ಮುಂಬೈ

ಮಹಾರಾಷ್ಟ್ರದಲ್ಲಿ ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ; ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 14 ರೋಗಿಗಳು ಪ್ರಾಣಾಪಾಯದಿಂದ ಪಾರು

Pinterest LinkedIn Tumblr

ಮುಂಬೈ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ 14 ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದ ಪರಭಾನಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಗಳ ಜೀವ ಉಳಿಸಬೇಕಾಗಿದ್ದ ಆಕ್ಸಿಜನ್ ಅನಿಲ ಪೈಪ್ ಗಳ ಮೇಲೆ ಮರದಕೊಂಬೆ ಬಿದ್ದ ಪರಿಣಾಮ ಪೈಪ್ ತುಂಡಾಗಿತ್ತು. ಇದರಿಂದ ಆಕ್ಸಿಜನ್ ಸೋರಿಕೆಯಾಗಿತ್ತು. ಮಂಗಳವಾರ ತಡರಾತ್ರಿ ಸೋರಿಕೆಯನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಉಸಿರಾಟಕ್ಕಾಗಿ ಜಂಬೊ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಸಿ ಸ್ಥಳಾಂತರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಉಪ ಜಿಲ್ಲಾಧಿಕಾರಿ ಸಂಜಯ್ ಕುಂದೇತ್ಕರ್ ಅವರು, ‘ರಾತ್ರಿ 11.30 ರ ಸುಮಾರಿಗೆ, ಮರದ ಕೊಂಬೆಯೊಂದು ಪೈಪ್‌ಲೈನ್ ಮೇಲೆ ಬಿದ್ದಿದೆ. ಇದು ವೈದ್ಯಕೀಯ ಆಮ್ಲಜನಕವನ್ನು ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಗಕ್ಕೆ ತಲುಪಿಸುತ್ತದೆ. ಇದೇ ಪೈಪ್ ಸೋರಿಕೆಯಾಗಿದೆ. ಆಕ್ಸಿಜನ್ ಸೋರಿಕೆಯಿಂದಾಗಿ ಈ ವಿಭಾಗದಲ್ಲಿದ್ದ 14 ಮಂದಿ ರೋಗಿಗಳು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳಿಗೆ ಜಂಬೋ ಆಕ್ಸಿಜನ್ ಸಿಲಿಂಡರ್ ಗಳನ್ನು ಅಳವಡಿಸಿ ಬೇರೆ ಸುರಕ್ಷಿತ ವಾರ್ಡ್ ಗೆ ಸ್ಥಳಾಂತರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪ್ರಸ್ತುತ ಸೋರಿಕೆ ಸರಿಪಡಿಸಲು ಆಕ್ಸಿಜನ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಅಂತೆಯೇ ದುರಸ್ತಿಕಾರ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಆಮ್ಲಜನಕದ ಪೂರೈಕೆಯನ್ನು ಕೇವಲ 2-3 ನಿಮಿಷಗಳ ಸ್ಥಗಿತಗೊಳಿಸಲಾಗಿತ್ತು. ತಂತ್ರಜ್ಞರು ಎರಡು ಗಂಟೆಗಳಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಬೆಳಿಗ್ಗೆ 4 ಗಂಟೆ ಸುಮಾರಿಗೆ ಆಮ್ಲಜನಕದ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.

ಈ ಹಿಂದೆ ಅಂದರೆ ಏಪ್ರಿಲ್ 21 ರಂದು ಇಂತಹುದೇ ಅನಿಲ ಸೋರಿಕೆ ಘಟನೆಯಲ್ಲಿ, ನಾಸಿಕ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ 22 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದರು.

Comments are closed.