
ದುಬೈ, ಅ.6: ವೆಸ್ಟ್‌ಇಂಡೀಸ್‌ನ ವಿರುದ್ಧ ಅ.8 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯ ವೇಳೆ ವೆಸ್ಟ್‌ಇಂಡೀಸ್ ವಿರುದ್ಧ ಆಡಲಿರುವ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಆಟಗಾರರ ರ್ಯಾಂಕಿಂಗ್‌ನಲ್ಲಿ ನಂ.1 ರ್ಯಾಂಕ್ ವಶಪಡಿಸಿಕೊಳ್ಳುವ ಅವಕಾಶವಿದೆ.
ವರ್ಷಾರಂಭದಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಸರಣಿಯಿಂದ ಹೊರಗುಳಿದ ನಂತರ ಮೂರನೆ ರ್ಯಾಂಕಿಗೆ ಕುಸಿದಿದ್ದರು. ಇದೀಗ ಕೊಹ್ಲಿಗೆ ಮೊದಲೆರಡು ರ್ಯಾಂಕಿನಲ್ಲಿರುವ ದಕ್ಷಿಣ ಆಫ್ರಿಕದ ಎಬಿ ಡಿ ವಿಲಿಯರ್ಸ್ ಹಾಗೂ ಹಾಶೀಮ್ ಅಮ್ಲ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ಎಂಎಸ್ ಧೋನಿ (6ನೆ) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (7ನೆ) ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಭಾರತದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ವೆಸ್ಟ್‌ಇಂಡೀಸ್‌ನ ಪರವಾಗಿ ಡರೇನ್ ಬ್ರಾವೊ(37ನೆ) ಅಗ್ರ ರ್ಯಾಂಕಿನ ಬ್ಯಾಟ್ಸ್‌ಮನ್ ಆಗಿದ್ದು, ಲೆಂಡ್ಲ್ ಸಿಮೊನ್ಸ್ 40ನೆ ರ್ಯಾಂಕಿನಲ್ಲಿದ್ದಾರೆ. ಐಸಿಸಿ ಏಕದಿನ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ರವೀಂದ್ರ ಜಡೇಜ 5ನೆ ಸ್ಥಾನದಲ್ಲಿದ್ದಾರೆ. ಸುನೀಲ್ ನರೇನ್ ಅನುಪಸ್ಥಿತಿಯಲ್ಲಿ 18ನೆ ರ್ಯಾಂಕಿನ ಕೇಮಾರ್ ರೋಚ್ ವೆಸ್ಟ್‌ಇಂಡೀಸ್‌ನ ಅಗ್ರ ರ್ಯಾಂಕಿನ ಬೌಲರ್ ಆಗಿದ್ದಾರೆ.