರ್ಪಿತಾಳನ್ನು ಮನೆಗೆ ತಂದದ್ದು ಹೆಲೆನ್ ಆದರೂ ಸಲೀಂನ ಮೊದಲನೇ ಪತ್ನಿ ಸಲ್ಮಾ ಬಳಿ ಈಕೆಗೆ ಇನ್ನಿಲ್ಲದ ಸಲುಗೆಯಂತೆ. ಅಮ್ಮ ನನ್ನ ಬೆಸ್ಟ್ ಫ್ರೆಂಡ್, ಸಣ್ಣಪುಟ್ಟ ವಿಷಯಗಳನ್ನೂ ಸಂಕೋಚವಿಲ್ಲದೆ ಅವಳಲ್ಲಿ ಹಂಚಿಕೊಳ್ಳಬಲ್ಲೆ. ಅವಳಲ್ಲದೆ ಏನೇ ಸಮಸ್ಯ ಬಂದರೂ ಅಣ್ಣ ಸೋಹೇಲ್ ಖಾನ್ ಕಡೆಗೆ ತಿರುಗುತ್ತೇನೆ. ಇಷ್ಟಲ್ಲದೆ ಮನೆಯಲ್ಲಿ ಯಾವುದೇವಾದ ನಡೆದರೂ ಅಪ್ಪ ನನ್ನ ಪರ. ನನ್ನೆಲ್ಲ ನಿರ್ಧಾರಗಳ ಹಿಂದೆ ಅಪ್ಪನ ಕೈವಾಡ ಇರುತ್ತದೆ ಎನ್ನುವ ಅರ್ಪಿತಾಳ ಮಾತು ಕೇಳುತ್ತಿದ್ದರೆ, ಅಯ್ಯೋ, ಸಲ್ಮಾನ್ ಏಕೆ ನನ್ನನ್ನೂ ದತ್ತು ತಂಗಿಯಾಗಿ ಸ್ವೀಕರಿಸಬಾರದಿತ್ತು ಎದಂು ಹುಡುಗಿಯರೆಲ್ಲ ಉರಿಉರಿ ಉರಿದುಕೊಳ್ಳತ್ತಾರೆ.

ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ 25 ವರ್ಷದ ಅರ್ಪಿತಾ ಇದೀಗ ತನ್ನ ಹಳೆ ಗೆಳೆಯನಾದ ಆಯುಶ್ ಶರ್ಮಾನ ಕೈ ಹಿಡಿದಿದ್ದಾಳೆ. ರಾಜಕಾರಣಿ ಅನಿಲ್ ಶರ್ಮಾನ ಮಗ ಆಯುಶ್ ಬ್ಯುಸಿನೆಸ್ಮನ್ ಆದರೂ ಬಾಲಿವುಡ್ ಬಳಗ ಸೇರಲು ಯೋಜಿಸಿದ್ದಾನೆ.

ಮುಂದಿನ ಮೂರು ವರ್ಷಗಳ ಕಾಲ ನಟನೆಯಲ್ಲಿ ತೊಡಗಿಕೊಂಡು ತನ್ನ ಲಕ್ ಪರೀಕ್ಷಿಸಿಕೊಳ್ಳಲು ಕಾತರನಾಗಿದ್ದಾನೆ. ಏನೇ ಆಗಲಿ, ಎಲ್ಲೋ ಬೀದಿಯಲ್ಲಿ ಅಳುತ್ತಿದ್ದ ಮಗುವೊಂದರ ಮದುವೆ ದೇಶ ಕಂಡ ಅತ್ಯಂತ ವೈಭವದ ಮದುವೆಗಳ ಸಾಲಿನಲ್ಲಿ ಸೇರಿರುವುದು ಅಚ್ಚರಿಯಲ್ಲವೇ? ಅರ್ಪಿತಾ ಕತೆ ಕೇಳುತ್ತಿದ್ದರೆ ಅದೃಷ್ಟ ವಿಧಿ ಇವನ್ನೆಲ್ಲ ನಂಬದೆ ವಿಧಿಯಿಲ್ಲ.

ಇಬ್ಬರು ಅಣ್ಣಂದಿರ ಮುದ್ದಿನ ತಂಗಿ

ಕಾರಣಾಂತರಗಳಿಂದ ಶಾರುಖ್ ಮತ್ತು ಸಲ್ಮಾನ್ ಖಾನ್ ಸ್ನೇಹದಲ್ಲಿ 5 ವರ್ಷದ ಹಿಂದೆ ಬಿರುಕು ಮೂಡಿತ್ತು. ಆದರೆ ಅರ್ಪಿತಾ ಮದುವೆ ಸಂಭ್ರಮದಲ್ಲಿ ಈ ಬಿರುಕು ಮುಚ್ಚಿಹೋಗಿದೆ. ಅರ್ಪಿತಾ ಮದುವೆ ಎಂದು ತಿಳಿಯುತ್ತಿದ್ದಂತೆಯೇ ಶಾರುಖ್, ನಾನವಳನ್ನು ತೊಟ್ಟಿನಲ್ಲಿ ತೂಗಿದ್ದೇನೆ. ಅವಳ ಮದುವೆಗೆ ನನಗೆ ಆಹ್ವಾನವೇ ಬೇಕಿಲ್ಲ ಎಂದು ಸಂಭ್ರಮಿಸಿದ್ದಾನೆ. ಇದನ್ನು ಕೇಳಿದ ಸಲ್ಲು ಇನ್ನಿಲ್ಲದ ಖುಷಿಯಲ್ಲಿ ಶಾರುಖ್ ನನ್ನು ಆಹ್ವಾನಿಸಿದ್ದಾನೆ. ಮದುವೆಗೆ ಎರಡು ದಿನಗಳ ಮುಂಚೆ ನಡೆದ ಮೆಹಂದಿ ಸಂಭ್ರಮದಲ್ಲಿಯೇ ಶಾರುಖ್ ಕಾಣಿಸಿಕೊಂಡು ಅರ್ಪಿತಾಳಿಗೆ ಹಾರೈಸುವುದರ ಮೂಲಕ ಬಾಲಿವುಡ್ ನ ಎರಡು ಸೂಪರ್ ಸ್ಟಾರ್ ಗಳ ಸ್ನೇಹ ಮತ್ತೆ ಚಿಗುರಿದೆ.

Write A Comment