ಮನೋರಂಜನೆ

ದಿ.ಡಾ.ವಿಷ್ಣುವರ್ಧನ್, ಉಪೇಂದ್ರ ಹಾಗೂ ಶೃತಿ ಹುಟ್ಟುಹಬ್ಬ; ನೂರಾರು ಮಂದಿ ಅಭಿಮಾನಿಗಳು ಅವರಿಗೆ ಶುಭ ಕೋರಿಕೆ

Pinterest LinkedIn Tumblr

Vishnu-Birth-Day

ಬೆಂಗಳೂರು, ಸೆ.18: ಕನ್ನಡ ಚಿತ್ರರಂಗದ ಸಾಹಸಸಿಂಹ ಖ್ಯಾತಿಯ ದಿ.ಡಾ.ವಿಷ್ಣುವರ್ಧನ್, ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಬುದ್ಧ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ವಿಷ್ಣುವರ್ಧನ್ ಅವರ 64ನೆ ಹುಟ್ಟುಹಬ್ಬದ ಅಂಗವಾಗಿ ಇಂದು ನಗರದ ಅಭಿಮಾನ್ ಸ್ಟುಡಿಯೋದ ಅವರ ಸಮಾಧಿಗೆ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಹಾಗೂ ನಟ ಅನಿರುದ್ಧ್, ಮಕ್ಕಳು-ಮೊಮ್ಮಕ್ಕಳು ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಆಚರಿಸಿದರೆ, ಇತ್ತ ರಾತ್ರಿಯಿಂದಲೇ ಉಪೇಂದ್ರ ಅವರ ನಿವಾಸದ ಬಳಿ ಸೇರಿದ್ದ ನೂರಾರು ಮಂದಿ ಅಭಿಮಾನಿಗಳು ಅವರಿಗೆ ಶುಭ ಕೋರಿದರು.

ತಮ್ಮ 46ನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳು ಹಾಗೂ ಕುಟುಂಬವರ್ಗದವರೊಂದಿಗೆ ಇಂದು ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡರು. ಕನ್ನಡದ ಕಣ್ಣೀರ ಚಿತ್ರಗಳಿಂದಲೇ ಹೆಸರು ಮಾಡಿದ ಶೃತಿ ಅವರು ತಮ್ಮ ಹುಟ್ಟುಹಬ್ಬವನ್ನು ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಸಂಭ್ರಮದಿಂದ ಆಚರಿಸಿದರು.

uppi2

ವಿಷ್ಣುವರ್ಧನ್ ಸಮಾಧಿ ಬಳಿ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದ ವೇಳೆ ವಿಷ್ಣುವರ್ಧನ್ ಆಕೃತಿಯಲ್ಲಿ ರಚಿಸಲಾಗಿದ್ದ ಕೇಕ್ ಇಟ್ಟು ಅವರು ನಟಿಸಿದ 200 ಚಿತ್ರಗಳ ಹೆಸರನ್ನು ಬರೆಯಲಾಗಿತ್ತು. ಇದೇ ವೇಳೆ ಸಾವಿರಾರು ಮಂದಿ ಅಭಿಮಾನಿಗಳು ವಿಷ್ಣು ಸಮಾಧಿ ಬಳಿ ಜಮಾಯಿಸಿ ಜೈಕಾರಗಳನ್ನು ಕೂಗಿದ್ದಲ್ಲದೆ ಅಲ್ಲಿ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆ, ರಕ್ತದಾನ ಶಿಬಿರ ನಡೆಸಲಾಯಿತು.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಅಪಾರ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದ ಕ್ಯೂನಲ್ಲಿ ಬಂದು ವಿಷ್ಣು ಸಮಾಧಿಯ ದರ್ಶನ ಪಡೆದರು.
ಇದೇ ವೇಳೆ ಅಭಿಮಾನಿಗಳು ಸಮಾಧಿಯ ಅಭಿವೃದ್ಧಿ ಕಾರ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಭಾರತಿ ವಿಷ್ಣುವರ್ಧನ್, ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಸರ್ಕಾರ ನೀಡಿರುವ ಎರಡು ಎಕರೆ ಭೂಮಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.

ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿಷ್ಣುವರ್ಧನ್, ತಮ್ಮ 200ನೆ ಚಿತ್ರವಾದ ಆಪ್ತರಕ್ಷಕದವರೆಗೂ ಮಾಡಿದ ಸಾಧನೆ, ತೋರಿದ ಅಭಿನಯ ಕನ್ನಡ ಜನರ ಪ್ರೀತಿಗೆ ಪಾತ್ರವಾಯಿತು.

ಕನ್ನಡದಲ್ಲೇ 200 ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಅಭಿನಯ ಚಾತುರ್ಯವನ್ನು ಹಿಂದಿ ಸೇರಿದಂತೆ ಇನ್ನಿತರ ಭಾಷೆಗಳಲ್ಲೂ ತೋರಲು ಅನುವಾಗುವಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಅತ್ಯಂತ ಸ್ನೇಹಜೀವಿಯಾಗಿದ್ದ ವಿಷ್ಣುವರ್ಧನ್ ಆಧ್ಯಾತ್ಮಿಕತೆ ಕಡೆಗೂ ಸಾಕಷ್ಟು ಒಲವು ಹೊಂದಿದವರು. ವಿಭಿನ್ನ ಪಾತ್ರಗಳ ವಿಶಿಷ್ಟ ಅಭಿನಯದಿಂದ ಜನಪ್ರಿಯ ನಟರಾಗಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿ ಹೆಸರು ಗಳಿಸಿದವರು. ನಿರ್ದೇಶಕನಾಗಲು ಚಿತ್ರರಂಗಕ್ಕೆ ಕಾಲಿಟ್ಟ ಉಪೇಂದ್ರ ಪ್ರಬುದ್ಧ ನಿರ್ದೇಶಕ ಕಾಶಿನಾಥ್ ಗರಡಿಯಲ್ಲಿ ಪಳಗಿ ತರ್ಲೆ ನನ್‍ಮಗ ಚಿತ್ರದ ಮೂಲಕ ತಮ್ಮ ನಿರ್ದೇಶನದ ಸಾಮಥ್ರ್ಯವನ್ನು ಓರೆಗೆ ಹಚ್ಚಿದವರು.

uppi2ಪ್ರಸ್ತುತ ಇರುವ ಯುವ ಟ್ರೆಂಡ್‍ಗೆ ಅನುಗುಣವಾಗಿ ಕಥೆ ನಿರ್ಮಿಸಿ ವಿಶಿಷ್ಟ ಮಾದರಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕ್ರಿಯೇಟಿವ್ ನಿರ್ದೇಶಕ. ತಾಂತ್ರಿಕವಾಗಿ ಹಾಗೂ ನೂತನ ಶೈಲಿಯಲ್ಲಿ ಚಿತ್ರವನ್ನು ಪ್ರಸ್ತುತಪಡಿಸುವ ರೀತಿಯೇ ಎಲ್ಲರಿಂದ ಮನ್ನಣೆಗೆ ಪಾತ್ರವಾಯಿತು. ನಿರ್ದೇಶನದಲ್ಲಿ ಓಂ ಚಿತ್ರದ ಮೂಲಕ ಮತ್ತೊಂದು ಹೆಗ್ಗಳಿಕೆ ಗಳಿಸಿದ ಉಪೇಂದ್ರ, ಎ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿಯೂ ಗುರುತಿಸಿಕೊಂಡು ಕನ್ನಡಿಗರ ಜನಮನದಲ್ಲಿ ನೆಲೆನಿಂತರು.
35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ತೆಲುಗಿನಲ್ಲಿ ಹೆಸರು ಮಾಡಿ ಬಂದವರು. ನೃತ್ಯ, ಸಾಹಸ ತಿಳಿಯದಿದ್ದರೂ ನಟನಾಗಿ ಪರಿಚಿತರಾದ ನಂತರ ಎಲ್ಲವನ್ನೂ ಕಲಿತು ವಿಶಿಷ್ಟ ಅಭಿನಯವನ್ನೂ ನೀಡುತ್ತ ಸಾಗಿದ ಉಪೇಂದ್ರರಿಗೆ ಅಭಿನಯಕ್ಕೆ ಸವಾಲು ಎನಿಸುವಂತೆ ದೊರೆತ ಪಾತ್ರಗಳಲ್ಲಿ ರಕ್ತ ಕಣ್ಣೀರು ಹಾಗೂ ಆನಾಥರು ಪ್ರಮುಖವಾದ ಚಿತ್ರಗಳು.

ಪ್ರೇಕ್ಷಕನಲ್ಲಿ ಕುತೂಹಲ ಕೆರಳಿಸುವಂತಹ ಹಲವಾರು ಅಂಶಗಳನ್ನು ಒಳಗೊಂಡ ಚಿತ್ರವನ್ನು ನಿರ್ಮಿಸಿ ಅವಕ್ಕೆ ಶ್, ಎ ಎಂಬ ಹೆಸರಿಟ್ಟು ಪ್ರೇಕ್ಷಕರನ್ನು ಸೆಳೆದವರು. ಹುಟ್ಟುಹಬ್ಬದ ಅಂಗವಾಗಿ ಇವರ ಅಭಿನಯದ ಸೂಪರ್ ರಂಗ ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಸಾಧುಕೋಕಿಲ ನಿರ್ದೇಶನದ ಈ ಚಿತ್ರ ಅವರ ಚಿತ್ರ ಜೀವನಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ. ಶೃತಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಶೃತಿ ಪ್ರಬುದ್ಧ ಅಭಿನಯದಿಂದ ಹೆಸರು ಮಾಡಿದವರು. ಕಣ್ಣೀರಿನ ಪಾತ್ರವನ್ನೊಳಗೊಂಡ ತಾಯಿ ಇಲ್ಲದ ತವರು, ತವರಿನ ತೊಟ್ಟಿಲು, ಕರ್ಪೂರದ ಗೊಂಬೆ, ವೀರಪ್ಪನಾಯಕ, ಸೂರಪ್ಪ ಮತ್ತಿತರ ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ಸೆಂಟಿಮೆಂಟಲ್ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು.

ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸೇರಿದಂತೆ ಮತ್ತಿತರ ಪ್ರಶಸ್ತಿಗಳ ಮನ್ನಣೆಗೆ ಪಾತ್ರರಾದವರು. ಕಳೆದ ಕೆಲವು ದಿನಗಳಿಂದ ವಿವಾದಗಳ ಜಂಜಡದಲ್ಲಿ ಸಿಲುಕಿರುವ ಶೃತಿಗೆ ಈ ಹುಟ್ಟುಹಬ್ಬ ಹೊಸ ಜೀವನಕ್ಕೆ ಎಡೆಮಾಡಿಕೊಡಲಿ ಎಂಬುದು ಎಲ್ಲರ ಹಾರೈಕೆ.

Write A Comment