ಮನೋರಂಜನೆ

ಮದುವೆ ಉಳಿಯಬೇಕೆ?: ಯಶಸ್ವಿ ದಾಂಪತ್ಯಕ್ಕೆ ಖ್ಯಾತ ಹಾಲಿವುಡ್ ನಟ ವಿಲ್‌ಸ್ಮಿತ್ ಟಿಪ್ಸ್

Pinterest LinkedIn Tumblr

vill

ಪ್ರತಿ ಬಾರಿ ಹಾಲಿವುಡ್‌ನಲ್ಲಿ ಯಾರಾದರೂ ಡೈವೊರ್ಸ್ ಕೊಟ್ಟುಕೊಂಡಾಗ ನಾನು ಮತ್ತು ಜೇಡಾ ಇಬ್ಬರೂ ಸೇರಿ ಅವರ ಕೇಸ್ ಸ್ಟಡಿ ಮಾಡುತ್ತೇವೆ. ಟಾಮ್ ಕ್ರೂಸ್, ನಿಕೋಲ್ ಕಿಡ್ಮನ್, ಬ್ರೂಸ್ ವಿಲ್ಸ್, ಡೆಮಿ ಮೂರೆ ಮುಂತಾದವರು ವಿಚ್ಛೇದನ ಕೊಟ್ಟಾಗ ನಾವಿಬ್ಬರೂ ಅವರನ್ನು ಭೇಟಿ ಮಾಡಿ ಬಹಳ ಹೊತ್ತು ಮಾತಾಡಿದೆವು. ಅವರೇಕೆ ಬೇರೆಯಾದರು ಎಂಬುದನ್ನು ತಿಳಿದುಕೊಂಡೆವು. ಹೀಗೆ ಮಾಡುವ ಮೂಲಕ ನಮ್ಮಿಬ್ಬರ ನಡುವೆ ಅವರು ಮಾಡಿದಂತಹ ತಪ್ಪು ಘಟಿಸದಂತೆ ನೋಡಿಕೊಳ್ಳುತ್ತೇವೆ.

ನನ್ನ ಪ್ರಕಾರ ಒಂದು ಮದುವೆ ಯಶಸ್ವಿಯಾಗಬೇಕೆಂದರೆ ಏನು ಮಾಡಬೇಕು ಗೊತ್ತಾ? ಹೆಂಡತಿ ಅಥವಾ ಗಂಡನಿಗೆ ಮೋಸ ಮಾಡುವುದಕ್ಕಿಂತ ಮೊದಲು ಅದಕ್ಕೆ ಅವರ ಬಳಿಯೇ ಅನುಮತಿ ಕೇಳಬೇಕು. ನಾನು ಮತ್ತು ಜೇಡಾ ಇದನ್ನೇ ಮಾಡುತ್ತೇವೆ. ಯಾರೋ ಮೂರನೇ ವ್ಯಕ್ತಿಯಲ್ಲಿ ನಮಗೆ ಆಸೆಯಾದರೆ, ಅವರ ಜೊತೆ ಒಂದು ದಿನ ಕಳೆಯುತ್ತೇನೆ, ನೀನು ಪರ್ಮಿಷನ್ ಕೊಡಬೇಕು ಎಂದು ಕೇಳುತ್ತೇವೆ. ನೈಸರ್ಗಿಕವಾಗಿ ಸಂಭವಿಸುವ ಯಾವುದನ್ನೂ ತಡೆಯಬಾರದು ಎಂಬುದು ನಮ್ಮ ಸಿದ್ಧಾಂತ. ಯಾರಲ್ಲೋ ನಿಮಗೆ ಸಹಜವಾಗಿ ಆಕರ್ಷಣೆ ಉಂಟಾಗುತ್ತದೆ. ಅದನ್ನು ತಡೆಯಬಾರದು. ನಾವು ಮದುವೆಯಾಗುವಾಗ ‘ಬೇರೆಲ್ಲರನ್ನೂ ಧಿಕ್ಕರಿಸುತ್ತೇವೆ’ ಎಂಬ ಶಪಥವನ್ನೇನೂ ಮಾಡಿಲ್ಲ.

ಪ್ರೀತಿಯಲ್ಲಿ ಹೇಗೆ ಗೆಲ್ಲಬೇಕು ಎಂಬುದಕ್ಕೆ ಯಾವ ಸೂತ್ರವೂ ಇಲ್ಲ. ಆದರೆ, ಇಬ್ಬರ ನಡುವೆ ಬದ್ಧತೆ ಬೇಕು. ಅದೊಂದೇ ಸೂತ್ರ ಗಂಡ-ಹೆಂಡತಿಯನ್ನು ಅಥವಾ ಪ್ರಿಯಕರ- ಪ್ರಿಯತಮೆಯನ್ನು ಹಿಡಿದಿಡಲು ಸಾಧ್ಯ. ನಾನು ಮತ್ತು ಜೇಡಾ ಮದುವೆಯಾಗಿಲ್ಲ. ಆದರೂ 17 ವರ್ಷಗಳಿಂದ ಜೊತೆಗಿದ್ದೇವೆ. ಹಾಲಿವುಡ್‌ನಲ್ಲಿ ನಮ್ಮಿಬ್ಬರದು ಅಪರೂಪದ ಯಶಸ್ವಿ ‘ದಾಂಪತ್ಯಗಳಲ್ಲಿ’ ಒಂದು. ಅದಕ್ಕೂ ಮುನ್ನ ನಮಗಿಬ್ಬರಿಗೂ ಬೇರೆಯವರ ಜೊತೆ ಮದುವೆಯಾಗಿತ್ತು. ಇಬ್ಬರೂ ಆ ಮದುವೆಯಲ್ಲಿ ಸೋತೆವು. ನಾನು ಹೆಂಡತಿಯಿಂದ, ಅವಳು ಗಂಡನಿಂದ ಬೇರೆಯಾದ ಮೇಲೆ ನಮ್ಮಿಬ್ಬರ ಭೇಟಿಯಾಯಿತು.

ಮದುವೆ ಯಶಸ್ವಿಯಾಗಲು ಇಬ್ಬರ ನಡುವೆ ಬದ್ಧತೆ ಇರಬೇಕು ಅಂದೆನಲ್ಲ, ಆ ಬದ್ಧತೆ ಏನು ಗೊತ್ತಾ? ಅದು ಪರಸ್ಪರರ ಬಗ್ಗೆ ಇರುವ ಬದ್ಧತೆಯಲ್ಲ, ನಮ್ಮೊಳಗೆ ನಮಗಿರುವ ಬದ್ಧತೆ. ನನ್ನ ಸಂಗಾತಿಗೆ ನನ್ನಿಂದ ಸಾಧ್ಯವಾದಷ್ಟು ಗರಿಷ್ಠ ಪ್ರೀತಿ ನೀಡುತ್ತೇನೆಂಬ ನಿರ್ಧಾರದ ಬದ್ಧತೆ. ಪ್ರೀತಿಯ ಮುಂದೆ ಸಂಬಂಧಗಳಲ್ಲಿ ಬೇರೆಲ್ಲವೂ ಗೌಣ. ಸಂಗಾತಿಗಳಲ್ಲಿ ಆಗಾಗ ಇಬ್ಬರ ನಡುವೆ ಒಂದು ಮಾತು ಬರುತ್ತದೆ ಹೋಗುತ್ತದೆ, ಆದರೆ ನಿಜವಾದ ಪ್ರೀತಿಯಿದ್ದರೆ ದಾಂಪತ್ಯಕ್ಕೆ ಇನ್ನೇನೂ ಅಡ್ಡಿ ಬರಲು ಸಾಧ್ಯವಿಲ್ಲ. ನಾನು ಒಳ್ಳೆಯವನಾಗಿರುತ್ತೇನೆ, ಕಾಯಾ ವಾಚಾ ಮನಸಾ ಒಳ್ಳೆಯವನಾಗಿರುತ್ತೇನೆ, ನಿನ್ನೆಗಿಂತ ಇವತ್ತು ಹೆಚ್ಚು ಒಳ್ಳೆಯವನಾಗಿರುತ್ತೇನೆ ಎಂದು ನಿರ್ಧರಿಸಿಕೊಂಡರೆ ನಿಮ್ಮ ಸಂಗಾತಿಗೆ ಅದಕ್ಕಿಂತ ಹೆಚ್ಚಿನದು ಏನೂ ಬೇಡ. ಇವತ್ತು ಮಾಡುವ ತಪ್ಪನ್ನು ನಾಳೆ ಮಾಡದಿದ್ದರೆ ಅಷ್ಟು ಸಾಕು. ಅದೇ ನಿಮ್ಮ ಮದುವೆಯನ್ನು ಉಳಿಸುತ್ತದೆ.

ಯಾರಿಗೆ ಪ್ರೀತಿ ನೀಡಬೇಕು?

ನೀವು ಯಾವ ಆರು ಜನರ ಜೊತೆ ಅತಿ ಹೆಚ್ಚು ಸಮಯ ಕಳೆಯುತ್ತೀರೋ ಅದನ್ನು ನೋಡಿದರೆ ಸಾಕು, ನೀವೇನು ಎಂಬುದನ್ನು ನಿರ್ಧರಿಸಬಹುದು. ನಿಮ್ಮ ಬದುಕಿನ ಅತಿ ಹೆಚ್ಚು ಸಮಯ ಯಾರ ಜೊತೆ ಕಳೆಯುತ್ತೀರೋ ಅವರ ಜೊತೆ ಮಾತನಾಡುವುದು ಪ್ರತಿದಿನ ಊಟ ಮಾಡಿದಂತೆ. ಅದು ಬದುಕಿನ ಅಗತ್ಯವಾಗಬೇಕು. ಯಾರಿಗೆ ಪ್ರೀತಿ ನೀಡಬೇಕು ಎಂದು ಆಯ್ದುಕೊಳ್ಳುವುದು ನಮ್ಮ ಬದುಕಿನ ನಿರ್ಧಾರಕ ಕ್ಷಣಗಳಲ್ಲಿ ಒಂದು.

ಮದುವೆಯಾದ ಮೇಲೆ ಮುಗಿಯಿತು, ಇನ್ನು ನಾನೇನೂ ಸಾಧಿಸಲು ಸಾಧ್ಯವಿಲ್ಲ ಎಂದು ಬಹಳ ಜನ ಹೇಳುವುದನ್ನು ಕೇಳಿದ್ದೇನೆ. ನಂಬಿ, ಮದುವೆಯೆಂಬುದು ಬಂಧನವಲ್ಲ. ಅದೇನೂ ಜೈಲು ಕೋಣೆಯಲ್ಲ. ಅಲ್ಲಿ ಗಂಡ ಹೆಂಡತಿ ಇಬ್ಬರೂ ಬೆಳೆಯಲು ಸಾಕಷ್ಟು ಸ್ವಾತಂತ್ರ್ಯವಿದೆ. ಇರಬೇಕು ಕೂಡ. ಅಲ್ಲಿ ತಪ್ಪು ಮಾಡಲು ಅವಕಾಶವಿರಬೇಕು. ಶಿಕ್ಷೆಯ ಭಯವಿಲ್ಲದೆ ಬೆಳೆಯಲು ಅವಕಾಶವಿರಬೇಕು. ಶಿಕ್ಷೆಯ ಭಯವೇ ಪ್ರೀತಿಯನ್ನು ಕಿತ್ತುಕೊಳ್ಳುತ್ತದೆ. ಅದು ಬೆಳವಣಿಗೆಗೂ ಮಾರಕ. ತಪ್ಪು ಯಾವತ್ತು ಶಿಕ್ಷೆಗೆ ಕಾರಣವಾಗುತ್ತದೆಯೋ ಆವತ್ತು ಅಲ್ಲಿ ಪ್ರೀತಿ ಸಾಯತೊಡಗುತ್ತದೆ. ಬದಲಿಗೆ ತಪ್ಪು ಮಾಡುವುದು ನಮ್ಮ ಅನುಭವವಾಗಬೇಕು. ಅಲ್ಲಿ ನಮ್ಮ ನಮ್ಮ ಅಭದ್ರತೆಗಳನ್ನು ಹಂಚಿಕೊಳ್ಳುವ ಮುಕ್ತ ವಾತಾವರಣವಿದ್ದರೆ ಅದನ್ನು ಮೀರಿ ಬೆಳೆಯಲು ಸಾಧ್ಯವಾಗುತ್ತದೆ.

ಪ್ರೀತಿಗೆ ಕಾರಣ ಹುಡುಕಬೇಡಿ

ಪ್ರೀತಿಗೆ ಷರತ್ತುಗಳು ಅನ್ವಯಿಸುವುದಿಲ್ಲ. ಷರತ್ತು ಬಂದಾಕ್ಷಣ ಪ್ರೀತಿ ಕಮರುತ್ತದೆ. ಬೇಷರತ್ ಪ್ರೀತಿಯೇ ನಿಜವಾದ ಪ್ರೀತಿ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೆ ನಿನ್ನನ್ನು ಪ್ರೀತಿಸುತ್ತೇನೆ, ತಿಂಗಳಿಗೆ ನನ್ನ ಖರ್ಚಿಗೆಂದು ಇಷ್ಟು ಹಣ ಕೊಟ್ಟರೆ ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಹಾಗಾಗಿ ನಿನ್ನನ್ನು ಪ್ರೀತಿಸುವುದಿಲ್ಲ ಎಂಬುದೆಲ್ಲ ಬುಲ್‌ಶಿಟ್. ಪ್ರೀತಿಗೆ ಕಾರಣ ಹುಡುಕಬೇಡಿ. ಕಾರಣವಿದ್ದಾಗ ಮಾತ್ರ ಪ್ರೀತಿಸುವುದು ಪ್ರೀತಿಯಲ್ಲ, ಅದು ಬಿಸಿನೆಸ್. ಅದೊಂದು ವ್ಯಾಪಾರ. ಕೊಟ್ಟು ತೆಗೆದುಕೊಳ್ಳುವ ವ್ಯಾಪಾರ. ದೇವರೇ, ಪರೀಕ್ಷೆಯಲ್ಲಿ ಪಾಸಾದರೆ ನಿನಗೆ ವಿಶೇಷ ಪೂಜೆ ಮಾಡಿಸುತ್ತೇನೆ ಎಂಬಂತೆ ಇದೂ ಕೂಡ. ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯುವವನು ಹೇಗೆ ನಿಜವಾದ ಭಕ್ತನಲ್ಲವೋ ಹಾಗೆಯೇ ಕಾರಣವಿದ್ದಾಗ ಮಾತ್ರ ಪ್ರೀತಿಸುವವನು ನಿಜವಾದ ಸಂಗಾತಿಯೂ ಅಲ್ಲ.

ಮದುವೆಯಲ್ಲಿ ಜಗಳ ಬರುವುದು ಯಾವಾಗ ಗೊತ್ತಾ? ನಮ್ಮ ಬಗ್ಗೆಯೇ ನಮಗೆ ಅಭದ್ರತೆ ಕಾಡತೊಡಗಿದಾಗ. ನಾನು ಸೋಲುತ್ತಿದ್ದೇನೆ, ನನ್ನ ಸಂಬಳ ಏರಿಕೆಯಾಗುತ್ತಿಲ್ಲ, ನನಗೆ ಪ್ರಚಾರ ಸಿಗುತ್ತಿಲ್ಲ ಎಂಬುದೆಲ್ಲ ನಿಮ್ಮನ್ನು ಅಭದ್ರತೆಗೆ ದೂಡುವ ಅಂಶಗಳು. ಆಗ ನೀವು ಹೆಂಡತಿ/ಗಂಡನ ಜೊತೆ ಜಗಳವಾಡುತ್ತೀರಿ, ಕಿರಿಕಿರಿ ಅನುಭವಿಸುತ್ತೀರಿ, ಸಿಟ್ಟು ಸೆಡವು ಮಾಡುತ್ತೀರಿ. ವಾಸ್ತವವಾಗಿ ಈ ಅಭದ್ರತೆಗಳು ಪ್ರೀತಿಗೆ ಅಡ್ಡ ಬರಬಾರದು. ಹಾಗಾಗಬೇಕು ಅಂದರೆ ಅಭದ್ರತೆಗಳನ್ನು, ನಮ್ಮ ಸಮಸ್ಯೆಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳಬೇಕು. ಆಗ ನಿಮ್ಮನ್ನು ನಿಮ್ಮ ಪರಿಸ್ಥಿತಿಯಲ್ಲೇ ಅವರು ಅರ್ಥಮಾಡಿಕೊಳ್ಳಲು ಸಾಧ್ಯ.ಹೆಂಡತಿ ಜೊತೆ ನರಕವಾಸಕ್ಕೂ ರೆಡಿ!

ಜಗತ್ತಿನಲ್ಲಿ ಬಹಳ ಸಮಸ್ಯೆಗಳಿವೆ. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೂ ಸಮಸ್ಯೆಗಳು ನಮ್ಮ ಜೊತೆಗೇ ಏಳುತ್ತವೆ. ಅವುಗಳನ್ನು ಮರೆತು ಗಂಡ/ಹೆಂಡತಿಯನ್ನು ಪ್ರೀತಿಸಲು ಯತ್ನಿಸುವುದು ಸಂಬಂಧ ಉಳಿಸಿಕೊಳ್ಳಲು ಬಹಳ ಮುಖ್ಯ ಅಂಶ. ಇದು ಖಂಡಿತ ಹಗುರವಾಗಿ ತೆಗೆದುಕೊಳ್ಳುವ ವಿಷಯವಲ್ಲ. ಯಾರನ್ನಾದರೂ ಮದುವೆಯಾಗಲು ನಿರ್ಧರಿಸಿದ್ದೀರೆಂದರೆ, ಅವರ ಜೊತೆ ನರಕವಾಸಕ್ಕೂ ನೀವು ರೆಡಿಯಾಗಿರಬೇಕು. ನಿಮ್ಮೊಳಗಿನ ಅತ್ಯಂತ ದುರ್ಬಲ ಭಾಗದ ಜೊತೆ ಘರ್ಷಣೆಗೆ ಸಿದ್ಧವಾಗಿರಬೇಕು. ಒಂಥರಾ ವೇದಾಂತಿಯ ಮನಸ್ಥಿತಿಯೂ ನಿಮಗಿರಬೇಕು. ನಿಮ್ಮೊಳಗಿನ ಹೇಡಿತನ, ಸಿಟ್ಟು, ಸಣ್ಣತನ ಎಲ್ಲವನ್ನೂ ಪರೀಕ್ಷೆಗೆ ಒಡ್ಡಲು ತಯಾರಿರಬೇಕು. ನಿಮ್ಮೊಳಗೆ ನಿಮಗೇ ಇಷ್ಟವಾಗದ ಸಂಗತಿಗಳೇನಾದರೂ ಇದ್ದರೆ ಅವುಗಳನ್ನು ಎದುರಿಸುವುದಕ್ಕೂ ಹೊರಗೆ ತೋರಿಸಿಕೊಳ್ಳುವುದಕ್ಕೂ ಸಿದ್ಧತೆ ಮಾಡಿಕೊಂಡಿರಬೇಕು. ಏಕೆಂದರೆ, ಮದುವೆಯಾದ ಮೇಲೆ ಅಥವಾ ಒಂದು ಸಂಬಂಧಕ್ಕೆ ಕಮಿಟ್ ಆದಮೇಲೆ ಅಲ್ಲಿ ಮುಚ್ಚಿಡುವಂಥದ್ದು ಏನೂ ಉಳಿಯುವುದಿಲ್ಲ. ಮುಚ್ಚಿಡಲು ಯತ್ನಿಸಿದರೆ ಅದೇ ಜಗಳಕ್ಕೆ ಕಾರಣವಾಗಬಹುದು.

ಡೈವೊರ್ಸ್ ಒಂದು ಆಪ್ಷನ್ ಅಲ್ಲ

ಜೇಡಾ ಜೊತೆಗಿನ ಲಿವಿಂಗ್ ಟುಗೆದರ್‌ನಿಂದ ನಾನು ಒಳ್ಳೆಯ ಮನುಷ್ಯನಾದೆ. ಬಹುಶಃ ಜಗತ್ತಿನಲ್ಲಿ ಬೇರಾರೂ ಅವಳಷ್ಟು ಚೆನ್ನಾಗಿ ನನ್ನನ್ನು ಪಾಲಿಶ್ ಮಾಡಲು ಸಾಧ್ಯವಿರಲಿಲ್ಲ. ಪ್ರೀತಿಯ ಹೊರತಾಗಿ ಒಬ್ಬ ಗಂಡನಿಗೆ ಹೆಂಡತಿಯಿಂದ ಸಿಗಬೇಕಾದ್ದು, ಹೆಂಡತಿಗೆ ಗಂಡನಿಗೆ ಸಿಗಬೇಕಾದ್ದು ಒಳ್ಳೆಯತನವೇ.

ಜೇಡಾ ಹಾಗೂ ನನ್ನ ಸಂಬಂಧ ಇಷ್ಟು ಸುದೀರ್ಘ ಕಾಲ ಉಳಿದುಕೊಂಡಿದೆ ಮತ್ತು ನಾವಿಬ್ಬರೂ ಬಹಳ ಚೆನ್ನಾಗಿದ್ದೇವೆ ಎಂಬುದು ಹಾಲಿವುಡ್‌ನಲ್ಲಿ ಅನೇಕರಿಗೆ ಅಚ್ಚರಿಯ ವಿಷಯ. ನಿಜ ಹೇಳಬೇಕೆಂದರೆ ನಮ್ಮ ಸಂಬಂಧವನ್ನು ಉಳಿಸಿದ್ದು ಕಮ್ಯುನಿಕೇಶನ್. ನಮ್ಮಿಬ್ಬರ ನಡುವಿನ ಸಂವಹನದ ಮಾರ್ಗ ಯಾವಾಗಲೂ ಕ್ಲಿಯರ್ ಆಗೇ ಇರುತ್ತದೆ. ಡೈವೊರ್ಸ್ ಎಂಬುದು ನಮ್ಮ ಯಾವ ವೈಮನಸ್ಯಕ್ಕೂ ಒಂದು ಆಪ್ಷನ್ ಅಲ್ಲ ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದೇವೆ. ಅಫ್‌ಕೋರ್ಸ್ ನಮ್ಮಿಬ್ಬರ ಮೊದಲ ಮದುವೆಯೂ ಮುರಿದುಬಿದ್ದಿತ್ತು. ನನ್ನ ಡೈವೊರ್ಸ್ ಕತೆ ತುಂಬಾ ನೋವಿನದ್ದು. ಅದನ್ನು ಸರಿಪಡಿಸಿಕೊಳ್ಳಬಹುದಿತ್ತು. ಅದೇನೂ ಉಳಿಸಲಾಗದ ಮದುವೆಯಾಗಿರಲಿಲ್ಲ. ಆದರೆ ನಾನೇ ಕೈಚೆಲ್ಲಿಬಿಟ್ಟೆ. ದಾಂಪತ್ಯ ಚೆನ್ನಾಗಿಲ್ಲದಿದ್ದರೆ ಅದನ್ನು ಕಷ್ಟಪಟ್ಟು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಒಂದು ಸಲ ಹಾಗೆ ಹೇಳಿದಿರೋ ಮುಗಿಯಿತು. ನಾನು ಮತ್ತು ಜೇಡಾ ನಮ್ಮ ಸಂಬಂಧಿಕರ ಜೊತೆ ದೇವರ ಮುಂದೆ ನಿಂತು ‘ಸಾಯುವತನಕ ಒಟ್ಟಿಗೇ ಇರುತ್ತೇವೆ’ ಎಂದು ಪ್ರಮಾಣ ಮಾಡಿದ್ದೆವು. ಹಾಗಾಗಿ ಇಲ್ಲಿರುವುದು ಎರಡೇ ಆಯ್ಕೆ- ಒಂದು ಅವಳ ಜೊತೆ ಸಾಯುವತನಕ ಇರುವುದು ಅಥವಾ ನಾನು ಸಾಯುವುದು!

ಹಾಗಂತ ನಮ್ಮಿಬ್ಬರ ನಡುವೆ ಏನೂ ಪ್ರಾಬ್ಲಂ ಇಲ್ಲ ಎಂದಲ್ಲ. ಬೇಕಾದಷ್ಟು ಇವೆ. ಎಲ್ಲರಿಗೂ ಸಮಸ್ಯೆಗಳಿರುತ್ತವೆ. ಆದರೆ ಪ್ರೀತಿಗೆ ಅವೆಲ್ಲವುಗಳನ್ನೂ ಹೊಡೆದುಕೊಂಡು ಮುಂದೆ ಹೋಗುವ ಶಕ್ತಿಯಿದೆ.

ನನ್ನ ಹತ್ತಿರವೂ ವಿಲ್‌ಸ್ಮಿತ್ ಬಳಿ ಇರುವಷ್ಟೇ ದುಡ್ಡಿದ್ದರೆ ನಾನು ಕೂಡ ಅವರಷ್ಟೇ ಚೆನ್ನಾಗಿ ಸಂಸಾರ ಮಾಡುತ್ತಿದ್ದೆ ಎಂದು ಬಹಳ ಜನ ಅಂದುಕೊಳ್ಳಬಹುದು. ಪ್ರೀತಿಯಲ್ಲಿ ಬೀಳುವುದಕ್ಕೂ, ಅದನ್ನು ನಿಭಾಯಿಸಿಕೊಂಡು ಹೋಗುವುದಕ್ಕೂ ದುಡ್ಡಿಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಹೆಚ್ಚು ದುಡ್ಡಿದ್ದರೆ ಸಂಬಂಧಗಳನ್ನು ನಿಭಾಯಿಸುವುದು ಹೆಚ್ಚು ಕಷ್ಟವಾಗುತ್ತದೆ. ಪ್ರೀತಿ ಉಳಿಯಬೇಕೆಂದರೆ ನಿಮ್ಮಲ್ಲಿರುವ ದುಡ್ಡನ್ನು ಮರೆತುಬಿಡಿ. ದುಡ್ಡಿಗೂ ಅದಕ್ಕೂ ಸಂಬಂಧ ಕಲ್ಪಿಸಲೇಬೇಡಿ. ಪ್ರೀತಿಯೇ ಬೇರೆ, ದುಡ್ಡೇ ಬೇರೆ. ಬದುಕಲು ದುಡ್ಡು ಬೇಕು, ಚೆನ್ನಾಗಿ ಬದುಕಲು ಪ್ರೀತಿ ಬೇಕು.

– ವಿಲ್‌ಸ್ಮಿತ್,  ಖ್ಯಾತ ಹಾಲಿವುಡ್ ನಟ

Write A Comment