ಅಂತರಾಷ್ಟ್ರೀಯ

‘ಐಸಿಸ್ ವಿರುದ್ಧ ದೀರ್ಘಾವಧಿ ಸಮರ ಅಗತ್ಯ’ ಒಬಾಮರನ್ನು ದೂಷಿಸಿದ ಪೆಂಟಗನ್ ಮಾಜಿ ಮುಖ್ಯಸ್ಥ

Pinterest LinkedIn Tumblr

LeonPanetta

ವಾಷಿಂಗ್ಟನ್, ಅ.6: ಐಸಿಸ್ ಬಂಡುಕೋರ ಗುಂಪಿನ ವಿರುದ್ಧದ ಸಮರಕ್ಕೆ ಅಮೆರಿಕವು ದೀರ್ಘಾವಧಿಯನ್ನು ತೆಗೆದುಕೊಳ್ಳಲಿದ್ದು, ಅದು ಸುಮಾರು 30 ವರ್ಷಗಳ ಅವಧಿಯನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕದ ಸಿಐಎಯ ಮಾಜಿ ನಿರ್ದೇಶಕ ಹಾಗೂ ರಕ್ಷಣಾ ಕಾರ್ಯದರ್ಶಿ ಲಿಯೊನ್ ಪನೆಟ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ನಾವು ಸುಮಾರು 30 ವರ್ಷಗಳ ಅವಧಿಯ ಸಮರವನ್ನು ಎದುರುನೋಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ’’ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪನೆಟ್ಟ ಹೇಳಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ಅಧ್ಯಕ್ಷ ಬರಾಕ್ ಒಬಾಮರನ್ನು ಅವರು ಇದೇ ವೇಳೆ ದೂಷಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಸಮರವು ಇರಾಕ್ ಹಾಗೂ ಸಿರಿಯದಲ್ಲಿರುವ ಐಸಿಸ್ ಬಂಡುಕೋರರ ವ್ಯಾಪ್ತಿಗೂ ಮೀರಿದ್ದು, ಅದು ನೈಜೀರಿಯ, ಸೊಮಾಲಿಯ, ಯಮನ್, ಲಿಬಿಯ ಹಾಗೂ ಇತರ ಯಾವುದೇ ಪ್ರದೇಶಗಳಿಗೆ ವ್ಯಾಪಿಸಬಹುದಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2011ರಲ್ಲಿ ಸೇನಾ ಹಿಂದೆಗೆತದ ಬಳಿಕ ಸೇನೆಯ ಸ್ವಲ್ಪ ಭಾಗವನ್ನು ಇರಿಸಿಕೊಳ್ಳುವ ಬಗ್ಗೆ ಇರಾಕ್ ಸರಕಾರಕ್ಕೆ ಒತ್ತಡ ಹೇರದಿರುವ ಒಬಾಮ ಕ್ರಮವನ್ನು ಪನೆಟ್ಟ ಟೀಕಿಸಿದ್ದಾರೆ. ಇರಾಕ್‌ನಲ್ಲಿ ಅಮೆರಿಕ ಸೇನೆಯ ಅನುಪಸ್ಥಿತಿಯು ‘ನಿರ್ವಾತ’ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಇದು ತೀವ್ರವಾದಿ ಗುಂಪುಗಳ ಅಸ್ತಿತ್ವಕ್ಕೆ ಅವಕಾಶ ಕಲ್ಪಿಸಿದೆ ಎಂದವರು ಹೇಳಿದ್ದಾರೆ.

ನಾಯಕತ್ವವನ್ನು ಪ್ರದರ್ಶಿಸುವ ಮೂಲಕ ಲೋಪವನ್ನು ಸರಿಪಡಿಸಿಕೊಳ್ಳಲು ಒಬಾಮರಿಗೆ ಅವಕಾಶವಿದೆ ಎಂದವರು ಇದೇ ವೇಳೆ ಅಭಿಪ್ರಾಯಿಸಿದ್ದಾರೆ. ಐಸಿಸ್ ಬಂಡುಕೋರರು ಬೇಸಿಗೆ ಅವಧಿಯಲ್ಲಿ ಇರಾಕ್‌ನ ಉತ್ತರ ಹಾಗೂ ಪಶ್ಚಿಮದ ಹಲವು ಪಟ್ಟಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಬಳಿಕ ಉತ್ತರ ಸಿರಿಯದ ಹಲವು ಪ್ರದೇಶಗಳನ್ನೂ ವಶಪಡಿಸಿಕೊಂಡು ತ್ವರಿತ ಮುನ್ನಡೆ ಸಾಧಿಸಿದ್ದಾರೆ. ಸೆಪ್ಟಂಬರ್ 22ರ ಬಳಿಕ ಅಮೆರಿಕ ಮತ್ತು ಅದರ ಅರಬ್ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯ, ಬಹರೈನ್, ಕತರ್, ಜೋರ್ಡಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಐಸಿಸ್ ವಿರುದ್ಧ ವೈಮಾನಿಕ ದಾಳಿಗಳನ್ನು ಈಗಾಗಲೇ ಪ್ರಾರಂಭಿಸಿವೆ.

Write A Comment