ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ, ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್‌ಗೆ ಸುಪ್ರೀಂಕೋರ್ಟ್ ಸೋಮವಾರ ಕ್ಲೀನ್‌ಚಿಟ್ ನೀಡಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾ. ಮುಕುಲ್ ಮುದ್ಗಲ್ ನೀಡಿದ್ದ ವರದಿಯನ್ನು ಸುಪ್ರೀಂಕೋರ್ಟ್ ಬಹಿರಂಗಪಡಿಸಿದೆ. ಶ್ರೀನಿವಾಸನ್ ಅವರು ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಸೂಪರ್ ಚೆನ್ನೈ ಕಿಂಗ್ಸ್‌ನ ತಂಡದ ಮಾಲೀಕರಾಗಿರುವ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಸಹ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಆದರೆ ಇನ್ನು ಸೂಕ್ತ ಸಾಕ್ಷಾದಾರಗಳು ಸಿಕ್ಕಿಲ್ಲ ಎಂದು ವರದಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನೀಡಿರುವ ವರದಿಯನ್ನು ಇಂದು ಸುಪ್ರೀಂಕೋರ್ಟ್ ಬಹಿರಂಗಪಡಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರಾಗಿರುವ ರಾಜ್ ಕುಂದ್ರಾ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ ಕುಂದ್ರಾ ಅವರು ತಂಡದ ಮಾಲೀಕರಾಗಿದ್ದು, ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮುದ್ಗಲ್ ಸಮಿತಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಐಪಿಎಲ್ ಸಿಇಒ ಆಗಿರುವ ಸುಂದರ್ ರಾಮನ್ ಸಹ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಮುದ್ಗಲ್ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಪಿಎಲ್ 6ನೇ ಆವೃತ್ತಿಯಲ್ಲಿ ಸುಂದರ್ ರಾಮನ್ ಅವರು ಬುಕ್ಕಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ಬುಕ್ಕಿಗಳೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡಿದ್ದ ಸುಂದರ್ ರಾಮನ್ 8 ಸಲ ಬುಕ್ಕಿಗಳಿಗೆ ದೂರವಾಣಿ ಕರೆ ಮಾಡಿದ್ದರು ಎಂದು ತಿಳಿದುಬಂದಿದೆ. ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದು ಸಮಿತಿ ವರದಿಯಲ್ಲಿ ತಿಳಿದುಬಂದಿರುವುದರಿಂದ ಸಿಇಒ ಸ್ಥಾನದಿಂದ ಸುಂದರ್ ರಾಮನ್‌ರನ್ನು ವಜಾಗೊಳಿಸುವ ಸಾಧ್ಯತೆ ಇದೆ.