ಮನೋರಂಜನೆ

ಪ್ರಣಯ್‌ಗೆ ಇಂಡೊನೇಷ್ಯಾ ಮಾಸ್ಟರ್ಸ್‌ ಪ್ರಶಸ್ತಿ: ದಿಲ್ಲಿಯ ಆಟಗಾರನಿಗೆ ಚೊಚ್ಚಲ ಜಿಪಿ ಗೋಲ್ಡ್ ಕಿರೀಟ

Pinterest LinkedIn Tumblr

pranoy

ಪಲೆಂಬಂಗ್(ಇಂಡೊನೇಷ್ಯಾ), ಸೆ.14: ಇಲ್ಲಿ ನಡೆದ ಇಂಡೊನೇಷ್ಯಾ ಮಾಸ್ಟರ್ಸ್‌ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಭಾರತದ ಯುವ ಆಟಗಾರ ಎಚ್.ಎನ್. ಪ್ರಣಯ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇಂದು ನಡೆದ ಫೈನಲ್‌ನಲ್ಲಿ ಭಾರತದ ಐದನೆ ಶ್ರೇಯಾಂಕದ ಆಟಗಾರ ಪ್ರಣಯ್ ಅವರು ಇಂಡೊನೇಷ್ಯಾದ ಫಿರ್ಮನ್ ಅಬ್ದುಲ್ ಖೊಲಿಕ್ ವಿರುದ್ಧ 21-11, 22-20 ನೇರ ಸೆಟ್‌ಗಳಿಂದ ಜಯಗಳಿಸಿ 1,25,000 ಡಾಲರ್ ಮೊತ್ತದ ಪ್ರಶಸ್ತಿಯನ್ನು ಬಾಚಿಕೊಂಡರು.

ಇದರೊಂದಿಗೆ ದಿಲ್ಲಿಯ 22ರ ಹರೆಯದ ಯುವ ಆಟಗಾರ ಪ್ರಣಯ್ ಮೊದಲ ಬಾರಿ ಜಿಪಿ ಗೋಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಣಯ್ ಮತ್ತು ಖೊಲಿಕ್ ನಡುವಿನ ಫೈನಲ್ ಹಣಾಹಣಿ ಕೇವಲ 43 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

ವಿಶ್ವದ ನಂ.13 ಆಟಗಾರ ಪ್ರಣಯ್ ಮೊದಲ ಗೇಮ್‌ನಲ್ಲಿ 9-3 ಮುನ್ನಡೆ ಸಾಧಿಸಿದ್ದರು. ಬಳಿಕ 16-11ಕ್ಕೆ ಏರಿಸಿದರು. 16ರ ಹರೆಯದ ಸ್ಥಳೀಯ ಆಟಗಾರ ಖೊಲಿಕ್ ಕಠಿಣ ಸವಾಲನ್ನೊಡ್ಡಿದ್ದರೂ ಅದು ಪ್ರಣಯ್ ಮೇಲೆ ಪರಿಣಾಮ ಬೀರಲಿಲ್ಲ.

ಪ್ರಣಯ್ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಡರೆನ್ ಲಿವ್ ವಿರುದ್ಧ 21-14, 14-21, 21-14 ಅಂತರದಿಂದ ಜಯ ಗಳಿಸಿ ಫೈನಲ್ ತಲುಪಿದ್ದರು. ಖೊಲಿಕ್ ಅವರುಮಲೇಷ್ಯಾದ ಜುಲ್ ಫಧ್ಲಿ ಜುಲ್‌ಕಿಫ್ಲಿ ವಿರುದ್ಧ 21-17, 21-15 ಅಂತರದಲ್ಲಿ ಜಯ ಗಳಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದರು.

ಪ್ರಣಯ್ ಕಳೆದ ವಿಯೆಟ್ನಾಂ ಓಪನ್ ಜಿಪಿಯಲ್ಲಿ ಫೈನಲ್ ತಲುಪಿದ್ದರು. 2014ರಲ್ಲಿ ಜಿಪಿ ಗೋಲ್ಡ್ ಪ್ರಶಸ್ತಿ ಜಯಿಸಿದ ಭಾರತದ ಆಟಗಾರರಲ್ಲಿ ಪ್ರಣಯ್ ಮೂರನೆ ಆಟಗಾರ. ಕಳೆದ ಜನವರಿಯಲ್ಲಿ ಸೈನಾ ನೆಹ್ವಾಲ್ ಇಂಡಿಯಾ ಜಿಪಿ ಗೋಲ್ಡ್ ಗೆದ್ದುಕೊಂಡಿದ್ದರು. ಮಾರ್ಚ್‌ನಲ್ಲಿ ಅರವಿಂದ್ ಭಟ್ ಜರ್ಮನ್ ಜಿಪಿ ಗೋಲ್ಡ್ ಜಯಿಸಿದ್ದರು.ಪ್ರಣಯ್ ಈ ಮೊದಲು 2010ರ ಸಮ್ಮರ್ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದಿದ್ದರು.

Write A Comment