ಮನೋರಂಜನೆ

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಅರ್ಹತಾ ಪಂದ್ಯ: ಲಯನ್್ಸಗೆ 55 ರನ್‌ಗಳ ಜಯ

Pinterest LinkedIn Tumblr

hafeez_1_0

ರಾಯ್ಪುರ, ಸೆ.16: ಸಂಘಟಿತ ಪ್ರಯತ್ನದ ಫಲವಾಗಿ ಲಾಹೋರ್ ಲಯನ್ಸ್ ತಂಡ ಇಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ -20 ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಸದರ್ನ್ ಎಕ್ಸ್‌ಪ್ರೆಸ್ ವಿರುದ್ಧ 55 ರನ್‌ಗಳ ಜಯ ಗಳಿಸಿದೆ.

ಇಲ್ಲಿನ ದಿವಂಗತ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 167 ರನ್‌ಗಳ ಸವಾಲನ್ನು ಪಡೆದಿದ್ದ ಸದರ್ನ್ ಎಕ್ಸ್‌ಪ್ರೆಸ್ ತಂಡ 18 ಓವರ್‌ಗಳಲ್ಲಿ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಲಯನ್ಸ್‌ನ ನಾಯಕ ಮುಹಮ್ಮದ್ ಹಫೀಝ್ ಅರ್ಧಶತಕದ ಕೊಡುಗೆ, ಬೌಲರ್‌ಗಳಾದ ಅಝೀಝ್ ಚೀಮಾ (3-15), ವಹಾಬ್ ರಿಯಾಝ್(2-20), ಅದ್ನಾನ್ ರಸೂಲ್ (2-32) ಪ್ರಹಾರಕ್ಕೆ ತತ್ತರಿಸಿದ ಸದರ್ನ್ ಎಕ್ಸ್‌ಪ್ರೆಸ್ ಬೇಗನೆ ಇನಿಂಗ್ಸ್ ಮುಗಿಸಿತು. ಸದರ್ನ್ ತಂಡದ ನಾಯಕ ಜೆ.ಮುಬಾರಕ್(35) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ಟಿಎನ್ ಸಂಪತ್(18), ಎಕೆ ಪೆರೆರಾ (16), ಜಯರತ್ನೆ (16) ಎರಡಂಕೆಯ ಕೊಡುಗೆ ನೀಡಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಾಹೋರ್ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದಲ್ಲಿ 164 ರನ್ ಸಂಪಾದಿಸಿತ್ತು.
ಮಹರೂಫ್ (3-28) ಪ್ರಹಾರದಿಂದ ತತ್ತರಿಸಿದ ಲಯನ್ಸ್ ತಂಡ 8 ಓವರ್‌ಗಳಲ್ಲಿ 52 ರನ್ ಸೇರಿಸುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತ್ತು. ಉಮರ್ ಸಿದ್ದೀಕ್ (18), ಅಹ್ಮದ್ ಶೆಹಝಾದ್ (29) ಮತ್ತು ನಾಸೀರ್ ಜಮ್‌ಶೆದ್ (1) ಔಟಾಗಿ ಪೆವಿಲಿಯನ್ ಸೇರಿದಾಗ ನಾಯಕ ಹಫೀಝ್ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದರು.

ಗುಡುಗಿದ ಹಫೀಝ್: ಪ್ರಧಾನ ಸುತ್ತು ತಲುಪಲು ಅತ್ಯಂತ ಮಹತ್ವದ ಪಂದ್ಯದಲ್ಲಿ ನಾಯಕ ಮುಹಮ್ಮದ್ ಹಫೀಝ್ ಅವರು ಸಅದ್ ನಸೀಮ್ ಜೊತೆ ನಾಲ್ಕನೆ ವಿಕೆಟ್‌ಗೆ 75 ರನ್, ಉಮರ್ ಅಕ್ಮಲ್ ಜೊತೆಗೆ ಐದನೆ ವಿಕೆಟ್‌ಗೆ 33 ರನ್‌ಗಳ ಕೊಡುಗೆ ನೀಡಿದರು. ಜಯಂಪತಿ ಅವರ 17ನೆ ಓವರ್‌ನ ಅಂತಿಮ ಎಸೆತದಲ್ಲಿ ನಸೀಮ್ (31) ಅವರು ಜಯರತ್ನೆಗೆ ಕ್ಯಾಚ್ ನೀಡಿದರು. ಅಷ್ಟರ ವೇಳೆಗೆ ಲಯನ್ಸ್‌ನ ಸ್ಕೋರ್ 127ಕ್ಕೆ ತಲುಪಿತ್ತು.

ಎಸ್. ಪ್ರಸನ್ನರ 16ನೆ ಓವರ್‌ನಲ್ಲಿ ಹಫೀಝ್ ಮತ್ತು ನಸೀಮ್ ಜೊತೆಯಾಗಿ 25 ರನ್ ಕಬಳಿಸಿದ್ದರು. 15.1ನೆ ಓವರ್‌ನಲ್ಲಿ ಹಫೀಝ್ ಬೌಂಡರಿ ಎತ್ತಿದರು.ಮುಂದಿನ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್, 5ನೆ ಎಸೆತದಲ್ಲಿ 1 ರನ್ ಕಬಳಿಸಿದರು. ಅಂತಿಮ ಎಸೆತದಲ್ಲಿ ನಸೀಮ್ 2 ರನ್ ಸೇರಿಸಿದರು.

ಹಫೀಝ್ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 67 ರನ್ ಗಳಿಸಿ ನಿರ್ಗಮಿಸಿದರು. 15ನೆ ಓವರ್‌ನ ಮುಕ್ತಾಯಕ್ಕೆ ಹಫೀಝ್ 24 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ಬಳಿಕ 16 ಎಸೆತಗಳಲ್ಲಿ 52 ರನ್ ಕಬಳಿಸಿದರು. ಉಮರ್ ಅಕ್ಮಲ್ 11 ರನ್ ಮತ್ತು ವಹಾಬ್ ರಿಯಾಝ್ 4 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ
ಲಾಹೋರ್ ಲಯನ್ಸ್ 20 ಓವರ್‌ಗಳಲ್ಲಿ 164/6(ಹಫೀಝ್ 67, ನಸೀಮ್ 31, ಶೆಹಝಾದ್ 29; ಮಹರೂಫ್ 3-28 ).
ಸದರ್ನ್ ಎಕ್ಸ್‌ಪ್ರೆಸ್ 18 ಓವರ್‌ಗಳಲ್ಲಿ ಆಲೌಟ್ 109( ಮುಬಾರಕ್ 35, ಸಂಪತ್ 18; ಚೀಮಾ 3-15, ರಸೂಲ್ 2-32, ರಿಯಾಝ್ 2-20).
ಪಂದ್ಯಶ್ರೇಷ್ಠ: ಮುಹಮ್ಮದ್ ಹಫೀಝ್.

Write A Comment