
ಕೊಚ್ಚಿ, ಅ.7: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್‌ನ ಪೂರ್ವ ತಯಾರಿಗೆ ಟೀಮ್ ಇಂಡಿಯಾಕ್ಕೆ ತವರಲ್ಲಿ ನಿಗದಿಯಾಗಿರುವ ವೆಸ್ಟ್‌ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಕೊಚ್ಚಿಯಲ್ಲಿ ಬುಧವಾರ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತದ ಪಾಲಿಗೆ ವಿಶ್ವಕಪ್‌ನ ತಯಾರಿಗೆ ತವರಲ್ಲಿ ನಿಗದಿಯಾಗಿರುವ ಈ ವರ್ಷದ ಕೊನೆಯ ಏಕದಿನ ಸರಣಿಯಾಗಿದೆ. 2011ರ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ದೊಡ್ಡ ಕೊಡುಗೆ ನೀಡಿದ್ದ ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಆರಂಭಿಕ ದಾಂಡಿಗ ಗೌತಮ್ ಗಂಭೀರ್‌ಗೆ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವಕಾಶ ಇಲ್ಲದಾಗಿದೆ.
ಹಿಂದಿನ ಸರಣಿಯಲ್ಲಿ ನಿರ್ವಹಣೆ:
ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡ ಬಳಿಕ ಏಕದಿನ ಸರಣಿಯಲ್ಲಿ ಗೆಲುವಿನ ಹಳಿಗೆ ಮರಳಿತ್ತು. ಇದೀಗ ತವರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವಿನ ಅಭಿಯಾನ ಮುಂದುವರಿಸುವ ಕನಸು ಕಾಣುತ್ತಿದೆ. ಇಂಗ್ಲೆಂಡ್ ಸರಣಿಯಲ್ಲಿ ಆಡಿರುವ ಬಹುತೇಕ ಆಟಗಾರರು ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿದು ತಿಂಗಳ ಬಳಿಕ ಇನ್ನೊಂದು ಸರಣಿ ಇದೀಗ ಆರಂಭವಾಗುತ್ತಿದೆ. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ತಂಡದ ಕೆಲವು ಆಟಗಾರರು ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ್ದರು.
ವೆಸ್ಟ್‌ಇಂಡಿಸ್ ತಂಡ 2013ರಲ್ಲಿ ಕೊನೆಯ ಬಾರಿ ಭಾರತಕ್ಕೆ ಆಗಮಿಸಿತ್ತು. ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿದ್ದ ವೆಸ್ಟ್‌ಇಂಡೀಸ್ ತಂಡ ಏಕದಿನ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಗೆಲ್ಲುವ ಮೂಲಕ ಮಾನ ಉಳಿಸಿಕೊಂಡಿತ್ತು. ಆದರೆ ಅದು 1-3 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ವೆಸ್ಟ್ ಇಂಡೀಸ್ ತಂಡದ ಬಹುತೇಕ ಆಟಗಾರರಿಗೆ ಭಾರತದ ವಾತಾವರಣ ಪರಿಚಿತ. ಏಕೆಂದರೆ ತಂಡದ ಹಲವು ಮಂದಿ ಆಟಗಾರರು ಪ್ರತಿವರ್ಷ ಇಲ್ಲಿ ನಡೆಯುವ ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಾರೆ. ಅದರಲ್ಲೂ ಕೆಲವರು ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ವೆಂಟಿ- 20 ಟೂರ್ನಿಯಲ್ಲೂ ಪಾಲ್ಗೊಂಡಿದ್ದಾರೆ.
ಪ್ರಮುಖ ಆಟಗಾರರು: ಭಾರತ ತಂಡದ ಆಟಗಾರರು ತವರ ನೆಲದಲ್ಲಿ ಹುಲಿಯಂತೆ ಘರ್ಜಿಸುತ್ತಾರೆ. ತಂಡದ ಆಟಗಾರ ಸುರೇಶ್ ರೈನಾ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಇನಷ್ಟು ಬಲಿಷ್ಠವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರೈನಾ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಔಟಾಗದೆ 109 ರನ್ ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎರಡನೆ ಬಾರಿ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅವರು ಚೆನ್ನಾಗಿ ಆಡಿದ್ದರು. ಅದೇ ಫಾರ್ಮ್‌ನ್ನು ಚಾಂಪಿಯನ್ಸ್ ಲೀಗ್‌ನಲ್ಲಿ ಮುಂದುವರಿಸಿದ್ದರು. ಆದರೆ ವೆಸ್ಟ್‌ಇಂಡೀಸ್‌ನ ಬೌಲರ್‌ಗಳ ಬಗ್ಗೆ ಅವರಿಗೆ ಹೆದರಿಕೆ ಇದೆ.
ವೆಸ್ಟ್ ಇಂಡೀಸ್ ತಂಡದ ನಾಯಕ ಡ್ವೇಯ್ನ್ ಬ್ರಾವೋ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಚೆನ್ನೈ ತಂಡದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಬ್ರಾವೋ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ತಂಡಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ. ತಂಡದ ಸಾಮರ್ಥ್ಯ: ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಕಠಿಣ ಸವಾಲು ಎದುರಾಗದು. ಏಕೆಂದರೆ ವಿಂಡೀಸ್‌ನ ಪ್ರಮುಖ ಸ್ಪಿನ್ ಅಸ್ತ್ರ ಸುನಿಲ್ ನರೇನ್ ಇತ್ತೀಚೆಗೆ ನಡೆದ ಚಾಂಪಿಯನ್ಸ್ ಲೀಗ್‌ನಲ್ಲಿ ಸಂಶಯಾಸ್ಪದ ಬೌಲಿಂಗ್ ಆರೋಪದ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ. ಕೋಲ್ಕತಾ ತಂಡದ ಆಟಗಾರ ಈ ಆರೋಪದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.
ವಿಂಡೀಸ್‌ನ ರನ್ ಯಂತ್ರ ಕ್ರಿಸ್ ಗೇಲ್ ತಂಡದಲ್ಲಿಲ್ಲ. ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಕೊಚ್ಚಿಯಲ್ಲಿ ಮೊದಲ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಆದರೆ ಕ್ರಿಕೆಟ್ ಅಭಿಮಾನಿಗಳು ಭಾರತ -ವಿಂಡೀಸ್‌ನ ಹಣಾಹಣಿಯನ್ನು ನೋಡಲು ಕಾತರದಿಂದಿದ್ದಾರೆ. ಪಂದ್ಯ ನಡೆಲಿರುವ ಕೊಚ್ಚಿ ನೆಹರು ಸ್ಟೇಡಿಯಂ ಭಾರತದ ಪಾಲಿಗೆ ಫೇೆವರಿಟ್ ಪಿಚ್ ಆಗಿದೆ. ಇಲ್ಲಿ ವಿಂಡೀಸ್ ವಿರುದ್ಧ 1-0 ಮುನ್ನಡೆ ಸಾಧಿಸಿದೆ.
ಭಾರತದ ಪಾಲಿಗೆ ಈ ಸರಣಿ ಮುಂಬರುವ ವಿಶ್ವಕಪ್‌ನ ಪೂರ್ವ ತಯಾರಿಗೆ ಅತ್ಯಂತ ಮಹತ್ವದ್ದಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ಎಲ್ಲ ವಿಭಾಗಗಳಲ್ಲೂ ಸಮತೋಲನವನ್ನು ಕಾಯ್ದುಕೊಂಡಿದೆ. ಐದು ಪಂದ್ಯಗಳ ಸರಣಿಗೆ ಗಾಯಾಳು ರೋಹಿತ್ ಶರ್ಮ ಬದಲಿಗೆ ಮುರಳಿ ವಿಜಯ್ ಸ್ಥಾನ ಪಡೆದಿದ್ದಾರೆ. ಅಜಿಂಕ್ಯ ರಹಾನೆ ಅವರು ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಗೆ ಫಾರ್ಮ್ ಕಂಡುಕೊಳ್ಳಲು ಈ ಸರಣಿಯಲ್ಲಿ ಒಳ್ಳೆಯ ಅವಕಾಶ ಸಿಗಲಿದೆ. ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ಮಹೇಂದ್ರ ಸಿಂಗ್ ಧೋನಿ ಇವರನ್ನು ಒಳಗೊಂಡ ತಂಡದ ಮಧ್ಯಮ ಸರದಿ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮ , ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಇದ್ದಾರೆ. ಸ್ಪಿನ್ ವಿಭಾಗವನ್ನು ರವೀಂದ್ರ ಜಡೇಜ ಮತ್ತು ಅಮಿತ್ ಮಿಶ್ರಾ ಮುನ್ನಡೆಸುವರು. 19ರ ಹರೆಯದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಅವರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಗುವ ಸಾಧ್ಯತೆ ದೃಢಪಟ್ಟಿಲ್ಲ. ವಿಂಡೀಸ್ ತಂಡದಲ್ಲಿ ನಾಯಕ ಡ್ವೇಯ್ನಿ ಬ್ರಾವೋ, ಡರೆನ್ ಸಮ್ಮಿ, ಡರೆನ್ ಬ್ರಾವೊ ಮತ್ತು ಕೀರನ್ ಪೊಲಾರ್ಡ್ ಅವರಂತಹ ಅನುಭವಿ ಆಟಗಾರರಿದ್ದಾರೆ. ಜೆರೊಮ್ ಟೇಲರ್‌ಗೆ ವಿಕೆಟ್ ಗಳಿಕೆಯಲ್ಲಿ ಶತಕ ತಲುಪಲು ಇನ್ನು ಎರಡು ವಿಕೆಟ್‌ಗಳ ಅಗತ್ಯತೆ ಇದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಕೆಮಾರ್ ರೋಚ್ ಮತ್ತು ರವಿ ರಾಂಪಾಲ್, ಸ್ಪಿನ್ ವಿಭಾಗದಲ್ಲಿ ಸುಲೈಮಾನ್ ಬೆನ್ ಇದ್ದಾರೆ.
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಮೋಹಿತ್ ಶರ್ಮ, ಉಮೇಶ್ ಯಾದವ್, ಮುರಳಿ ವಿಜಯ್, ಕುಲದೀಪ್ ಯಾದವ್.
ವೆಸ್ಟ್‌ಇಂಡೀಸ್: ಡ್ವೇಯ್ನ್ ಬ್ರಾವೋ (ನಾಯಕ/ವಿಕೆಟ್ ಕೀಪರ್), ಡರೆನ್ ಬ್ರಾವೋ, ಜಾಸನ್ ಹೋಲ್ಡರ್, ಲಿಯೊನ್ ಜಾನ್ಸನ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದೀನ್ (ವಿಕೆಟ್ ಕೀಪರ್), ರವಿ ರಾಂಪಾಲ್, ಕೆಮಾರ್ ರೋಚ್, ಆ್ಯಂಡ್ರೆ ರಸ್ಸೆಲ್, ಡರೆನ್ ಸಮ್ಮಿ, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮೊನ್ಸ್, ಡ್ವೇಯ್ನ್ ಸ್ಮಿತ್, ಜೇರೊಮ್ ಟೇಲರ್.
ಪಂದ್ಯದ ಸಮಯ ಬೆಳಗ್ಗೆ 9 ಗಂಟೆಗೆ ಆರಂಭ.