ಮನೋರಂಜನೆ

ಅಭಿಮನ್ಯು ಚಿತ್ರ ವಿಮರ್ಶೆ: ಮಹತ್ವದ ಸಂದೇಶದ ಭಾರ ಹೊತ್ತು ಸೊರಗಿದ ಅಭಿಮನ್ಯು

Pinterest LinkedIn Tumblr

-375

ಹೊಡೆದಾಟದ ಚಿತ್ರದಲ್ಲಿ ಕೂಡ ಹೇಗೆ ಒಂದು ಒಳ್ಳೆಯ ಸಂದೇಶ ನೀಡಬಹುದೆಂಬುದನ್ನು ಅಭಿಮನ್ಯು ಚಿತ್ರದ ಮೂಲಕ ಅರ್ಜುನ್ ಸರ್ಜ ಸಾಬಿತು ಮಾಡಿದ್ದಾರೆ.ಚಿತ್ರದ ಆರಂಭದಲ್ಲೇ ತೋರಿಸಿರುವ ಕಥೆಯಲ್ಲಿ ಪ್ರತಿಷ್ಠಿತ ಕಾನ್ವೆಂಟ್ ನಲ್ಲಿ ತನ್ನ ಮಗಳನ್ನು ಕಲಿಸ ಬಯಸುವ ಬಡವನಿದ್ದಾನೆ. ಆತ ಅಲ್ಲಿನ ಭಾರೀ ಫೀಸನ್ನು ಪೂರ್ತಿಯಾಗಿ ಕಟ್ಟಲಾಗದೆ ಕುಟುಂಬ ಸಮೇತ ಆತ್ಮಹತ್ಯೆಗೈಯುತ್ತಾನೆ. ಈ ದುರಂತವನ್ನು ಕಣ್ಣಾರೆ ಕಂಡ ಒಬ್ಬ ಕರಾಟೆ ಮಾಸ್ಟರ್ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೆಲ್ಲ ಸರ್ಕಾರೀಕರಣಗೊಳಿಸಲು ಹೋರಾಡುತ್ತಾನೆ. ಆತನನ್ನು ಧಮನಿಸಲು ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಕರು ಡಾನ್ ಒಬ್ಬನ ಮೂಲಕ ಹಿಂಸಾತ್ಮಕ ಪ್ರಯತ್ನ ಮಾಡುತ್ತಾರೆ. ಇದೆಲ್ಲವನ್ನು ಕರಾಟೆ ಮಾಸ್ಟರ್ ಹೇಗೆ ಸಮರ್ಥವಾಗಿ ಎದುರಿಸಿ ಗೆಲ್ಲುತ್ತಾನೆ ಎಂಬುದೇ ಚಿತ್ರದ ಕತೆ.

ಆರಂಭದಲ್ಲಿರುವ ಬಡವನ ಮನೆಯ ಕತೆ ಒಂದು ಶೈಕ್ಷಣಿಕ ಕಿರುಚಿತ್ರವೇನೋ ಎಂಬಂತೆ ಅನಿಸದಿರದು. ದುಡ್ಡಿಗಾಗಿ ಕಿಡ್ನಿ ಮಾರುವ ತಂದೆಯ ಪಾತ್ರದ ಮೂಲಕ ಸಕತ್ ಸೆಂಟಿಮೆಂಟ್ ಗೆ ಪ್ರಯತ್ನಿಸಲಾಗಿದೆ. ಆದರೆ ಬಡತನಕ್ಕೆ ರೂಪಕೊಟ್ಟಂತೆ ಕಾಣಿಸುವ ಬೀರಾದಾರ್ ಪಾತ್ರ ನಿರ್ವಹಣೆ ಕತೆಗೆ ಜೀವತುಂಬಿದೆ. ಉಂಡೂಹೋದ ಕೊಂಡೂ ಹೋದ ಚಿತ್ರದ ಬಳಿಕ ತಮ್ಮ ನಟನೆ ಕಂಡವರು ಮರೆಯಲಾಗದಂಥ ಅಭಿನಯವನ್ನು ಬೀರಾದಾರ್ ನೀಡಿದ್ದಾರೆ. ಅರ್ಜುನ್ ಸರ್ಜಾ ಇನ್ನೂ ಜಂಟ್ಲ್ ಮ್ಯಾನ್ ಇಮೇಜ್ ನಲ್ಲೇ ಇರುವುದನ್ನು ಚಿತ್ರದ ಆರಂಭದಿಂದಲೇ ಕಾಣಬಹುದು. ಮಗು ಮತ್ತು ಕುಟುಂಬದ ಸಾವು ನಾಯಕ ಅತನ ಗುರಿಯನ್ನೇ ಬದಲಿಸುವಷ್ಟರ ಮಟ್ಟಿನ ಸಂಬಂಧ ಹೊಂದಿತ್ತು ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿಲ್ಲ. ಅದೇ ರೀತಿ ನಾಯಕಿ ಕೂಡ ನಾಯಕನನ್ನು ಆರಂಭದಿಂದಲೇ ಯಾಕೆ ಅಷ್ಟೊಂದು ಇಷ್ಟಪಟ್ಟಿರುತ್ತಾಳೆ ಎಂಬುದಕ್ಕೂ ಉತ್ತರವಿಲ್ಲ. ಅರ್ಜುನ್ ಎಂದಿನಂತೆ ನಟನೆಗಿಂತ ಹೊಡೆದಾಟದಲ್ಲಿ ಆಕರ್ಷಕವೆನಿಸುತ್ತಾರೆ. ಸ್ಟಂಟ್ ಮಾಸ್ಟರ್ ಕೂಡ ಅಭಿನಂದನಾರ್ಹರಾಗುತ್ತಾರೆ. ನಾಯಕಿ ಸುರ್ವಿನ್ ಚಾವ್ಲಾರಲ್ಲಿ ಆಕೆಯ ಚೆಲುವಿನಷ್ಟು ನಟನೆ ಕಾಣಿಸದು. ಬಹುಶಃ ಚಿತ್ರವನ್ನು ಡಬ್ ಮಾಡುವ ಉದ್ದೇಶದಿಂದಲೇ ಇರಬಹುದು ಹೆಚ್ಚಿನ ಪಾತ್ರಗಳಿಗೆ ತಮಿಳು, ತೆಲುಗು ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ರಾಹುಲ್ ದೇವ್ ಪಾತ್ರಕ್ಕೆ ಅನಗತ್ಯ ಬಿಲ್ಡಪ್ ನೀಡಲಾಗಿದೆ. ತಮಿಳಲ್ಲಿ ವಡಿವೇಲು ಮಾಡುವ ಹಾಸ್ಯಕ್ಕಾಗಿ ಹಾಸ್ಯವೆಂಬಂಥ ಪಾತ್ರವನ್ನು ಜಹಾಂಗೀರ್ ಟ್ರ್ಯಾಕ್ ಮೂಲಕ ತೋರಿಸಲಾಗಿದೆ. ತಮ್ಮ ಶೈಲಿ ಬಿಟ್ಟು ಸಂಗೀತ ನೀಡಿರುವ ಅರ್ಜುನ್ ಜನ್ಯಾ ನಿರಾಶೆ ಮೂಡಿಸುತ್ತಾರೆ. ಅನಗತ್ಯ ದೃಶ್ಯ ಮತ್ತು ಹಾಡುಗಳಿಗೆಲ್ಲ ಸ್ವಲ್ಪ ಕತ್ತರಿ ಹಾಕಿದ್ದರೆ ಚಿತ್ರದ ದೀರ್ಘಾವಧಿಯನ್ನು ಕಡಿಮೆಗೊಳಿಸಬಹುದಿತ್ತು. ಚಿತ್ರ ಮೊದಲೊಂದಷ್ಟು ಬೋರು ಹೊಡೆಯುತ್ತದೆ. ಆರಂಭದಲ್ಲೇ ನಾಯಕನಿಗೆ ಗುಂಡೇಟು ಬೀಳುವುದನ್ನು ತೋರಿಸುವುದರಿಂದಾಗಿ ಮುಂದೆ ನಾಯಕನ ರೌದ್ರಾವತಾರ ನೋಡಲು ಪ್ರೇಕ್ಷಕರು ಕಾಯುತ್ತಾರೆ. ಆ ಕಾಯುವಿಕೆಗೆ ನಿರಾಶೆ ಮಾಡದಂತೆ ಚಿತ್ರಕ್ಕೆ ಅಂತ್ಯ ನೀಡುವಲ್ಲಿ ಅರ್ಜುನ್ ಯಶಸ್ವಿಯಾಗಿದ್ದಾರೆ.

…………………………………………………….

ಮಹತ್ವದ ಸಂದೇಶದ ಭಾರ ಹೊತ್ತು ಸೊರಗಿದ ಅಭಿಮನ್ಯು
ಬಡಗಿ ಕೆಲಸ ಮಾಡುವ ಒಂದು ಬಡ ಕುಟುಂಬ. ಸರಕಾರಿ ಶಾಲೆಗಳೆಲ್ಲಾ ಕೆಟ್ಟವು-ಕೆಲಸಕ್ಕೆ ಬಾರದವು ಎಂಬ ಅಭಿಪ್ರಾಯ. ಮಗಳನ್ನು ಸಿರಿವಂತ ಮಕ್ಕಳೆ ಓದುವ ದುಬಾರಿ ಮತ್ತು ಹೆಸರುವಾಸಿ ಖಾಸಗಿ ಶಾಲೆಗೆ ಸೇರಿಸಬೇಕೆಂಬ ಆಸೆ. ಫೀಸ್ ೧.೨ ಲಕ್ಷ. ಚಿನ್ನ ಮಾರಿ ಬಂದದ್ದು ೨೪ ಸಾವಿರ. ಶಾಲಾ ಮುಖ್ಯಸ್ಥ ನಿಂದ ಫೀಸ್ ಕಟ್ಟಲು ೧೫ ದಿನಗಳ  ಗಡವು. ದುಡ್ಡಿಗಿದ್ದ ಎಲ್ಲ ಮಾರ್ಗಗಳು ಮುಚ್ಚಿ, ಕೊನೆಗೆ ತನ್ನ ಒಂದು ಕಿಡ್ನಿ ಮಾರಿ ೩೦ ಸಾವಿರ ಗಳಿಸುತ್ತಾನೆ. ಕೊನೆಗೂ ಫೀಸ್ ಕೊಡಲಾಗದೆ, ಮಗಳ ಮುಂದೆಯೇ ಶಾಲಾ ಮುಖ್ಯಸ್ಥನಿಂದ ಅವಮಾನ ಅನುಭವಿಸಿ, ಮನೆಯಲ್ಲಿ ಮಗಳಿಗೆ ವಿಷ ಕೊಟ್ಟು, ತನ್ನ ಹೆಂಡತಿಯ ಜೊತೆಗೂಡಿ ನೇಣಿಗೆ ಶರಣಾಗುತ್ತಾನೆ.

Abhimanyu-Film-Still-Arjun-Sarja

ಸುಂದರ ದೈಹಿಕ ಮೈಕಟ್ಟಿನ ಮಧ್ಯವಯಸ್ಕ ಅಭಿಮನ್ಯು (ಅರ್ಜುನ್ ಸರ್ಜಾ). ಲಂಚ ಕೊಟ್ಟು ಪೋಲೀಸ್ ಕೆಲಸಕ್ಕೆ ಸೇರಲು ಮನಸ್ಸು ಬರದೆ, ಹಾರ್ಡ್ವೇರ್ ರಿಪೇರಿ ಮಾಡಿ ಜೀವನ ನಡೆಸುವ ನಾಯಕ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಾನೆ. ಸ್ವತಃ ಉತ್ತಮ ಕರಾಟೆ ಪಟು. ಆದರ್ಶ ಯುವಕ. ಮೇಲೆ ತಿಳಿಸಿದ ಆತ್ಮಹತ್ಯಾ ಪ್ರಕರಣದ ವಿಷಯ ತಿಳಿದು, ದೇಶಕ್ಕೆ ಏನಾದರೂ ಮಾಡಬೇಕೆಂದು ಪಣ ತೊಡುತ್ತಾನೆ.

ಶಿಕ್ಷಣದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿ ಜಾಲಾಡಿ, ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕಲೆಹಾಕುತ್ತಾನೆ. ತನ್ನ ಗೆಳೆಯನೊಬ್ಬನ ಸಹಾಯದಿಂದ ಒಂದು ಪತ್ರಿಕಾ ಗೋಷ್ಠಿ ಕರೆದು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಿಲ್ಲ. ಆದರೆ ಖಾಸಗಿ ಶಾಲೆಗಳು ಬೇಡುವ ಶಿಕ್ಷಣ ಶುಲ್ಕವನ್ನು ಬಡವರು ಭರಿಸಲು ಸಾಧ್ಯವಿಲ್ಲ. ಶಿಕ್ಷಣದ ಹಕ್ಕು ಕಾಯ್ದೆ ಜಾರಿಯಿದ್ದರೂ, ಖಾಸಗಿ ಶಿಕ್ಷಣ ಸಂಸ್ಥೆಗಳು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆದುದರಿಂದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು, ಇಡೀ ಪ್ರಾಥಮಿಕ ಶಿಕ್ಷಣವನ್ನೆ ರಾಷ್ಟ್ರೀಕರಣ ಮಾಡಬೇಕೆಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಟಿವಿ ವಾಹಿನಿಗಳ ಮೂಲಕ ಆಗ್ರಹಿಸುತ್ತಾನೆ. ಈ ಪತ್ರಿಕಾ ಘೋಷ್ಟಿಯನ್ನು ಮನೆಮನೆಗಳಲ್ಲಿ, ಟಿವಿ ಶೋ  ರೂಮುಗಳಲ್ಲಿ ಗುಂಪು ಗುಂಪಾಗಿ ಜನ ನೋಡಿ ಅಭಿಮನ್ಯು ಮನೆಮಾತಾಗಿ, ಜನಮನದ ಕಣ್ಮಣಿಯಾಗುತ್ತಾನೆ. ಒಂದು ಹಾಡಿನಲ್ಲಿ ಜನರಿಗೆ ಆಧುನಿಕ ಅಂಬೇಡ್ಕರ್ ಆಗಿಬಿಡುತ್ತಾನೆ.

ಈಗ ಶಿಕ್ಷಣ ಸಂಸ್ಥೆಗಳ ಮಾಲೀಕರೆಲ್ಲಾ ಒಂದಾಗಿ, ಭೂಗತ ದೊರೆಯ ಮೊರೆ ಹೋಗುತ್ತಾರೆ. ಆ ಭೂಗತ ದೊರೆ ಅಭಿಮನ್ಯುವಿನ ಬಗೆಗಿನ ಮಾಧ್ಯಮದ ಗಮನವನ್ನು ಬೇರೆಡೆ ಸೆಳೆಯಲು ಬಾಂಬ್ ಬ್ಲಾಸ್ಟ್ ಮಾಡಿಸುತ್ತಾನೆ. ಶಿಕ್ಷಣ ಕಾರ್ಯದರ್ಶಿಯನ್ನು ಕೊಲ್ಲಿಸುತ್ತಾನೆ. ಆ ಕೊಲೆಯನ್ನು ಅಭಿಮನ್ಯುವಿಗೆ ಆರೋಪಿಸಿ ಅವನನ್ನು ಜೈಲಿಗೆ ಕಳುಹಿಸುತ್ತಾನೆ. ಜೈಲಿನಿಂದ ಕೊನೆಗೂ ಬಿಡಿಸಿಕೊಳ್ಳುವ ಅಭಿಮನ್ಯು, ಜೈಲಿನಲ್ಲಿದ್ದ ಇನ್ನೊಬ್ಬ ಭೂಗತೆ ದೊರೆಯನ್ನು ಒಳ್ಳೆಯ ಪ್ರಜೆಯನ್ನಾಗಿ ಮಾರ್ಪಡಿಸಿ, ಅವನ ಸಹಾಯದಿಂದ ಲಂಡನ್ ನಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರ ಮಕ್ಕಳನ್ನು ಅಪಹರಿಸುತ್ತಾನೆ. ನಂತರ ತಾನಂದುಕೊಂಡದ್ದನ್ನು ಕಷ್ಟ ಕೋಟಲೆಗಳ ಮೂಲಕ ಸಾಧಿಸುವುದೇ ಕಥೆ.

ಇಂತಹ ಮಹತ್ವದ ಸಂದೇಶವನ್ನು ನೀಡಲು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ  ಹೊಣೆ ಹೊತ್ತಿರುವ ಅರ್ಜುನ ಸರ್ಜಾ ಈ ಫೀಲ್ ಗುಡ್ ಸಿನೆಮಾ ಮಾಡಲು ತಮ್ಮ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರದಲ್ಲಿ ಹರ ಸಾಹಸ ಮಾಡಿದ್ದಾರೆ. ಬಹುಶಃ ತಾವು ಹಿಂದೆ ನಟಿಸಿದ್ದ ಒಂದೇ ದಿನದಲ್ಲಿ ಮುಖ್ಯಮಂತ್ರಿ ಆಗಿ ಸಮಾಜವನ್ನು ಬದಲಾವಣೆ ಮಾಡುವ “ಮುದಲ್ವನೆ” ಚಿತ್ರದಿಂದ ಅರ್ಜುನ್ ಸ್ಪೂರ್ತಿ ಪಡೆದ ಹಾಗಿದೆ. ಇಡೀ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಆಗಬೇಕು ಎಂಬಂತಹ ತರಹದ ಕನಸುಗಳು ಹೆಚ್ಚು ಜನಗಳನ್ನು ತಲುಪುವ ಚಲನಚಿತ್ರ ಮಾಧ್ಯಮದಲ್ಲಿ ಬಿಂಬಿತವಾಗುವುದು ಅತಿ ಅವಶ್ಯಕ. ಆ ನಿಟ್ಟಿನಲ್ಲಿ ಅರ್ಜುನ್ ಸರ್ಜಾ ಅಭಿನಂದನೀಯ. ಒಂದು ಸಂದೇಶವನ್ನು ಸಮಾಜಕ್ಕೆ ನೀಡಬೇಕೆಂಬ ಅವರ ಉಕ್ತಟ ಆಸೆಯಿಂದಲೇ, ಅವರು ಸಿನೆಮಾದ ರಂಜನೆಯ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ ಎಂದೆನಿಸುತ್ತದೆ, ಅಥವಾ ರಂಜನೆಯ ದೃಷ್ಟಿಯಿಂದ ಸಿನೆಮಾ ಸೋತಿದೆ ಎನ್ನಬಹುದು.  ಹಾಗೆಂದ ಕೂಡಲೇ ಅವರು ನೀಡಬೇಕೆಂದ ಸಂದೇಶ ಸುತ್ತ ಬಿಗಿಯಾದ ಮತ್ತು ಸಹಜವಾದ ಕಥೆಯನ್ನು ಹೆಣೆಯಲು ಗೆದ್ದಿದ್ದಾರೆ ಎನ್ನಲು ಕೂಡ ಸ್ವಲ್ಪ ಕಷ್ಟ. ಕಥೆಯ ಬಗ್ಗೆ, ಶಿಕ್ಷಣದ ತೊಂದರೆಗಳ ಬಗ್ಗೆ, ಕನಸನ್ನು ಸಾಧಿಸುವ ಬಗ್ಗೆ ಇನ್ನೂ ಹೆಚ್ಚಿನ ಸಹಜತೆಯ ಅವಶ್ಯಕತೆ ಇತ್ತು.

ತಮ್ಮ ಕರಾಟೆ ಫೈಟ್ ಗಳಿಂದ ಮತ್ತು ಆದರ್ಶಪ್ರಾಯವಾದ ಡೈಲಾಗ್ ಗಳಿಂದ ತಮ್ಮ ಅಭಿಮಾನಿಗಳಿಗೆ ಅರ್ಜುನ್ ಸರ್ಜಾ ಇಷ್ಟವಾಗುತ್ತಾರೆ . ಹಾಸ್ಯ ಸನ್ನಿವೇಶಗಳು-ಹಾಸ್ಯ ಸಂಭಾಷಣೆಗಳು ಚಿತ್ರಕ್ಕೆ ತುರುಕಿದಂತಿದ್ದು, ಕಿರಿಕಿರಿ ಉಂಟು ಮಾಡುತ್ತವೆ. ಕನ್ನಡ ಸಿನೆಮಾದವರು ಇನ್ನು ಮುಂದೆ ಸಿನೆಮಾಗೆ ಒಬ್ಬ ಹಾಸ್ಯನಿರ್ದೇಶಕನಿಂದ ಹಾಸ್ಯ ಸನ್ನಿವೇಶಗಳನ್ನು ಚಿತ್ರೀಕರಿಸುವುದು ಒಳಿತು. ಸುರ್ವಿನ್‍ಚಾವ್ಲಾ, ರವಿಕಾಳೆ, ಸಿಮ್ರಾನ್‍ಕಪೂರ್ ಅವರ ನಟನೆ ಅಗತ್ಯಕ್ಕೆ ತಕ್ಕಂತಿದೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಹಾಡುಗಳ ಸಾಹಿತ್ಯ ಮನಸ್ಸಿನಲ್ಲಿ ಉಳಿಯುವಂತಿಲ್ಲ.

ಸಿನೆಮಾ ರಂಜನೆಗಷ್ಟೆಯೆ? ಅಥವಾ ಸಿನೆಮಾದಲ್ಲಿ ಬರಿ ಕಥೆ ಹೇಳಬೇಕೋ? ಅಥವಾ ಅದು ಒಂದು ಒಳ್ಳೆಯ ಸಂದೇಶ ನೀಡಬೇಕೋ?  ಎಂಬುದು ಹಳೆಯ ಚರ್ಚೆ. ಸಿನೆಮಾ ಬರೀ ರಂಜನೆಗಷ್ಟೆ ಸೀಮಿತ ಅಲ್ಲ ಎಂಬುದು ಅರ್ಜುನ ಸರ್ಜಾ ವರ ಅಭಿಮತ ಎಂದು ಈ ಚಿತ್ರದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಈ ಎಲ್ಲವನ್ನೂ ಸಿನೆಮಾದಲ್ಲಿ ಮೇಳೈಸಿದಾಗ ಕಲಾತ್ಮಕವಾಗಿ ನಿಭಾಯಿಸಲು ಹೆಚ್ಚಿನ ಶ್ರಮ ಬೇಕು. ಈ ನಿಟ್ಟಿನಲ್ಲಿ ಕಥೆಗಾಗಿ, ಚಿತ್ರಕಥೆಗಾಗಿ, ಸಂಭಾಷಣೆಗಾಗಿ, ನಿರ್ದೇಶನಕಾಗಿ, ನಟನೆಗಾಗಿ ಪ್ರತ್ಯೇಕವಾಗಿ ಪ್ರತಿಭಾವಂತ ಕಲಾವಿದರು ಕೆಲಸ ಮಾಡಿದರೆ ಉತ್ತಮ ಇಡಿಯಾಗಳು ಸಿನಿಮಾ ಒಳಹೊಕ್ಕು ಸಿನೆಮಾ ಇನ್ನೂ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಅರ್ಜುನ್ ಸರ್ಜಾ ಯೋಚಿಸುವುದೊಳಿತು.

ಸಂದೇಶದ ಭಾರವನ್ನು ಸಿನೆಮಾ ಹೊರಲಾರದೆ, ರಂಜನೆಯ ದೃಷ್ಟಿಯಿಂದ ಅಭಿಮನ್ಯು ಸೊರಗಿದರೂ, ಈ ಮಾಸ್ ಮೀಡಿಯಾದಲ್ಲಿ ಇಂತಹ ಒಂದು ವಿಷಯಕ್ಕೆ ಪ್ರಾತಿನಿಧ್ಯ ಕೊಟ್ಟದ್ದಕ್ಕಾದರೂ ಸಿನೆಮಾವನ್ನು ನೋಡಿ ಅಭಿನಂದಿಸಬಹುದು.

– ಗುರುಪ್ರಸಾದ್

Write A Comment